FoodLatest

ಪಾಲಕ್ ನಿಂದ ಏನೆಲ್ಲ ಮಾಡಬಹುದು ಗೊತ್ತಾ? ಈಗಲೇ ನೀವೇ ಮನೆಯಲ್ಲಿ ತಯಾರಿಸಿ, ಸೇವಿಸಿ, ಆನಂದಿಸಿ…

ಪಾಲಕ್ ಸೊಪ್ಪು ನಮ್ಮ ದೇಹದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ನಿತ್ಯದ ಆಹಾರದಲ್ಲಿ ಅದನ್ನು ಬೇರೆ, ಬೇರೆ ರೀತಿಯಲ್ಲಿ ಬಳಸಲಾಗುತ್ತಿದೆ. ಇಲ್ಲಿ ಪಾಲಕ್ ಸೊಪ್ಪು ಬಳಸಿ ಮಾಡಬಹುದಾದ ತಿನಿಸುಗಳ ಪರಿಚಯವನ್ನು ಮಾಡಿಕೊಡಲಾಗಿದೆ.

1-ಜನಪ್ರಿಯ  ಪಾಲಕ್ ಪನ್ನೀರ್ ಮಾಡೋದು  ಹೇಗೆ?

ಬಹಳಷ್ಟು ಮಂದಿ ಪಾಲಕ್ ಪನ್ನೀರನ್ನು ತುಂಬಾ ಇಷ್ಟಪಡುತ್ತಾರೆ. ಇಂತಹ ಪಾಲಕ್ ಪನ್ನೀರನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ. ಇದುವರೆಗೆ ಮಾಡದೆ ಇದ್ದರೆ ನೀವೊಮ್ಮೆ ಪ್ರಯತ್ನಿಸಬಹುದಾಗಿದೆ. ಹೇಗೆ ಮಾಡೋದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ…

ಪಾಲಕ್ ಪನ್ನಿರ್ ಮಾಡಲು ಬೇಕಾಗುವ ಪದಾರ್ಥಗಳು: ಪಾಲಕ್ ಸೊಪ್ಪು- ನಾಲ್ಕು ಕಟ್ಟು, ಈರುಳ್ಳಿ-ಎರಡು, ಟೋಮೆಟೋ-ಎರಡು,

ಶುಂಠಿ ಬೆಳ್ಳುಳ್ಳಿ ಪೇಸ್ಟ್- ಅರ್ಧ ಚಮಚ, ಜೀರಿಗೆ- ಕಾಲು ಚಮಚ, ಹಸಿಮೆಣಸು-ನಾಲ್ಕು, ಪನ್ನೀರ್ ತುಂಡುಗಳು- ಒಂದು ಕಪ್, ಅರಶಿನಪುಡಿ- ಚಿಟಿಕೆ, ಗರಂಮಸಾಲೆ- ಎರಡು ಚಮಚ, ಹಾಲಿನಕೆನೆ-ಕಾಲು ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಎಂಟು ಚಮಚ

ಮಾಡುವ ವಿಧಾನ ಹೀಗಿದೆ: ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ಬೇಯಿಸಿ ಮಿಕ್ಸಿಗೆ ಹಾಕಿ ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು. ಇನ್ನೊಂದೆಡೆ ಪನ್ನೀರನ್ನು ಕರಿದಿಟ್ಟು ಕೊಳ್ಳಿ. ಮತ್ತೊಂದೆಡೆ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾಗುತ್ತಿದ್ದಂತೆಯೇ ಅದಕ್ಕೆ ಜೀರಿಗೆ ಅರಶಿನ ಹಾಕಿ ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಬೇಕು. ಆ ನಂತರ ಟೋಮೆಟೋ, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ಸ್ವಲ್ಪ ಹುರಿಯಿರಿ. ಬಳಿಕ ಅದಕ್ಕೆ ರುಬ್ಬಿಟ್ಟುಕೊಂಡ ಪಾಲಕ್‌ ನ್ನು ಸೇರಿಸಿ ಗರಂಮಸಾಲೆ, ಉಪ್ಪು( ರುಚಿಗೆ ತಕ್ಕಂತೆ) ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಹಾಲುಕೆನೆ ಸೇರಿಸಿ ಇದಾದ ಬಳಿಕ ಕರಿದಿಟ್ಟುಕೊಂಡ ಪನ್ನೀರ್ ಸೇರಿಸಿ. ಚೆನ್ನಾಗಿ ಕುದಿದ ಬಳಿಕ ಇಳಿಸಿದರೆ ಪನ್ನೀರ್ ರೆಡಿ.

2- ಪಾಲಕ್ ಪನ್ನೀರ್ ಮಸಾಲ ಸವಿಯಿರಿ

ಪಾಲಕ್ ಪನ್ನೀರ್ ಮಸಾಲ ನಾನ್, ರೋಟಿ ಜತೆ ಸವಿಯಲು ಖುಷಿಕೊಡುತ್ತದೆ. ಪಾಲಕ್ ಸೊಪ್ಪು ಮತ್ತು ಪನ್ನೀರ್ ಉತ್ತಮ ಕಾಂಬಿನೇಷನ್ ಆಗಿದ್ದು ಇದೆರಡರಿಂದ ತಯಾರಿಸುವ ಪಾಲಕ್ ಪನ್ನೀರ್ ಮಸಾಲ ಇನ್ನಷ್ಟು ಚೆನ್ನಾಗಿರುತ್ತದೆ.

ಬೇಕಾಗುವ ಪದಾರ್ಥಗಳು ಹೀಗಿದೆ: ಪಾಲಕ್ ಸೊಪ್ಪು- ನಾಲ್ಕು ಕಟ್ಟು, ಪನ್ನೀರ್- ಅರ್ಧ ಕೆಜಿ, ಟೊಮ್ಯಾಟೋ-ಎರಡು, ಈರುಳ್ಳಿ- ಎರಡು, ಗರಂಮಸಾಲ- ಒಂದು ಚಮಚ, ಖಾರದಪುಡಿ- ಎರಡು ಚಮಚ, ಎಣ್ಣೆ- ಎರಡು ಚಮಚ, ಉಪ್ಪು- ರುಚಿಗೆ ತಕ್ಕಂತೆ

ಪಾಲಕ್ ಪನ್ನೀರ್ ಮಸಾಲ ಮಾಡುವ ವಿಧಾನ: ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಬಳಿಕ ಸಣ್ಣಗೆ ಹೆಚ್ಚಿ ಬೇಯಿಸಬೇಕು. ತಣ್ಣಗಾದ ಬಳಿಕ ಅದನ್ನು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಬೇಕು. ಇನ್ನೊಂದು ಕಡೆ ಈರುಳ್ಳಿ ಮತ್ತು ಟೊಮ್ಯಾಟೋವನ್ನು ಸಣ್ಣಗೆ ಹಚ್ಚಿಟ್ಟುಕೊಂಡು ಆ ನಂತರ ಒಲೆ ಮೇಲೆ ಬಾಣಲಿಯಿಟ್ಟು ಅದರಲ್ಲಿ ಎಣ್ಣೆ ಹಾಕಿ ನಿಧಾನ ಉರಿಯಲ್ಲಿ ಹಚ್ಚಿಟ್ಟ ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಹಾಕಿ ಚೆನ್ನಾಗಿ ಬಾಡಿಸಬೇಕು.

ಬಳಿಕ ಅದಕ್ಕೆ ಗರಂಮಸಾಲ, ಖಾರದಪುಡಿಯನ್ನು ಹಾಕಿ ಎಲ್ಲವನ್ನು ಸೇರಿಸಿ ಹುರಿಯಬೇಕು. ಅದಕ್ಕೆ ಪನ್ನೀರನ್ನು ಚೌಕಾಕಾರವಾಗಿ ಕಟ್ ಮಾಡಿ ಎಣ್ಣೆಯಲ್ಲಿ ಅಥವಾ ಹಾಗೆಯೇ ಹುರಿದು ಹಾಕಬೇಕು. ಅದಾದ ಬಳಿಕ ರುಬ್ಬಿಟ್ಟುಕೊಂಡ ಪಾಲಕ್‌ನ್ನು ಸೇರಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಿ ಇಳಿಸಿದರೆ ಪಾಲಕ್ ಪನ್ನೀರು ಸವಿಯಲು ಸಿದ್ಧವಾಗುತ್ತದೆ.

3- ಉಪಹಾರಕ್ಕೆ ಮಾಡಿ ಪಾಲಕ್ ಪರೋಟ

ಪರೋಟ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹದ್ದು, ಇದರ ರುಚಿಯನ್ನು ಎಲ್ಲರೂ ನೋಡಿರುತ್ತೀರ. ಆದರೆ ಇದೇ ಪರೋಟವನ್ನು ಇನ್ನಷ್ಟು ವಿಶೇಷವಾಗಿ ಮಾಡಲು ಸಾಧ್ಯವಿದೆ. ಜತೆಗೆ ಪರೋಟ ಗಟ್ಟಿಯಾಗಿರುವುದರಿಂದ ಜೀರ್ಣವಾಗುವುದು ಸ್ವಲ್ಪ ಕಷ್ಟವೇ. ಆದ್ದರಿಂದ ಅದಕ್ಕೆ ಪಾಲಕ್ ಸೊಪ್ಪು ಸೇರಿದಂತೆ ಒಂದಿಷ್ಟು ಮಸಾಲೆಗಳನ್ನು ಬೆರೆಸಿ ಮಾಡುವುದರಿಂದ ಜೀರ್ಣವಾಗಲು ಮತ್ತು ಆರೋಗ್ಯಕ್ಕೂ ಒಳ್ಳೆಯದೇ. ಪಾಲಕ್ ಪರೋಟ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಹೇಗೆ ಎಂಬುದರ ಬಗ್ಗೆ ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಪಾಲಕ್ ಸೊಪ್ಪು- ಒಂದು ಕಟ್ಟು, ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಈರುಳ್ಳಿ-ಎರಡು (ಚಿಕ್ಕದಾಗಿ ಕತ್ತರಿಸಿದ್ದು), ಹಸಿಮೆಣಸು-ಎರಡು (ಚಿಕ್ಕದಾಗಿ ಕತ್ತರಿಸಿದ್ದು), ಜೀರಿಗೆ- ಕಾಲು ಚಮಚ, ಗೋಧಿ ಹಿಟ್ಟು- ಒಂದುಕಪ್, ತುಪ್ಪ- ಒಂದು ಚಮಚ, ಮೈದಾಹಿಟ್ಟು- ಕಾಲುಕಪ್, ಉಪ್ಪು- ರುಚಿಗೆ ತಕ್ಕಷ್ಟು, ನೀರು- ಅಗತ್ಯಕ್ಕೆ ತಕ್ಕಂತೆ

ಮಾಡುವ ವಿಧಾನ ಹೀಗಿದೆ: ಪಾಲಕ್ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು. ಬಳಿಕ ಅದರ ಜೊತೆಗೆ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಚೂರು, ಜೀರಿಗೆ, ಉಪ್ಪು, ಗೋಧಿ ಹಿಟ್ಟು, ಮೈದಾ ಹಿಟ್ಟು, ತುಪ್ಪ ಎಲ್ಲವನ್ನು ಹಾಕಿ ಚೆನ್ನಾಗಿ ಹದ ಬರುವಂತೆ ಕಲೆಸಬೇಕು. ಚಪಾತಿ ಹದಕ್ಕೆ ಬಂದ ಬಳಿಕ ಅದನ್ನು ತೆಗೆದು ಸ್ವಲ್ಪ ದಪ್ಪದಾಗಿ ಲಟ್ಟಿಸಿ ತುಪ್ಪ ಹಾಕಿ ತಾವಾದಲ್ಲಿ ಎರಡು ಕಡೆ ಚೆನ್ನಾಗಿ ಬೇಯಿಸಬೇಕು. ಬೆಂದ ಬಳಿಕ ಚಟ್ನಿಯೊಂದಿಗೆ ತಿಂದರೆ ಚೆನ್ನಾಗಿರುತ್ತದೆ.

4- ಪಾಲಕ್ ಪಲಾವ್ ಮಾಡಿ.. ರುಚಿ ನೋಡಿ..

ತರಕಾರಿ ಪಲಾವ್ ಮಾಡುವವರಿಗೆ ಪಾಲಕ್ ಪಲಾವ್ ಮಾಡಬೇಕೆನ್ನುವ ಬಯಕೆ ಬರುವುದು ಸಹಜ ಹಾಗಿದ್ದರೆ ಹೇಗೆ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಅದನ್ನು ಮಾಡುವ ವಿಧಾನ.

ಬೇಕಾಗುವ ಪದಾರ್ಥಗಳು: ಬಾಸುಮತಿ ಅಕ್ಕಿ- ಒಂದು ಕಪ್, ಪಾಲಕ್ ಸೊಪ್ಪು- ಒಂದು ಕಟ್ಟು, ಈರುಳ್ಳಿ- ಎರಡು, ಹಸಿ ಬಟಾಣಿ- ಕಾಲು ಕಪ್, ಗೋಡಂಬಿ- ಹತ್ತು, ದನಿಯಾ ಪುಡಿ-1 ಚಮಚ, ಒಣಮೆಣಸು-ನಾಲ್ಕು, ತುಪ್ಪ- ಐದು ಚಮಚ, ಏಲಕ್ಕಿ-ಎರಡು, ಚಕ್ಕೆ- ಸ್ವಲ್ಪ, ಲವಂಗ-ನಾಲ್ಕು, ನಿಂಬೆರಸ-ಎರಡು ಚಮಚ, ನೀರು- ಎರಡೂವರೆ ಕಪ್, ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ ಹೀಗಿದೆ: ಮೊದಲಿಗೆ ಪಾತ್ರೆಯಲ್ಲಿ ತುಪ್ಪ ಹಾಕಿ ಅದನ್ನು ಬಿಸಿ ಮಾಡಿ ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಗೋಡಂಬಿ ಹಾಕಿ ಹುರಿಯಬೇಕು. ಜತೆಗೆ ಸಣ್ಣದಾಗಿ ಹಚ್ಚಿದ ಈರುಳ್ಳಿ, ಪಾಲಕ್ ಸೊಪ್ಪು ಸೇರಿಸಬೇಕು. ಆ ನಂತರ ಹುರಿದ ಮೆಣಸು ಮತ್ತು ದನಿಯಪುಡಿಯನ್ನು ಹಾಕಬೇಕು ಅದಾದ ಬಳಿಕ ಹಸಿ ಬಟಾಣಿ, ಬಾಸುಮತಿ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಹಾಕಿ ಬೇಯಿಸಿದರೆ ಪಾಲಕ್ ಪಲಾವು ಸವಿಯಲು ರೆಡಿ.

5- ಊಟದ ಜತೆಗಿರಲಿ ಪಾಲಕ್ ಪಲ್ಯ

ಪಾಲಕ್ ಸೊಪ್ಪಿನಿಂದ ಎಲ್ಲ ರೀತಿಯ ಪದಾರ್ಥಗಳನ್ನು ಮಾಡಬಹುದು. ಆದರ ಜತೆಗೆ ಪಾಲಕ್ ಪಲ್ಯವೂ ಅಷ್ಟೇ ರುಚಿಯಾಗಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪಾಲಕ್ ಪಲ್ಯಕ್ಕೆ  ಬೇಕಾಗುವ ಪದಾರ್ಥಗಳು: ಪಾಲಕ್ ಸೊಪ್ಪು- ಮೂರು ಕಟ್ಟು, ಜೀರಿಗೆ- ಕಾಲು ಚಮಚ, ಅರಿಶಿನಪುಡಿ-ಕಾಲು ಚಮಚ, ಟೊಮ್ಯಾಟೋ-2, ಈರುಳ್ಳಿ-ಎರಡು, ಅಚ್ಚಖಾರದಪುಡಿ- ಒಂದು ಚಮಚ, ಎಣ್ಣೆ- ನಾಲ್ಕು ಚಮಚ, ಜೀರಿಗೆ- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ ಹೀಗಿದೆ: ಮೊದಲಿಗೆ ಪಾಲಕ್ ಸೊಪ್ಪನ್ನು ನೀರಿನಲ್ಲಿ ತೊಳೆದು ಬಳಿಕ ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಇದರ ಜೊತೆಗೆ ಈರುಳ್ಳಿ, ಟೊಮ್ಯಾಟೋ, ಈರುಳ್ಳಿಯನ್ನು ಚಿಕ್ಕ ಚೂರುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಬೇಕು. ಇದಾದ ಬಳಿಕ ಪಾತ್ರೆಯಲ್ಲಿ ಎಣ್ಣೆಹಾಕಿ ಅದರಲ್ಲಿ ಜೀರಿಗೆ ಹಾಕಿ ಸಿಡಿಸಿ ನಂತರ ಅರಿಶಿನ ಪುಡಿ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು ಅದು ಚೆನ್ನಾಗಿ ಬಾಡಿದ ನಂತರ ಟೊಮ್ಯಾಟೋ ಹಾಕಿ ಚೆನ್ನಾಗಿ ಹುರಿದು. ಆ ನಂತರ ಸಣ್ಣಗೆ ಹಚ್ಚಿದ ಪಾಲಕ್ ಸೊಪ್ಪನ್ನು ಹಾಕಿ ಬೇಯಿಸಿ ಉಪ್ಪು, ಮೆಣಸಿನಪುಡಿ ಬೇಯಿಸಿದರೆ ಪಾಲಕ್ ಪಲ್ಯ ರೆಡಿ.

 

 

 

 

admin
the authoradmin

Leave a Reply