LatestMysore

ಬಸವಮಾರ್ಗದಲ್ಲಿ ಹುಣ್ಣಿಮೆ ಸಂಭ್ರಮ… ಲೋಕಕಲ್ಯಾಣಾರ್ಥ ಶಿವನಿಗೆ ಪೂಜೆ… ಜನರಿಗೆ ಅನ್ನ ದಾಸೋಹ…

ಮೈಸೂರು(ಹೆಚ್.ಪಿ.ನವೀನ್ ಕುಮಾರ್): ಹುಣ್ಣಿಮೆ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಬುಧವಾರ ಸಂಜೆ ವಿಶೇಷ ಧಾರ್ಮಿಕ ಪೂಜೆ ಮತ್ತು ಸಾವಿರಾರು ಜನರಿಗೆ ಅನ್ನ ದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಿಬಿರಾರ್ಥಿಗಳು, ಅವರ ಕುಟುಂಬ ವರ್ಗ ಹಾಗೂ ಲೋಕ ಕಲ್ಯಾಣಾರ್ಥವಾಗಿ ಸಂಸ್ಥೆಯ ಆವರಣದಲ್ಲಿ ಶಿವ, ಬಸವ ಹಾಗೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಕೈಂಕರ್ಯ ನಡೆಸಲಾಯಿತು. ಗಣಪತಿ ಪೂಜೆ, ಮಹಾ ಮೃತ್ಯುಂಜಯ ಪೂಜೆ, ಧನ್ವಂತರಿ ಪೂಜೆ, ನವಗ್ರಹ ಪೂಜೆ, ಶಿವ ಅಷ್ಟೋತ್ತರ ಪೂಜೆ, ಲಷ್ಮೀ ಪೂಜೆ, ಶಾರದಾ ಪೂಜೆ, ದುರ್ಗಾಪೂಜೆ ಸೇರಿದಂತೆ ಇಷ್ಟಾರ್ಥ ಸಿದ್ಧಿಗಾಗಿ ಮಹಾ ಪೂಜೆಗಳನ್ನು ಪುರೋಹಿತರಾದ ಸಾಗರ್ ಶರ್ಮ ಮತ್ತು ಪುರುಷೋತ್ತಮ್ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಾವಿರಾರು ಜನರಿಗೆ ಅನ್ನ ದಾಸೋಹ ನೆರವೇರಿಸಲಾಯಿತು. ಬಸವಮಾರ್ಗ ಸಂಸ್ಥೆಯಿಂದ ಚಿಕಿತ್ಸೆ ಪಡೆದು ಉತ್ತಮ ಜೀವನ ನಡೆಸುತ್ತಿರುವ ಶಿಬಿರಾರ್ಥಿಗಳು ಮತ್ತು ಅವರ ಕುಟುಂಬಸ್ಥರು ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ವೇಳೆ ಬಸವಮಾರ್ಗ ಸಂಸ್ಥೆಯ ಅಧ್ಯಕ್ಷ ಎಸ್. ಬಸವರಾಜು ಮಾತನಾಡಿ, ವ್ಯಸನ ಒಂದು ಮಾನಸಿಕ, ಆತ್ಮಿಕ ಮತ್ತು ದೈಹಿಕ ಕಾಯಿಲೆ. ಈ ಕಾಯಿಲೆಗೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರಕಿದರೆ ಮಾತ್ರ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅದರ ಹೊರತು ಈ ಕಾಯಿಲೆಯನ್ನು ವಾಸಿಮಾಡಲು ಸಾಧ್ಯವಿಲ್ಲ.

ಈ ಕಾಯಿಲೆಗೆ ಪ್ರಾರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ವ್ಯಸನಿ ಮಾನಸಿಕ ತೊಂದರೆಗಳಿಗೆ ಒಳಪಟ್ಟು ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿ  ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಕುಡಿತ ಅಥವಾ ಯಾವುದೇ ವ್ಯಸನ ಒಂದು ಕಾಯಿಲೆ ಎಂದು ಇದಕ್ಕೆ ಬಲಿಯಾದ ವ್ಯಸನಿಗೂ ಹಾಗೂ ಕುಟುಂಬಕ್ಕೂ ಕೂಡ ಅರಿವಿಗೆ ಬರುವುದಿಲ್ಲ. ಬಂದರೂ ಅದು ತೀರ ಕಡಿಮೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಪರ್ಯಾಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯತೆ ಇದೆ.

ಕುಡಿತ ಅಥವಾ ಇತರೆ ಯಾವುದೇ ವ್ಯಸನಕ್ಕೆ ದಾಸನಾದ ವ್ಯಕ್ತಿಯು ಸಮಾಜದಲ್ಲಿ ಎಲ್ಲರಿಂದಲೂ ತಿರಸ್ಕಾರ ಒಳಪಡುತ್ತಾನೆ. ಮನೆಯಿಂದಲೂ ಆತನಿಗೆ ಮೋಸವಾಗುವ ಉದಾಹರಣೆಗಳು ಇದೆ. ಎಲ್ಲ ಕಡೆಯಿಂದಲೂ ಮೋಸಕ್ಕೆ ಒಳಗಾಗಿ ನಮ್ಮಲ್ಲಿಗೆ ಚಿಕಿತ್ಸೆಗೆಂದು ಬರುವ ವ್ಯಸನಿಗೆ ಇಲ್ಲಿಯೂ ಮೋಸವಾಗಬಾರದು. ಇಲ್ಲಿ ಆತನಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಹಾಗೂ ಚಿಕಿತ್ಸೆ ಸಿಗಬೇಕು. ಮನಃಪರಿವರ್ತನೆಗೆ ಪ್ರಮುಖ ಮಾರ್ಗೋಪಯಗಳನ್ನು ಕಲ್ಪಿಸಿಕೊಡಬೇಕು. ಆ ನಿಟ್ಟಿನಲ್ಲಿ ಆತ ಎಲ್ಲರಂತೆ ಸಮಾಜದಲ್ಲಿ ಬಾಳಬೇಕು ಎನ್ನುವ  ನಿಟ್ಟಿನಲ್ಲಿ ನಮ್ಮಲ್ಲಿಯ ಶಿಬಿರಾರ್ಥಿಗಳಿಗೆ ನಿರಂತರವಾಗಿ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.

ವ್ಯಸನಕ್ಕೆ ದಾಸನಾದ ವ್ಯಕ್ತಿಯ ಎಲ್ಲರಿಂದಲೂ ದೂರವಾಗುತ್ತಾನೆ. ಕೊನೆಗೆ ಭಗವಂತನಿಂದಲೂ ದೂರವಾಗುತ್ತಾನೆ. ಆದರೆ ಭಗವಂತ ಮಾತ್ರ ವ್ಯಸನಿಯನ್ನು ಎಂದಿಗೂ ಕೈ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಭಗವಂತನನ್ನು ಮತ್ತೆ ಸೇರುವ ಸಲುವಾಗಿ ಸಂತ್ಸಂಗದ ಹಾದಿಯನ್ನು ಬಿಗಿಯಾಗಿ ಹಿಡಿದುಕೊಳ್ಳುವುದು ವ್ಯಸನಿಗಳಿಗೆ ಅತ್ಯವಶ್ಯಕ. ಆದ್ದರಿಂದಲೇ ಬಸವಮಾರ್ಗ ಸಂಸ್ಥೆಯಲ್ಲಿ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಶಿವನನ್ನು ಪ್ರತಿಷ್ಠಾಪನೆ ಮಾಡಿ ಹೋಮ, ಹವನ ಮಾಡಲಾಗುತ್ತದೆ. ಜೊತೆಗೆ ವ್ಯಸನಿಗಳ ಭಯ, ಆತಂಕ, ಬಡತನ, ದಾರಿದ್ರ್ಯ, ಸೋಮಾರಿತ, ಆಲಸ್ಯ ತೊಲಗಲಿ. ಉತ್ತಮ ಜೀವನ ಮಾರ್ಗ ವ್ಯಸನಿಗಳಿಗೆ ಸಿಕ್ಕಿ ಕುಟುಂಬ ಹಾಗೂ ಸಮಾಜದಲ್ಲಿ ಶಾಂತಿ ಸ್ಥಾಪನೆಯಾಗಲಿ ಎಂದು ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಇದರ ಜತೆಗೆ ಈ ಸಂದರ್ಭದಲ್ಲೇ ಸಾವಿರರು ಜನರಿಗೆ ಅನ್ನ ದಾಸೋಹ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಮಹೇಶ್, ಸಿಬ್ಬಂದಿ ರಾಕೇಶ್, ಮಂಜುನಾಥ್, ಮಧು, ರಾಘವೇಂದ್ರ, ಅಭಿಷೇಕ್, ಶ್ರೀಧರ್, ಸಂಜಯ್, ಗಗನ್, ನಿಶ್ಚಿತಾ, ಉಷಾರಾಣಿ, ಮೋನಿಷಾ, ಅರ್ಚಿತ್ ರಾಮ್, ಮನೋಜ್, ವಸಂತ್, ನೇತ್ರಾವತಿ, ನಂದೀಶ್, ಬಸವರಾಜು, ಗೋವಿಂದ್, ಆಕಾಶ್, ಪವನ್,  ಮಲ್ಲಿಕಾರ್ಜಿನ್, ಅಭಿ, ಗಗನ್, ಪ್ರಜ್ವಲ್, ರಾಜು ಇತರರು ಇದ್ದರು.

admin
the authoradmin

Leave a Reply

Translate to any language you want