ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ ಕಟ್ಟಲು ಪ್ರಿಯಕರನಿಗೆ ಹೆಂಡತಿ ಸಾಥ್!
ಬಯಲಾಯ್ತು ಅರ್ಚಕನ ಮರ್ಡರ್ ಸ್ಟೋರಿ

ಮಾವನನ್ನೇ ಮದುವೆಯಾಗಿ ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರೂ ಟ್ರಿಪ್ಪರ್ ಡ್ರೈವರ್ ನ ಸಹವಾಸ ಮಾಡಿ ಆತನೊಂದಿಗೆ ಪಲ್ಲಂಗದಲ್ಲಿರುವಾಗಲೇ ಗಂಡನಿಗೆ ಸಿಕ್ಕಿಬಿದ್ದು ಬದುಕನ್ನೇ ನರಕ ಮಾಡಿಕೊಂಡ ಮಹಿಳೆ ಕೊನೆಗೆ ಗಂಡನನ್ನು ಗೆಣೆಕಾರನ ಮೂಲಕ ಶಿವನಪಾದಕ್ಕೆ ಕಳುಹಿಸಿ ತಾನು ಜಾಲಿಯಾಗಿರ ಬೇಕೆಂದುಕೊಳ್ಳುವಾಗಲೇ ಇದೀಗ ಜೈಲ್ ಸೇರಿ ಮುದ್ದೆ ಮುರಿಯುತ್ತಿದ್ದಾಳೆ…. ಈ ಕ್ರೈಂ ಸ್ಟೋರಿ ನಡೆದಿರುವುದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಾರಳಗಾಲದಲ್ಲಿ…
ಇಷ್ಟಕ್ಕೂ ಅಕ್ರಮ ಸಂಬಂಧಗಳು ಯಾರನ್ನೂ ಯಾವತ್ತೂ ಸುಖವಾಗಿಟ್ಟ ಉದಾಹರಣೆಗಳಿಲ್ಲ… ಇದನ್ನರಿಯದೆ ಬಹಳಷ್ಟು ಜನರು ಗಂಡ, ಇದ್ದರೂ ಪರಪುರುಷನನ್ನು, ಹೆಂಡತಿ ಇದ್ದರೂ ಪರಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡು ಕಳ್ಳಾಟವಾಡುತ್ತಾ ದಿನಕಳೆಯುತ್ತಾರೆ.. ಯಾವತ್ತಾದರೂ ಒಂದು ದಿನ ಸಿಕ್ಕಿ ಬಿದ್ದಾಗ ತಮ್ಮ ಬದುಕನ್ನೇ ನರಕ ಮಾಡಿಕೊಳ್ಳುತ್ತಾರೆ.

ಪರಪುರುಷನ ತೆಕ್ಕೆಗೆ ಬೀಳುವ ಹೆಂಗಸರು ತಾನು ತನ್ನ ಪ್ರಿಯಕರನೊಂದಿಗೆ ಹೇಗೆ ಬೇಕೋ ಹಾಗಿರಲು ಗಂಡನೇ ಅಡ್ಡಿಯಾಗಿದ್ದು, ಆತನನ್ನು ಮುಗಿಸಿಬಿಟ್ಟರೆ ತಾವು ನೆಮ್ಮದಿಯಾಗಿ, ಖುಷಿಯಾಗಿರ ಬಹುದೆಂದುಕೊಳ್ಳುತ್ತಾರೆ. ಆದರೆ ಆಗುವುದೇ ಬೇರೆ.. ಒಂದೋ ಪ್ರಾಣ ಕಳೆದುಕೊಳ್ಳುತ್ತಾರೆ… ಇಲ್ಲಾಂದ್ರೆ ಜೈಲ್ ಸೇರುತ್ತಾರೆ… ಇವತ್ತು ಹೇಳಲು ಹೊರಟಿರುವ ಸ್ಟೋರಿಯೂ ಇದೇ ರೀತಿಯದ್ದಾಗಿದೆ.
ಇದನ್ನೂ ಓದಿ: ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು.. ಇದೆಂತಹ ದುರಂತ ಕಥೆ ಅಲ್ವಾ…!
ಇದೀಗ ಅರ್ಚಕ ವೃತ್ತಿ ಮಾಡಿಕೊಂಡು ಸಂಸಾರ ನಡೆಸುತ್ತಿದ್ದ ಗಂಡನನ್ನು ಕೊಲ್ಲಿಸಿ ಮಕ್ಕಳನ್ನು ತಬ್ಬಲಿ ಮಾಡಿ ಜೈಲ್ ಸೇರಿ ಮುದ್ದೆ ಮುರಿಯುತ್ತಿರುವ ಹೆಂಗಸಿನ ಹೆಸರು ಶಾಲಿನಿ(32)… ಈಕೆ ತನ್ನ ಸ್ವಂತ ಮಾವನಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮಾರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಎಂಬಾತನನ್ನು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರ ದಾಂಪತ್ಯದ ಫಲವಾಗಿ ಎರಡು ಮಕ್ಕಳಿದ್ದರು. ಅರ್ಚಕ ವೃತ್ತಿ ಮಾಡಿಕೊಂಡು ಸಿದ್ದಲಿಂಗಪ್ಪ ಸಂಸಾರ ನಡೆಸಿಕೊಂಡು ಹೋಗುತ್ತಿದ್ದನು. ಎಲ್ಲವೂ ಚೆನ್ನಾಗಿಯೇ ನಡೆದಿತ್ತು.. ಒಂದು ವೇಳೆ ಶಾಲಿನಿ, ಮಕ್ಕಳು, ಗಂಡ ಎಂದು ನೆಟ್ಟಗೆ ಸಂಸಾರ ನಡೆಸಿಕೊಂಡು ಹೋಗಿದ್ದರೆ ಬಹುಶಃ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಆದರೆ ಆಗಿದ್ದೇ ಬೇರೆ…
ಶಾಲಿನಿ ಬಾಳಿಗೆ ಹರೀಶನ ಪ್ರವೇಶ…
ಶಾಲಿಗೆ ತನ್ನದೇ ಗ್ರಾಮ ಮಾರಳಗಾಲದ ನಿವಾಸಿ ಚಂದ್ರಶೇಖರ್ ಎಂಬುವರ ಪುತ್ರ ಹರೀಶನ ಪರಿಚಯವಾಗಿತ್ತು. 32 ವರ್ಷದ ಹರೀಶ ಟಿಪ್ಪರ್ ಚಾಲಕನಾಗಿದ್ದನು. ಮದುವೆಯಾಗಿರಲಿಲ್ಲ.. ಹೀಗಾಗಿ ಹೆಂಗಸರನ್ನು ನೋಡಿದಾಗ ಜೊಳ್ಳು ಸುರಿಸುವುದು ಸಾಮಾನ್ಯವಾಗಿತ್ತು. ಅರ್ಚಕನ ಸುಂದರ ಪತ್ನಿಯಾಗಿದ್ದ ಶಾಲಿನಿಯನ್ನು ಆತ ಆಸೆಗಣ್ಣಿನಿಂದ ನೋಡುತ್ತಿದ್ದನು. ಇದು ಶಾಲಿನಿಗೂ ಗೊತ್ತಾಗಿತ್ತು. ಅವನ ಮುಖಕ್ಕೆ ಕ್ಯಾಕರಿಸಿ ಮುಂದೆ ಹೋಗಿದ್ದರೆ ಅವಳ ಸಂಸಾರ ನೆಟ್ಟಗಿರುತ್ತಿತ್ತೇನೋ? ಆದರೆ ಅವಳು ಹಾಗೆ ಮಾಡಲಿಲ್ಲ.. ಅವಳಿಗೂ ತನ್ನದೇ ವಯಸ್ಸಿನ ಕಟ್ಟುಮಸ್ತಾದ ಹುಡುಗ ಕಣ್ಣು ಹಾಕುತ್ತಿದ್ದಾನೆ ಎಂದಾಗ ದೇಹದಲ್ಲಿ ಕಾ(ಮ)ವೇರತೊಡಗಿತ್ತು. ಹೀಗಾಗಿ ಅವನಿಗೆ ಇವಳು ಗ್ರೀನ್ ಸಿಗ್ನಲ್ ಕೊಟ್ಟು ಬಿಟ್ಟಳು ಅಲ್ಲಿಂದ ಕದ್ದುಮುಚ್ಚಿ ಇವರ ಪ್ರಣಯದಾಟ ಆರಂಭವಾಗಿತ್ತು.

ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಅವತ್ತು ಶಾಲಿನಿ ಮತ್ತು ಪ್ರಿಯಕರ ಹರೀಶನ ನಸೀಬು ಕೆಟ್ಟಿತ್ತು. ಅವರಿಬ್ಬರೂ ಮನೆಯಲ್ಲಿ ಸರಸದಲ್ಲಿ ಮೈಮರೆತಿರುವಾಗಲೇ ಗಂಡ ಸಿದ್ದಲಿಂಗಪ್ಪನ ಕೈಗೆ ಸಿಕ್ಕಿಬಿದ್ದಿದ್ದರು. ತನ್ನ ಹೆಂಡತಿ ಪರಪುರುಷನ ತೆಕ್ಕೆಯಲ್ಲಿರುವುದನ್ನು ನೋಡಿದ ಅವನು ರುದ್ರಾವತಾರ ತಾಳಿ ಬಿಟ್ಟಿದ್ದನು. ಅಷ್ಟೇ ಅಲ್ಲದೆ ಅಂದಿನಿಂದ ಶಾಲಿಯನ್ನು ದೂರವಿಟ್ಟ ಆತ ಆಕೆಗೆ ಹಿಂಸೆ ನೀಡಲು ಆರಂಭಿಸಿದ್ದನು. ಮೇಲ್ನೋಟಕ್ಕೆ ಒಂದೇ ಮನೆಯಲ್ಲಿ ಗಂಡ-ಹೆಂಡತಿಯರಂತೆ ಇದ್ದರೂ ಅವರ ನಡುವೆ ಜಗಳಗಳು ನಡೆಯುತ್ತಲೇ ಇದ್ದವು. ಶಾಲಿನಿಗೆ ಗಂಡ ಸಿದ್ಧಲಿಂಗಪ್ಪನೊಂದಿಗೆ ಬದುಕುವುದು ಕಷ್ಟವಾಗ ತೊಡಗಿತ್ತು. ಹಾಗೆಂದು ಆಕೆ ಪ್ರಿಯಕರ ಹರೀಶನ ಸಹವಾಸವನ್ನು ಬಿಟ್ಟಿರಲಿಲ್ಲ. ಈ ನಡುವೆ ಗಂಡ ಸಿದ್ದಲಿಂಗಪ್ಪನನ್ನು ಮುಗಿಸಿದರೆ ತಾನು ಸುಖವಾಗಿ ಇರಬಹುದು ಎಂಬ ಆಲೋಚನೆ ಶಾಲಿನಿಗೆ ಬಂದಿತ್ತು.
ಇದನ್ನೂ ಓದಿ: ನಂಜನಗೂಡಿನಲ್ಲಿ ದರೋಡೆ ನೆಪದಲ್ಲಿ ಗಂಡನ ಕೊಲೆಗೆ ಹೆಂಡ್ತಿ ಸ್ಕೆಚ್…
ಗಂಡ ಸಿದ್ದಲಿಂಗಪ್ಪನನ್ನು ಹೇಗಾದರು ಮುಗಿಸು ಆಮೇಲೆ ನಾನು ನೀನು ಯಾರ ಭಯವಿಲ್ಲದೆ ನೆಮ್ಮದಿಯಾಗಿ ಬದುಕಬಹುದು ಎಂದು ಗೆಣೆಕಾರ ಹರೀಶನಿಗೆ ಶಾಲಿನಿ ಹೇಳಿದ್ದಳು. ಅಲ್ಲದೆ ಗಂಡ ನೀಡುತ್ತಿರುವ ಹಿಂಸೆಯನ್ನು ಕೂಡ ಅವನೊಂದಿಗೆ ಹೇಳಿಕೊಂಡಿದ್ದಳು. ಜತೆಗೆ ಆತನಿಗೆ ಕೈಗೆ ಸಿಕ್ಕಿ ಬಿದ್ದಿದ್ದರಿಂದ ಹರೀಶ್ ಕೂಡ ಭಯದಲ್ಲಿ ಬದುಕುತ್ತಿದ್ದನು. ಹೀಗಾಗಿ ಅರ್ಚಕ ಸಿದ್ದಲಿಂಗಪ್ಪನಿಗೆ ಮೂಹೂರ್ತ ಫಿಕ್ಸ್ ಮಾಡಲು ತಯಾರಿ ಮಾಡಿಕೊಂಡು ಅದಕ್ಕಾಗಿ ತನ್ನ ಸ್ನೇಹಿತರಾದ ಮರಳಗಾಲದ ನಿವಾಸಿಗಳು ಮತ್ತು ಟಿಪ್ಪರ್ ಡ್ರೈವರ್ ಗಳಾದ ಸಂತೋಷ್ ಕುಮಾರ್(29) ಮತ್ತು ಗಣೇಶ ಬಿ.ಆರ್.(29) ಅವರುಗಳನ್ನು ಸೇರಿಸಿಕೊಂಡು ಎಲ್ಲರೂ ಸೇರಿ ಸಿದ್ದಲಿಂಗಪ್ಪನನ್ನು ಮುಗಿಸಲು ತಯಾರಿ ಮಾಡಿಕೊಂಡಿದ್ದನು.

ಶಾಲಿನಿಯಿಂದ ಗಂಡನಿಗೆ ಮೂಹೂರ್ತ ಫಿಕ್ಸ್
ಅವತ್ತು ಮಾರ್ಚ್ 6, ಶುಕ್ರವಾರ ಸಂಜೆ 4 ಗಂಟೆ ವೇಳೆಗೆ ಎಂದಿನಂತೆ ಕೆ.ಶೆಟ್ಟಹಳ್ಳಿಗೆ ತೆರಳಿದ ಸಿದ್ದಲಿಂಗಪ್ಪ ಅಲ್ಲಿನ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾನೆ. ಆ ನಂತರ ರಾತ್ರಿ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ಹಿಂತಿರುಗಲು ಬೈಕನ್ನೇರಿದ್ದಾನೆ. ಆದರೆ ಇತ್ತ ಮನೆಯಲ್ಲಿದ್ದ ಶಾಲಿನಿ ಗಂಡ ದೇವಸ್ಥಾನಕ್ಕೆ ಹೋಗುವ ಮತ್ತು ಅಲ್ಲಿಂದ ಹೊರಡುವ ಸಮಯ ಸೇರಿದಂತೆ ಎಲ್ಲ ವಿಷಯವನ್ನು ಗೆಣೆಕಾರ ಹರೀಶನಿಗೆ ಮೇಸೇಜ್ ಗಳ ಮೂಲಕ ಮಾಹಿತಿ ನೀಡಿದ್ದಳು ಅದರಂತೆ ಅತ್ತ ಹರೀಶ್ ಅಂಡ್ ಟೀಮ್ ಸಿಡಿಎಸ್ ಕಾಲುವೆ ಬಳಿಯ ನಿರ್ಜನ ಪ್ರದೇಶದಲ್ಲಿ ಸಿದ್ಧಲಿಂಗಪ್ಪ ಬರುವುದನ್ನೇ ಕಾಯುತ್ತಾ ಕುಳಿತಿತ್ತು.
ಇದನ್ನೂ ಓದಿ: ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಹೆಣವಾದ ಲಾರಿಡ್ರೈವರ್…
ಕೆ.ಶೆಟ್ಟಹಳ್ಳಿಯಿಂದ ಬೈಕ್ ಏರಿ ಹೊರಟ ಸಿದ್ದಲಿಂಗಪ್ಪ ಸಿಡಿಎಸ್ ಕಾಲುವೆ ಬಳಿ ಬರುತ್ತಿದ್ದಂತೆಯೇ ನಿರ್ಜನ ಪ್ರದೇಶದಲ್ಲಿ ದೊಣ್ಣೆಗಳನ್ನು ಹಿಡಿದು ನಿಂತಿದ್ದ ಹರೀಶ್ ಅಂಡ್ ಟೀಮ್ ಅವನನ್ನು ಅಡ್ಡಗಟ್ಟಿ ಹಲ್ಲೆ ಮಾಡಿತ್ತು. ಈ ವೇಳೆ ನಡೆದ ಜಟಾಪಟಿಯಲ್ಲಿ ಆತನ ಕೊರಳಲ್ಲಿದ್ದ ರುದ್ರಾಕ್ಷಿ ಮತ್ತು ಸ್ಪಟಿಕ ಮಣಿಗಳು ತುಂಡಾಗಿ ರಸ್ತೆಯಲ್ಲಿ ಚೆಲ್ಲಾಡಿದ್ದರೆ, ಚಪ್ಪಲಿ ಕಿತ್ತು ಹೋಗಿ ರಸ್ತೆಯಲ್ಲಿ ಬಿದ್ದಿತ್ತು. ಆತನ ಮೇಲೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದರಿಂದ ರಕ್ತ ಚಿಮ್ಮಿದ್ದು ಅದು ಚಪ್ಪಲಿ ಮೇಲೆ ಬಿದ್ದಿತ್ತು. ಆತ ಸತ್ತ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಬೈಕ್ ಸಹಿತ ಆತನನ್ನು ನಾಲೆಗೆ ಎಸೆದು ಅಪಘಾತವಾಗಿ ನಾಲೆಗೆ ಬಿದ್ದಿರಬಹುದು ಎಂಬ ಸಂಶಯ ಬರುವಂತೆ ಮಾಡಿ ಅಲ್ಲಿಂದ ಪರಾರಿಯಾಗಿತ್ತಲ್ಲದೆ, ಶಾಲಿನಿಗೆ ಕಾಲ್ ಮಾಡಿ ಇನ್ನು ನಿನಗೆ ಯಾವುದೇ ಭಯವಿಲ್ಲ ನಿನ್ನ ಗಂಡನನ್ನು ಮುಗಿಸಿದ್ದೇವೆ. ನೆಮ್ಮದಿಯಾಗಿರು ಎಂದು ಹರೀಶ್ ಹೇಳಿದ್ದನು.

ಇತ್ತ ಪೂಜೆಗೆ ಹೋದ ಸಿದ್ದಲಿಂಗಪ್ಪ ರಾತ್ರಿಯಾದರೂ ಮನೆಗೆ ಬರಲಿಲ್ಲ. ಜತೆಗೆ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಇದರಿಂದ ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿದ್ದರು. ಮಕ್ಕಳು ಅಪ್ಪ ಏಕೆ ಬಂದಿಲ್ಲ ಎಂದು ಕೇಳಿದ್ದರು. ಆದರೆ ಗಂಡ ಬರಲ್ಲ ಆತನ ಕೊಲೆಯಾಗಿದೆ ಎಂಬುದು ಗೊತ್ತಿದ್ದರೂ ಶಾಲಿನಿ ಮಾತ್ರ ತನಗೇನು ಗೊತ್ತೇ ಇಲ್ಲ ಎಂಬಂತೆ ನಾಟಕವಾಡಿದ್ದಳು. ಅತ್ತು ಕರೆದು ಗೋಳಾಡಿದ್ದಳು. ದೇವಸ್ಥಾನದಿಂದ ಹೊರಡುವ ಮುನ್ನ ಸಿದ್ದಲಿಂಗಪ್ಪ ಸಹೋದರನೊಂದಿಗೆ ಮಾತನಾಡಿದ್ದ ಸ್ವಲ್ಪ ಹೊತ್ತಲ್ಲೇ ಬರುವುದಾಗಿ ಹೇಳಿದ್ದನು. ಆದರೆ ಬಂದಿಲ್ಲ ಎಂದಾಗ ಆತನಿಗಾಗಿ ಹುಡುಕಾಟ ನಡೆದಿತ್ತು. ರಾತ್ರಿ ಹುಡುಕಾಡಿದರೂ ಸುಳಿವು ಸಿಗಲಿಲ್ಲ.
ಇದನ್ನೂ ಓದಿ: ಪ್ರೇಮಿಗಳ ದಿನದಂದೇ ‘ಪ್ರೇಮ ನಾಟಕ’ ಬಯಲಾಗಿದ್ದೇಗೆ?
ಅತ್ತು ಕೂಗಾಡಿದ್ದ ಹಂತಕಿ ಶಾಲಿನಿ…
ಆತ ಬರುವ ರಸ್ತೆಯಲ್ಲೇ ಹುಡುಕಿಕೊಂಡು ಹೋದಾಗ ಸಿಡಿಎಸ್ ಕಾಲುವೆಯ ತೂಬಿನ ಹತ್ತಿರ ರಸ್ತೆಯಲ್ಲಿ ಆರ್ಚಕ ಸಿದ್ದಲಿಂಗಪ್ಪನ ಚಪ್ಪಲಿ ಮತ್ತು ಪಕ್ಕದ ಹುಲ್ಲಿನ ಮೇಲೆ ರಕ್ತ ಚೆಲ್ಲಿದ್ದು, ಅಕ್ಕ ಪಕ್ಕದಲ್ಲಿ ಅರ್ಚಕ ಧರಿಸುತ್ತಿದ್ದ ರುದ್ರಾಕ್ಷಿಮಣಿ ಸ್ಪಟಿಕಮಣಿ ಸರಗಳು ಡಾಲರ್‌ಗಳು ಬಿದ್ದಿದ್ದು, ಅರ್ಚಕನ ಬೈಕ್ ಕಾಲುವೆ ಒಳಗೆ ಬಿದ್ದಿರುವುದು ಕಾಣಿಸಿತ್ತಾದರೂ ಶವ ಮಾತ್ರ ರಾತ್ರಿಯೆಲ್ಲ ಹುಡುಕಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಮಾರನೆಯ ದಿನ(ಮಾ.7) ಬೆಳಗ್ಗೆ 6ಗಂಟೆಗೆ ಮತ್ತೆ ನಾಲೆಯಲ್ಲಿ ಹುಡುಕಾಟ ನಡೆಸಿದಾಗ ಸಿಡಿಎಸ್ ನಾಲೆಯ ತೂಬಿನಲ್ಲಿ ಸಿದ್ದಲಿಂಗಪ್ಪನ ಶವವು ಸಿಕ್ಕಿಕೊಂಡಿತ್ತು. ಮೈ ಮೇಲೆ ಅಂಡರ್ ವೇರ್ ಮಾತ್ರ ಇದ್ದು, ಮುಖಕ್ಕೆ, ತಲೆಗೆ ಗಾಯಗಳಾಗಿರುವುದು ಕಂಡು ಬಂದಿತ್ತು.

ಈ ಸಂಬಂಧ ಸಿದ್ದಲಿಂಗಪ್ಪನ ಅಣ್ಣ ಬಾಲಸುಂದರ್ ಯಾರೋ ಅಪರಿಚಿತ ವ್ಯಕ್ತಿಗಳು ಯಾವುದೋ ಉದ್ದೇಶಕ್ಕೆ ಹೊಡೆದು ಕೊಲೆ ಮಾಡಿರುವ ಬಗ್ಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ: 103(1), 238 ಭಾರತೀಯ ನ್ಯಾಯಾ ಸಂಹಿತೆ-2023 ಬಿ.ಎನ್.ಎಸ್-2023 ರೀತ್ಯ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಇದನ್ನೂ ಓದಿ: ಹನಿಟ್ರ್ಯಾಪ್… ಇದು ಮಾಯಾಂಗನೆಯರ ವಿಷವರ್ತುಲ…
ಇನ್ನು ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ವಾರಸುದಾರರಿಗೆ ಶವವನ್ನು ಹಸ್ತಾಂತರ ಮಾಡಿದ್ದರು. ಹೀಗಾಗಿ ಶವದ ಅಂತ್ಯಕ್ರಿಯೆ ನಡೆಸುವಾಗಲೂ ಆರೋಪಿಗಳು ಅಲ್ಲಿಯೇ ಇದ್ದು ಎಲ್ಲದರಲ್ಲಿಯೂ ಪಾಲ್ಗೊಂಡಿದ್ದರಲ್ಲದೆ, ತಮಗೇನು ತಿಳಿದೇ ಇಲ್ಲ ಎಂಬಂತೆ ನಡೆದುಕೊಂಡಿದ್ದರು. ಇನ್ನು ಮೃತ ಸಿದ್ಧಲಿಂಗಪ್ಪನ ಹೆಂಡತಿ ಶಾಲಿನಿ ಕೂಡ ತನಗೇನು ಗೊತ್ತೇ ಇಲ್ಲ ಗಂಡನಿಗಾಗಿಯೇ ತಾನು ಬದುಕಿರುವುದೇನೋ ಎಂಬಂತೆ ಅತ್ತು ಕರೆದು ನಾಟಕವಾಡಿಕೊಂಡಿದ್ದಳು. ಇದೆಲ್ಲದರ ನಡುವೆ ಪೊಲೀಸ್ ಇಲಾಖೆ ಸಿದ್ದಲಿಂಗಪ್ಪನ ಕೊಲೆ ಪ್ರಕರಣದ ರಹಸ್ಯ ಬಯಲಿಗೆ ಸಿದ್ಧತೆ ಮಾಡಿಕೊಂಡಿತ್ತು. ಇದಕ್ಕಾಗಿಯೇ ತನಿಖಾ ತಂಡವೂ ರೆಡಿಯಾಗಿತ್ತು.

ಕೊಲೆ ರಹಸ್ಯ ಭೇದಿಸಿದ ತನಿಖಾ ತಂಡ…
ಮಂಡ್ಯ ಎಸ್ಪಿ ಡಾ.ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ, ಶ್ರೀರಂಗಪಟ್ಟಣ ಆರಕ್ಷಕ ಉಪಾಧೀಕ್ಷಕ ಯು.ಡಿ.ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ
ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಪಿಐ ಆನಂದಕುಮಾರ್, ಕೆ.ಆರ್.ಸಾಗರ ವೃತ್ತ ಸಿಪಿಐ ವಿವೇಕಾನಂದ, ಶ್ರೀರಂಗಪಟ್ಟಣ ಟೌನ್ ಠಾಣೆ ಪಿಐ ಬಿ.ಜಿ.ಕುಮಾರ್, ಪಾಂಡವಪುರ ಠಾಣೆ ಪಿಐ ಶರತ್ ಹೆಚ್.ಪಿ, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪಿಎಸ್ ಐ ರಕ್ಷಿತ ಜಿ.ಎಸ್, ಅರಕೆರೆ ಠಾಣೆ ಪಿಎಸ್ ಐ ವಿನೋದ್, ಪಿಎಸ್ ಐ ರಮೇಶ್ ಕರಕಿಕಟ್ಟೆ, ಸಿಹೆಚ್ಸಿ ಯವರಾದ ಲೋಕೇಶ್, ಹಫೀಜ್ ಪಾಷ, ಚಂದ್ರಶೇಖರ್, ಶ್ರೀಧರ್, ರವಿಕಿರಣ್ ಹಾಗೂ ಲೋಕೇಶ್, ಸಿಪಿಸಿಯವರಾದ ಶಂಕರ್, ದಿನೇಶ್, ಮಂಜುನಾಥ, ಶರತ್, ಸಂತೋಷ್, ತೌಸಿಫ್ ರವರನ್ನೊಳಗೊಂಡ ತಂಡ ತನಿಖೆ ಆರಂಭಿಸಿತ್ತು.
ಇದನ್ನೂ ಓದಿ: ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?…
ಮೊದಲಿಗೆ ಪೊಲೀಸರು ಶಾಲಿನಿಯ ಮೊಬೈಲ್ ವಶಕ್ಕೆ ಪಡೆದು ಕಾಲ್ ಲೀಸ್ಟ್ ತೆಗೆದು ನೋಡಿದಾಗ ಆಕೆ ತನ್ನ ಮೊಬೈಲ್ ನಿಂದ ಹರೀಶನ ನಂಬರಿಗೆ ಅತಿಹೆಚ್ಚು ಬಾರಿ ಕಾಲ್ ಮತ್ತು ಮೆಸೇಜ್ ಮಾಡಿರುವುದು ಕಂಡು ಬಂದಿತ್ತು. ಸಿದ್ದಲಿಂಗಪ್ಪ ಹತ್ಯೆಯಾಗುವ ದಿನವೂ ಅವಳು ಹರೀಶನಿಗೆ ಕರೆ ಮತ್ತು ಮೆಸೇಜ್ ಮಾಡಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿಯೇ ಪೊಲೀಸರು ಸಮಗ್ರ ಮಾಹಿತಿಯನ್ನು ಕಲೆ ಹಾಕಿದಾಗ ಹರೀಶ್ ಮತ್ತು ಶಾಲಿನ ನಡುವೆ ಅಕ್ರಮ ಸಂಬಂಧವಿರುವುದು ಗೊತ್ತಾಗಿತ್ತು. ಹೀಗಾಗಿ ಮಾ.9ರಂದು ಪ್ರಮುಖ ಆರೋಪಿ ಹರೀಶ್ ನ್ನು ವಶಕ್ಕೆ ಪಡೆದು ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಹರೀಶ್ ಸತ್ಯ ಕಕ್ಕಿದ್ದು, ಶಾಲಿನಿ ಜೊತೆಗೆ ಒಂದು ದಿನ ಮನೆಯಲ್ಲಿದ್ದಾಗ ಆಕಸ್ಮಿಕವಾಗಿ ಅರ್ಚಕನ ಕೈಗೆ ಸಿಕ್ಕಿಬಿದ್ದಿದ್ದು, ಅಂದಿನಿಂದ ಆತ ಹೆಂಡತಿ ಶಾಲಿನಿ ಮತ್ತು ನನಗೆ ಹಿಂಸೆ ಕೊಡುತಿದ್ದನೆಂದು, ಇದರಿಂದ ಆಕ್ರೋಶಗೊಂಡ ಶಾಲಿನಿ ಏನಾದಾರೂ ಮಾಡಿ ತನ್ನ ಗಂಡನನ್ನು ಮುಗಿಸುವಂತೆ ಹೇಳಿದ್ದು, ಅದರಂತೆ ಕೊಲೆ ಮಾಡಿದ್ದಾಗಿ ಹರೀಶ್ ಕೊಲೆ ರಹಸ್ಯವನ್ನು ಹೇಳಿದ್ದಾನೆ.

ಸದ್ಯ ಪ್ರಮುಖ ಆರೋಪಿ ಹರೀಶ ನನ್ನು ಶ್ರೀರಂಗಪಟ್ಟಣ ಎಸಿಜೆ ಅಂಡ್ ಎಎಂಎಪ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದ್ದರೆ, ಉಳಿದ ಆರೋಪಿಗಳಾದ ಶಾಲಿನಿ, ಸಂತೋಷ್ ಕುಮಾರ್ ಮತ್ತು ಗಣೇಶ ಬಿ.ಆರ್ ಮಾ.10ರಂದು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಮತ್ತು ಕೊಲೆ ಬಗ್ಗೆ ತನ್ನೊಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಮೊಬೈಲ್ ಪೋನುಗಳನ್ನು ಅಮಾನತ್ತುಕೊಂಡಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. ಅರ್ಚಕನ ಕೊಲೆ ಪ್ರಕರಣವನ್ನು ಭೇದಿಸಿ ಹಂತಕರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ತನಿಖಾ ತಂಡದ ಕಾರ್ಯವನ್ನು ಎಸ್ಪಿ ಡಾ.ಶೋಭಾರಾಣಿ ಶ್ಲಾಘಿಸಿದ್ದಾರೆ.
-ಬಿ.ಎಂ.ಲವಕುಮಾರ್







