Crime

ಮೈಸೂರಿನಲ್ಲಿ ವಂಚಕರಿಂದ ಐಸಿಐಸಿಐ ಬ್ಯಾಂಕ್ ಗೆ 2.33 ಕೋಟಿ ಮಕ್ಮಾಲ್ ಟೋಪಿ.. ಏನಿದು ಘಟನೆ?

ಮೈಸೂರು: ಬ್ಯಾಂಕ್ ಗಳು ಸಾಲ ವಸೂಲಿ ನೆಪದಲ್ಲಿ ತೊಂದರೆ ಕೊಡುತ್ತವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತವೆ. ಅದರಲ್ಲೂ ಸಾಲ ನೀಡುವಾಗ ಬ್ಯಾಂಕ್ ಗಳು ಹತ್ತಾರು ದಾಖಲೆಗಳನ್ನು ಕೇಳಿ ಹತ್ತಾರು ಬಾರಿ ಅಲೆದಾಡಿಸಿ ಎಲ್ಲವೂ ಪಕ್ಕ ಎಂದ ಮೇಲೆಯೇ ಸಾಲ ನೀಡುತ್ತವೆ. ಹೀಗಿದ್ದರೂ ನಕಲಿ ದಾಖಲೆಯನ್ನು ನೀಡಿ ಸಾಲಪಡೆದಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಸದ್ಯ ಮೂರು ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 2.33ಕೋಟಿ ಹಣವನ್ನು ವಂಚಿಸಲಾಗಿದೆ.

ನಕಲಿ ದಾಖಲೆಯನ್ನೇ ಅಸಲಿ ದಾಖಲೆಯಂತೆ ಬಿಂಬಿಸಲಾಗಿದ್ದು, ವಂಚನೆ ತಿಳಿಯದೆ ಸಾಲ ನೀಡಿದ ಐಸಿಐಸಿಐ ಮೈಸೂರು ಶಾಖೆಯ ವಸಂತ್ ಎಂಬುವರು ಇದೀಗ ಪೊಲೀಸರ ಮೊರೆ ಹೋಗಿದ್ದಾರೆ, ಅವರು ನೀಡಿದ ದೂರಿನಂತೆ ವಿವಿ ಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು  ಮೂರು ಪ್ರಕರಣಗಳಲ್ಲಿ ಇಬ್ಬರು ಮಧ್ಯವರ್ತಿಗಳು ಸೇರಿ ಎಂಟು ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇಷ್ಟಕ್ಕೂ ಆಗಿದ್ದೇನು? ಮೂರು ಪ್ರಕರಣಗಳ ವಿವರಗಳೇನು ಎಂಬುದನ್ನು ನೋಡಿದ್ದೇ ಆದರೆ ಮೊದಲ ಪ್ರಕರಣದಲ್ಲಿ ಸಾಲಗಾರ ಚಂದ್ರಶೇಖರ್, ಸಹ ಸಾಲಗಾರ ಸಂದೀಪ್ ಹಾಗೂ ಮಧ್ಯವರ್ತಿ ಪ್ರತಾಪ್ ಎಂಬುವರ ನಕಲಿ ದಾಖಲೆಗಳನ್ನ ಸೃಷ್ಟಿಸಿ ಬ್ಯಾಂಕ್ ನಿಂದ 45 ಲಕ್ಷ ಸಾಲ ಪಡೆದು ಬಳಿಕ ಕಟ್ಟದೆ ವಂಚಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡನೇ ಪ್ರಕರಣದಲ್ಲಿ ಸಾಲಗಾರ ರವಿಕೀರ್ತಿ, ಸಹಸಾಲಗಾರ ರಂಜನ್ ಹಾಗೂ ಮಧ್ಯವರ್ತಿ ರೋಷನ್ ಅವರು ಸೇರಿ ಬ್ಯಾಂಕ್ ಗೆ ನಕಲಿ ದಾಖಲೆ ಸಲ್ಲಿಸಿ 65,55,187 ಸಾಲ ಪಡೆದು ವಂಚಿಸಿದ್ದಾರೆ. ಮೂರನೇ ಪ್ರಕರಣದಲ್ಲಿ ಸಾಲಗಾರ ರೋಷನ್ ಹಾಗೂ ಸಹಸಾಲಗಾರರಾದ ಸುಹಾನ ಎಂಬುವರು ನಕಲಿ ದಾಖಲೆ ನೀಡಿ 1,22,10,470 ರೂ ಸಾಲ ಪಡೆದು ವಂಚಿಸಿದ್ದಾರೆ.

ಈ ಆರೋಪಿಗಳು ವಂಚಿಸುವ ಸಲುವಾಗಿಯೇ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದರು. ಆ ನಂತರ ಆ ದಾಖಲೆಗಳನ್ನೇ ಬ್ಯಾಂಕ್ ಗೆ ಸಲ್ಲಿಸಿ ಸಾಲವನ್ನು ಪಡೆದಿದ್ದರು. ಆದರೆ 2022ರಲ್ಲಿ ಸಾಲ ಪಡೆದ ನಂತರ ಆರೋಪಿಗಳು ಹಣ ಮರುಪಾವತಿ ಮಾಡದೆ ಓಡಾಡಿಕೊಂಡಿದ್ದರು. ಈ ಬಗ್ಗೆ ನೋಟೀಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಐಸಿಐಸಿಐ ಬ್ಯಾಂಕ್ ನ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ನಕಲಿ ದಾಖಲೆ ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಇದೀಗ ವಂಚಕರ ವಿರುದ್ಧ ಬ್ಯಾಂಕ್ ನವರು ಪೊಲೀಸರ ಮೊರೆ ಹೋಗಿದ್ದು, ಮೈಸೂರಿನ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

admin
the authoradmin

Leave a Reply