ಮಹಾಶಿವನಿಗೆ ಭಸ್ಮಾಭಿಷೇಕ ಸೇರಿ ವಿವಿಧ ಅಭಿಷೇಕ ನೆರವೇರಿಸಿದ ಶ್ರೀ ಅರ್ಜುನ ಅವಧೂತ ಗುರುಮಹಾರಾಜರು

ಮೈಸೂರು: ಶಿವರಾತ್ರಿ ಹಿನ್ನಲೆಯಲ್ಲಿ ಶಾಸ್ತ್ರೋಕ್ತವಾಗಿ ವಿವಿಧ ಪೂಜೆ, ಅಭಿಷೇಕಗಳ ಮೂಲಕ ಮಹಾಶಿವನ ಸೇವೆಯನ್ನು ಮಾಡುವುದರೊಂದಿಗೆ ನೆರೆದ ಭಕ್ತರಿಗೆಲ್ಲ ಒಳಿತು ಮಾಡುವಂತೆ ಶ್ರೀ ಅರ್ಜುನ ಅವಧೂತ ಗುರುಮಹಾರಾಜರು ಪ್ರಾರ್ಥಿಸಿದರು.

ಮಾಘ ಮಾಸದ ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ವೇಂಕಟಾಚಲ ಅವಧೂತ ಗುರುಮಹಾರಾಜರ ದಿವ್ಯಸಾನ್ನಿಧ್ಯದಲ್ಲಿ ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಗುರುಮಹಾರಾಜರು ನಾಲ್ಕೂ ಜಾವಗಳಲ್ಲೂ ವೇದೋಕ್ತವಾಗಿ ಪಂಚಾಮೃತ ಅಭಿಷೇಕ, ಅರ್ಚನೆ, ಪೂಜೆ ಸಲ್ಲಿಸಿದರು. ವಿಶೇಷವಾಗಿ ನಾಲ್ಕನೇ ಜಾವದಲ್ಲಿ ಪರಮಪೂಜ್ಯರು ಪರಶಿವನಿಗೆ ಭಸ್ಮಾಭಿಷೇಕವನ್ನು ನೆರವೇರಿಸಿದರು.

ಮೊದಲೆರಡು ಜಾವಗಳಲ್ಲಿ ಆತ್ಮಬಂಧುಗಳಿಂದ ಮಾಡಿದ ಭಜನೆ ಭಕ್ತಿರಸಾಯನವನ್ನು ಉಣಬಡಿಸಿತು. ಶಿವರಾತ್ರಿಯಂದು ಗುರುಸನ್ನಿಧಾನದಲ್ಲಿ ಶಿವಪೂಜೆ, ಭಜನೆ, ಜಾಗರಣೆಮಾಡಿದ ಆತ್ಮಬಂಧುಗಳು ಧನ್ಯತೆಯ ಭಾವವನ್ನು ಹೊಂದಿದರು. 
ಸಕಲ ಜಗತ್ತಿನ ರಕ್ಷಣೆಗೋಸ್ಕರ ಸಮುದ್ರಮಥನದಿಂದ ಉದ್ಭವಿಸಿದ ಹಾಲಾಹಲವನ್ನು ಕುಡಿದ ಶಿವನು ನಮ್ಮನ್ನು ಅನುಗ್ರಹಿಸಲಿ. ಎಂದು ಆತ್ಮಬಂಧುಗಳು ಪ್ರಾರ್ಥಿಸಿದರು. ಎಲ್ಲೆಡೆಯೂ ಭಕ್ತಿ ಪ್ರವಹಿಸಿ ಶಿವಧ್ಯಾನದಲ್ಲಿ ಭಕ್ತರು ತಲ್ಲೀನರಾದರು.

ಈ ವೇಳೆ ನೆರೆದಿದ್ದ ಭಕ್ತರು ಜಾಗರಣೆ ನಡೆಸಿ ಶಿವನನ್ನು ಸ್ತುತಿಸಿದರು.








