ArticlesLatestLife style

ಕುಡಿತದ ಚಟಕ್ಕೆ ಬಿದ್ದವನಿಗೆ ಹೆತ್ತವರೇ ವಿಲನ್..  ತಪ್ಪು ಅರಿವಾಗುವ ವೇಳೆಗೆ ಕಾಲಮಿಂಚಿತ್ತು..

*ಆತ ಕುಡಿತ ಬಿಟ್ಟು  ಬದುಕು ಕಟ್ಟಿಕೊಂಡಿದ್ದು ಹೇಗೆ?

*ಬಸವಮಾರ್ಗದಿಂದ ಬದುಕು ಬದಲಾಗಿದ್ದು ಹೇಗೆ?

ಆತನ ಹೆಸರು ಹರೀಶ (ಹೆಸರು ಬದಲಾಯಿಸಲಾಗಿದೆ) ಊರು ಇಲ್ಲೆ ಮಂಡ್ಯದ ಜಿಲ್ಲೆಯ ಯುವಕ. ತನ್ನ 24ನೇ ವಯಸ್ಸಿನಲ್ಲಿ ಕುಡಿತದ ಚಟಕ್ಕೆ ದಾಸನಾದ ಹರೀಶನಿಗೆ ಈಗ 40 ವರ್ಷ. ಅಂದರೆ ಕಳೆದ 26 ವರ್ಷಗಳಿಂದ ವ್ಯಸನಕ್ಕೆ ಬಲಿಯಾಗಿದ್ದ. ವಯಸ್ಸಿನಲ್ಲಿದ್ದಾಗ ಕುತೂಹಲಕ್ಕೆಂದು ಸ್ನೇಹಿತರೊಂದಿಗೆ ಅಂಟಿಸಿಕೊಂಡ ಹವ್ಯಾಸ ಚಟವಾಗಿ ಬದಲಾಗಿತ್ತು. ಮನೆಯವರಿಗೆ ಹರೀಶನ ಕುಡಿತದ ವಿಷಯ ಗೊತ್ತಾಗುವ ವೇಳೆಗೆ ವ್ಯಸನ ಹರೀಶನನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಬಾಲ್ಯದಿಂದಲೂ ಎಲ್ಲರಿಂದಲೂ ಒಳ್ಳೆ ಹುಡುಗ ಎನಿಸಿಕೊಂಡಿದ್ದ ಹರೀಶ ವ್ಯಸನದ ಕೂಪಕ್ಕೆ ಬಲಿಯಾಗಿದ್ದ. ಆದರೆ ಅವನಿಗೆ ಬದುಕಿನ ಹೊಸ ದಾರಿ ನಿರ್ಮಾಣ ಮಾಡಿಕೊಟ್ಟಿದ್ದು, ಮೈಸೂರಿನ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ.
ಹರೀಶನ ಸಮಸ್ಯೆಗೆ ಪ್ರಾರಂಭದ ದಿನಗಳಲ್ಲಿ ಕಡಿವಾಣ ಹಾಕಲು ಹೆತ್ತವರು ಇನ್ನಿಲ್ಲದ ಪ್ರಯತ್ನ ಮಾಡಿದರು. ಆಣೆ, ಪ್ರಮಾಣ ಮಾಡಿಸಿದರೂ ಬದಲಾಗಲಿಲ್ಲ. ದೇವರಿಗೆ ಹರಕೆ ಕಟ್ಟಿಕೊಂಡರೂ ಪ್ರಯೋಜನವಾಗಲಿಲ್ಲ. ಪಾಲಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲೇ ಇಲ್ಲ. ಕುಡಿಬೇಡ ಮಗ ಎಂದು ಕಣ್ಣೀರು ಹಾಕುತ್ತ ಬುದ್ದಿವಾದ ಹೇಳುತ್ತಿದ್ದ ಹೆತ್ತವ್ವ, ಹರೀಶ ಕಣ್ಣಿಗೆ ದೊಡ್ಡ ವಿಲ್ಲನ್ ಆಗಿ ಹೋದಳು. ಹರೀಶನಿಗೆ ಅಲ್ಲಿಂದ ತಾಯಿ ಮೇಲೆ ದ್ವೇಷ ಶುರುವಾಯಿತು. ದ್ವೇಷದ ಕರಿಛಾಯೆ. ಪಾಪ ಹರೀಶನಿಗೂ ಗೊತ್ತಿಲ್ಲ ತಾನು ತಾಯಿಯನ್ನೇಕೆ ಇಷ್ಟೊಂದು ದ್ವೇಷ ಮಾಡುತ್ತೇನೆ ಎಂದು. ಒಬ್ಬನೆ ಇದ್ದಾಗ ಅವನಿಗೂ ಮನವರಿಕೆಯಾಗುತ್ತಿತ್ತು. ತನ್ನ ತಾಯಿ ಹೇಳುವುದು ಒಳ್ಳೆಯದಕ್ಕೆ ಅಲ್ಲವೇ ! ಆದರೂ ಯಾಕೆ ತಾಯಿಯನ್ನು ಇಷ್ಟೊಂದು ದ್ವೇಷ ಮಾಡುತ್ತೇನೆ ಎಂದು ಒಬ್ಬನೆ ಕಣ್ಣೀರು ಸುರಿಸುತ್ತಿದ್ದ.


ಹರೀಶನ ಬಗ್ಗೆ ಅಪ್ಪ ಮೃದು ಧೋರಣೆ ಹೊಂದಿದ್ದರು. ಮಗ ಇಂದಲ್ಲ ನಾಳೆ ಸರಿಯಾಗುತ್ತಾನೆ ಎಂದು ಭರವಸೆ ಇಟ್ಟುಕೊಂಡಿದ್ದರು. ತನಗೆ ವಯಸ್ಸಾಗಿದ್ದರೂ, ಮೈತುಂಬ ಕಾಯಿಲೆ ಇದ್ದರೂ ದುಡಿದು ಮನೆಯ ಸಂಸಾರ ಸಾಗಿಸುತ್ತಿದ್ದರು. ಆದರೆ ಹರೀಶನ ಕಾರಣದಿಂದ ಮನೆಯಲ್ಲಿ ಕಿಂಚಿತ್ತು ನೆಮ್ಮದಿ ಇರಲಿಲ್ಲ. ನಿತ್ಯ ಜಗಳ, ಕಲಹದಿಂದ ಮನೆಯವರೆಲ್ಲ ಬೇಸತ್ತು ಹೋಗಿದ್ದರು. ಹೆತ್ತವ್ವ ಕಣ್ಣೀರು ಹಾಕುತ್ತ, ತನ್ನ ಜನ್ಮವನ್ನು ಶಪಿಸುತ್ತಿದ್ದಳು. ಮೂಲೆಯಲ್ಲಿ ಕುಳಿತು ಬಿಕ್ಕಿ, ಬಿಕ್ಕಿ ಅಳುತ್ತಿದ್ದಳು. ದೇವರನ್ನು ಅಂಗಲಾಚಿ ಮೊರೆ ಇಡುತ್ತಿದ್ದಳು. ಇನ್ನೂ ಹರೀಶನ ಅಣ್ಣ, ತಮ್ಮನ ವರ್ತನೆಗಳಿಂದ ಬೇಸತ್ತು ಹೋಗಿದ್ದ. ಹರೀಶನ ಕಾಟ ತಾಳಲಾಗದೆ ಉದ್ಯೋಗ ಅರಸಿ ಬೆಂಗಳೂರಿನ ಕಡೆಗೆ ಮುಖ ಮಾಡಿಬಿಟ್ಟಿದ್ದ.
ಹರೀಶನಿಗೆ ಮೀಸೆ ಚಿಗುರದಿದ್ದರೂ ತನ್ನ ವಯಸ್ಸಿಗೂ ಮೀರಿದವರ ಜೊತೆಯಲ್ಲಿ ಸರಿ ಸಮಾನವಾಗಿ ಮದ್ಯ ಸೇವನೆ ಮಾಡುತ್ತಿದ್ದ. ಅವರ ಜತೆ ಕಂಠಪೂರ್ತಿ ಕುಡಿಯುತ್ತಿದ್ದ. ಮತ್ತಿನಲ್ಲಿ ಜೊತೆಗಿದ್ದವರನ್ನೆ ಬೈಯುತ್ತಿದ್ದ, ಅವರೊಂದಿಗೆ ಜಗಳವಾಡುತ್ತಿದ್ದ. ಒಂದೊಂದು ಬಾರಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗುತ್ತಿದ್ದ. ಹರೀಶನ ಮನೆಯವರು ಉಳ್ಳವರೇನು ಅಲ್ಲ. ಕೂಲಿ, ನಾಲಿ ಮಾಡಿ ಬಂದ ಅಷ್ಟೋ, ಇಷ್ಟೋ ಹಣದಲ್ಲಿ ಹೇಗೊ ಜೀವನ ಮಾಡುತ್ತಿದ್ದರು. ಮನೆಯಲ್ಲಿ ಕಷ್ಟ, ಬಡತನ ಇದ್ದರೂ ಅದ್ಯಾವುದನ್ನೂ ಹರೀಶ ಮತ್ತು ಅವರಣ್ಣನಿಗೆ ಗೊತ್ತಾಗದ ರೀತಿಯಲ್ಲಿ ಬೆಳಸಿ ದೊಡ್ಡವರನ್ನಾಗಿ ಮಾಡಿದ್ದರು. ಆದರೆ ಹರೀಶ ಮಾತ್ರ ತನ್ನ ಮನೆಯ ಪರಿಸ್ಥಿತಿಯನ್ನು ಎಳ್ಳಷ್ಟೂ ಅರ್ಥ ಮಾಡಿಕೊಳ್ಳಲಿಲ್ಲ. ತಂದೆ, ತಾಯಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ ಜಗಳ ಮಾಡುತ್ತಿದ್ದ, ಆಗಲು ಕೊಡದಿದ್ದರೆ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದ. ಇಂತದೊಂದು ಕಳ್ಳತನದ ಚಾಳಿ ಹರೀಶನನ್ನು ತಪ್ಪುದಾರಿಗೆ ಎಳೆದು ತಂದು ಬಿಟ್ಟಿತ್ತು ಎಂದರೆ ವ್ಯಸನ ಎಷ್ಟೊಂದು ಅಪಾಯಕಾರಿ ಅನ್ನುವುದನ್ನು ಯೋಚಿಸಿಬೇಕು. !


ಹರೀಶನ ಅಣ್ಣ ಕೆಲಸಕ್ಕೆ ಸೇರಿ ಶ್ರದ್ಧೆಯಿಂದ ದುಡಿದ ಕೈತುಂಬ ಸಂಪಾದನೆ ಮಾಡುತ್ತಿದ್ದ. ತನ್ನನ್ನು ಸಾಕಿ, ಸಲಹಿ ದೊಡ್ಡವನನ್ನಾಗಿ ಮಾಡಿದ ತನ್ನ ತಂದೆ, ತಾಯಿ ಮಾಡಿದ ಸಾಲಗಳನ್ನು ತೀರಿಸಿದ. ಊರಲ್ಲಿ ಅವರಿಗೊಂದು ಸೂರು ಕಟ್ಟಿಸಿದ. ಅವರು ಕೊನೆ ದಿನಗಳನ್ನು ನೆಮ್ಮದಿಯಾಗಿ ಕಾಲ ಕಳಿಯಬೇಕು ಎಂದು ಆಸೆ ಪಟ್ಟ. ಇರುವ ಒಬ್ಬ ತಮ್ಮ ಕುಡಿತದ ಚಟದಿಂದ ಹೊರ ಬಂದು ಒಳ್ಳೆ ಜೀವನ ಮಾಡಬೇಕು ಎಂದು ಸಾಕಷ್ಟು ಪ್ರಯತ್ನ ಪಟ್ಟ. ಬುದ್ದಿವಾದ ಹೇಳಿದ. ಆತನಿಗೂ ಒಂದು ಮದುವೆ ಮಾಡಿ ನೆಲೆ ಕಲ್ಪಿಸಿಕೊಡಬೇಕು ಎಂದು ಚಿಂತಿಸುತ್ತಿದ್ದ. ಆದರೆ ಹರೀಶ ಇದ್ಯಾವುದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಕುಡಿತದ ಚಟಕ್ಕೆ ಬಲಿಯಾಗಿ, ತನ್ನನ್ನು ಸುಟ್ಟುಕೊಳ್ಳುವುದರೊಂದಿಗೆ, ಮನೆ, ಮಂದಿಯವರು ಆ ಬೆಂಕಿಯ ಕೆನ್ನಾಲಿಗೆಯಲ್ಲಿ ಬೇಯುವಂತೆ ಮಾಡಿದ. ವ್ಯಸನದ ಕಾಯಿಲೆ ಇಂತಹ ಕೆಲಸಗಳನ್ನು ಹರೀಶನ ಕೈಯಿಂದ ಮಾಡಿಸುತ್ತಿತ್ತು ಎಂದರೆ ಯಾರೂ ನಂಬಲು ಸಾಧ್ಯವಿಲ್ಲ.
ಇಂದು ಸರಿಯಾಗುತ್ತಾನೆ, ನಾಳೆ ಸರಿಯಾಗುತ್ತಾನೆ ಎಂದು ಭರವಸೆ ಇಟ್ಟುಕೊಂಡಿದ್ದವರು ಹರೀಶನ ಆಟಾಟೋಪಗಳನ್ನು ನೋಡಿ ಬೇಸತ್ತು ಹೋಗಿದ್ದರು. ಹರೀಶ ಮಾಡಿಕೊಂಡು ಬರುತ್ತಿದ್ದ ಅಷ್ಟೂ ಅವಾಂತರಗಳಿಗೆ ತಾಯಿ ಮತ್ತು ಅಣ್ಣ ಬೆಲೆ ತೆರಬೇಕಾಗುತ್ತಿತ್ತು. ಹಾದಿ, ಬೀದಿಯಲ್ಲಿ ಜಗಳಕ್ಕೆ ಬಿದ್ದರೆ ಮಗನನ್ನು ಜೋಪಾನವಾಗಿ ಮನೆ ಬಾಗಿಲಿಗೆ ಕರೆದುಕೊಂಡು ಬರಬೇಕಾಗಿತ್ತು. ಮಗನನ್ನು ವ್ಯಸನದ ಕೂಪದಿಂದ ಹೊರ ತರಬೇಕು ಎಂದು ನಿರ್ಧರಿಸಿದ ತಾಯಿ, ಊರಿನ ದೊಡ್ಡವರು, ಸಂಬಂಧಿಕರಿಂದ ಬುದ್ದಿವಾದ ಹೇಳಿಸಿದಳು. ಆದರೆ ಅಗ ಮಾತ್ರ ತಲೆ ಆಡಿಸುತ್ತಿದ್ದ ಹರೀಶ ಮರು ಕ್ಷಣವೆ ಕುಡಿದು ಅವಾಂತರಮಾಡುತ್ತಿದ್ದ. ಮನೆ ಮಂದಿಯರನ್ನು ಬೀದಿಗೆ ತರುತ್ತಿದ್ದ.
“ಮಗನಿಗೆ ಮದುವೆ ಮಾಡಿ, ಹೆಂಡತಿ ಬಂದರೆ ಆತನಿಗೆ ಮೂಗು ದಾರ ಹಾಕುತ್ತಾಳೆ ಎಂದು’ ಯಾರೋ ಸಲಹೆ ಕೊಟ್ಟರು. ಅವರ ಸಲಹೆ ಏನೋ ಸರಿ. ಆದರೆ, ಹರೀಶನಿಗೆ ಕುಡಿತದ ಚಟ, ಕೈಯಲ್ಲಿ ಬೇರೆ ಯಾವುದೇ ಕೆಲಸವಿಲ್ಲ, ಯಾರು ಹೆಣ್ಣು ಕೊಡುತ್ತಾರೆ ? ಎನ್ನುವುದು ದೊಡ್ಡ ಚಿಂತೆಯಾಗಿ ಕಾಡುತ್ತಿತ್ತು ಆ ಮಹಾತಾಯಿಗೆ. ಆದರೂ ದೇವರು ಇದ್ದಾನೆ ಎಂದು ಮನಗಂಡು ಹೆಣ್ಣು ನೋಡಲು ಪ್ರಾರಂಭ ಮಾಡಿಯೇ ಬಿಟ್ಟಳು. ಒಂದೆರಡು ಕಡೆ ಹೆಣ್ಣಿನ ಮನೆಯವರನ್ನು ವಿಚಾರಿಸಿದರು. ಆದರೆ ಹರೀಶನ ಅವಾಂತರಗಳು ಎಲ್ಲೆಡೆ ಜಗಜ್ಜಾಯಿರಾಗಿದ್ದರಿಂದ ಯಾರು ಹೆಣ್ಣು ಕೊಡಲು ಮುಂದೆ ಬರಲಿಲ್ಲ. ಈ ಬೆಳವಣಿಗೆಗಳಿಂದ ತಂದೆ, ತಾಯಿ ಮತ್ತಷ್ಟು ಚಿಂತೆಗೀಡಾದರು. ದೊಡ್ಡ ಮಗನ ರೀತಿ ಹೆಂಡತಿ, ಮಕ್ಕಳ ಜತೆ ಸುಖವಾಗಿ ಇರಬೇಕಿದ್ದ ಕಿರಿಯ ಮಗ ಕುಡಿತದ ಚಟಕ್ಕೆ ದಾಸನಾಗಿ ತನ್ನ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾನಲ್ಲ ಎಂದು ಕೊರಗಿ, ಕೊರಗಿ ಸೊರಗಿ ಹೋಗಿದ್ದರು.
ಈ ನಡುವೆಯೇ ಹರೀಶ, ಹೆಣ್ಣೊಂದನ್ನು ಮನಸಾರೆ ಪ್ರೀತಿ ಮಾಡುತ್ತಿದ್ದ. ಆ ಹುಡುಗಿಯೂ ಕೂಡ ಹರೀಶನ ಬಗ್ಗೆ ಎಲ್ಲವೂ ಗೊತ್ತಿದ್ದರೂ ಆತನ ನಿಷ್ಕಲ್ಮಶ ಪ್ರೇಮಕ್ಕೆ ಮನಸೋತು ಹೋಗಿದ್ದಳು. ಕೊನೆಗೂ ಈ ವಿಷಯ ಮನೆಯವರಿಗೆ ಗೊತ್ತಾಯಿತು. ಆದರೆ ಹೆಣ್ಣು ಕೇಳವ ಧೈರ್ಯವನ್ನು ಯಾರು ಮಾಡಲಿಲ್ಲ. ಯಾಕೆಂದರೆ ಹರೀಶನ ಬುದ್ದಿಯನ್ನು ಮನೆಯವರು, ಸಂಬಂಧಿಕರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಒಂದು ವೇಳೆ ಮದುವೆ ನಂತರವೂ ಈತ ಕುಡಿತದ ಚಟ ಮುಂದುವರಿಸಿದರೆ, ಒಂದು ಹೆಣ್ಣಿನ ಜೀವನವೇ ಹಾಳಾಗಿ ಹೋಗುತ್ತದೆ ಎನ್ನುವುದು ಅವರೆಲ್ಲರಿಗೂ ಚೆನ್ನಾಗಿ ಮನವರಿಕೆಯಾಗಿತ್ತು. ಆದರೂ ಹರೀಶನ ದೊಡ್ಡಪ್ಪನ ಮಗ, ಹರೀಶನ ಮೇಲೆ ಭರವಸೆ ಇಟ್ಟು, ಹೆಣ್ಣು ಕೇಳುವ ಧೈರ್ಯ ಮಾಡಿದರು. ಕೊನೆಗೆ ಹುಡುಗಿಯ ಮನೆಯವರನ್ನು ಒಪ್ಪಿಸಿ ಮಧುವೆ ಮಾಡಿ ಮುಗಿಸಿದರು. ಜೀವನ ಮಾಡಿಕೊಂಡು ಹೋಗಲಿ ಎಂದು ಬದುಕಿಗೆ ಒಂದು ದಾರಿ ಮಾಡಿಕೊಟ್ಟರು.

ವರ್ಷ ತುಂಬುವಷ್ಟರಲ್ಲಿ ಮುದ್ದಾದ ಮಗು ಕೂಡ ಆಯಿತು. ಆದರೆ ಮದುವೆಯ ನಂತರವೂ ಹರೀಶ ಬದಲಾಗಲಿಲ್ಲ. ತನ್ನ ಹಳೆ ಚಾಳಿಯನ್ನೆ ಮುಂದುವರಿಸುತ್ತಿದ್ದ. ಮನೆಗೆ ಮಗ ಬಂದರೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಆ ಮುಗುವಿಗೆ ಅಪ್ಪನ ಪ್ರೀತಿ ತೋರೆದೆ ವ್ಯಸನದ ಕೂಪಕ್ಕೆ ಬಲಿಯಾಗಿದ್ದ. ಇದನ್ನು ಕಂಡು ಬೇಸತ್ತ ಕುಟುಂಬಸ್ಥರು ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಚಿಕಿತ್ಸೆಯ ಸಮಯದಲ್ಲಿ ತನ್ನ ತಪ್ಪುಗಳನ್ನು ಅರ್ಥ ಮಾಡಿಕೊಂಡ. ಹರೀಶ ಬದಲಾಗಬೇಕು ಎಂದು ಮನಸ್ಸು ಮಾಡಿದ. ಕೊನೆಗೆ ಇಲ್ಲಿಂದ ಬದಲಾಯಿತು ಆತನ ಬದುಕು. ಈಗ ಹರೀಶ ಕುಟುಂಬಸ್ಥರ ಜೊತೆ ಅನ್ಯೂನ್ಯವಾಗಿದ್ದಾನೆ.
ಜವಾಬ್ದಾರಿಯುತ ವ್ಯಕ್ತಿಯಾಗಿ ಸಂಸಾರ ಮಾಡುತ್ತಿದ್ದಾನೆ. ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಇಷ್ಟು ದಿನ ಬರಿ ದ್ವೇಷ ಮಾಡುತ್ತಿದ್ದ ತಾಯಿಯನ್ನು ದೇವರಂತೆ ಆರಾಧಿಸುತ್ತಿದ್ದಾನೆ. ಅಣ್ಣನಿಗೆ ಒಳ್ಳೆಯ ತಮ್ಮನಾಗಿ ಆತನ ಮಾರ್ಗದರ್ಶನದಲ್ಲಿ ಹೆಜ್ಜೆಗೆ ಹೆಜ್ಜೆ ಹಾಕುತ್ತಿದ್ದಾನೆ. ಆದರೆ ತಂದೆಯನ್ನು ಯಾವಾಗಲು ನೆನಪಿಸಿಕೊಳ್ಳುತ್ತಾನೆ ಹರೀಶ. ನಾನು ಕುಡಿತದ ಚಟಕ್ಕೆ ಬಲಿಯಾಗಿದ್ದಾಗ ಅಪ್ಪ ಹೇಳುತ್ತಿದ್ದ ಬುದ್ದಿವಾದದ ಮಾತುಗಳು ಅರ್ಥ ವಾಗಲಿಲ್ಲ. ಕುಡಿತ ಬಿಟ್ಟು ಈಗ ಒಳ್ಳೆಯ ಮನಷ್ಯನಾಗಿದ್ದೇನೆ. ಇದನ್ನು ನೋಡಲು ಅಪ್ಪ ನನ್ನೊಂದಿಗಿಲ್ಲ. ” ಮಗ ಒಂದಲ್ಲ ಒಂದು ದಿನ ಬದಲಾಗುತ್ತಾನೆ ಎಂದು ಭರವಸೆ ಇಟ್ಟುಕೊಂಡಿದ್ದ ಅಪ್ಪನ ನಂಬಿಕೆ ಸುಳ್ಳಾಗಲಿಲ್ಲ’. ಅಪ್ಪ ಇಂದು ಇರಬೇಕಿತ್ತು ಎಂದು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾನೆ ಹರೀಶ.
ಕೊನೆಮಾತು…… ಹರೀಶ ಮಾಡಿದ ತಪ್ಪುಗಳನ್ನು ನೀವು ಮಾಡಬೇಡಿ. ಶುಭವಾಗಲಿ.

admin
the authoradmin

Leave a Reply

Translate to any language you want