ಮೈಸೂರು(ಹೆಚ್.ಪಿ.ನವೀನ್ ಕುಮಾರ್): ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಭಾನುವಾರ ಹೋಮ, ಹವನ, ಪೂಜೆ, ಜಾಗರಣೆ, ಅನ್ನದಾಸೋಹ, ಸಂಗೀತ ಕಛೇರಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಶ್ರದ್ಧ, ಭಕ್ತಿಯಿಂದ ನೆರವೇರಿತು.

ಸಂಸ್ಥೆಯ ಮುಂದೆ ಶಿವಲಿಂಗ, ಹುಲಿ ವಾಹನ ಏರಿದ ಮಹದೇಶ್ವರ ಹಾಗೂ ನಂದಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಲೋಕ ಕಲ್ಯಾಣಾರ್ತ ವಿವಿಧ ಪೂಜಾ ಕೈಂಕರ್ಯಗಳು ನಿರ್ವಿಘ್ನವಾಗಿ ಮಾಡಲಾಯಿತು. ಭಾನುವಾರ ಮುಂಜಾನೆ ಶಿವಲಿಂಗ, ನಂದಿ ಹಾಗೂ ಮಹದೇಶ್ವರ ಮೂರ್ತಿಯನ್ನು ನಾನಾ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಅರ್ಚನೆ, ಬಿಲ್ವಾರ್ಚನೆ, ನೈವೇದ್ಯ ಅರ್ಪಿಸ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಶಾಸಕ ಹರೀಶ್ ಗೌಡ ಪೂಜೆ ಸಲ್ಲಿಸಿ, ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಕೋರಿದರು.

ಹೋಮ, ಹವನ : ಲೋಕ ಕಲ್ಯಾಣಾರ್ಥವಾಗಿ ಸಂಸ್ಥೆಯ ಮುಂಭಾಗ ಗಣಪತಿ ಪೂಜೆ, ನವಗ್ರಹ ಪೂಜೆ, ಧನ್ವಂತರಿ ಪೂಜೆ, ಮಹಾ ಮೃತ್ಯುಂಜಯ ಯಾಗ ನೆರವೇರಿಸಲಾಯಿತು. ಪುರೋಹಿತರಾದ ಸಾಗರ್ ಶರ್ಮ ಮತ್ತು ತಂಡದಿಂದ ಪೂಜೆ ಹಾಗೂ ಹೋಮ, ಹವನದ ಕೈಂಕರ್ಯಗಳು ನೆರವೇರಿದವು.
ಸಂಗೀತಾ ಕಛೇರಿ : ಶಿವರಾತ್ರಿ ಜಾಗರಣೆ ಹಿನ್ನೆಲೆಯಲ್ಲಿ ಗಾಯಕರಾದ ದೇವಾನಂದ್ ವರಪ್ರಸಾದ್ ಹಾಗೂ ನಾರಾಯಣ್ ಅವರ ತಂಡದಿಂದ ಸಂಸ್ಥೆಯ ಹೊರಾಂಗಣದಲ್ಲಿ ಸಂಗೀತ ಕಛೇರಿಯನ್ನು ಆಯೋಜಿಸಲಾಗಿತ್ತು. ಶಿವನನ್ನ ಕುರಿತ ನಾನಾ ಗೀತೆಗಳನ್ನು ಸುಮಧುರ ಸಂಗೀತದೊಂದಿಗೆ ಸಾಧರ ಪಡಿಸಿದ ತಂಡ ನೆರೆದಿದ್ದ ಜನರನ್ನು ಭಕ್ತಿ ಪರವಶದಲ್ಲಿ ತೇಲಾಡಿಸಿದರು. ಸತತ 6 ಗಂಟೆಗಳ ಗಾನಸುಧೆಯನ್ನು ಹರಿಸಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸಿದರು.

ಅನ್ನ ಸಂತರ್ಪಣೆ : ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಭಾನುವಾರ ಬೆಳಗ್ಗೆ ಆರಂಭಗೊಂಡ ಅನ್ನ ಸಂತರ್ಪಣೆ ಕಾರ್ಯ, ಸೋಮವಾರ ಮಧ್ಯಾನದ ವರೆಗೂ ನಿರಂತರವಾಗಿ ಸಾಗಿತು. ಜನರು ದೇವರಿಗೆ ಭಕ್ತಿ ಸಮರ್ಪಿಸಿ, ಪ್ರಸಾದ ಸ್ವೀಕರಿಸಿದರು.
ಶುಭಕೋರಿದ ಹರೀಶ್ ಗೌಡ : ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ಹರೀಶ್ ಗೌಡ, ಬಸವಮಾರ್ಗ ಫೌಂಡೇಶನ್ ಸೇವಾ ಕಾರ್ಯವನ್ನು ಮೆಚ್ಚಿ, ಶುಭಕೋರಿದರು. ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ ಇತರೆ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರಗಳಿಗಿಂತ ವಿಭಿನ್ನವಾಗಿದೆ. ಸಮಾಜ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡು ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಶ್ರಮಿಸುತ್ತಿದೆ.

ಇದುವರೆಗೆ 56 ಕುಡಿತ ಬಿಡಿಸುವ ಶಿಬಿರವನ್ನು ಉಚಿತವಾಗಿ ಆಯೋಜಿಸಿ ಯಶಸ್ವಿಯಾಗಿದೆ. 15 ಸಾವಿರಕ್ಕೂ ಹೆಚ್ಚು ಜನರು ಸಂಸ್ಥೆಯ ಸೇವೆ ಪಡೆದು, ಮನಃಪರಿವರ್ತನೆ ಮಾಡಿಕೊಂಡು ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ. ಸಂಸ್ಥಾಪಕ ಎಸ್.ಬಸವರಾಜು ಅವರ ಈ ಸೇವೆ ನಿರಂತರವಾಗಿ ಸಾಗಲಿ ಎಂದು ಆಶಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯೆ ಪ್ರೇಮ ಶಂಕರೇಗೌಡ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಕನಸಹೊತ್ತು ಮುಂದೆ ಸಾಗುತ್ತಿರುವ ಬಸವಣ್ಣ ಅವರ ಕನಸು ನನಸಾಗಲಿ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಇವರ ಸೇವಾ ಕಾರ್ಯ ಗುರುತಿಸಿ ಪ್ರೋತ್ಸಾಹ ನೀಡಲಿ ಎಂದು ಹಾರೈಸಿದ ಅವರು, ಸಂಸ್ಥೆಯಿಂದ ಮಹಿಳೆಯರಿಗೆ ಪ್ರತ್ಯೇಕವಾಗಿ ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ವ್ಯಸನಕ್ಕೆ ದಾಸರಾಗಿರುವ ಮಹಿಳೆಯರು ಸೂಕ್ತ ಚಿಕಿತ್ಸೆ ಪಡೆದು, ಸಮಾಜ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕಿರಣ್ ಗೌಡ ಮಾತನಾಡಿ, ಬಸವಮಾರ್ಗ ಫೌಂಡೇಶನ್ ಕೇವಲ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲಷ್ಟೆ ಸೀಮಿತವಾಗಿಲ್ಲ. ಸರ್ಕಾರಿ ಶಾಲೆಯನ್ನು ದತ್ತು, ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ನಿಲಯ ಸ್ಥಾಪನೆ ಮೂಲಕ ನಾನಾ ಸೇವಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.
ಬಸವಮಾರ್ಗ ಫೌಂಡೇಶನ್ ಸಂಸ್ಥಾಪಕ ಎಸ್.ಬಸವಣ್ಣ ಮಾತನಾಡಿ, ಬಸವಮಾರ್ಗ ಫೌಂಡೇಶನ್‌ಗೆ ಭಗವಂತನೇ ಫೌಂಡರ್, ‘ಅಮಲು ರೋಗಿ ದೇವೋಭವ’ ಎನ್ನುವ ಘೋಷವಾಕ್ಯ ಇಟ್ಟುಕೊಂಡು ಸಮಾಜ ಸೇವೆ ಮಾಡಲಾಗುತ್ತಿದೆ. ಆ ಮೂಲಕ ವ್ಯಸನಿಗಳಲ್ಲಿ ದೇವರನ್ನ ಕಾಣಲಾಗುತ್ತಿದೆ. ಬಸವಮಾರ್ಗ ಫೌಂಡೇಶನ್ ಪಾರದರ್ಶಕ ಸೇವೆ ಮೂಲಕ ವ್ಯಸನಿಯ ಬದುಕಲ್ಲಿ ಹೊಸ ಬೆಳಕು ತರಲು ಅವಿರತವಾಗಿ ಶ್ರಮಿಸುತ್ತಿದೆ. ಕಟ್ಟ ಕಡೆಯ ವ್ಯಸನಿಗೂ ಸೂಕ್ತ ಸಮಯದಲ್ಲಿ, ಸೂಕ್ತ ಚಿಕಿತ್ಸೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಡೆಲ್ಲಿ ರವಿ, ಬಸವಮಾರ್ಗ ಸಂಸ್ಥೆಯ ವ್ಯವಸ್ಥಾಪಕ ಮಹೇಶ್, ಸಿಬ್ಬಂದಿ ರಾಕೇಶ್ , ಎಚ್.ಪಿ.ನವೀನ್ ಕುಮಾರ್, ಮಂಜುನಾಥ್, ಉಷಾರಾಣಿ, ಮೋನಿಷಾ, ವಸಂತ್, ರಾಘವೇಂದ್ರ, ಸಂಜು, ಅಭಿಷೇಕ್, ಬಸವರಾಜು, ಗೋಂವಿಂದ, ಮೋಹನ್, ರವೀಂದ್ರ, ಅಭಿಲಾಶ್, ನೇತ್ರಾ, ಮಧು, ಹೇಮಂತ್, ಮಲ್ಲಿಕಾರ್ಜುನ್, ಆಕಾಶ್, ಮುರುಗ, ಲೋಹಿತ್, ಗೌತಮ್ ಸೇರಿದಂತೆ ಇತರೆ ಸಿಬ್ಬಂದಿ ಇದ್ದರು.








