ಮೈಸೂರು(ಹೆಚ್.ಪಿ.ನವೀನ್ ಕುಮಾರ್): ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಒಂದು ತಿಂಗಳ ಉಚಿತ ವಸತಿ ಸಹಿತ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಗಿದೆ.
ಹೆಬ್ಬಾಳಿನ ಕೈಗಾರಿಕಾ ಬಡಾವಣೆಯಲ್ಲಿ ಇರುವ ಫೌಂಡೇಶನ್ ನ ಆಶ್ರಮ ಶಾಖೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಕೆ. ಹರೀಶ್ ಗೌಡ, ಗಿಡಕ್ಕೆ ನೀರೆರೆದು ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್, ಟಿವಿಗೆ ದಾಸರಾಗುತ್ತಿದ್ದಾರೆ. ಮಕ್ಕಳು ಬೀದಿಗಳಲ್ಲಿ ಆಟವಾಗುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ನಾವು ಬೀದಿಯಿಂದ ಮನೆಗೆ ಹೋಗುತ್ತಿರಲಿಲ್ಲ. ಬೇಸಿಗೆ ರಜಾ ಬಂದರೆ ಅಜ್ಜಿ ಮನೆಯೇ ನಮಗೆ ಬೇಸಿಗೆ ಶಿಬಿರವಾಗುತ್ತಿತ್ತು. ಎಲ್ಲರು ಒಂದು ಕಡೆ ಸೇರುತ್ತಿದ್ದೇವು, ರಜಾ ನಮಗೆ ಮಜಾವಾಗಿತ್ತು ಎಂದು ತಮ್ಮ ಬಾಲ್ಯದ ದಿನವನ್ನು ನೆನಪು ಮಾಡಿಕೊಂಡರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಅಡಗಿದೆ. ಅದನ್ನು ಹೊರಗೆ ತೆಗೆಯುವ ಕೆಲಸವನ್ನು ನಾವು ಮಾಡಬೇಕಿದೆ. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳು ಇದಕ್ಕೆ ಪೂರಕವಾಗಿದೆ. ಬಸವಮಾರ್ಗ ಫೌಂಡೇಶನ್ ನಿಂದ ಆಯೋಜಿಸಿರುವ ಈ ಬೇಸಿಗೆ ಶಿಬಿರ ಮಕ್ಕಳ ಮನಸ್ಸು, ಕನಸುಗಳನ್ನು ಹರಳಿಸಲಿ. ಮಕ್ಕಳು ಬೇಸಿಗೆ ರಜಾ ದಿನಗಳನ್ನು ವ್ಯರ್ಥ ಮಾಡದೆ, ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಶುಭಕೋರಿದರು.

ವಿಘ್ನೇಶ್ ಎಂಟರ್ ಪ್ರೈಸಸ್ ನ ಮ್ಯಾನೇಜಿಂಗ್ ಪಾರ್ಟನರ್ ಮಹೇಶ್ ದುದಾನಿ ಮಾತನಾಡಿ, ಮಕ್ಕಳು ನಿಷ್ಮಲ್ಮಶ ವ್ಯಕ್ತಿತ್ವ ಉಳ್ಳವರು. ಆ ಕಾರಣದಿಂದಲೇ ಅವರನ್ನು ದೇವರ ಸಮಾನರು ಎಂದು ಹೋಲಿಕೆ ಮಾಡುತ್ತಾರೆ. ಮನುಷ್ಯನ ಜೀವನದಲ್ಲಿ ಬಾಲ್ಯದ ಹಂತವೇ, ಪರಿಶುದ್ಧ ಮತ್ತು ಪರಿಪೂರ್ಣ ಸ್ಥಿತಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಈ ಹಂತದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಬಲಿಷ್ಠ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಘ್ನೇಶ್ ಎಂಟರ್ ಪ್ರೈಸಸ್ ನ ಮ್ಯಾನೇಜಿಂಗ್ ಪಾಟ್ನರ್ ನಟರಾಜು ಮಾತನಾಡಿ, ವರ್ಷವಿಡೀ ಪಠ್ಯ, ಪುಸ್ತಕ, ಹಾಜರಾತಿ, ತರಗತಿ, ಓದು, ಮನೆಪಾಠ, ಪ್ರಯೋಗಾಲಯ, ಪರೀಕ್ಷೆ, ಫಲಿತಾಂಶ ಈ ಪ್ರಕ್ರಿಯೆಯಲ್ಲಿ ನಲುಗಿದ ವಿದ್ಯಾರ್ಥಿಗಳಿಗೆ ಜೀವನಾವಶ್ಯಕ ಕೌಶಲಗಳನ್ನು, ಸೃಜನಶೀಲತೆಯನ್ನು ರೂಢಿಸುವ ನಿಟ್ಟಿನಲ್ಲಿ ಬೇಸಿಗೆ ಶಿಬಿರ ಪೂರಕವಾಗಿದೆ ಎಂದು ತಿಳಿಸಿದರು.

ಆಶೀರ್ವಾದ್ ಗ್ರಾಸರಿ ಮತ್ತು ಐಡಿಯಕ್ ಅಕ್ವಾ ಮೆಷನ್ ಪ್ರೋಪ್ರೈಟರ್ ವಿಜಯ್ ಸೂರ್ಯ ಮಾತನಾಡಿ, ಬೇಸಿಗೆ, ಶಾಲಾ ರಜೆಯ ಸಮಯದಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿನ ಚಟುವಟಿಕೆಗಳ ಬಗ್ಗೆ ಕುತೂಹಲ ಹೊಂದಿರುತ್ತಾರೆ. ಕೆಲವರ ಪ್ರಕಾರ, ಇದು ಮಕ್ಕಳು ಆಟವಾಡಲು ಮತ್ತು ಆನಂದಿಸಲು ಒಂದು ಸಮಯ. ಇನ್ನು ಕೆಲವರು ಇದನ್ನು ಮಕ್ಕಳು ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅಥವಾ ಅವರ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಒಂದು ಅವಕಾಶವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು ಈ ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಕರ್ಣಾಟಕ ಬ್ಯಾಂಕ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡಾ. ಟಿ.ಅರ್. ಅರುಣ್ ಕುಮಾರ್ ಮಾತನಾಡಿ, ಬೇಸಿಗೆ ಶಿಬಿರದ ಮೋಜು ಮತ್ತು ನಗುವಿನ ನೆನಪುಗಳು ಮಕ್ಕಳ ಜೀವನದುದ್ದಕ್ಕೂ ಇರುತ್ತವೆ. ಹೊಸ ಸ್ನೇಹಿತರು, ಹೊಸ ಕೌಶಲ್ಯಗಳು, ಮಗುವಿನಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಸ್ವಾಭಿಮಾನದೊಂದಿಗೆ, ಮಗು ಬೇಸಿಗೆ ಶಿಬಿರದಲ್ಲಿ ಜೀವಮಾನದ ನೆನಪುಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.

ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್.ಬಸವರಾಜು ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಕನಸಹೊತ್ತು ಮುನ್ನೆಡೆಯುತ್ತಿರುವ ಬಸವಮಾರ್ಗ ಫೌಂಡೇಶನ್ ವ್ಯಸನಕ್ಕೆ ದಾಸರಾದ ಮಕ್ಕಳು, ಮತ್ತು ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕೆಂದು ಒಂದು ತಿಂಗಳ ವಸತಿ ಸಹಿತ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರದಲ್ಲಿ ಯೋಗ, ಕರಾಟೆ, ನೃತ್ಯ, ಸಂಗೀತಾ, ಈಜು, ಟ್ರೆಕ್ಕಿಂಗ್, ಚಿತ್ರಕಲೆ, ಚೆಸ್ ಸೇರಿದಂತೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಹೇಳುಕೊಡಲಾಗುತ್ತದೆ.

ಸಮಾಜ ಬಸವಮಾರ್ಗ ಫೌಂಡೇಶನ್ ಬಗ್ಗೆ ವಿಶೇಷವಾದ ಅಭಿಮಾನ ಹೊಂದಿದ್ದಾರೆ. ಇದಕ್ಕೆ ನಾನು ಸದಾ ಕೃತಜ್ಞತೆ ಸಲ್ಲಿಸುತ್ತೇನೆ. ಪಾಲಕರು ಯಾವುದೇ ಕಾರಣಕ್ಕೂ ಆತಂಕ ವ್ಯಕ್ತಪಡಿಸುವುದು ಬೇಡ, ಇಲ್ಲಿರವ ಒಂದು ತಿಂಗಳು ಅವರನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಈ ಶಿಬಿರವನ್ನು ಸದ್ಬಳಕೆ ಮಾಡಿಕೊಂಡು ಸಮರ್ಪಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಆ ಮೂಲಕ ದೇಶಕ್ಕೆ ಹಾಗೂ ತಂದೆ,ತಾಯಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಶಿಬಿರಕ್ಕೆ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದಾರೆ.








