District

ಸರಗೂರಿನಲ್ಲಿ ಬೌ ಬೌ ಹಾವಳಿಗೆ ಬೆಚ್ಚಿಬಿದ್ದ ಜನ… ಸಂಬಂಧಿಸಿದವರು ಕ್ರಮ ಕೈಗೊಳ್ಳುವುದು ಯಾವಾಗ?

ಸರಗೂರು: ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರು ಪಟ್ಟಣದಲ್ಲಿ ಅಡ್ಡಾಡಲು ಭಯಪಡುವಂತಾಗಿದೆ. ಅದರಲ್ಲೂ ಮಕ್ಕಳು ನೆಮ್ಮದಿಯಾಗಿ ಓಡಾಡಲು ಸಾಧ್ಯವಿಲ್ಲದಂತಾಗಿದೆ. ಹೀಗಿದ್ದರೂ ಅವುಗಳ  ನಿಯಂತ್ರಣ ಮಾಡುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಪಟ್ಟಣ ವ್ಯಾಪ್ತಿಯ ಎಲ್ಲಾ ವಾರ್ಡಿನಲ್ಲೂ ನಿತ್ಯವೂ 15 ರಿಂದ 20 ಬೀದಿ ನಾಯಿಗಳು ಗುಂಪು ಗುಂಪಾಗಿ ಒಟ್ಟೊಟ್ಟಿಗೆ ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ಮಕ್ಕಳು, ಮಹಿಳೆಯರು, ವಯಸ್ಸಾದವರು ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಎಂಟನೇ ವಾರ್ಡ್ ನಲ್ಲಿ ಲಾರಿ ಚಾಲಕರಾದ ಮನ್ಸೂರ್ ರವರಿಗೆ ಸೇರಿದ ಕೋಳಿಯೊಂದನ್ನು ನಾಯಿಗಳು ಹಿಡಿದು ಸಾಯಿಸಿರುತ್ತವೆ. ಇದನ್ನು ಸಾರ್ವಜನಿಕರು ಅಟ್ಟಾಡಿಸಿ ಸತ್ತಿರುವ ಕೋಳಿಯನ್ನು ರಕ್ಷಿಸಿ ಚರಂಡಿಗೆ ಬೀಸಾಡಿದ್ದಾರೆ.

ಇದೇ ರೀತಿ ಏಳನೇ ವಾರ್ಡ್ ನಲ್ಲಿ ಅಂಗಡಿ ಮುಂಭಾಗ ಪತ್ರಿಕೆಯ ವಿತರಕರು, ಪತ್ರಿಕೆಯನ್ನು ಅಂಗಡಿಯ ಬಾಗಿಲಿನ ಚಿಲಕಕ್ಕೆ ಹಾಕಿ ಬೇರೆ ಅಂಗಡಿ ಕಡೆ ಹೋದಾಗ ನಾಯಿಗಳು ಪತ್ರಿಕೆಯನ್ನು ಹರಿದು ಚೂರು ಚೂರು ಮಾಡಿರುತ್ತವೆ. ಒಟ್ಟಾರೆ ಎಲ್ಲಾ ಬೀದಿಗಳಲ್ಲಿ ಯೂ ನಾಯಿಗಳ ಸಂತಾನ ಜಾಸ್ತಿಯಾಗಿದ್ದು, ಒಂದೊಂದು ನಾಯಿ ಮರಿಗಳು ಆರರಿಂದ ಏಳು ಮರಿಗಳು ಹಾಕಿರುತ್ತವೆ. ಹಾಗಾಗಿ ನಾಯಿ ಮರಿಗಳ ಸಂತತಿ ಜಾಸ್ತಿಯಾಗಿದ್ದು, ಇವುಗಳು ಬೆಳೆದು ದೊಡ್ಡವಾಗುತ್ತಿದ್ದಂತೆಯೇ ಮತ್ತೆ ಮರಿಹಾಕುತ್ತಾ ಸಂತಾನ ಜಾಸ್ತಿ ಮಾಡುತ್ತಿವೆ.

ನಾಯಿಗಳ ಗುಂಪನ್ನು ನೋಡಿದರೆ ದೊಡ್ಡವರಿಗೆ ತಲೆಯೆಲ್ಲಾ  ಜುಮ್ ಎನ್ನುವ ಪರಿಸ್ಥಿತಿ ಉಂಟಾಗುತ್ತದೆ. ಅದರೆ ಮಕ್ಕಳ ಗತಿ ಏನು ಎಂಬುದು ಸಂಶಯಾಸ್ಪದ. ಇದರ ಬಗ್ಗೆ ಪ್ರಾಣಿ ಪ್ರಿಯರು ತಿಳಿದುಕೊಳ್ಳಬೇಕಾದ ವಿಚಾರವಾಗಿದೆ. ಇನ್ನು ನಾಯಿಗಳ ಜತೆಗೆ  ಕೋತಿಗಳು ಕೆಲವು ವಾರ್ಡ್ ಗಳಲ್ಲಿ ಮನೆ ಮನೆ ಒಳಗೆ ನುಗ್ಗಿ ಮನೆಯಲ್ಲಿದ್ದ ಪದಾರ್ಥಗಳನ್ನು ಹೊತ್ತು ಒಯ್ಯುತ್ತಿವೆ. ಇದರಿಂದಾಗಿ ಜನರು ಇನ್ನಷ್ಟು ಹಿಂಸೆ ಅನುಭವಿಸುವಂತಾಗಿದೆ. ಇಲ್ಲಿನ ಬಸ್ ನಿಲ್ದಾಣದಲ್ಲಿ ಹಾಗೂ ರಸ್ತೆಗಳಲ್ಲಿ ಮಕ್ಕಳು, ದೊಡ್ಡವರ ಮೇಲೆ, ಆಡು ಕುರಿಗಳ, ಹಸು ಕರುಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಾಳುಗಳಾಗುವಂತೆ ಮಾಡಿವೆ

ಇದಲ್ಲದೆ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ತೆರಳುವವರಂತೂ ಬೀದಿ ನಾಯಿಗಳಿಂದ ಜೀವ ಕೈಯಲ್ಲಿ ಹಿಡಿದು ಕೆಲವರು ದೊಣ್ಣೆ, ಕಡ್ಡಿಗಳನ್ನು ಹಿಡಿದು ನಡೆದಾಡುವ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಭಯ ಪಡುವಂತಾಗಿದೆ. ಪ್ರಯಾಣಿಕರು ದೂರದ ಊರುಗಳಿಗೆ ತೆರಳಲು ಬೆಳಿಗ್ಗೆ 5 ಗಂಟೆ ವೇಳೆಗೆ ಬಸ್ ನಿಲ್ದಾಣಕ್ಕೆ ಬಂದಾಗ ಬೀದಿ ನಾಯಿಗಳ ಹಿಂಡನ್ನು ಕಂಡು ಬೆಚ್ಚಿ ಬೀಳುವಂತಾಗಿದೆ.

ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡುವಂತೆ ಹಲವಾರು ಬಾರಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ, ಅಧ್ಯಕ್ಷರು, ಸದಸ್ಯರುಗಳಿಗೆ ತಿಳಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಜನಪ್ರತಿನಿದಿಗಳು ತಮ್ಮ ವೈಯಕ್ತಿಕ ಕೆಲಸಗಳಿಗೆ ಪಟ್ಟಣ ಪಂಚಾಯಿತಿಯಲ್ಲಿ ಹೆಚ್ಚು ಒತ್ತು ನೀಡುವುದರಿಂದ ಇಂತಹ ಅನೇಕ ಸಮಸ್ಯೆಗಳು ಗೌಣವಾಗುತ್ತಿದ್ದು ಜನಸಾಮಾನ್ಯರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈಗಲಾದರೂ ಸಂಬಂಧಪಟ್ಟವರು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.

ಆಯಾಯ ರಸ್ತೆಗಳಲ್ಲಿ ಪತ್ರಿಕೆ ವಿತರಿಸುವ ಹುಡುಗರನ್ನು ಅಟ್ಟಾಡಿಸಿಕೊಂಡು ಬಂದು ಬಿದ್ದಿರುವ ಘಟನೆಗಳು ನಡೆದಿವೆ. ಇದರಿಂದ  ಪತ್ರಿಕೆ ವಿತರಿಸಲು ಯಾರು ಬರುತ್ತಿಲ್ಲ ಎನ್ನುವುದು ಪತ್ರಿಕಾ ವಿತರಕರ ದೂರಾಗಿದೆ. ಸಾರ್ವಜನಿಕರು ಬೈಕ್ ನಲ್ಲಿ ಹೋಗುವಾಗ ಬೈಕ್ ನ್ನೆ ಹಿಮ್ಮೆಟ್ಟಿಕೊಂಡು ಬರುತ್ತವೆ, ಇದರಿಂದ ತೊಂದರೆಗಳಾಗುತ್ತಿವೆ.

ಸನ್ಮತಿ ಪೆಟ್ರೋಲ್ ಬಂಕ್ ನ ಗೋವಿಂದರಾಜು(ಚಿಕು) ಮಾತನಾಡಿ ಬೀದಿ ನಾಯಿಗಳ ಹಾವಳಿಯಿಂದ ಬೈಕ್ ನಲ್ಲಿ ಹೋಗುತ್ತಿದ್ದರೆ ನಾಯಿಗಳು ಬೈಕ್ ಸವಾರರನ್ನು ಅಟ್ಟಾಡಿಸಿಕೊಂಡು ಬೈಕ್ ನ್ನೆ ಪಾಲೋ ಮಾಡುತ್ತವೆ, ಆದ್ದರಿಂದ ಯಾವ ರೀತಿ ಓಡಾಡುವುದೇ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ನಡುವೆ ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸರಗೂರು  ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಸ್. ಕೆ ಸಂತೋಷ್ ಕುಮಾರ್, ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಜನರ ಮೇಲೆ ದಾಳಿ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಲು ಟೆಂಡರ್ ಪ್ರಕ್ರಿಯೆಗೆ  ಆಹ್ವಾನಿಸಲಾಗಿದೆ ಈ ಸಂಬಂಧ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಚರ್ಚೆ ಮಾಡಿ ಅವುಗಳನ್ನು ಶಸ್ತ್ರ ಚಿಕಿತ್ಸೆ ಮುಖಾಂತರ ಇದನ್ನು ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಅದು ಏನೇ ಇರಲಿ ಇನ್ನಾದರೂ  ಬಸ್ ನಿಲ್ದಾಣ, ಮುಖ್ಯ ರಸ್ತೆ ಗಳಲ್ಲಿ ಗುಂಪು ಗುಂಪಾಗಿ ಸೇರಿ ಸಾರ್ವಜನಿಕರಿಗೆ ತೊಂದರೆ ಕೊಡುವ ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಸಂಬಂಧಿಸಿದವರು ಮುಂದಾಗಲಿ ಎನ್ನುವುದೇ ನಮ್ಮ ಮನವಿಯಾಗಿದೆ.

admin
the authoradmin

Leave a Reply