FoodLatest

ಬಾಳೆಹಣ್ಣಿನಿಂದ ಮಾಡಬಹುದಾದ ತಿನಿಸುಗಳು ಇಲ್ಲಿವೆ.. ನೀವು ಮನೆಯಲ್ಲಿಯೇ ಮಾಡಿ ನೋಡಿ!

ಸಾಮಾನ್ಯವಾಗಿ ನಾವೆಲ್ಲರೂ ಬಾಳೆಹಣ್ಣನ್ನು ತಿಂದು ತೆಪ್ಪಗಾಗಿ ಬಿಡುತ್ತೇವೆ. ಆದರೆ ಈ ಬಾಳೆಹಣ್ಣಿನಿಂದ ಹಲವು ರೀತಿಯ ತಿಂಡಿ ಮತ್ತು ಪಾನೀಯಗಳನ್ನು  ಮಾಡಬಹುದಾಗಿದ್ದು, ಅವುಗಳೆಲ್ಲವೂ ರುಚಿಯಾಗಿರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಆರೋಗ್ಯಕ್ಕೂ ಒಳ್ಳೆಯದಾಗಿರುತ್ತದೆ. ಬಾಳೆಹಣ್ಣಿನಲ್ಲಿ ನಾವು ಹಲ್ವಾ, ಬನ್ಸ್, ಬಜ್ಜಿ, ಲಸ್ಸಿ ಮಾಡಬಹುದಾಗಿದ್ದು ಅದರ ತಯಾರಿಯ ಕುರಿತಂತೆ ಮಾಹಿತಿ ಇಲ್ಲಿದೆ.. 

1-ಬಾಳೆಹಣ್ಣಿನ ಹಲ್ವಾದ ರುಚಿ ನೋಡಿ..

ಬೇಕಾಗುವ ಪದಾರ್ಥಗಳು: ಬಾಳೆಹಣ್ಣು- ಐದು, ರವೆ- ಒಂದು ಕಪ್, ಹಾಲು- ಎರಡು ಕಪ್, ಸಕ್ಕರೆ-ಎರಡು ಕಪ್,

ಉಪ್ಪು- ರುಚಿಗೆ ತಕ್ಕಂತೆ, ಕ್ರೀಮ್- ಅರ್ಧ ಕಪ್, ಗೋಡಂಬಿ- ಸ್ವಲ್ಪ, ಏಲಕ್ಕಿ ಪುಡಿ- ಸ್ವಲ್ಪ, ದ್ರಾಕ್ಷಿ- ಸ್ವಲ್ಪ, ಬಾದಾಮಿ- ಸ್ವಲ್ಪ, ತುಪ್ಪ- ಅರ್ಧ ಕಪ್

ಮಾಡುವ ವಿಧಾನ: ಮೊದಲಿಗೆ ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು ಸಿಪ್ಪೆ ತೆಗೆದಿಟ್ಟುಕೊಳ್ಳಬೇಕು. ಬಳಿಕ ತುಪ್ಪದಲ್ಲಿ ರವೆಯನ್ನು ಘಮ್ಮೆಂದು ಕಂದು ಬಣ್ಣಕ್ಕೆ ತಿರುಗುವ ತನಕ ಹುರಿದು ಅದನ್ನು ತೆಗೆದು ಬಾಳೆಹಣ್ಣಿನೊಂದಿಗೆ ಹಾಕಿ ಚೆನ್ನಾಗಿ ಕಲೆಸಬೇಕು.

ಇದಾದ ನಂತರ ಅದಕ್ಕೆ ತುಪ್ಪದಲ್ಲಿ ಹುರಿದ ಬಾದಾಮಿ ಚೂರು, ಒಣದ್ರಾಕ್ಷಿ, ಗೋಡಂಬಿಯನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಎಲ್ಲವನ್ನು ಸೇರಿಸಿ ಮಿಕ್ಸ್ ಮಾಡಿ. ಆ ನಂತರ ಪಾತ್ರೆಯಲ್ಲಿ ಹಾಕಿ ಸಣ್ಣಗಿನ ಉರಿಯಲ್ಲಿ ಕಾಯಿಸಿ ಈ ವೇಳೆ ಹಾಲನ್ನು ಹಾಕಿ ತಿರುಗಿಸಿ. ಬಿಸಿಯಾಗುತ್ತಿದ್ದಂತೆಯೇ ಹಾಲು ಇಂಗುತ್ತದೆ. ಆಗ ಕ್ರೀಮ್ ಮತ್ತು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದರ ಮೇಲೆ ಏಲಕ್ಕಿ ಪುಡಿಯನ್ನು ಉದುರಿಸಿ. ನಂತರ ತೆಗೆದು ಅಗಲವಾದ ಪಾತ್ರೆಯಲ್ಲಿ ಹಾಕಿ ಒಂದೇ ಸಮನಾಗಿ ತಟ್ಟಿ. ನಂತರ ಅದನ್ನು ತಮಗೆ ಹೇಗೆ ಬೇಕೋ ಆ ರೀತಿ ಕಟ್ ಮಾಡಿದರೆ ಹಲ್ವ ರೆಡಿ

ಮತ್ತೊಂದು ವಿಧಾನ:   ಮೊದಲಿಗೆ ಬಾಳೆಹಣ್ಣಿನ ಸಿಪ್ಪೆ ತೆಗೆದು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕಿವುಚಿಕೊಳ್ಳಬೇಕು. ಇನ್ನೊಂದೆಡೆ ಗೋಧಿ ಹಿಟ್ಟು ಹಾಗೂ ಚಿರೋಟಿ ರವೆಯನ್ನು ಪ್ರತ್ಯೇಕವಾಗಿ ಕಂದು ಬಣ್ಣ ಬರುವ ತನಕ ಹುರಿದಿಟ್ಟುಕೊಳ್ಳಬೇಕು.

ಕಿವುಚಿದ ಬಾಳೆಹಣ್ಣನ್ನು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ ಮಗುಚಬೇಕು. ಹೀಗೆ ಮಾಡುವುದರಿಂದ ಬಾಳೆಹಣ್ಣಿನ ಹಸಿವಾಸನೆ ಹೋಗುತ್ತದೆ. ಆ ನಂತರ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಗುಚುತ್ತಾ ಕಲೆಸಬೇಕು. ಅದಕ್ಕೆ ಹುರಿದಿಟ್ಟುಕೊಂಡಿದ್ದ ರವೆ ಮತ್ತು ಗೋಧಿ ಹಿಟ್ಟನ್ನು ಹಾಕಿ ಚೆನ್ನಾಗಿ ತಿರುಗಿಸಿ, ನಂತರ ತುಪ್ಪ ಹಾಕಿ ಮತ್ತೆ ತಳ ಹಿಡಿಯದಂತೆ ಕಲೆಸಬೇಕು. ಹೀಗೆ ಮಾಡುವುದರಿಂದ ತಳಬಿಟ್ಟು ತುಪ್ಪ ಮೇಲೆ ಬರುತ್ತದೆ.

ಆಗ ಒಲೆಉರಿಯನ್ನು ಆರಿಸಿ ಏಲಕ್ಕಿ ಪುಡಿಯನ್ನು ಹಾಕಿ ತಿರುಗಿಸಿ ಆ ನಂತರ ತುಪ್ಪ ಸವರಿದ ತಟ್ಟೆಗೆ ಹಾಕಿಡಬೇಕು. ಅದು ತಣ್ಣಗಾದ ಬಳಿಕ ತಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಬಹುದು.

ಇದನ್ನೂ ಓದಿ: ನಿತ್ಯದ ಸೇವನೆಗೆ ಅನುಕೂಲವಾಗುವಂತೆ ಅಕ್ಕಿಯಿಂದ ಏನೆಲ್ಲ ತಿಂಡಿ ತಯಾರಿಸಬಹುದು…?

2-ಸವಿದು ನೋಡಿ ನೇಂದ್ರ ಬಾಳೆಹಣ್ಣಿನ ಬಜ್ಜಿ

ಬೇಕಾಗುವ ಪದಾರ್ಥಗಳು: ಮಾಗಿದ ನೇಂದ್ರ ಬಾಳೆ ಹಣ್ಣುಗಳು- 1ಕೆಜಿ, ಮೈದಾ – 2ಕಪ್, ಅರಿಶಿಣಪುಡಿ- ಸ್ವಲ್ಪ, ಸಕ್ಕರೆ- ಸಿಹಿಗೆ ಬೇಕಾಗುವಷ್ಟು (ಅಂದಾಜು 4ಚಮಚ), ಏಲಕ್ಕಿಪುಡಿ- ಚಿಟಿಕೆಯಷ್ಟು, ಉಪ್ಪು- ರುಚಿಗೆ ಬೇಕಾಗುವಷ್ಟು, ಅಡುಗೆ ಸೋಡಾ- ಚಿಟಿಕೆಯಷ್ಟು, ಜೀರಿಗೆ- ಸ್ವಲ್ಪ, ಎಣ್ಣೆ- ಕರಿಯಲು ಬೇಕಾಗುವಷ್ಟು

ಮಾಡುವ ವಿಧಾನ: ನೇಂದ್ರಬಾಳೆ ಹಣ್ಣನ್ನು ತೆಗೆದುಕೊಂಡು ಸಿಪ್ಪೆ ಸುಲಿದು ಉದ್ದುದ್ದವಾಗಿ ತೆಳ್ಳಗೆ ಕತ್ತರಿಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ಮೈದಾ ಹಾಕಿ ಅದಕ್ಕೆ ಸಕ್ಕರೆ, ಏಲಕ್ಕಿಪುಡಿ, ಉಪ್ಪು, ಸೋಡಾ, ಅರಿಶಿಣಪುಡಿ ಎಲ್ಲವನ್ನು ಸೇರಿಸಿ ಬಳಿಕ ಅದಕ್ಕೆ ಸ್ವಲ್ಪ ನೀರು ಹಾಕಿ ಎಲ್ಲವೂ ಮಿಶ್ರಣವಾಗುವಂತೆ ಕಲೆಸಿಕೊಳ್ಳಬೇಕು. ಜತೆಗೆ ಮೈದಾದ ಗಂಟು ಉಳಿಯದಂತೆ  ನೋಡಿಕೊಳ್ಳಿ. ಬಳಿಕ ಅದು ದೋಸೆ ಹಿಟ್ಟಿನ ಹದದಲ್ಲಿರುವಂತೆ ನೋಡಿಕೊಂಡು ಬೇಕಾದರೆ ನೀರು ಹಾಕಿ.

ಆ ನಂತರ ಒಲೆಯಲ್ಲಿ ಬಾಣಲೆಯಿಟ್ಟು ಅದಕ್ಕೆ ಎಣ್ಣೆ ಸುರಿದು ಅದು ಕಾದ ಬಳಿಕ ಕತ್ತರಿಸಿಟ್ಟುಕೊಂಡ ಬಾಳೆ ಹಣ್ಣನ್ನು ಮೈದಾ ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ ಚೆನ್ನಾಗಿ ಬೇಯಿಸಿ. ಅದು ಕಂದು ಬಣ್ಣಕ್ಕೆ ತಿರುಗಿದ ಮೇಲೆ ತೆಗೆದರೆ. ಅಲ್ಲಿಗೆ ನೇಂದ್ರ ಬಾಳೆಹಣ್ಣಿನ ಬಜ್ಜಿ ರೆಡಿಯಾದಂತೆಯೇ….

ಇದನ್ನೂ ಓದಿ: ಪಾಲಕ್ ನಿಂದ ಏನೆಲ್ಲ ಮಾಡಬಹುದು ಗೊತ್ತಾ? ಈಗಲೇ ನೀವೇ ಮನೆಯಲ್ಲಿ ತಯಾರಿಸಿ, ಸೇವಿಸಿ, ಆನಂದಿಸಿ

3-ಸಿಂಪಲ್ ಬನಾನ ಬನ್ಸ್ ಮಾಡಿ ನೋಡಿ..

ಬೇಕಾಗುವ ಪದಾರ್ಥಗಳು: ಮಾಗಿದ ಬಾಳೆಹಣ್ಣು- ಎರಡು, ಮೈದಾಹಿಟ್ಟು- ಅರ್ಧ ಕಪ್, ಸಕ್ಕರೆ- ನಾಲ್ಕು ಚಮಚ, ಅಡುಗೆ ಸೋಡಾ- ಒಂದು ಚಮಚ, ಉಪ್ಪು-ಚಿಟಿಕೆಯಷ್ಟು, ಮೊಸರು- ಸ್ವಲ್ಪ, ಎಣ್ಣೆ- ಕರಿಯಲು ಅಗತ್ಯವಿರುವಷ್ಟು.

ಮಾಡುವ ವಿಧಾನ: ಮೊದಲಿಗೆ ಬಾಳೆಹಣ್ಣು ಮತ್ತು ಸಕ್ಕರೆಯನ್ನು ಮಿಕ್ಸ್ ಮಾಡಿ ಚೆನ್ನಾಗಿ ತಿರುಗಿಸಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಮೊಸರು, ಸೋಡಾಪುಡಿ, ಉಪ್ಪು, ಮತ್ತು ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಪೂರಿಗೆ ಕಲಸಿಕೊಳ್ಳುವಂತೆ ಕಲಸಿ ಸ್ವಲ್ಪ ಸಮಯ ಹಾಗೆಯೇ ಬಿಡಬೇಕು.

ಸುಮಾರು ಅರ್ಧ ಗಂಟೆ ಬಳಿಕ ಚಿಕ್ಕ ಉಂಡೆಯನ್ನಾಗಿ ಮಾಡಿ ಪೂರಿಯ ಮಾದರಿಯಲ್ಲಿ ಚಿಕ್ಕದಾಗಿ ಲಟ್ಟಿಸಿ ಎಣ್ಣೆಯಲ್ಲಿ ಹಾಕಿ ಕರಿದರೆ ಸಿಂಪಲ್ ಬನಾನ ಬನ್ ರೆಡಿಯಾಗಲಿದೆ.

ಇದನ್ನೂ ಓದಿ: ಆಲೂಪರೋಟ, ಆಲೂ ಬಟಾಣಿ ಗಸಿ, ಆಲೂ ಸಮೋಸ, ಆಲೂ ಕುರ್ಮಾ ಮಾಡೋದು ಹೇಗೆ?

4-ಮನೆಯಲ್ಲೇ ಮಾಡಿ ಬನಾನ ಲಸ್ಸಿ

ಬೇಕಾಗುವ ಪದಾರ್ಥಗಳು: ಬಾಳೆಹಣ್ಣು- ಎರಡು, ಮೊಸರು- ಒಂದೂವರೆ ಕಪ್, ಜೇನು- ಅರ್ಧ ಕಪ್, ನಿಂಬೆ ರಸ- ಅರ್ಧ ಹೋಳು, ಐಸ್ ಮಿಶ್ರಿತ ನೀರು- ಮೂರು ಕಪ್, ಏಲಕ್ಕಿ- ಒಂದು

ಮಾಡುವ ವಿಧಾನ: ಮೊದಲಿಗೆ ಪಕ್ವಗೊಂಡ ಬಾಳೆ ಹಣ್ಣನ್ನು ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು. ನಂತರ ಮಿಕ್ಸಿಗೆ ಅದನ್ನು ಹಾಕಿ ಗಟ್ಟಿ ಮೊಸರನ್ನು ಬೆರೆಸಿ ಚೆನ್ನಾಗಿ ಮಿಕ್ಸಿ ಮಾಡಬೇಕು. ನಂತರ ಅದನ್ನು ತೆಗೆದು ಪಾತ್ರೆಗೆ ಹಾಕಿ ಅದಕ್ಕೆ ನಿಂಬೆರಸ, ಜೇನುತುಪ್ಪ, (ಹೆಚ್ಚಿನ ಸಿಹಿ ಬೇಕಾದರೆ ಸ್ವಲ್ಪ ಸಕ್ಕರೆ ಬೆರೆಸಬಹುದು) ಏಲಕ್ಕಿ ಬೀಜವನ್ನು ಪುಡಿ ಮಾಡಿ ಹಾಕಿ ನಂತರ ಐಸ್ ಮಿಶ್ರಿತ ನೀರು ಬೆರೆಸಿದರೆ ಸಿಂಪಲ್ ಬನಾನ ಲಸ್ಸಿ ಕುಡಿಯಲು ರೆಡಿ.

 

 

 

 

admin
the authoradmin

Leave a Reply