ಕೊಡಗಿನ ಮಳೆಗಾಲದ ಬಹು ಬೇಡಿಕೆಯ ತರಕಾರಿ ಬಿದಿರು ಕಣಿಲೆ… ಇದರಿಂದ ಏನೆಲ್ಲ ಖಾದ್ಯ ತಯಾರಿಸಬಹುದು ಗೊತ್ತಾ?

ಅದು ಮೂರ್ನಾಲ್ಕು ದಶಕಗಳ ಹಿಂದಿನ ದಿನಗಳು... ಆಗ ಕೊಡಗಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿ ಧೋ ಎಂದು ಸುರಿಯುತ್ತಿದ್ದರೆ, ನದಿ ದಡದಲ್ಲಿ, ಕಾಡಿನ ನಡುವೆ, ಗದ್ದೆ ಬದಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಬೆಳೆದು ನಿಂತಿದ್ದ ಬಿದಿರು ಮೆಳೆಗಳ ಬಳಿ ಕತ್ತಿ ಹಿಡಿದು ಕಣಿಲೆ(ಬಿದಿರು ಮೊಳಕೆ) ಕಡಿಯುವವರು, ತಲೆಮೇಲೆ ಕಣಿಲೆ ಹೊತ್ತು ಸಾಗುವ ಮಕ್ಕಳು ಕಾಣಿಸುತ್ತಿದ್ದರು. ಅವತ್ತಿನ ದಿನಗಳಲ್ಲಿ ಬಿದಿರು ಕಣಿಲೆಯನ್ನು ಮನೆಗಳಲ್ಲಿ ತರಕಾರಿಯಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿತ್ತು.
ಆಗಿನ ದಿನಗಳನ್ನು ನೆನಪಿಸಿಕೊಳ್ಳುವುದಾದರೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು, ದೊಡ್ಡವರೆನ್ನದೆ ಬಿಡುವು ಸಿಕ್ಕಾಗ ಕಣಿಲೆ ಹುಡುಕುತ್ತಾ ಬಿದಿರು ಮೆಳೆಗಳ ಬಳಿ ಸುಳಿಯುವುದು ಮಾಮೂಲಿಯಾಗಿತ್ತು. ಅದರಲ್ಲಿಯೂ ಶಾಲೆಗೆ ರಜೆ ಸಿಕ್ಕಿತೆಂದರೆ ಮಕ್ಕಳು ಕಣಿಲೆ ಬೇಟೆಯಲ್ಲಿ ನಿರತರಾಗಿ ಬಿಡುತ್ತಿದ್ದ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿದೆ. ಇನ್ನು ಆಗಿನ ಕಾಲದಲ್ಲಿ ಎಲ್ಲೆಡೆ ಯಥೇಚ್ಛವಾಗಿ ಬಿದಿರು ಮೆಳೆಗಳಿದ್ದವು. ಹಾಗಾಗಿ ಬಿದಿರುಗಳು ಮನೆಗೆ ಕಚ್ಚಾವಸ್ತುವಾಗಿಯೂ, ದನಗಳಿಗೆ ಮೇವಾಗಿಯೂ ಮಳೆಗಾಲದಲ್ಲಿ ರುಚಿಕರ ಸ್ವಾದಿಷ್ಟ ತರಕಾರಿಯಾಗಿಯೂ ಬಳಕೆಯಾಗುತ್ತಿತ್ತು.
ಮುಂಗಾರು ಮಳೆ ಆರಂಭಕ್ಕೆ ಮುನ್ನವೇ ಸುರಿಯುತ್ತಿದ್ದ ಮಳೆಯಿಂದಾಗಿ ಬಿದಿರು ಮೆಳೆಗಳಿಂದ ಹೊರ ಬರುತ್ತಿದ್ದ ಕಣಿಲೆಯನ್ನು ಕತ್ತರಿಸಿ ಮನೆಗೆ ತಂದು ಅದರ ಎಳೆಯ ಭಾಗವನ್ನು ಚಿಕ್ಕದಾಗಿ ಕತ್ತರಿಸಿ ಬಳಿಕ ಅದನ್ನು ನೀರಿನಲ್ಲಿ ನೆನೆಯಲು ಹಾಕಲಾಗುತ್ತಿತ್ತು. ಮೂರು ದಿನಗಳು ಕಳೆದ ಬಳಿಕ ತೆಗೆದು ಶುದ್ಧ ನೀರಿನಿಂದ ತೊಳೆದು ಬಳಿಕ ಸಾರು, ಪಲ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಬೆಳಗ್ಗಿನ ಉಪಹಾರಕ್ಕೆ ಅಕ್ಕಿ ರೊಟ್ಟಿಯೊಂದಿಗೆ ಕಣಿಲೆ ಪಲ್ಯವನ್ನು ಸೇವಿಸಿದರೆ ಅದರ ಮಜಾವೇ ಬೇರೆಯಾಗಿರುತ್ತಿತ್ತು. ಇನ್ನು ಕಣಿಲೆಯಿಂದ ಉಪ್ಪಿನಕಾಯಿ, ಪತ್ರೋಡೆ. ಉಂಡೆಕಾಳು ಸೇರಿದಂತೆ ಹಲವಾರು ಖಾದ್ಯವನ್ನು ಅವರವರ ಇಷ್ಟದ ಪ್ರಕಾರ ತಯಾರಿಸುತ್ತಿದ್ದರು.
ಕೊಡಗಿನಲ್ಲಿ ಮಳೆಗಾಲದಲ್ಲಿ ಕಣಿಲೆ ಪ್ರಮುಖ ತರಕಾರಿಯಾಗಿ ಬಳಕೆಯಾಗಲು ಕಾರಣವೂ ಇತ್ತು. ಮಳೆ ಪ್ರಾರಂಭವಾಗಿ ಇಡೀ ವಾತಾವರಣವೇ ಶೀತಮಯವಾಗಿರುತ್ತಿದ್ದುದರಿಂದ ದೇಹವನ್ನು ಬಿಸಿಯಾಗಿಡಲು ಉಷ್ಣವಾಗಿರುವಂತಹ ಆಹಾರವೇ ಬೇಕಾಗುತ್ತಿತ್ತು. ಹಾಗಾಗಿ ಕಣಿಲೆ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದರಿಂದ ಅದರಲ್ಲಿ ಉಷ್ಣದ ಗುಣಾಂಶ ಹೆಚ್ಚಾಗಿರುತ್ತಿದ್ದರಿಂದ ಮತ್ತು ಕೈಗೆಟುಕುವಂತಿದ್ದರಿಂದ ಅದರ ಬಳಕೆಯನ್ನು ಹೆಚ್ಚು ಹೆಚ್ಚಾಗಿ ಮಾಡಲಾಗುತ್ತಿತ್ತು. (ಈಗ ಬಿದಿರು ನಾಶವಾಗಿದೆ. ಹೀಗಾಗಿ ಹಣ ನೀಡಿ ಪಡೆಯುವಂತಾಗಿದೆ)
ಆಗಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿದ್ದುದರಿಂದ ಎಲ್ಲರೂ ಭತ್ತದ ಕೃಷಿಯನ್ನೇ ಅವಲಂಭಿಸಿದ್ದರು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಅಂದರೆ ಜೂನ್ ತಿಂಗಳಿನಿಂದ ಭತ್ತದ ಕೃಷಿ ಕೆಲಸಗಳು ಆರಂಭವಾದರೆ ಮುಗಿಯುತ್ತಿದ್ದದ್ದು ಸೆಪ್ಟಂಬರ್ ವೇಳೆಗೆ. ಈ ಸಂದರ್ಭ ಮನೆಯಿಂದ ಹೊರಹೋಗಿ ಪೇಟೆಯಿಂದ ತರಕಾರಿಗಳನ್ನು ತರುವುದು ಸುಲಭದ ಕೆಲಸವಾಗಿರಲಿಲ್ಲ. ಪಟ್ಟಣಕ್ಕೆ ಹೋಗಲು ವಾಹನದ ಸೌಕರ್ಯವೂ ಇರುತ್ತಿರಲಿಲ್ಲ. ಇದ್ದರೂ ಮಳೆಯಿಂದಾಗಿ ಸಂಪರ್ಕವೇ ಕಡಿದು ಹೋಗುತ್ತಿತ್ತು. ಅಷ್ಟೇ ಅಲ್ಲದೆ ಮನೆಯ ಸುತ್ತಲೂ ತರಕಾರಿ ಬೆಳೆಯೋಣವೆಂದರೆ ಮಳೆ ಬಂದು ಕೊಳೆತು ಹೋಗುತ್ತಿತ್ತು.
ಈ ಸಂದರ್ಭ ಮನೆಯ ಸುತ್ತ, ಕಾಡಿನಲ್ಲಿ ಸಿಗುವ ವಸ್ತುಗಳನ್ನೇ ಆಹಾರ ಪದಾರ್ಥಗಳಾಗಿ ಬಳಸಲಾಗುತ್ತಿತ್ತು. ಇವತ್ತು ಹಲವು ಕಾರಣಗಳಿಗಾಗಿ ಬಿದಿರು ಮೊದಲಿನಂತೆ ಎಲ್ಲೆಂದರಲ್ಲಿ ಕಾಣಿಸುತ್ತಿಲ್ಲ. ಅದರಲ್ಲೂ ಕಳೆದ ಎರಡು ದಶಕಗಳಲ್ಲಿ ಕೊಡಗು ಸಂಪೂರ್ಣ ಬದಲಾಗಿದೆ. ಕೇರಳದಿಂದ ಶುಂಠಿ ಕೃಷಿ ಮಾಡಲು ಬಂದವರು ಕೊಡಗಿನಲ್ಲಿದ್ದ ಕಾಡುಗಳನ್ನು ಎಕರೆಗಿಷ್ಟು ಎಂಬಂತೆ ಹಣ ನೀಡಿ ಪಡೆದು ಅಲ್ಲಿದ್ದ ಬಿದಿರು ಕಾಡುಗಳನ್ನು ಕಡಿದು ಕೃಷಿ ಮಾಡಿದರು. ಹೀಗಾಗಿ ದನ ಮೇಯುತ್ತಾ, ಬಿದಿರು ಮೆಳೆಗಳಿಂದ ಕೂಡಿದ ಕಾಡು ನಾಶವಾಗಿ ಬಳಿಕ ಅಲ್ಲಿ ಕಾಫಿ ತೋಟಗಳು ತಲೆ ಎತ್ತಿವೆ. ಇದರಿಂದ ಶೇಕಡ ಎಪ್ಪತ್ತಕ್ಕೂ ಹೆಚ್ಚು ಭಾಗ ಬಿದಿರು ಮೆಳೆಗಳು ನಾಶವಾಗಿವೆ.
ಕಳೆದೊಂದು ದಶಕಗಳ ಹಿಂದೆ ಬಿದಿರು ಹೂ ಬಂದು ನಾಶವಾಗಿದ್ದು, ಮತ್ತೆ ಅರಣ್ಯಗಳಲ್ಲಿ ಬೆಳೆಯಲಾರಂಭಿಸಿದ್ದನ್ನು ಕಾಣಬಹುದಾಗಿದೆ. ಇವತ್ತು ಪಟ್ಟಣಗಳಲ್ಲಿ ಕಣಿಲೆಯನ್ನು ತಂದು ಕೆಲವರು ಮಾರಾಟ ಮಾಡುತ್ತಿದ್ದು ಅದನ್ನು ಖರೀದಿಸಿ ಮನೆಗೆ ಕೊಂಡೊಯ್ಯುವ ದೃಶ್ಯಗಳು ಕೊಡಗಿನಲ್ಲಿ ಕಾಣಿಸುತ್ತಿದೆ. ಪಟ್ಟಣದಲ್ಲಿ ನೆಲೆಸಿದವರು ಹಳ್ಳಿಗರನ್ನು ಕಣಿಲೆ ತಂದುಕೊಡುವಂತೆ ಬೇಡಿಕೊಳ್ಳುವುದು ಇಲ್ಲದಿಲ್ಲ. ಇದರ ಲಾಭ ತಿಳಿದ ಕೆಲವರು ಪಟ್ಟಣಕ್ಕೆ ಕೊಂಡೊಯ್ದು ಮಾರಿ ಒಂದಷ್ಟು ಆದಾಯವನ್ನು ಮಾಡಿಕೊಳ್ಳುತ್ತಿದ್ದಾರೆ. ಕಣಿಲೆಯ ಖಾದ್ಯವನ್ನು ಸೇವಿಸಿ ಅದರ ರುಚಿಯನ್ನು ಅರಿತಿರುವ ಕೊಡಗಿನವರು ಎಲ್ಲಿಯೇ ನೆಲೆಸಿದ್ದರೂ ಊರಿಗೆ ಬಂದಾಗ ತಮ್ಮೊಂದಿಗೆ ಕಣಿಲೆಯನ್ನು ಕೊಂಡೊಯ್ಯುವುದು ಸಾಮಾನ್ಯವಾಗಿದೆ.
ಇನ್ನು ಬಿದಿರಿನ ಬಗ್ಗೆ ಹೇಳುವುದಾದರೆ ಇದು ಹುಲ್ಲು ಕುಟುಂಬ (ಪೊಯೇಸಿ)ದ ಸದಸ್ಯ ಸಸ್ಯವಾಗಿದೆ. ಇದರಲ್ಲಿ ಹಲವು ಪ್ರಭೇದಗಳಿವೆ. ಅತಿ ಹೆಚ್ಚು ಎತ್ತರಕ್ಕೆ ಇವು ಬೆಳೆಯುತ್ತವೆ. ಟೊಳ್ಳಾದ ಮತ್ತು ವಿಭಜಿತ ಕಾಂಡಗಳಿಂದ ಕೂಡಿದ್ದು, ಸಣ್ಣ ರೆಂಬೆ ಕಾಂಡಗಳಲ್ಲಿ ಮುಳ್ಳುಗಳಿರುತ್ತವೆ. ಸುಧಾರಿತ ತಳಿಗಳಲ್ಲಿ ಯಾವುದೇ ಮುಳ್ಳುಗಳಿರುವುದಿಲ್ಲ. ಬಹುಬೇಗ ಬೆಳವಣಿಗೆ ಹೊಂದುವ ಸಾಮರ್ಥ್ಯವಿದೆ. ಎಲೆಗಳು ಸಾಮಾನ್ಯವಾಗಿ ಕಿರಿದಾದ ಮತ್ತು ಉದ್ದವಾಗಿದ್ದು, ದಟ್ಟವಾಗಿ ಹರಡುತ್ತವೆ. ಇವು ಕೆಲವು ದಶಕಗಳಿಗೊಮ್ಮೆ ಸಾಮೂಹಿಕವಾಗಿ ಹೂ ಬಿಟ್ಟು ಸಾಯುತ್ತವೆ. ನಂತರ ಮತ್ತೆ ಹುಟ್ಟಿ ಬೆಳೆಯುತ್ತವೆ.
ಇದರಲ್ಲಿ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ. ಬಿದಿರಿಗೆ ಜಾಗತಿಕವಾಗಿ ತನ್ನದೇ ಆದ ಸಂಸ್ಕೃತಿ ಮತ್ತು ಮೌಲ್ಯವಿದ್ದು, ಹಲವು ರೀತಿಯಲ್ಲಿ ಇದು ಉಪಯೋಗಕ್ಕೆ ಬರುತ್ತಿರುವುದನ್ನು ನಾವು ಕಾಣಬಹುದಾಗಿದೆ. ಕರಕುಶಲ ವಸ್ತುಗಳಿಂದ ಆರಂಭವಾಗಿ ನಿತ್ಯದ ಬಳಕೆಯ ವಸ್ತುಗಳ ತನಕ ಇದು ಉಪಯೋಗಿಸಲ್ಪಡುತ್ತದೆ. ಕಲೆ, ಸಂಗೀತ ವಾದ್ಯ ಮತ್ತು ಪೀಠೋಪಕರಣಗಳಿಗೆ ಬಳಸಲಾಗುತ್ತದೆ. ಇದರಲ್ಲಿ ಇಂಗಾಲವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಿದ್ದು ಪರಿಸರ ಸಂರಕ್ಷಣೆಯಲ್ಲಿ ಇದರ ಪಾತ್ರ ದೊಡ್ಡಮಟ್ಟದಲ್ಲಿದೆ. ಇದರ ಬೇರು ಬಿದಿಯಾಗಿ ಮಣ್ಣನ್ನು ಹಿಡಿದು ಬೆಳೆಯುವುದರಿಂದ ಮಣ್ಣಿನ ಸವೆತ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
B M Lavakumar