Latest

ಮಗನ ಕುಡಿತದ ಚಟ ಬಾರ್ ಓನರ್ ತಂದೆಯ ಪ್ರಾಣ ತೆಗೀತು.. ಇಷ್ಟಕ್ಕೂ ನಡೆದಿದ್ದೇನು?

ಕುಡುಕ ಹೇಮಂತ್ ಬಾಳಲ್ಲಿ ಬಸವಮಾರ್ಗದ ಬೆಳಕು

“ಊರಿನವರನೆಲ್ಲ ನಾನು ಕುಡಿತದ ದಾಸ್ಯಕ್ಕೆ ಹಚ್ಚಿದೆ” ! ಆದರೆ ಕೊನೆಗೊಂದು ದಿನ ಕುಡಿತದ ಆ ಬೆಂಕಿ ನನ್ನ ಮನೆಯನ್ನೆ ಸುಟ್ಟು ಭಸ್ಮ ಮಾಡಿತು” ! “ಮದ್ಯ ವ್ಯಸನಿ ಮಗನಿಂದ ಕುಟುಂಬದ ಆಸ್ಮಿತೆಯನ್ನೆ ಬಲಿ ಪಡೆಯಿತು”.! ಹೌದು… ಇದು ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ಆಡಿದ ದುಖಃಭರಿತ ಹತಾಶೆಯ ಮಾತುಗಳು… ಹೌದು… ಆತ್ಮಹತ್ಯೆಗೆ ಶರಣಾದ ಈ ತಂದೆ ಯಾರೋ ಸಾಮಾನ್ಯರಲ್ಲ. ಮೂರು ಬಾರ್‌ಗಳಿಗೆ ಓನರ್ ಆಗಿದ್ದವರು. ಮದ್ಯದ ವ್ಯಾಪಾರದಿಂದ  80ರ ದಶಕದಲ್ಲೆ ಕೈತುಂಬಾ ಲಕ್ಷಾಂತರ ರೂ.ಗಳನ್ನು ಕಂಡಿದ್ದವರು.

ಇದ್ದ ಒಬ್ಬ ಮಗನಿಗೆ ಬೇಕಾದಷ್ಟು ಆಸ್ತಿ, ಪಾಸ್ತಿಯನ್ನೂ ಮಾಡಿದ್ದವರು. ಸಂಬಂಧಿಕರು, ಪರಿಚಯಸ್ಥರಲ್ಲಿ ವಿಶೇಷ ಗೌರವ, ಅಭಿಮಾನವನ್ನು ಹೊಂದಿದ್ದವರು. ಆದರೆ ಮಗನ ಕುಡಿತದ ಕಾರಣದಿಂದ ಕುಟುಂಬದ ಘನತೆ, ಗೌರವ ಮಣ್ಣು ಪಾಲಾಯಿತು ಎಂದು ಆ ತಂದೆ ಖಿನ್ನತೆಗೆ ಹೋಗಿ ಅವಮಾನ ತಾಳಲಾಗದೆ ಕೊನೆಗೆ  ವಿಷ ಕುಡಿದು ಆತ್ಮಹತ್ಯೆಗೆ ಶರಣಾದರು.

ಈ ಕಥೆಯ ದುರಂತ ನಾಯಕನ ಹೆಸರು ಹೇಮಂತ್, ಮೈಸೂರಿನ ವಿಜಯನಗರದ ನಿವಾಸಿ. ಒಂದು ಕಾಲದಲ್ಲಿ ರಾಜನಂತೆ ಇದ್ದವನು ವಿಪರೀತ ಕುಡಿತದಿಂದಾಗಿ ಭಿಕ್ಷುಕನಾದನು.! ಕುಡಿತ ಮತ್ತು ಇನ್ನಿತರ ಚಟಕ್ಕಾಗಿ ಕೋಟ್ಯಂತರ ರೂ.ಗಳನ್ನು ಕಳೆದವನು.! ಲಕ್ಷ, ಲಕ್ಷಗಳನ್ನು ಸಾಲಕೊಡುತ್ತಿದ್ದವನು ಕೊನೆಗೆ ಕುಡಿತಕ್ಕಾಗಿ ಐದತ್ತು ರೂಪಾಯಿಗಳಿಗೆ ಕಂಡ, ಕಂಡವರ ಬಳಿ ಕೈ ಚಾಚಿದ್ದಾನೆ.! ತುತ್ತು ಅನ್ನಕ್ಕಾಗಿ ಬೀದಿ, ಬೀದಿಯಲ್ಲಿ ಭಿಕ್ಷೆ ಬೇಡಿದ್ದಾನೆ.! ಎಲ್ಲರೂ ಇದ್ದು, ಎಲ್ಲವೂ ಇದ್ದೂ ಅನಾಥನಂತೆ ಕಾಡು, ಮೇಡುಗಳನ್ನು ಅಲೆದಾಡಿದ್ದಾನೆ.!

ಕುಡಿತ, ತನ್ನ ಚಟಕ್ಕೆ ಬಲಿಯಾದ ವ್ಯಕ್ತಿಯನ್ನು ಯಾವ ಸ್ಥಿತಿಗೂ ಬೇಕಾದರೂ ಕರೆದುಕೊಂಡು ಹೋಗುತ್ತದೆ ಎನ್ನುವುದಕ್ಕೆ ಹೇಮಂತ್ ನೈಜ್ಯ ಉದಾಹರಣೆ. ಆಸ್ಪತ್ರೆಗಳಲ್ಲಿ ವಾಸಿಯಾಗದ, ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಸಿಗದೆ, ಕೊನೆಯ ಪರಿಹಾರ ಹೇಮಂತ್‌ಗೆ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಸಿಕ್ಕಿತು. ನಿಜವಾದ ಬದುಕು ಆತನಿಗೆ ಇಲ್ಲಿಂದ ಆರಂಭವಾಯಿತು.

ಬನ್ನಿ ಹೇಮಂತ್  ಪರಿಚಯ ಮಾಡಿಕೊಡುತ್ತೇನೆ…

ಹೇಮಂತ್, ಬಾಲ್ಯದಿಂದಲೂ ಪ್ರತಿಭಾವಂತ ಹುಡುಗ ! ಓದಿಗಿಂತಲೂ, ಲೆಕ್ಕಾಚಾರದಲ್ಲಿ ಸದಾ ಮುಂದು. ವ್ಯವಹಾರ ಜ್ಞಾನ, ತನ್ನ ತಾತ ಹಾಗೂ ತಂದೆಯಿಂದ ಬಳುವಳಿಯಾಗಿ ಬಂದಿತ್ತು. ತನ್ನ ವಯಸ್ಸಿನ ಹುಡುಗರು ಆಟ, ಪಾಠ, ಊಟ ಎನ್ನುತ್ತಿದ್ದರೆ, ಹೇಮಂತ್ ಹಣವನ್ನು ದ್ವಿಗುಣ ಮಾಡುವ, ಆಸಕ್ತಿಯನ್ನು ಬೆಳಸಿಕೊಂಡಿದ್ದ.! ಹಂತ, ಹಂತವಾಗಿ ಆ ಕಲೆಯನ್ನು ಕರಗತ ಮಾಡಿಕೊಂಡಿದ್ದ. ಹತ್ತು ರೂಪಾಯಿಯನ್ನು, ನೂರು ರೂಪಾಯಿಯನ್ನಾಗಿ ಮಾಡುವ ಭೌದ್ಧಿಕ ಸಾಮರ್ಥ್ಯ, ಜನರನ್ನು ತನ್ನತ್ತ ಸೆಳೆಯುವ ವಾಕ್ ಚಾತುರ್ಯ ಹೇಮಂತ್‌ಗೆ ಆ ವಯಸ್ಸಿನಲ್ಲೇ ಇತ್ತು.!

ಮಗನ ಬುದ್ದಿವಂತಿಕೆ ಕಂಡ ಮನೆ- ಮಂದಿ ಆಶ್ಚರ್ಯ ಪಡುತ್ತಿದ್ದರು.! ನಮ್ಮ ಕುಟುಂಬದಲ್ಲೆ ಇಂತಹ ಬುದ್ದವಂತ ಮಗ ಹುಟ್ಟಿಲ್ಲ ! ಎಂದು ಗರ್ವ ಪಡುತ್ತಿದ್ದರು. ಮಗನ ಈ ಚಾಕಚಕ್ಯತೆ ತಂದೆಯೂ ಸೇರಿದಂತೆ ಎಲ್ಲರಿಗೂ ಒಂದು ರೀತಿಯಲ್ಲಿ ಸಂತೋಷ ಕೊಡುತ್ತಿತ್ತು. ಮಗ ಬುದ್ದಿವಂತ, ವ್ಯವಹಾರ ಜ್ಞಾನ ಚೆನ್ನಾಗಿ ಇದೆ. ಮುಂದೆ ವ್ಯವಹಾರಗಳನ್ನು ನೋಡಿಕೊಳ್ಳುತ್ತಾನೆ. ಕುಟುಂಬದ ಗೌರವವನ್ನು ಕಾಪಾಡುತ್ತಾನೆ ಎಂದು ಮಗನ ಮೇಲೆ ಬಣ್ಣ ಬಣ್ಣದ ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ ಆ ಕನಸುಗಳಿಗೆ ರೆಕ್ಕೆ, ಪುಕ್ಕ ಕಟ್ಟಿ, ಎತ್ತರಕ್ಕೆ ಹಾರಿಸಬೇಕಿದ್ದ ಹೇಮಂತ ಎಲ್ಲವನ್ನು ಮಣ್ಣುಪಾಲು ಮಾಡಿಬಿಟ್ಟಿದ್ದ.!

ಹಣದ ರುಚಿ ಹಾದಿ ತಪ್ಪಿಸಿತು….

ಹೇಮಂತ್‌ಗೆ ಹಣದ ರುಚಿ ಹಾದಿ ತಪ್ಪಿಸಿತು ಎನ್ನುವುದು ಸುಳ್ಳಲ್ಲ.! ಹೇಮಂತ್ 10ನೇ ತರಗತಿಗೆ ಬರುವ ವೇಳೆಗೆ ಸಣ್ಣದಾಗಿ ಬಡ್ಡಿ ವ್ಯವಹಾರ ಪ್ರಾರಂಭ ಮಾಡಿದ್ದ, ಪಿಯುಸಿಗೆ ಬರುವ ವೇಳೆಗೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈಯಾಗಿದ್ದ. ಇದರಿಂದ ಕೈಯಲ್ಲಿ ನಾಲ್ಕಾರು ಹಣಕಾಸು ಓಡಾಡಲು ಶುರುವಾಗಿತ್ತು. ಪಿಯುಸಿ ಮುಗಿದು ಒಂದೆರಡು ವರ್ಷದಲ್ಲೇ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿದ. ವಯಸ್ಸಿಗೂ ಮೀರದ ಸಂಪಾದನೆ ಮಾಡಿದ್ದ ಹೇಮಂತ್. ಹಣದ ಕಾರಣದಿಂದ ನೂರಾರು ಸ್ನೇಹಿತರು ಸದಾ ಹಿಂದು-ಮುಂದು ಎಂದು ಬಾಲಂಗೋಚಿಯ ರೀತಿಯಲ್ಲಿ ಓಡಾಡುತ್ತಿದ್ದರು.

ಈ ಪ್ರಶಂಶೆಯ ನಶೆ ಹೇಮಂತ್ ನೆತ್ತಿಗೇರಿಬಿಟ್ಟಿತು. ಕೈಯಲ್ಲಿದ್ದ ಕಾಂಚಾಣ ಹೇಮಂತ್‌ನನ್ನು ಬೇರೆಯೇ ಲೋಕಕ್ಕೆ ಆಕರ್ಷಣೆ ಮಾಡಿಬಿಟ್ಟಿತ್ತು. ಸ್ನೇಹಿತರೊಂದಿಗೆ ಆ ಸಮಯದಲ್ಲಿ ಸಣ್ಣದಾಗಿ ಶುರುವಾದ ಕುಡಿತ, ಕೆಲವೇ ಕೆಲವು ತಿಂಗಳಿನಲ್ಲಿ ಹಂತ, ಹಂತವಾಗಿ ಹೇಮಂತ್‌ನನ್ನು ಆವರಿಸಿಕೊಂಡುಬಿಟ್ಟಿತ್ತು.! ಸಣ್ಣ, ಪುಟ್ಟ ಕಾರಣಕ್ಕೂ ಸ್ನೇಹಿತರು ಪಾರ್ಟಿಗಳನ್ನು ಆಯೋಜಿಸಿ, ಮೋಜು, ಮಸ್ತಿ ಮಾಡುತ್ತಿದ್ದರು. ಈ ಬೆಳವಣಿಗೆಗಳು ಹೇಮಂತ್ ಕುಡಿತದ ದಾಸ್ಯಕ್ಕೆ ಒಳಗಾಗಲು ಪ್ರಮುಖವಾದ ಕಾರಣಗಳಲ್ಲಿ ಒಂದಾಗಿಬಿಟ್ಟಿತು. ಇದು ವ್ಯವಹಾರಗಳ ದುಸ್ತಿತಿಗೆ ದಾರಿ ಮಾಡಿಕೊಟ್ಟುಬಿಟ್ಟಿತು. !

ತಂದೆಗೆ ಮಗನ ವಿಷಯ ತಿಳಿಯಿತು..

ಮಗ ಏನೋ ಮೋಜಿಗಾಗಿ ಕುಡಿಯುತ್ತಾನೆ ಬಿಡು ಎಂದು ಪ್ರಾರಂಭದಲ್ಲಿ ಉದಾಸೀನ ಮಾಡಿದ್ದರು ತಂದೆ. ಆದರೆ ಹೇಮಂತ್ ದಿನದಿಂದ ದಿನಕ್ಕೆ ಕುಡಿತವನ್ನು ಹೆಚ್ಚೆಚ್ಚು ಮಾಡಿಕೊಳ್ಳಲು ಪ್ರಾರಂಭಿಸಿದ. ಇದು ತಂದೆಗೆ ಆತಂಕ ಹೆಚ್ಚಿಸಿತು. ದಿನ ಬೆಳಗಾಯಿತು ಎಂದರೆ ಸಾಕು ಸ್ನೇಹಿತರೊಂದಿಗೆ ಸಂಜೆಯವರೆಗೂ ಕಂಠಪೂರ್ತಿ ಕುಡಿಯುತ್ತಿದ್ದ. ಇದರಿಂದ ವ್ಯವಹಾರದ ಕಡೆಗ ಗಮನ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಪರಿಣಾಮ ದಿನದಿಂದ ದಿನಕ್ಕೆ ವ್ಯವಹಾರ ನಷ್ಟ ಹೊಂದಲು ಪ್ರಾರಂಭವಾಯಿತು. ದುಡಿದ ಹಣ ಮಂಜಿನಂತೆ ಕರಗಿ ಹೋಗುತ್ತಿತ್ತು. ಆದರೂ ಅದರ ಬಗ್ಗೆ ಹೇಮಂತ್‌ಗೆ ಇದರ ಪರಿವೆ ಇರಲಿಲ್ಲ.

ಕುಡಿತ ಬಿಟ್ಟರೆ ಹೇಮಂತ್‌ಗೆ ಮತ್ತೇನೂ ಬೇಕಾಗಿರಲಿಲ್ಲ. ಹೇಮಂತ್ ನ ಕುಡಿತದ ದಾಸ್ಯದ ಬಗ್ಗೆ ಎಲ್ಲೆಡೆ ಜಗಜ್ಜಾಹಿರಾಯಿತು. ಕುಡಿದ ಮೇಲೆ ಈತನ ವರ್ತನೆ ಕಂಡು ಮನೆಯವರು ಸಂಬಂಧಿಕರು ರೋಸಿಹೋಗಿದ್ದರು. ಕೆಲವರು ತೆಗಳಲು ಶುರು ಮಾಡಿದರು. ಇನ್ನೂ ಕೆಲವರು ವ್ಯಂಗ್ಯವಾಡಲು ಪ್ರಾಂರಭಿಸಿದರು. ಇದೆಲ್ಲವನ್ನು ನೋಡಿದ ತಂದೆಗೆ ಅವಮಾನ ತಡೆಯಲಾಗಲಿಲ್ಲ. ಆಕ್ರೋಶಕ್ಕೆ ಮಗ ವಯಸ್ಸಿಗೆ ಬಂದಿದ್ದಾನೆ ಎನ್ನುವುದನ್ನೂ ನೋಡದೆ ಥಳಿಸಿಬಿಟ್ಟರು. ಕುಡಿತ ಬಿಟ್ಟು, ಉತ್ತಮ ವ್ಯಕ್ತಿಯಾಗಿ ಬಾಳು ಎಂದು ಪರಿಪರಿಹಾಗಿ ಬೇಡಿಕೊಂಡರು. ಆದರೆ ಅದ್ಯಾವ ಮಾತುಗಳು ಹೇಮಂತ್ ಕಿವಿಯನ್ನು ಮುಟ್ಟಲೇ ಇಲ್ಲ.

ಕಣ್ಣೀರಲ್ಲಿ ಕೈತೊಳೆಯುತ್ತಿದ್ದ ತಾಯಿ…

ವೈಭವದಲ್ಲಿ ಬೆಳದ ಮಗ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೋಟ್ಯಂತರ ರೂ. ಸಂಪಾದನೆ ಮಾಡಿದ್ದ ತನ್ನ ಹೆತ್ತ ಕರುಳು ಕುಡಿದು, ಕುಡಿದು ದುಸ್ಥಿತಿಗೆ ತಲುಪುವುದನ್ನು ಕಂಡ ತಾಯಿ ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಳು. ಹೇಮಂತ್ ಕಾರಣದಿಂದ ಮನೆಯಲ್ಲಿ ಚೂರು ನೆಮ್ಮದಿ ಇಲ್ಲ. ಯಾವಾಗಲು ಜಗಳ, ಗದ್ದಲ. ಇದರ ಜತೆಗೆ ಹೇಮಂತ್ ಕುಡಿದ ನಶೆಯಲ್ಲಿ ಎಲ್ಲೆಂದರಲ್ಲಿ ಗಲಾಟೆ ಮಾಡಿಕೊಂಡು ಬೇರೆ ಬರುತ್ತಿದ್ದ. ಅವರೆಲ್ಲರು ಮನೆಯ ಬಾಗಿಲಿಗೆ ಬಂದು, ಪ್ರಶ್ನೆ ಮಾಡುತ್ತಿದ್ದರು.

ಇದೆಲ್ಲವನ್ನು ನೋಡಿದ ಆ ಮಹಾ ತಾಯಿ, ನನ್ನ ಮಗನ ಮೇಲೆ ಯಾರ ಕೆಟ್ಟ ಕಣ್ಣು ಬಿತ್ತೋ ಎಂದು ದುಖಿಃಸುತ್ತಿದ್ದರು. ! ಅಷ್ಟು ಚೆನ್ನಾಗಿದ್ದ ಮಗ ಈ ಸ್ಥಿತಿಗೆ ಬಂದು ಬಿಟ್ಟನಲ್ಲ ಎಂದು ಮೂಲೆಯಲ್ಲಿ ಕೂತು ಒಬ್ಬೊಂಟಿಯಾಗಿ ರೋಧಿಸುತ್ತಿದ್ದರು. ಮಗ ಕುಡಿತ ಬಿಟ್ಟು ಬದಲಾಗಲಿ ಎಂದು ಕಂಡ, ಕಂಡ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಿದ್ದರು. ಉಪವಾಸ, ವ್ರತಗಳನ್ನು ಮಾಡಿ, ಜೀವವನ್ನು ಮಗನಿಗಾಗಿ ತೇಯುತ್ತಿದ್ದರು. ತನ್ನ ಕಂದ ಯಾವಾಗ ಸರಿಯಾಗುತ್ತಾನೆ ನೋಡಿ ಎಂದು ಜ್ಯೋತಿಷಿಗಳ ಬಳಿ ಜಾತಕವನ್ನು ಹಿಡಿದು ಅಲೆದಾಡುತ್ತಿದ್ದರು.

ಏನಾದರೂ ಪರಿಹಾರ ಇದ್ದರೆ ನೀಡಿ ಎಂದು ಅಂಗಲಾಚಿ ಬೇಡುತ್ತಿದ್ದಳು. ಮಗನ ಸಮಯ ಸರಿಯಾಗಿಲ್ಲ. ಇಂದು ಬದಲಾಗುತ್ತಾನೆ, ನಾಳೆ ಬದಲಾಗುತ್ತಾನೆ ಎಂದು ದಿನಗಳನ್ನು ಎಣಿಸುತ್ತಲೇ ಇದ್ದಳು ಆ ಮಹಾ ತಾಯಿ. ಆದರೆ ತಾಯಿಯ ಅಷ್ಟೂ ನಿರೀಕ್ಷೆಗಳನ್ನು ಹೇಮಂತ್ ಸುಳ್ಳು ಮಾಡಿಬಿಟ್ಟ. ಅವರ ಎಲ್ಲ ಭರವಸೆಗಳಿಗೆ ಎಳ್ಳು ನೀರು ಬಿಟ್ಟಿ. ಕುಡಿತದ ಕಾರಣದಿಂದ ತಂದೆ-ಮಗ ಆಡುತ್ತಿದ್ದ ಜಗಳದಿಂದ ಬೇಸತ್ತಿದ್ದ ತಾಯಿ, ಜೀವ ಕೈಚೆಲ್ಲಲು ಅದೆಷ್ಟೋ ಬಾರಿ ಯತ್ನಿಸಿರುವುದು ಉಂಟು.

ಮನೆಯಲ್ಲೆ ಕಳ್ಳನಾದ ಹೇಮಂತ್…

ಹೇಮಂತ್ ಕುಡಿತದ ದಾಸ್ಯಕ್ಕೆ ಹಿಡಿದ ಮಾರ್ಗಗಳನ್ನು ನೀವು ಒಮ್ಮೆ ನೋಡಿದರೆ ಉಬ್ಬೇರಿಸುತ್ತೀರಿ.! ಬಾಯಿ ಮೇಲೆ ಬೆರಳಿಟ್ಟುಕೊಂಡು ಆಶ್ಚರ್ಯ ಪಡುತ್ತೀರಿ.! ವ್ಯಸನಿಗಳು ಕುಡಿತಕ್ಕಾಗಿ ಈ ರೀತಿಯಲ್ಲೂ ಮಾಡುತ್ತಾರಾ ? ಎಂದು ನೀವು ಉದ್ಘರಿಸುತ್ತೀರಿ. ಹೌದು… ವ್ಯಸನವೇ ಅಂಥದ್ದು, ಕುಡಿತದ ಕ್ರೇವಿಂಗ್ ಏನು ಬೇಕಾದರು ಮಾಡಿಸುತ್ತದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಕೈಯಲ್ಲಿ ಹಣ ಇರುವ ತನಕ ಕಂಠಪೂರ್ತಿ ಕುಡಿದ ಹೇಮಂತ್, ಕೈಯಲ್ಲಿ ಬಿಡಿಗಾಸು ಇಲ್ಲಿದ್ದಿದ್ದಾಗ ಹುಚ್ಚನಂತೆ ಕೂಗಾಡಿದ್ದಾನೆ. ತಾಯಿ-ತಂದೆಯನ್ನು ಹಣಕ್ಕಾಗಿ ಪೀಡಿಸಿದ್ದಾನೆ. ಮನೆ ಮುಂದೆ ನಿಂತು ನನ್ನ ಪಾಲನ್ನು ನನಗೆ ಕೊಟ್ಟುಬಿಡಿ ಎಂದು ಜಗಳವಾಡಿದ್ದಾನೆ.

ಕೊನೆಗೆ ಎಲ್ಲೂ ಹಣ ಸಿಗದಿದ್ದಾಗ, ಹೇಮಂತ ಮನೆಯಲ್ಲೆ ಕಳ್ಳತನ ಮಾಡಲು ಶುರು ಮಾಡಿಬಿಟ್ಟಿದ್ದ. ಮನೆಯಲ್ಲಿದ್ದ ಬೆಳ್ಳಿ ಸಾಮಗ್ರಿ, ಚಿನ್ನದ ಒಡವೆಗಳನ್ನು ಒಂದೊಂದಾಗೆ ಕದ್ದು, ಅದನ್ನು ಮಾರಾಟ ಮಾಡುತ್ತಿದ್ದ. ಅದರಿಂದ ಬಂದ ಹಣದಲ್ಲಿ ತಾನೂ ಕುಡಿದು, ಸ್ನೇಹಿತರಿಗೂ ಕುಡಿಸಿ ನಶೆಯಲ್ಲಿ ತಿಂಗಳು ಗಟ್ಟಲೆ ತೇಲಾಡುತ್ತಿದ್ದ.

ತಾಯಿಯ ಮಾಂಗಲ್ಯವನ್ನೂ ಬಿಡಲಿಲ್ಲ…

ಹೇಮಂತನ ಕುಡಿತ ಹಾಗೂ ಕಳ್ಳತನದ ದುರಾಭ್ಯಾಸ ಕೊನೆಗೆ ಎಲ್ಲಿಗೆ ಹೋಗಿ ಮುಟ್ಟಿತು ಎಂದರೆ ಒಂದು ದಿನ ಕುಡಿಯಲು ಹಣ ಸಿಗದಿದ್ದಾಗ ಅವನ ಕಣ್ಣು ತಾಯಿಯ ಕುತ್ತಿಗೆಯಲ್ಲಿ ಇದ್ದ ಚಿನ್ನದ ಮಾಂಗಲ್ಯ ಸರದ ಮೇಲೆ ಬೀಳುತ್ತದೆ. ಮನೆಯಲ್ಲಿದ್ದ ಬೆಳ್ಳಿ ಸಾಮಾನುಗಳು, ಚಿನ್ನಾಭರಣಗಳು ಹಂತ, ಹಂತವಾಗಿ ಖಾಲಿಯಾದಾಗ ಹೇಮಂತ ತಾಯಿಯ ಕತ್ತಲ್ಲಿ ಇದ್ದ ಮಾಂಗಲ್ಯ ಸರವನ್ನು ಕೇಳುತ್ತಾನೆ. ” ಇಲ್ಲ, ಏನು ಬೇಕಾದರೂ ಕೇಳು ಕೊಡುತ್ತೇನೆ. ಆದರೆ ಮಂಗಳಸೂತ್ರವನ್ನು ಮಾತ್ರ ಕೇಳಬೇಡ ಎಂದು ಕಣ್ಣೀರು ಹಾಕುತ್ತಾರೆ.”!

ಓ ದೇವರೆ ಎಂತಹ ಸ್ಥಿತಿಗೆ ದೂಡಿಬಿಟ್ಟೆ, ಎಂತಹ ಪರೀಕ್ಷೆಯನ್ನು ತಂದೊಡ್ಡಿಬಿಟ್ಟೆ ನೋಡು ಎಂದು ದೇವರನ್ನು ನಿಂದಿಸುತ್ತಾರೆ”!.  ತಾಯಿ, ಮಾಂಗಲ್ಯ ಸರವನ್ನು ಕೊಡಲು ನಿರಾಕರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಾನೆ ಹೇಮಂತ. “ಇರುವನು ಒಬ್ಬನೆ ಮಗ, ಈತ ಏನಾದರೂ ಹೆಚ್ಚು, ಕಡಿಮೆ ಮಾಡಿಕೊಂಡರೆ ಗತಿ ಏನು ? ಎಂದು ಹಿಂದು, ಮುಂದು ನೋಡದೆ ಕಣ್ಣಲ್ಲಿ ನೀರು ತುಂಬಿಕೊಂಡೇ ಆ ಮಹಾ ತಾಯಿ..

ಕತ್ತಲ್ಲಿದ್ದ ಮಾಂಗಲ್ಯ ಸರವನ್ನು ತೆಗೆದು ಮಗನ ಕೈಗೆ ಇಡುತ್ತಾಳೆ.”! ನಿನಗೆ ತೃಪ್ತಿಯಾಗುವಷ್ಟು ಕುಡಿ ಎಂದು ಕುಸಿದು ಅಲ್ಲೆ ಬೀಳುತ್ತಾಳೆ’! ಹೇಮಂತ್‌ಗೆ ಅಲ್ಲೂ ಕೂಡ ತಾನು ಮಾಡುತ್ತಿರುವುದು ತಪ್ಪು ಎಂದು ಕಿಂಚಿತ್ತೂ ಎನಿಸಲಿಲ್ಲ… ಮಾಂಗಲ್ಯ ಸರ ಪಡೆದವನೆ ಸೀದ ಗಿರಿವಿ ಅಂಗಡಿಗೆ ಹೋಗಿ ಅದನ್ನು ಗಿರಿವಿಗೆ ಇಟ್ಟು, ಬಂದ ಹಣದಲ್ಲಿ ಕಂಠ ಪೂರ್ತಿ ಕುಡಿಯುತ್ತಾನೆ.

ರಕ್ತ ಮಾರಿ ಕುಡಿಯುತ್ತಿದ್ದ ಹೇಮಂತ್…

ಹೇಮಂತ್ ಕುಡಿತಕ್ಕಾಗಿ ತನ್ನ ರಕ್ತವನ್ನೇ ಮಾರಾಟ ಮಾಡಿದ್ದಾನೆ ಎಂದರೆ ನೀವು ನಂಬುತ್ತೀರಾ ? ಹೇಮಂತ್‌ಗೆ ಬೇರೆಲ್ಲೂ ಹಣ ಸಿಗದೆ ಇದ್ದಾಗ ಅಗತ್ಯ ಬಿದ್ದಾಗಲೆಲ್ಲ, ರಕ್ತದ ಅಗತ್ಯ ಇದ್ದವರಿಗೆಲ್ಲ ತನ್ನ ದೇಹದಿಂದ ರಕ್ತ ಬಸಿದು ಕೊಟ್ಟಿದ್ದಾನೆ.  ಅದರಿಂದ ಬಂದ ಹಣದಲ್ಲಿ ನಶೆ ಏರಿಸಿಕೊಂಡಿದ್ದಾನೆ. ಇಂತಹದೊಂದು ಅಪಾಯಕಾರಿಯಾದ ಅಭ್ಯಾಸವನ್ನು ರೂಡಿ ಮಾಡಿಕೊಂಡು ಬಿಟ್ಟಿದ್ದ ಹೇಮಂತ. ಇದು ಹೇಮಂತ್‌ನ ಆರೋಗ್ಯದ ಮೇಲೂ ವ್ಯತಿರಿಕ್ತವಾಗಿ ಪರಿಣಾಮ ಬೀರಿತು. ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಯಾವಾಗಲೂ ಕುಡಿತ,

ಈ ನಡುವೆ ಯಾವುದೇ ಅಂತರವಿಲ್ಲದೆ ರಕ್ತ ನೀಡುತ್ತಿದ್ದ ಕೆಟ್ಟ ಛಾಳಿ ಹೇಮಂತನ ಆರೋಗ್ಯ ಸ್ಥಿತಿ ಮೇಲೆ ದುಷ್ಪರಿಣಾಮವನ್ನು ಬೀರಲು ಪ್ರಾರಂಭ ಮಾಡಿಬಿಟ್ಟಿತು. ಆದರೂ ತನ್ನ ಆರೋಗ್ಯವನ್ನು ಲೆಕ್ಕಿಸದ ಹೇಮಂತನ ಕಳ್ಳಾಟಕ್ಕೆ ಒಂದು ದಿನ ಬ್ರೇಕ್ ಬಿತ್ತು. ವೈದ್ಯರು ಈತನ ಕಳ್ಳಾಟವನ್ನು ಪತ್ತೆ ಹಚ್ಚಿ, ಬೈದು ಬುದ್ದಿವಾದ ಹೇಳಿ ಕಳುಹಿಸಿದರು.

ಮದುವೆ ಮಾಡಿದರೆ ಸರಿಹೋಗಬಹುದು..

ಮದುವೆ ಮಾಡದಿದ್ದರೆ ಹುಚ್ಚು ಬಿಡದು, ಹುಚ್ಚು ಬಿಡದಿದ್ದರೆ ಮದುವೆಯಾಗದು ಎನ್ನುವ ಗಾದೆಯಂತೆ’ !, ಮದುವೆ ಮಾಡಿದರೆ ಹೇಮಂತ್ ಕುಡಿತ ಬಿಡಬಹುದು ಎಂದು ಆತನ ತಾಯಿಗೆ ಯಾರೋ ಸಲಹೆ ನೀಡುತ್ತಾರೆ. ಅದರಂತೆ ಹೇಮಂತನಿಗೆ ಮದುವೆ ಮಾಡಲು ಮನೆಯವರು ನಾನಾ ಕಡೆಗಳಲ್ಲಿ ಹೆಣ್ಣು ಹುಡುಕಲು ಪ್ರಾರಂಭ ಮಾಡುತ್ತಾರೆ. ಆದರೆ ಈತನ ಕುಡಿತದ ಕೀರ್ತಿ ಎಲ್ಲೆಡೆ ಜಗಜ್ಜಾಹಿರಾಗಿದ್ದರಿಂದ ಯಾರೂ ಹೆಣ್ಣು ಕೊಡಲು ಮುಂದೆ ಬರುವುದಿಲ್ಲ. ಕೊನೆಗೆ ಹತ್ತಿರದ ಒಂದು ಕುಟುಂಬ ಹೆಣ್ಣು ಕೊಡಲು ಮುಂದೆ ಬರುತ್ತದೆ. ಕುಡಿತದ ಚಟಕ್ಕೆ ದಾಸನಾದರೂ ಈ ವಿಷಯದಲ್ಲಿ ಹೇಮಂತನ ಒಂದು ಗುಣವನ್ನು ನೀವು ಮೆಚ್ಚಲೇಬೇಕು.! “ಅದೇನು ಎಂದರೆ ತನ್ನನ್ನು ಮದುವೆಯಾಗುವ ಹುಡುಗಿಗೆ ಮೋಸ ಮಾಡಬಾರದು ಎಂದು ಮನಗಂಡು ಆಕೆಯ ಬಳಿ, ತನ್ನ ವ್ಯಸನದ ಬಗ್ಗೆ ಯಾವುದನ್ನೂ ಮುಚ್ಚಿಡದೆ ಸವಿವರವಾಗಿ ಹೇಳಿಕೊಳ್ಳುತ್ತಾನೆ.!

ಇದನ್ನೂ ಓದಿ: ಕುಡಿತಕ್ಕೆ ದಾಸನಾದವನು ಹೆತ್ತವರ ಮಾತು ಕೇಳಲಿಲ್ಲ… ಆಮೇಲೆ ಏನಾಯಿತು?

“ಈ ಕುಡುಕನನ್ನು ಮದುವೆಯಾದರೆ ನೀನು ಯಾವುದೆ ಸುಖ ಅನುಭವಿಸಲು ಸಾಧ್ಯವಿಲ್ಲ. ಜೀವನದುದ್ದಕ್ಕೂ ಬರಿ ಸಂಕಷ್ಟವನ್ನೇ ನೋಡಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನ ಮಾಡುತ್ತಾನೆ.”! “ಬೇರೆ ಯಾರಾನ್ನದಾರೂ ಕೈ ಹಿಡಿದು ಜೀವನ ಮಾಡು. ನಿನ್ನ ಬಾಳುಕೂಡ ಉಜ್ವಲವಾಗಿರುತ್ತದೆ” ಎಂದು ಹೇಮಂತ ಆ ಹುಡುಗಿಗೆ ಸಲಹೆ ನೀಡುತ್ತಾನೆ. ಆದರೆ ಆ ಹುಡುಗಿ ಇದೆಲ್ಲವನ್ನೂ ತಿಳಿದ ಮೇಲೆಯೂ ಕೊನೆಗೆ ಹೇಮಂತನನ್ನೆ ತನ್ನ ಜೀವನದ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಹೇಮಂತ ಕಟ್ಟುವ ಮೂರು ಗಂಟಿಗೆ ಕೊರಳೊಡ್ಡುತ್ತಾಳೆ. ಆದರೆ ಹೇಮಂತ ಮಾತ್ರ ಮದುವೆಯಾದ ಒಂದೆರಡು ತಿಂಗಳಿನಲ್ಲೆ ಮತ್ತೆ ಕುಡಿತದ ದಾಸ್ಯಕ್ಕೆ ಬಲಿಯಾಗಿ ಬಿಡುತ್ತಾನೆ.

ಅವಳಿ ಮಕ್ಕಳಿಗೆ ಜನ್ಮ ಕೊಟ್ಟ ಮಡದಿ…

ಮದುವೆಯಾಗಿ ವರ್ಷದೊಳಗೆ ಮಡದಿ, ಮಕ್ಕಳಿಗೆ ಜನ್ಮ ಕೊಡಲು ಸಿದ್ಧವಾಗಿದ್ದಳು. ಅದರಂತೆ ಹೆರಿಗೆಗಾಗಿ ಆಸ್ಪತ್ರೆಗೂ ಸೇರಿಸಲಾಯಿತು. ಆ ತಾಯಿ ಮುದ್ದಾದ ಅವಳಿ, ಜವಳಿ ಮಕ್ಕಳಿಗೆ ಜನ್ಮ ನೀಡಿದಳು. ಹೇಮಂತನಿಗೆ ಎಲ್ಲಿಲ್ಲದ ಖುಷಿಯೋ, ಖುಷಿ.! ತಾನು ತಂದೆಯಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಈ ನಡುವೆ ಆಸ್ಪತ್ರೆಯ ಖರ್ಚು-ವೆಚ್ಚವನ್ನು ನಿಭಾಯಿಸಲು ಹೇಮಂತ ಇನ್ನಿಲ್ಲದಂತೆ ಪರದಾಡಿದ. ಕೈಯಲ್ಲಿ ದುಡಿಮೆ ಇಲ್ಲ, ಕುಡಿತ ಹಾಗೂ ಮತ್ತಿತರ ವ್ಯಸನಗಳಿಂದ ಈಗಾಗಲೇ ಕೋಟ್ಯಾಂತರ ರೂ.ಗಳನ್ನು ಕಳೆದಿದ್ದಾನೆ.

ಆಸ್ಪತ್ರೆಗೆ ಹಣ ಪಾವತಿ ಮಾಡುವ ವಿಚಾರದಲ್ಲಿ ಹೆಂಡತಿ ಮನೆಯವರು ಮತ್ತು ತನ್ನ ಮನೆಯವರ ಕೆಲ ನಿಲುವುಗಳಿಂದ ಹೇಮಂತ ಬೇಸರಗೊಂಡ. ಲಕ್ಷಾಂತರ ರೂ.ಗಳನ್ನು ಕಂಡ ಈ ಕೈ, ಇಂದು ನಾ ಜನ್ಮ ಕೊಟ್ಟ ಮಕ್ಕಳ ಆಸ್ಪತ್ರೆ ಖರ್ಚು, ವೆಚ್ಚಗಳನ್ನು ನೋಡಿಕೊಳ್ಳಲು ಆಗುತ್ತಿಲ್ಲವಲ್ಲ ಎಂದು ತೀವ್ರವಾಗಿ ನೊಂದುಕೊಂಡ ಕೊನೆಗೆ ಸ್ನೇಹಿತರು, ಸಂಬಂಧಿಕರಿಂದ ಸಾಲ ಪಡೆದು ಹೇಗೋ ಹೆಂಡತಿ ಮಕ್ಕಳನ್ನು ಮನೆಗೆ ಕರೆದುಕೊಂಡ ಬಂದ. ಆದರೆ ಅವಳಿ-ಜವಳಿ ಮಕ್ಕಳಲ್ಲಿ ಒಂದು ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಬರುತ್ತದೆ. ಮಡದಿ ಹಾಗೂ ಹೇಮಂತ್ ಇಬ್ಬರು ಆ ಮಗುವಿಗಾಗಿ ಇನ್ನಿಲ್ಲದಂತೆ ಕಷ್ಟ ಪಡುತ್ತಾರೆ.

ಈ ಸಮಯದಲ್ಲಿ ಹಣಕಾಸು ಹೊಂದಿಸುವ ಸಂದರ್ಭವನ್ನು ನಿಭಾಹಿಸಲು ಎಡವಿದ ಹೇಮಂತ, ಯಾರಿಗೂ ಹೇಳದೆ-ಕೇಳದೆ ಬೇಸರದಲ್ಲೆ ಕಣ್ಮರೆಯಾಗಿ ಬಿಡುತ್ತಾನೆ. ತನ್ನ ಸ್ಥಿತಿಯನ್ನು ಶಪಿಸಿಕೊಂಡು ಏಕಾಂಗಿಯಾಗಿ ಕಂಠಪೂರ್ತಿ ಕುಡಿದು ದುಖಃವನ್ನು ಮರೆಯಲು ಯತ್ನಿಸುತ್ತಾನೆ. ಹತ್ತು ದಿನವಾಯಿತು, ಇಪ್ಪತ್ತು ದಿನವಾಯಿತು, ತಿಂಗಳಾಯಿತು. ಹೇಮಂತನ ಸುಳಿವೇ ಸಿಗುವುದಿಲ್ಲ. ಕೊನೆಗೆ ಮನೆಯವರು ಆ ಮಗುವಿನ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರುತ್ತಾರೆ.

ನೊಂದು ತಂದೆ ಆತ್ಮಹತ್ಯೆಗೆ ಶರಣಾದರು..

ಮಗ ಇಂದು ಸರಿಯಾಗುತ್ತಾನೆ, ನಾಳೆ ಸರಿಯಾಗುತ್ತಾನೆ ಎಂದು ಬರಿ ಭರವಸೆಯಲ್ಲೇ ಇದ್ದ ತಂದೆಗೆ ಮಗನ ಈ ನಡೆಯಿಂದ ಮಾನಸಿಕವಾಗಿ ಕುಸಿದು ಹೋದರು. ಮಗನ ಕುಡತದ ಚಟದಿಂದ ತಂದೆ, ದಿನದಿಂದ ದಿನಕ್ಕೆ ಚಿಂತಾಕ್ರಾಂತರಾದರು. ಇದರಿಂದ ವ್ಯವಹಾರದ ಕಡೆಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಅದಾಗಲೆ ಮಾಡಿಟ್ಟಿದ್ದ ಸಂಪತ್ತು ದಿನದಿಂದ ದಿನಕ್ಕೆ ಕರಗಿ ಹೋಗಲು ಪ್ರಾರಂಭವಾಯಿತು.

ಕೊನೆಗೆ ಒಂದು ದಿನ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದರು. ಆಗ ಅವರ  ಬಾಯಿಂದ ಬಂದ ಒಂದು ಮಾತು ಏನೆಂದರೆ “ಊರಿನವರನೆಲ್ಲ ನಾನು ಕುಡಿತದ ದಾಸ್ಯಕ್ಕೆ ಹಚ್ಚಿದೆ ! ಆದರೆ ಕೊನೆಗೊಂದು ದಿನ ಕುಡಿತದ ಆ ಬೆಂಕಿ ನನ್ನ ಮನೆಯನ್ನೆ ಸುಟ್ಟು ಭಸ್ಮ ಮಾಡಿತು ! ಮದ್ಯ ಮಗನಿಂದ ಕುಟುಂಬದ ಆಸ್ಮಿತೆಯನ್ನೆ ಬಲಿ ಪಡೆಯಿತು’ ಎಂದು ತೀವ್ರವಾಗಿನೊಂದುಕೊಂಡು ಕೊನೆಗೆ ಆತ್ಮಹತ್ಯೆಗೆ ಶರಣಾಗಿ ಬಿಟ್ಟರು.

ಇದನ್ನೂ ಓದಿ: ಕುಡಿತದ ಚಟಕ್ಕೆ ಬಿದ್ದವನಿಗೆ ತಪ್ಪು ಅರಿವಾಗುವ ವೇಳೆಗೆ ಕಾಲಮಿಂಚಿತ್ತು..

ಅಜ್ಞಾತನಾಗಿದ್ದ ಹೇಮಂತ್‌ಗೆ ತನ್ನ ತಂದೆಯ ಸಾವಿನ ಸುದ್ದಿ ಹೇಗೋ ತಿಳಿಯಿತು. ಕೂಡಲೆ ಆತ ಊರಿಗೆ ಓಡೋಡಿ ಬರುತ್ತಾನೆ. ತಂದೆಯನ್ನು ನೋಡಿ ಬಿಕ್ಕಿ, ಬಿಕ್ಕಿ ಅಳುತ್ತಾನೆ. ತನ್ನ ಕುಡಿತದ ದಾಸ್ಯವನ್ನು ತಾನೇ ಶಪಿಸುತ್ತಾನೆ. ತಂದೆಯ ಅಂತಿಮ ಸಂಸ್ಕಾರಕ್ಕೆ ಬಂದಿದ್ದವರು, ಮನೆಮಂದಿ ಹೇಮಂತನನ್ನು ಇನ್ನಿಲ್ಲದಂತೆ ದೂಷಣೆ ಮಾಡುತ್ತಾರೆ. ಇದೆಲ್ಲವನ್ನೂ ಕೇಳಿಸಿಕೊಂಡ ಹೇಮಂತನಿಗೆ ಈ ಎಲ್ಲ ಅನಾಚಾರಗಳಿಗೆ ನಾನಾ ಕಾರಣ. ! ಈ ಜೀವನವೇ ಬೇಡ ಎಂದೆನಿಸಿ ಬಿಡುತ್ತದೆ. ಆದರೆ ತನ್ನ ಮಕ್ಕಳ ಮುಖ ನೋಡಿ, ತನ್ನ ನಿರ್ಧಾರವನ್ನು ಬದಲಿಸುತ್ತಾನೆ.

ಬಸವಮಾರ್ಗ ಬದುಕು ಬದಲಿಸಿತು…

ತಂದೆಯ ಸಾವಿನ ಬಳಿಕ ಹೇಮಂತ ಒಂದು ದಿನ ಒಬ್ಬನೆ ಕುಳಿತು ಯೋಚಿಸುತ್ತಾನೆ. ತನ್ನ ಜೀವನದಲ್ಲಿ ಕುಡಿತ ಏನೇಲ್ಲ ಅವಾಂತರ ಮಾಡಿತು ಎಂದು ಆತ್ಮವಿಮರ್ಶೆ ಮಾಡಿಕೊಳ್ಳುತ್ತಾನೆ. ತಂದೆಯ ಸಾವು, ಮಕ್ಕಳ ಹೆರಿಗೆ ಸಂದರ್ಭ, ಜೀವನದ ಏರಿಳಿತ, ಕುಟುಂಬ, ಸಮಾಜದ ತಿರಸ್ಕಾರ ಎಲ್ಲವನ್ನು ಯೋಚನೆ ಮಾಡುತ್ತಾನೆ ಹೇಮಂತ ! ತಾನು ತನ್ನ ಮಕ್ಕಳಿಗಾಗಿಯಾದರೂ ಈ ವ್ಯಸನವನ್ನು ತ್ಯಜಿಸಿ ಉತ್ತಮ ವ್ಯಕ್ತಿಯಾಗ ಬದಲಾಗಬೇಕು ಎಂದು ನಿರ್ಧಾರ ಮಾಡುತ್ತಾನೆ. ಕೊನೆಗೆ ಆತನ ನೆರವಿಗೆ ಬಂದದ್ದು ಮೈಸೂರಿನ  ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ. ಈ ಕೇಂದ್ರವನ್ನು ಸಂಪರ್ಕಿಸಿ ಇಲ್ಲಿ ಸೂಕ್ತ ಚಿಕಿತ್ಸೆ ಪಡೆದು, ಮನೆಗೆ ಮರಳುತ್ತಾನೆ.

ಹೇಮಂತ ಈಗ ಉತ್ತಮ ವ್ಯಕ್ತಿಯಾಗಿ ಬದಲಾಗಿದ್ದಾನೆ. ಕುಡಿತವನ್ನು ತ್ಯಜಿಸಿದ್ದಾನೆ. ಮನೆಯಲ್ಲಿ ಹೆಂಡತಿ, ಮಕ್ಕಳು, ತಾಯಿಯೊಂದಿಗೆ ಅನೋನ್ಯವಾಗಿ ಜೀವನ ಮಾಡುತ್ತಿದ್ದಾನೆ. ರಿಯಲ್ ಎಸ್ಟೇಟ್ ಉದ್ಯಮವನ್ನು ಮತ್ತೆ ಕೈಗೆತ್ತುಕೊಂಡು ಹಂತ, ಹಂತವಾಗಿ ಅಭಿವೃದ್ಧಿಯಾಗಿದ್ದಾನೆ. ನಾಲ್ಕಾರು ಕಾಸು ಸಂಪಾದನೆ ಮಾಡಿದ್ದಾನೆ. ಜೀವನ ಕಲಿಸಿದ ಪಾಠದಿಂದ ಎಚ್ಚೆತ್ತುಕೊಂಡ ಹೇಮಂತ ಈಗ ಒಬ್ಬ ಆದರ್ಶ ವ್ಯಕ್ತಿಯಾಗಿ ಬಾಳುತ್ತಿದ್ದಾನೆ. ಆದರೆ ತನ್ನ ತಂದೆಯನ್ನು ಸದಾ ಸ್ಮರಿಸುತ್ತಲೇ ಇರುತ್ತಾನೆ ಹೇಮಂತ !.

ಕೊನೆಮಾತು: ಶುಭವಾಗಲಿ ಹೇಮಂತ್ ! ಬೆಸ್ಟ್ ಆಫ್ ಲಕ್ !

 

admin
the authoradmin

Leave a Reply

Translate to any language you want