LatestNews

ಅತಿಯಾದ ಮೊಬೈಲ್ ಬಳಕೆ ಅನಾರೋಗ್ಯಕ್ಕೆ ರಹದಾರಿ: ಡಾ. ನಿಶ್ಚಲಾನಂದನಾಥ ಸ್ವಾಮೀಜಿ

ಭಾರತೀನಗರ: ಜನಸಾಮಾನ್ಯರು ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿರುವ ಪರಿಣಾಮವಾಗಿ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಉಙಟಾಗುತ್ತಿವೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿಗಳಾದ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಕ್ಯಾತಘಟ್ಟದ ಸರ್ಕಾರಿ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ, ಮಂಡ್ಯದ ಪರಿಚಯ ಪ್ರಕಾಶನ, ಅಳಿಲು ಸೇವಾ ಬಳಗ ಹಾಗೂ ಮತ್ತಿತರ ಸಂಘ ಸಂಸ್ಥೆಗಳ ಸಹಾಯೋಗದೊಂದಿಗೆ ಆಯೋಜಿಸಲಾಗಿದ್ದ ‘ಉತ್ತಮ ಆರೋಗ್ಯ ಮತ್ತು ಜೀವನ ಕ್ರಮ’ ಕುರಿತು ಜಾಗೃತಿ ಉಪನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು, ವಿದ್ಯಾರ್ಥಿಗಳು, ಯುವಕರು, ವಯಸ್ಕರು, ವಯೋವೃದ್ಧರು ನಿತ್ಯವೂ ಮೋಬೈಲ್ ಅನ್ನು ವಿಪರೀತವಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದ, ಬಹುಮುಖ್ಯವಾಗಿ ನೆನಪಿನ ಶಕ್ತಿ ನಾಶವಾಗುತ್ತಿದೆ. ಮನುಷ್ಯ ಸಂಬಂಧಗಳು ಯಾಂತ್ರಿಕವಾಗಿವೆ. ಜೊತೆಗೆ ಮಾನಸಿಕ, ಬೌದ್ಧಿಕ ಅನಾರೋಗ್ಯವನ್ನು ತಂದೊಡ್ಡುತ್ತಿದೆ ಎಂದು ಎಚ್ಚರಿಸಿದರು.

ರೈತರು ತಮ್ಮ ಕೃಷಿ ಭೂಮಿಗೆ ಅತಿಯಾದ ರಾಸಾಯನಿಕ ಗೊಬ್ಬರ, ಕೀಟನಾಶಕವನ್ನು ಬಳಸುತ್ತಿರುವುದರಿಂದ  ಭೂಮಿ ಕ್ರಮೇಣವಾಗಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ದೇಶದ ರೈತ ಸಮೂಹ ರಾಸಾಯನಿಕ ಬಳಕೆ ಹೆಚ್ಚು ಉಪಯೋಗಿಸುತ್ತಿರುವ ಪರಿಣಾಮ ನಿರೀಕ್ಷಿತ ಇಳುವರಿ ಪಡೆಯಲು ಅವರಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಜನಸಾಮಾನ್ಯರು ಸೇವಿಸುತ್ತಿರುವ ಆಹಾರ ಪದಾರ್ಥಗಳಲ್ಲಿ ಹಲವು ತರಹದ ರಾಸಾಯನಿಕ ಅಂಶಗಳು ಪತ್ತೆಯಾಗುತ್ತಿವೆ. ಜನತೆ ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುವಂತೆ ಮಾಡಿದೆ. ರೈತರು ಹೈಬ್ರಿಡ್ ಮಾದರಿ ತಳಿಯ ಹಸುಗಳನ್ನು ಸಾಕಿ ಹೆಚ್ಚಿನ ಹಾಲನ್ನು ಉತ್ಪಾದಿಸುತ್ತಿದ್ದು, ಇದು ಕೂಡ ವಯಸ್ಕರು, ವಯೋವೃದ್ಧರ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತಿದೆ. ಆದ್ದರಿಂದ ನಮ್ಮ ದೇಶೀಯ ತಳಿಗಳಾದ ಹಳ್ಳಿಕಾರ್, ಮಲೆನಾಡು ಗಿಡ್ಡ ಸೇರಿದಂತೆ ಇತರೆ ದೇಶೀಯ ತಳಿಗಳನ್ನು ಸಾಕಲು ಮುಂದಾಗಬೇಕು. ನಮ್ಮ ಮಠದಿಂದಲೂ ಈ ಕುರಿತಾಗಿ ಹೆಚ್ಚಿನ ಅರಿವನ್ನು ಮೂಡಿಸುತ್ತಿದ್ದೇವೆ ಎಂದು ಹೇಳಿದರು.

ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಕಳೆದ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಜನಸಾಮಾನ್ಯರಲ್ಲಿ ಪುಸ್ತಕಗಳನ್ನು ಮನೆಯಲ್ಲಿಟ್ಟು ಓದುವ ಹವ್ಯಾಸವಿತ್ತು. ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ನೋಡಿ ಆನಂದಿಸುತ್ತಿದ್ದರು. ಅದರಲ್ಲಿನ ಜೀವನ ಮೌಲ್ಯಗಳನ್ನು ಬದುಕಿಗೆ ಅಳವಡಿಸಿಕೊಳ್ಳುತ್ತಿದ್ದರು. ಆ ಮೂಲಕ ಮನೋರಂಜನೆ ಮತ್ತು ಮನೋವಿಕಾಸ ಸಾಧ್ಯವಾಗುತ್ತಿತ್ತು ಎಂದರು.

ಆದರೆ ಇಂದು ಟಿವಿ, ಮೊಬೈಲ್, ಲ್ಯಾಪ್ ಟಾಪ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳೆ ಜನರ ಆರಾಧ್ಯ ದೈವದಂತಾಗಿವೆ. ಅನಗತ್ಯ ರೀತಿಯಲ್ಲಿ ವೆಚ್ಚ ಮಾಡುವ ಜನತೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾದ ಪುಸ್ತಕಗಳಿಗೆ ಏಕೆ ಹಣ ವಿನಿಯೋಗಿಸುವುದಿಲ್ಲ ಎಂದು ಪ್ರಶ್ನಿಸಿದ ಅವರು, ಮನೆಯ ಹಿರಿಯರು ಮೊದಲು ತಾವು ಪುಸ್ತಕಗಳ ಓದುವ ಹವ್ಯಾಸ ಬೆಳೆಸಿಕೊಂಡು, ಬಳಿಕ ಮನೆಮಂದಿಗೆಲ್ಲ ಈ ಅಭಿರುಚಿ ಬೆಳೆಸಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎಸ್. ಬೋರೇಗೌಡ ಮಾತನಾಡಿ, ಸಾಲು ಮರದ ತಿಮ್ಮಕ್ಕ ನಮಗೆ ಮಾದರಿಯಾಗಬೇಕು. ಹಲವಾರು ಸಸಿಗಳನ್ನು ನೆಟ್ಟು ಪೋಷಿಸಿ ಮರಗಳನ್ನಾಗಿ ಮಾಡಿದ್ದು ದಂತೆಕತೆ‌. ಹಿಂದೆ ಹಳ್ಳಿಗಳಲ್ಲಿ ಅತಿ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸುತ್ತಿದ್ದರು. ಆದರೆ ಇಂದು ಯಾವುದೇ ಮರಗಳನ್ನು ಬಿಡದೆ ಕುಡಿಯುವ ಮನಸ್ಥಿತಿ ರೂಢಿಸಿಕೊಂಡಿರುವುದು ಶೋಚನೀಯ ಎಂದರು.

ಇದೇ ವೇಳೆ ಬೆಂಗಳೂರಿನ ಶ್ರೀ ಪತಂಜಲಿ ಯೋಗಾಶ್ರಮ ಟ್ರಸ್ಟಿನ ಅಧ್ಯಕ್ಷರಾದ ಪ್ರಕಾಶ್ ಗುರೂಜಿ ಮಾತನಾಡಿ, ಗ್ರಾಮದಲ್ಲಿ ಯಾರು ಸಕ್ರಿಯವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲವೋ ಅವರು ಯೋಗಾ, ನಡಿಗೆಯಂತಹ ಹವ್ಯಾಸ ಬೆಳೆಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಮನ್ ಪ್ರೀತ್ ಸಿಂಗ್, ಹಿರಿಯ ಪತ್ರಕರ್ತ ಸುಭಾಷ್ ಬಣಗಾರ್, ಉಪನ್ಯಾಸಕ ರವಿಕಿರಣ್ ಉಪನ್ಯಾಸ ನೀಡಿದರು. ಕ್ಯಾತಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್. ಶಿವನಂಜಪ್ಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಕೆ.ಎಂ. ರೇಖಾ, ಗ್ರಾಮದ ಪ್ರಮುಖರಾದ ಕೆ.ಟಿ. ಜಯಪ್ರಕಾಶ್, ಬಿ. ಅಜಿತಕುಮಾರ್, ಕೆ. ಗಿರೀಶ್, ರವಿಕುಮಾರ್ ಕ್ಯಾತಘಟ್ಟ, ಬಿಎಂಟಿಸಿ ನೌಕರ ಗುರುದೇವರಹಳ್ಳಿ  ಪುಟ್ಟಸ್ವಾಮಿ, ಕವಿಗಳಾದ ಹನುಮಂತಪ್ಪ ಕರಡಕೆರೆ, ಚಂದ್ರು ಬೆಸಗರಹಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಂಡ್ಯದ ಪರಿಚಯ ಪುಸ್ತಕ ಪ್ರಕಾಶನದ ವತಿಯಿಂದ ಸಾಹಿತ್ಯದ ವಿವಿಧ ಪ್ರಕಾರಕ್ಕೆ ಸೇರಿದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.

admin
the authoradmin

Leave a Reply

Translate to any language you want