ಆತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳ ಒಲೆರಹಿತ ಅಡುಗೆ ಸ್ಪರ್ಧೆ…

ಕುಶಾಲನಗರ (ರಘುಹೆಬ್ಬಾಲೆ) : ಸಮೀಪದ ಆತ್ತೂರು ಗ್ರಾಮದಲ್ಲಿರುವ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಲೆ ರಹಿತ ಅಡುಗೆ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಖಾದ್ಯಗಳು ಗಮನ ಸೆಳೆಯಿತು.ಯಾವಾಗಲೂ ಮನೆಗಳಲ್ಲಿ ಅಮ್ಮನ ಕೈ ತುತ್ತು ಮತ್ತು ಅಜ್ಜಿಯ ಕೈ ತುತ್ತು ಸವಿದು ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳು ಸ್ವತಃ ಒಲೆ ರಹಿತ ಅಡುಗೆಗಳಾದ ಪಾನಿಪುರಿ, ದಹಿ ಪುರಿ, ಬೇಲ್ ಪುರಿ , ವಿವಿಧ ಹಸಿ ತರಕಾರಿಗಳು, ಹಣ್ಣುಗಳು, ಮೊಳಕೆ ಕಾಳುಗಳನ್ನು ಬಳಸಿ ಮಾಡುವ ಸಲಾಡ್‌ಗಳು ಹಾಗೂವಹಣ್ಣಿನ ಸಲಾಡ್ ಗಳನ್ನು ಸಿದ್ಧಪಡಿಸಿದರು.ನಾವೇನು ಕಡಿಮೆ ಇಲ್ಲ ಎಂಬಂತೆ ತಯಾರಿಸಿದ್ದ ತಿನಿಸುಗಳು ಹಾಗೂ ಪಾನೀಯಗಳು ಇತರೆ ವಿದ್ಯಾರ್ಥಿಗಳಷ್ಟೇ ಅಲ್ಲದೇ ಶಾಲಾ ಶಿಕ್ಷಕರ ಬಾಯಲ್ಲಿ ನೀರೂರಿಸಿತು.

ಸಂಸ್ಥೆಯ ಪ್ರಾಂಶುಪಾಲೆ ಸತ್ಯ ಸುಲೋಚನಾ ಮಾತನಾಡಿ, ಜಂಕ್ ಫುಡ್ ಗಳಿಂದ ಮಕ್ಕಳನ್ನು ದೂರವಿಡುವ ಮೂಲಕ ಮನೆಯಲ್ಲಿ ಅತಿ ಸುಲಭದಲ್ಲಿ ಹೆಚ್ಚು ಪೌಷ್ಟಿಕಾಂಶ ಗಳುಳ್ಳ ತರಕಾರಿ, ಸೊಪ್ಪು, ಹಣ್ಣುಗಳಿಂದ ಸಿದ್ದಪಡಿಸಿದ್ದ ತಿನಿಸುಗಳು ವಿದ್ಯಾರ್ಥಿಗಳ ಆರೋಗ್ಯಕ್ಕೆ ಅಗತ್ಯ ಎಂಬ ಕುರಿತು ಅರಿವು ಮೂಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಒಲೆ ರಹಿತ ಅಡುಗೆ ಕಾರ್ಯಕ್ರಮವು ಅಡುಗೆ ಮಾಡುವ ಕೌಶಲ್ಯಗಳನ್ನು ಬೆಳೆಸಲು, ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸಲು ಒಂದು ಉತ್ತಮ ಕಾರ್ಯಕ್ರಮವಾಗಿದೆ, ಇದರಲ್ಲಿ ವಿದ್ಯಾರ್ಥಿಗಳು ಚುರುಮುರಿ, ಬೇಲ್ಪುರಿ, ಕೋಸಂಬರಿ, ಸಲಾಡ್‌ಗಳಂತಹ ಸುಲಭ ಮತ್ತು ರುಚಿಕರವಾದ ತಿನಿಸುಗಳನ್ನು ಒಲೆಯಿಲ್ಲದೆ ತಯಾರಿಸುತ್ತಾರೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಇಂತಹ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭ ಶಿಕ್ಷಕ ವರ್ಗ ಹಾಗೂ ಇತರರು ಪಾಲ್ಗೊಂಡಿದ್ದರು.







