ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ… ಅಂತಹದೊಂದು ನಿರ್ಧಾರ ಮಾಡಿದ್ದೇಕೆ?

ಮಕ್ಕಳಿಗೆ ಜನ್ಮಕೊಡುವ ತಾಯಿ ಮಕ್ಕಳ ಬಗ್ಗೆ ಹತ್ತಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ಆದರೆ ಆ ಕನಸು ನನಸಾಗುವ ಮುನ್ನವೇ ಕೆಲವೊಮ್ಮೆ ಬದುಕಿನಲ್ಲಿ ನಿರಾಸೆಯ ಕಾರ್ಮೋಡ ಕವಿದು ಬದುಕೇ ಬೇಡವೆನ್ನುವ ಮಟ್ಟಕ್ಕೆ ಹೋಗಿ ಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಧೈರ್ಯವನ್ನು ತಂದುಕೊಂಡು ಬದುಕನ್ನು ಮುನ್ನಡೆಸಬೇಕೇ ವಿನಃ ಆತ್ಮಹತ್ಯೆಗೆ ಶರಣಾಗಿ ಬಿಡುವುದಲ್ಲ… ಇವತ್ತು ಮೈಸೂರು ಜಿಲ್ಲೆಯ ಬೆಟ್ಟದಪುರದಲ್ಲಿ ತಾಯಿಯೊಬ್ಬಳು ಮಕ್ಕಳ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ. ಇಷ್ಟಕ್ಕೂ ಅವಳು ಏಕೆ ಅಂಥದೊಂದು ಕೃತ್ಯಕ್ಕೆ ಮುಂದಾದಳು ಎಂಬುದನ್ನು ನೋಡುತ್ತಾ ಹೋದರೆ ತಾಯಿಯೊಬ್ಬಳ ಒಡಲಾಳದ ನೋವು ಮತ್ತು ಕಷ್ಟದ ಬದುಕು ಮಕ್ಕಳಿಗೆ ಬೇಡವೆನ್ನುವ ನಿರ್ಧಾರ ಎದ್ದು ಕಾಣಿಸುತ್ತದೆ.
ಇವತ್ತು ಆತ್ಮಹತ್ಯೆಗಳು ಬೇರೆ, ಬೇರೆ ಕಾರಣಗಳಿಗೆ ನಡೆಯುತ್ತಿರುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಹೆತ್ತ ತಾಯಂದಿರು ತಮ್ಮ ಬದುಕಿಗೆ ಇತಿಶ್ರೀ ಹೇಳುವ ಮುನ್ನ ತಾವು ಸತ್ತು ಮಕ್ಕಳು ಉಳಿದರೆ ಅವರು ತಬ್ಬಲಿಗಳಾಗುತ್ತಾರೆ. ಅವರು ಕಷ್ಟದಲ್ಲಿಯೇ ಬದುಕಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹದೊಂದು ಘಟನೆಗಳು ಬಹಳಷ್ಟು ನಡೆಯುತ್ತವೆ. ಇನ್ನಷ್ಟು ಪ್ರಕರಣಗಳಲ್ಲಿ ಮಕ್ಕಳನ್ನು ಬಿಟ್ಟು ತಾಯಿಂದಿರು ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಮಕ್ಕಳು ಅನುಭವಿಸುವ ಕಷ್ಟಕೋಟಲೆಗಳು ನಮ್ಮ ಮುಂದೆ ಕಾಣಿಸುತ್ತಿರುತ್ತದೆ.

ಯಾವ ತಾಯಿಯೂ ಮಕ್ಕಳನ್ನು ಬಿಟ್ಟು ಅಥವಾ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಯತೆ ತೋರುವುದಿಲ್ಲ. ಸಂಸಾರದಲ್ಲಿ ಯಾರ ಪ್ರೀತಿ ಸಿಗದಿದ್ದರೂ ಕಟ್ಟಿಕೊಂಡ ಗಂಡ ತನ್ನ ಪರವಾಗಿ ನಿಲ್ಲುತ್ತಾನೆ ಎಂಬ ಧೈರ್ಯವಿದ್ದರೆ ಯಾವ ಹೆಣ್ಣು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿಕೊಳ್ಳುವುದಿಲ್ಲ. ಎಲ್ಲರೂ ತನ್ನ ವಿರುದ್ಧ ನಿಂತಾಗ ಗಂಡನೂ ಹೆಂಡತಿಯ ಕಷ್ಟವನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದರೆ ಅವಳಿಗೆ ಆಕಾಶವೇ ಕಳಚಿ ಬಿದ್ದ ಅನುಭವವಾಗುತ್ತದೆ. ತಾನು ಏಕಾಂಗಿ, ನನಗೆ ಯಾರಿಲ್ಲ ಎಂಬ ಮಾನಸಿಕ ನೋವು ಕಾಡಲಾರಂಭಿಸುತ್ತದೆ. ಇಂತಹ ಸಂದರ್ಭಗಳಲ್ಲಿ ತಾನು ಹೊತ್ತುಕೊಂಡಿದ್ದ ಕನಸನ್ನು ಗಾಳಿಗೆ ತೂರುತ್ತಾಳೆ. ಬದುಕುವ ಆಸೆಯನ್ನೇ ಕಳೆದುಕೊಳ್ಳುತ್ತಾಳೆ..
ಒಮ್ಮೆ ಮನಸಿನಲ್ಲಿ ಆತ್ಮಹತ್ಯೆ ನಿರ್ಧಾರ ಮಾಡಿಬಿಟ್ಟರೆ ಅವರು ಮೇಲ್ನೋಟಕ್ಕೆ ಎಲ್ಲರೊಂದಿಗೂ ಲವಲವಿಕೆಯಿಂದ ಇದ್ದಂತೆ ಕಂಡರೂ ಒಳಗೊಳಗೆ ತನ್ನ ಸಾವಿಗೆ ತಾನೇ ಮುಹೂರ್ತ ಫಿಕ್ಸ್ ಮಾಡಿಕೊಳ್ಳಲು ಆರಂಭಿಸಿರುತ್ತಾರೆ. ಹೊರ ಜಗತ್ತಿಗೆ ಗೊತ್ತೇ ಆಗದಂತೆ ಕೈಗೊಳ್ಳುವ ಆ ನಿರ್ಧಾರ ಯಾರಿಗೂ ತಿಳಿಯಬಾರದು ಎಂಬುದನ್ನು ಮೊದಲೇ ಮಾಡಿಕೊಳ್ಳುವುದರಿಂದ ತನ್ನ ಎದುರು ಸಿಕ್ಕವರೊಂದಿಗೆ ಖುಷಿ, ಖುಷಿಯಾಗಿಯೇ ಇರುತ್ತಾರೆ. ಹೀಗಾಗಿ ಇಂತಹ ಪ್ರಕರಣಗಳು ನಡೆದಾಗ ನಿನ್ನೆಯಷ್ಟೇ ಸಿಕ್ಕಿದಾಗ ಖುಷಿಯಾಗಿ ಮಾತಾಡಿದ್ದಳು.. ಇವತ್ತು ಹೀಗೆ ಮಾಡಿಕೊಂಡಿದ್ದಾಳೆ ಎಂದು ಜನ ಮಾತಾಡುವುದನ್ನು ನಾವು ಕೇಳುತ್ತಿರುತ್ತೇವೆ. ಬೆಟ್ಟದಪುರದಲ್ಲಿ ನಡೆದ ಘಟನೆಯಲ್ಲಿಯೂ ಅದೇ ಆಗಿದೆ..

ಇನ್ನು ಬದಲಾದ ಕಾಲದಲ್ಲಿಯೂ ಆತ್ಮಹತ್ಯೆಗಳು ನಿಂತಿಲ್ಲ. ಇದಕ್ಕೆ ನಿರ್ಧಿಷ್ಟ ಕಾರಣಗಳು ಇರುವುದೇ ಇಲ್ಲ. ಕೆಲವೊಮ್ಮೆ ಚಿಕ್ಕಪುಟ್ಟ ವಿಚಾರಕ್ಕೂ ಆತ್ಮಹತ್ಯೆಗಳು ನಡೆದುಹೋಗುತ್ತದೆ. ಆದರೆ ಇವತ್ತು ಬೆಟ್ಟದಪುರದಲ್ಲಿ ಮಕ್ಕಳ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ರಬಿಯಾ ಭಾನು ವಿಚಾರದಲ್ಲಿ ಇದು ಬಹಳಷ್ಟು ಯೋಚಿಸಿಯೇ ಮಾಡಿಕೊಂಡ ನಿರ್ಧಾರ ಎಂಬುದು ಗೊತ್ತಾಗಿ ಬಿಡುತ್ತದೆ. ಇಷ್ಟಕ್ಕೂ ಎರಡು ಹೆಣ್ಣು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಆಕೆ ಬಂದಿದ್ದೇಕೆ?
ಬೆಟ್ಟದಪುರದ ಮಸ್ಲಿಂಬ್ಲಾಕ್ ನ ಜನ ಇನ್ನೂ ಕೂಡ ಆ ಶಾಕ್ ನಿಂದ ಹೊರ ಬಂದಿಲ್ಲ. ಅವರಿಗೆ ಬಾಳಿ ಬದುಕ ಬೇಕಾಗಿದ್ದ ಹೆಣ್ಣುಮಗಳು ಮಕ್ಕಳೊಂದಿಗೆ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದ ದೃಶ್ಯಗಳು ಕಣ್ಮುಂದೆ ಹಾಗೆಯೇ ಉಳಿದು ಹೋಗಿವೆ. ಸದ್ಯಕ್ಕೆ ಮೌನ ನೆಲೆಸಿದೆ. ಆಕೆ ಹಾಗೆ ಮಾಡಬಾರದಿತ್ತು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಅದು ನಿಜವೂ ಹೌದು.. ಆಕೆ ಮತ್ತು ಮಕ್ಕಳ ಬದುಕು ನಾಳೆ ಹೇಗಿತ್ತೋ ಗೊತ್ತಿಲ್ಲ. ಆದರೆ ತಾನು ಅನುಭವಿಸುವ ನೋವು ಮಕ್ಕಳಿಗೆ ಬೇಡ ಎನ್ನುವ ಕಠಿಣ ನಿರ್ಧಾರಕ್ಕೆ ರಬಿಯಾ ಬಾನು ಬಂದು ಬಿಟ್ಟಿದ್ದಳು. ಹೀಗಾಗಿಯೇ 2 ವರ್ಷದ ಅನಮ್ ಫಾತಿಮಾ ಮತ್ತು ಕೇವಲ 8 ದಿನಗಳ ಹಿಂದೆ ಹುಟ್ಟಿದ್ದ ಹಸುಗೂಸು ಪ್ರಾಣವನ್ನು ಚೆಲ್ಲುವಂತಾಗಿದೆ.

ಮಕ್ಕಳಿಲ್ಲದ ಅದೆಷ್ಟೋ ದಂಪತಿಗಳು ಮಕ್ಕಳಿಗಾಗಿ ಪರದಾಡುತ್ತಿರುವಾಗ ಹುಟ್ಟಿದ ಮಕ್ಕಳನ್ನು ಕೊಂದ ಆಕೆಯ ಬಗ್ಗೆ ಏನೇ ಮಾತಾಡಿದರೂ ಆಕೆ ಅಂಥ ಕೃತ್ಯ ಎಸಗಬೇಕಾದರೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು ಎನ್ನುವುದು ಅಷ್ಟೇ ಸತ್ಯ. ರಬಿಯಾ ಬಾನು ಬಗ್ಗೆ ಹೇಳಬೇಕೆಂದರೆ ಬೆಟ್ಟದಪುರ ಮುಸ್ಲಿಂ ಬ್ಲಾಕ್ ನ ನಿವಾಸಿಯಾಗಿದ್ದ ಇಪ್ಪತ್ತೊಂದು ವರ್ಷದ ಈಕೆಯನ್ನು 3 ವರ್ಷಗಳ ಹಿಂದೆ ಸೈಯದ್ ಮುಸಾವೀರ್ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆ ಅನಮ್ ಫಾತಿಮಾ ಎಂಬ ಹೆಣ್ಣು ಮಗುವಿಗೆ ರಬಿಯಾ ಬಾನು ಜನ್ಮ ನೀಡಿದ್ದಳು. ಆದರೆ ಅದು ವಿಕಲಚೇತನ ಮಗುವಾಗಿತ್ತು. ಹೀಗಿರುವಾಗಲೇ ಮತ್ತೊಮ್ಮೆ ಗರ್ಭಿಣಿಯಾಗಿದ್ದ ಈಕೆ ತವರು ಮನೆ ಬೆಟ್ಟದಪುರಕ್ಕೆ ಬಂದಿದ್ದು ಇಲ್ಲಿಯೇ ಇನ್ನೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಗಂಡು ಮಗುವನ್ನು ಬಯಸುವವರ ನಡುವೆ ಮತ್ತೊಂದು ಮಗು ಕೂಡ ಹೆಣ್ಣಾಗಿರುವುದು ಕುಟುಂಬದಲ್ಲಿ ಬೇಸರ ತರಿಸಿತ್ತು. ಮೊದಲ ಹೆಣ್ಣು ಮಗು ವಿಕಲಚೇತನ, ಎರಡನೇ ಮಗು ಗಂಡಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಅದು ಹೆಣ್ಣಾಗಿತ್ತು. ಹೀಗಾಗಿ ಮಗುವನ್ನು ಹೆತ್ತ ರಬಿಯಾಬಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಮುಂದೇನಾಗುತ್ತೋ ಎಂಬ ಭಯವೂ ಆಕೆಯನ್ನು ಕಾಡಲಾರಂಭಿಸಿತ್ತು. ಆದರೆ ಆ ಬಗ್ಗೆ ತೋರಿಸಿಕೊಳ್ಳದ ಆಕೆ ನೋವಿನಲ್ಲಿದ್ದಳು. ಹೆತ್ತವರು ಮಗಳಿಗೆ ಬಾಣಂತನ ಮಾಡುವುದರೊಂದಿಗೆ ಮಗಳು ಮತ್ತು ಮಗುವಿನ ಆರೋಗ್ಯದ ಕಡೆಗೆ ಗಮನಹರಿಸಿದ್ದಳು. ಹೆರಿಗೆಯಾಗಿ ಎಂಟು ದಿನವಾಗಿದ್ದರೂ ಮಗಳ ಮನಸ್ಸಿನಲ್ಲಿ ಅಂಥದೊಂದು ಆಲೋಚನೆ ಬಂದಿದೆ ಎಂಬುದೇ ಅವರಿಗೆ ಗೊತ್ತಾಗಿರಲಿಲ್ಲ. ಆದರೆ ಮಗಳಿಗೆ ಬೇಸರವಿದೆ ಎಂಬುದು ಅರ್ಥವಾಗಿತ್ತು. ಸಮಾಧಾನ ಮಾಡುತ್ತಾ ಬಂದಿದ್ದರು.

ಈ ನಡುವೆ ಅದೇನಾಯಿತೋ ರಬಿಯಾಬಾನು ಮಂಕಾಗಿದ್ದಳು. ಆಕೆಯ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಮನೆಯವರು ಮತ್ತು ಅಕ್ಕಪಕ್ಕದವರು ವಿಫಲರಾಗಿದ್ದರು. ಆದರೆ ಇನ್ನೂ ಕೇವಲ 22 ವರ್ಷ ವಯಸ್ಸಿನ ಆಕೆ ಬದುಕಿ ಬಾಳಬೇಕಿತ್ತು. ಹೆಣ್ಣು ಮಕ್ಕಳಾದರೂ ಅವರನ್ನು ಸಾಕಿ ಸಲಹಿ ಗಂಡು ಮಕ್ಕಳಿಗೆ ಕಡಿಮೆ ಇಲ್ಲದಂತೆ ಬೆಳೆಸುವ ಗಟ್ಟಿತನ ತೋರಬೇಕಾಗಿತ್ತು. ಆದರೆ ಆಕೆ ಅದ್ಯಾವುದರ ಬಗ್ಗೆ ಆಲೋಚಿಸಲೇ ಇಲ್ಲ. ಚಿಕ್ಕ ವಯಸ್ಸಿಗೆ ಯಾರೂ ಯೋಚಿಸದ ನಿರ್ಧಾರ ಮಾಡಿದ ಅವಳು ಅವತ್ತು ಮಕ್ಕಳನ್ನು ಮುಗಿಸಿ ತಾನು ಇಹಲೋಕ ತ್ಯಜಿಸುವ ತೀರ್ಮಾನವನ್ನು ಒಳಗೊಳಗೆ ಮಾಡಿಯೇ ಬಿಟ್ಟಿದ್ದಳು.
ಅಕ್ಟೋಬರ್ 31ರಂದು ರಾತ್ರಿಯೇ ದೃಢ ನಿರ್ಧಾರವೊಂದನ್ನು ಮಾಡಿ ಬಿಟ್ಟಿದ್ದಳು. ತನಗೂ ತನ್ನ ಮಕ್ಕಳಿಗೂ ಈ ಬದುಕು ಸಾಕು ಎಂದ ಅವಳು ನಿರ್ಧಯಿಯಾಗಿ ಬಿಟ್ಟಿದ್ದಳು. ಕೋಣೆಯ ಬಾಗಿಲು ಭದ್ರಪಡಿಸಿದ ಅವಳು ಮೊದಲಿಗೆ ಮಕ್ಕಳ ಕತ್ತನ್ನು ಕೊಯ್ದು ಕೊಲೆಗೈದ ಅವಳು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೆಲ್ಲವೂ ಮನೆಯಲ್ಲಿ ಯಾರಿಗೂ ಸ್ವಲ್ಪವೂ ಗೊತ್ತಾಗದಂತೆ ನಡೆದು ಹೋಗಿದೆ.
ಅವತ್ತು ನವೆಂಬರ್ 1 ಶನಿವಾರ ಬೆಳಿಗ್ಗೆ 9ಗಂಟೆಯಾದರೂ ಕೋಣೆಯಿಂದ ಯಾವುದೇ ಶಬ್ದ ಬಾರದೆ ಇದ್ದಾಗ ಬಾಗಿಲು ತಟ್ಟಿ ಕರೆದರೂ ಬಾಗಿಲು ತೆರೆಯದೆ ಇದ್ದಾಗ ಕಿಟಿಕಿಯ ಮೂಲಕ ಪೋಷಕರು ಒಳಗೆ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಕ್ಕಳು ಮತ್ತು ರಬಿಯಾ ಬಾನು ಕಾಣಿಸಿದ್ದಾರೆ. ಆ ಕ್ಷಣಕ್ಕೆ ಇಡೀ ಆಕಾಶವೇ ಅವರ ಮೇಲೆ ಕಳಚಿ ಬಿದ್ದಂತಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಅತ್ತ ಧಾವಿಸಿದ್ದಾರೆ. ಅಲ್ಲದೆ ಬೆಟ್ಟದಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಯಾರೇ ಆಗಲಿ ಇಂತಹ ಕೃತ್ಯಕ್ಕೆ ಕೈಹಾಕದಿರಲಿ ಎನ್ನುವುದೇ ನಮ್ಮ ಕಳಕಳಿಯಾಗಿದೆ.







