CinemaLatest

`ಬಂಧಮುಕ್ತ’ ಚಲನಚಿತ್ರದ ಟ್ರೈಲರ್ ಬಿಡುಗಡೆ.. ಇದು ಯುವತಿಯೊಬ್ಬಳ ಹೋರಾಟದ ಕಥೆ.. ಯಾವಾಗ ತೆರೆಗೆ?

ಹುಬ್ಬಳ್ಳಿ: ಸಮರ್ಥ ಫಿಲ್ಮ್ಸ್  ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಪತ್ರಕರ್ತ, ಲೇಖಕ ಕುಮಾರ ಬೇಂದ್ರೆ ನಿರ್ದೇಶನದ   `ಬಂಧಮುಕ್ತ’ ಚಲನಚಿತ್ರದ ಟ್ರೈಲರ್ ಅನ್ನು ಹಿರಿಯ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು ಸಮಾಜಕ್ಕೆ ಉತ್ತಮ ಹಾಗೂ ಆರೋಗ್ಯಪೂರ್ಣ ಸಂದೇಶ ನೀಡುವಂತಹ ಚಲನಚಿತ್ರವನ್ನು ಕುಮಾರ ಬೇಂದ್ರೆ ನಿರ್ದೇಶನ ಮಾಡಿದ್ದಾರೆ. ಪುರುಷನ ದಬ್ಬಾಳಿಕೆ ಮತ್ತು ಸಂಕೋಲೆಗಳ ವಿರುದ್ಧ ದಿಟ್ಟ ಯುವತಿಯೊಬ್ಬಳು ಹೋರಾಟ ಮಾಡಿ, ತನ್ನ ಬದುಕನ್ನು ಸಂಕೋಲೆಯಿಂದ ಮುಕ್ತಗೊಳಿಸುವ ಈ ಚಿತ್ರದ ಕಥೆಯು ಸಮಾಜಕ್ಕೆ ಮಾದರಿ ಆಗಬಲ್ಲದು ಎಂದರು. ಚಿತ್ರದ ನಿರ್ಮಾಪಕ ಶಿವಪುತ್ರಪ್ಪ ಆರ್. ಆಶಿ ಅವರು ಗಿರೀಶ್ ಕಾಸರವಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಕುಮಾರ ಬೇಂದ್ರೆ, ಚಿತ್ರದ ಕಲಾವಿದರಾದ ಐಶ್ವರ್ಯ ನಾಗರಾಜ, ರಿತಿಕಾ ಯಲ್ಲಪ್ಪ, ಮಂಜುನಾಥಗೌಡ ಪಾಟೀಲ, ಸನತ್ ಹಾಗೂ ಚಿತ್ರದ ತಂತ್ರಜ್ಞರು ಉಪಸ್ಥಿತರಿದ್ದರು. ಬಿಡುಗಡೆಯ ನಂತರ `ಬಂಧಮುಕ್ತ’ ಚಿತ್ರದ ಟ್ರೈಲರ್ ಪ್ರದರ್ಶಿಸಲಾಯಿತು.

ಹುಬ್ಬಳ್ಳಿ ಧಾರವಾಡ ಮತ್ತು ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದ್ದು, 2026ರ ಫೆಬ್ರವರಿಯಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ಕುಮಾರ ಬೇಂದ್ರೆ ತಿಳಿಸಿದರು. ಪ್ರಮುಖ ಪಾತ್ರಗಳಲ್ಲಿ `ಯಜಮಾನ’ ಧಾರಾವಾಹಿ ಖ್ಯಾತಿಯ ಐಶ್ವರ್ಯ ನಾಗರಾಜ್ ಮತ್ತು ಈಗಾಗಲೇ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸನತ್ ಎಸ್. ಅಭಿನಯಿಸಿದ್ದಾರೆ. ಇತರ ಪಾತ್ರಗಳಲ್ಲಿ ಉತ್ತರ ಕರ್ನಾಟಕದ ಕಲಾವಿದರಾದ ರಿತಿಕಾ ಯಲ್ಲಪ್ಪ, ಮಂಜುನಾಥ ಪಾಟೀಲ, ಅಕ್ಷತಾ ಕಮ್ಮಾರ, ಸಂತೋಷ ಬೆಂಗೇರಿ, ಪ್ರೇಮಾ ನಡುವಿನಮನಿ, ಶಾಂತಾ ಆಚಾರ್ಯ, ಡಾ. ಶಿವ ಮುಲ್ಕಿಪಾಟೀಲ, ಆನಂದ ಮಂಟೂರ, ವಿನಯ ದಂಡಗಿ, ಗೌತಮ ತಾಂಬೆ ಅಭಿನಯಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ವಿಘ್ನೇಶ್ ಮಲಚಮಿ, ಕಥೆ ಶಿವಪುತ್ರಪ್ಪ ಆರ್. ಆಶಿ, ಸಂಕಲನ ಸತ್ಯಜಿತ್, ಎಫೆಕ್ಟ್ಸ್ ಮತ್ತು ಶಬ್ದ ವಿನ್ಯಾಸ ಶ್ರೀರಾಮ್, ಹಿನ್ನೆಲೆ ಸಂಗೀತ ಬಹುರೂಪಿ, ಗೀತರಚನೆ ಶಿವಪುತ್ರಪ್ಪ ಆಶಿ, ಕುಮಾರ ಬೇಂದ್ರೆ , ಸಂಗೀತ ಡಾ. ಸಿದ್ದೇಶ್ವರ ಕಟಕೋಳ, ಗಾಯಕಿ ರಾಧಿಕಾ ಕುಲಕರ್ಣಿ, ವಸ್ತ್ರಾಲಂಕಾರ ರಾಜೇಶ್, ಶೀರ್ಷಿಕೆ ಮತ್ತು ಪ್ರಚಾರ ವಿನ್ಯಾಸ ಪ್ರಕೃತಿ ಕ್ರೀಯೇಷನ್ಸ, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ ನಿರ್ವಹಿಸಿದ್ದಾರೆ. ಸಹಾಯಕ ನಿರ್ದೇಶನ ಚೇತನ್, ಚಿತ್ರಕಥೆ-ಸಂಭಾಷಣೆ- ಜೊತೆಗೆ ನಿರ್ದೇಶನವನ್ನು ಕುಮಾರ ಬೇಂದ್ರೆ ಮಾಡಿದ್ದಾರೆ. ನಿರ್ಮಾಣ ಶಿವಪುತ್ರಪ್ಪ ಆರ್. ಆಶಿ, ಸಹ ನಿರ್ಮಾಪಕರು ರಾಜೀವ ಎಸ್. ಆಶಿ, ವಿನಯ ಎಸ್. ಆಶಿ ಆಗಿದ್ದಾರೆ.

-ಡಾ.ಪ್ರಭು ಗಂಜಿಹಾಳ

admin
the authoradmin

Leave a Reply