ಕೊಡಗಿನಲ್ಲಿ ಭತ್ತದ ಕೃಷಿ ಮರೆಯಾಗುತ್ತಿದೆ.. ಅದರೊಂದಿಗಿನ ಒಡನಾಟ.. ಭಾವನಾತ್ಮಕ ಸಂಬಂಧ ದೂರವಾಗಿಲ್ಲ…!

ಕೊಡಗಿನಲ್ಲಿ ಭತ್ತದ ಕೃಷಿ ಮರೆಯಾಗುತ್ತಿದ್ದರೆ ಅದರೊಂದಿಗಿದ್ದ ಒಡನಾಟ ಮತ್ತು ಭಾವನಾತ್ಮಕ ಸಂಬಂಧಗಳು ಸದ್ದಿಲ್ಲದೆ ದೂರ ಸರಿಯುತ್ತಿದೆ. ಅವತ್ತಿನ ಭತ್ತದ ಕೃಷಿಯ ಬಗ್ಗೆ ನೆನಪಿಸಿಕೊಂಡಾಗಲೆಲ್ಲ ಅದರ ಸುತ್ತಲೂ ಸುತ್ತಿಕೊಳ್ಳುತ್ತಿದ್ದ ದೃಶ್ಯಗಳು ಕಣ್ಮುಂದೆ ಹಾದು ಹೋಗುತ್ತದೆ. ಮುಂದೆಂದೂ ಅಂತಹ ದೃಶ್ಯಗಳು ಕಾಣಸಿಗಲಾರವು.. ಇವತ್ತಿಗೂ ಆ ದಿನಗಳನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸು ಪುಳಕಗೊಳ್ಳುತ್ತದೆ. ಅವತ್ತಿನ ಮಳೆಗಾಲ ಮತ್ತು ಭತ್ತದ ಕೃಷಿ ಇದೆರಡರ ನಂಟು ಬಿಡಿಸಲಾಗದ ಮತ್ತು ವರ್ಣಿಸಲಾರದ್ದಾಗಿತ್ತು.
ಆ ದಿನಗಳಿಗೆ ಹೋದರೆ… ಕೊಡಗಿನಲ್ಲಿ ಮಳೆ ಸುರಿದು ನದಿ, ಹೊಳೆ, ತೊರೆಗಳಲ್ಲಿ ನೀರು ತುಂಬಿಹರಿಯ ತೊಡಗಿದಾಗ ವಿಶಾಲ ಭತ್ತದ ಬಯಲುಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದವು. ಇದಕ್ಕೆ ಕಾರಣವೂ ಇದೆ. ಕೊಡಗಿನಲ್ಲಿ ಭತ್ತವನ್ನು ಬೆಳೆಯುವುದು ಮಳೆಯ ಆಧಾರದಲ್ಲಾಗಿದೆ. ಜತೆಗೆ ವರ್ಷಕ್ಕೊಮ್ಮೆ ಮಾತ್ರ ಭತ್ತದ ಬೆಳೆಯನ್ನು ಬೆಳೆಯಲಾಗುತ್ತದೆ. ಇನ್ನು ಇಲ್ಲಿನ ಮಳೆಗಾಲವೂ ಕೂಡ ಗದ್ದೆ ಕೆಲಸದೊಂದಿಗೆ ಆರಂಭವಾಗುತ್ತಿತ್ತು. ಮಳೆ ಬಿದ್ದು ಮಣ್ಣು ತೇವವಾಗುತ್ತಿದ್ದಂತೆಯೇ ರೈತರು ಉಳುಮೆ ಆರಂಭಿಸುತ್ತಿದ್ದರು. ಗದ್ದೆಯಲ್ಲಿನ ಭತ್ತದ ಕೃಷಿ ಚಟುವಟಿಕೆಯ ಪ್ರಮುಖ ಭಾಗವಾದ ನಾಟಿ ಕಾರ್ಯ ಆಗಸ್ಟ್ ತಿಂಗಳ ತನಕವೂ ನಡೆಯುತ್ತಿತ್ತು.
ಇದನ್ನೂ ಓದಿ: ಕೊಡಗಿನಲ್ಲಿ ಸಾಂಬಾರ ರಾಣಿಯ ವೈಭವ ಮರೆಯಾಗಿದ್ದು ಹೇಗೆ?
ಭತ್ತದ ಕೃಷಿ ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿಯೇ ನಡೆಯುತ್ತಿತ್ತು (ಈಗಲೂ ನಡೆಯುತ್ತದೆ). ಉಳುಮೆ, ಇನ್ನಿತರ ಕೆಲಸದ ಜತೆ ನಾಟಿಯನ್ನು ಮಳೆಯಲ್ಲಿಯೇ ಮಾಡಿ ಸಂಭ್ರಮಿಸುತ್ತಿದ್ದರು. ಹೆಂಗಸರು ಪೈರನ್ನು ಕಿತ್ತು ಕೊಟ್ಟರೆ ಗಂಡಸರು ನಾಟಿ ಮಾಡುತ್ತಾರೆ. ಹಿಂದೆ ಎತ್ತುಗಳಿಂದ ಉಳುಮೆ ಮಾಡಲಾಗುತ್ತಿತ್ತಾದರೂ ಈಗ ಹೆಚ್ಚಿನ ಉಳುಮೆ ಟ್ರ್ಯಾಕ್ಟರ್ ಮತ್ತು ಟಿಲ್ಲರ್‌ಗಳಿಂದ ನಡೆಯುತ್ತಿದೆ.
ಒಂದು ಕುಟುಂಬದಲ್ಲಿ ಹತ್ತಾರು ಜನ ಇರುತ್ತಿದ್ದರು ಅವರೇ ಗದ್ದೆಗಿಳಿದು ಕೆಲಸ ಮಾಡುತ್ತಿದ್ದರು. ಸುತ್ತಮುತ್ತಲಿನವರು ಕೂಡು ಆಳುಗಳಾಗಿ ಕೆಲಸ ಮಾಡುತ್ತಿದ್ದರು. ಇದರಿಂದ ನಷ್ಟದ ಮಾತೇ ಇರಲಿಲ್ಲ. ಇದಲ್ಲದೆ, ಜನ ಕೆಲಸವನ್ನು ಇಷ್ಟಪಟ್ಟು ಮಾಡುತ್ತಿದ್ದರು. ಗದ್ದೆ ಬಯಲಲ್ಲಿ ಹಾದು ಹೋಗುವ ವ್ಯಕ್ತಿಗಳು ಕೂಡ ಗದ್ದೆಗಿಳಿದು ನಾಟಿ ನೆಟ್ಟು ಮುಂದೆ ಸಾಗುತ್ತಿದ್ದ ದಿನಗಳಿದ್ದವು. ದೊಡ್ಡ ಗದ್ದೆಗಳಲ್ಲಿ ಹತ್ತಾರು ಜನ ಹರಟೆ ಹೊಡೆಯುತ್ತಾ ಹಳೆಯ ಕಥೆಗಳನ್ನು ಹೇಳುತ್ತಾ ಖುಷಿ ಖುಷಿಯಾಗಿ ನಾಟಿ ಮಾಡುತ್ತಿದ್ದರು.
ಇದನ್ನೂ ಓದಿ: ಶಿವನೇ ಇಷ್ಟಪಡುವ ಸುಂದರ ಹೂ… ಇದು ಮನೆಗೆ ಮೆರಗು ಮನಸ್ಸಿಗೆ ಮುದ
ಪೊಲೀಸ್, ಸೇನೆ, ಇನ್ನಿತರ ಕೆಲಸಗಳ ಮೇಲೆ ಊರಿಂದ ಹೊರಗೆ ಹೋದವರು ನಾಟಿ ಸಮಯದಲ್ಲಿ ಊರಿಗೆ ಬರುವ ಪ್ರಯತ್ನ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಮದುವೆ ಮಾಡಿ ಕಳುಹಿಸಿದ ಹೆಣ್ಣು ಮಗಳು ಕೂಡ ಆ ಸಮಯದಲ್ಲಿ ತವರಿಗೆ ಬಂದು ಗದ್ದೆ ಕೃಷಿಗೆ ಸಹಾಯ ಮಾಡುತ್ತಿದ್ದಳು. ಸಾಮಾನ್ಯವಾಗಿ ಎಷ್ಟೇ ಓದಿದ್ದರೂ ಹೆಣ್ಣು ಮಕ್ಕಳು ಪೈರು ಕೀಳುವುದನ್ನು, ಗಂಡು ಮಕ್ಕಳು ನಾಟಿ ನೆಡುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತು ಬಿಡುತ್ತಿದ್ದರು. ಅವತ್ತಿಗೆ ಎಷ್ಟು ಎಕರೆ ಗದ್ದೆಯಿದೆ ಎಂಬುದರ ಮೇಲೆ ಆತನ ಶ್ರೀಮಂತಿಕೆಯನ್ನು ಅಳೆಯಲಾಗುತ್ತಿತ್ತು.
ಇನ್ನು ನಾಟಿಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಅದರಲ್ಲೂ ದೊಡ್ಡ ನಾಟಿಯಂದು ಭೂರಿ ಬೋಜನ ನಡೆಯುತ್ತಿತ್ತು. ಗದ್ದೆಯಲ್ಲಿ ಕೊಡಿನಾಟಿ ನೆಡುವ ಪರಿಣಿತರಿದ್ದರು. ಅದು ಗದ್ದೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಗದ್ದೆಯನ್ನು ವಿಭಜಿಸಿ ಎದ್ದು ಕಾಣುತ್ತಿತ್ತು. ಆ ನಂತರ ದೊಡ್ಡಗದ್ದೆಯಲ್ಲಿ ನಾಟಿಯ ಬಳಿಕ ಓಟ ನಡೆಯುತ್ತಿತ್ತು. ಗೆದ್ದವರಿಗೆ ಹಣ, ಬಾಳೆಗೊನೆ, ತೆಂಗಿನ ಕಾಯಿ ನೀಡಿ ಗೌರವಿಸಲಾಗುತ್ತಿತ್ತು. ಅದೊಂದು ಮನರಂಜನೆ ಜೊತೆಗೆ ಊರಿಗೊಬ್ಬ ಓಟಗಾರನನ್ನು ಹುಟ್ಟು ಹಾಕುತ್ತಿತ್ತು.
ಇದನ್ನೂ ಓದಿ: ಮರೆಯಾಗುತ್ತಿರುವ ಮಲೆನಾಡಿನ ಕಾಡು ಹಣ್ಣು ಕರ್ಮಂಜಿ..
ಈಗ ಎಲ್ಲವೂ ಬದಲಾವಣೆಯಾಗಿದೆ. ಭತ್ತದ ಕೃಷಿ ಮೊದಲಿನಷ್ಟು ಖುಷಿಕೊಡುತ್ತಿಲ್ಲ. ಕೆಲವರು ಮಾತ್ರ ಕೃಷಿ ಮಾಡುತ್ತಿದ್ದಾರೆ. ಇನ್ನು ಕೆಲವರು ಗದ್ದೆಯಲ್ಲಿ ಶುಂಠಿ, ಬಾಳೆ ಬೆಳೆಯುತ್ತಿದ್ದಾರೆ. ಲಾಭ ನಷ್ಟಗಳ ಲೆಕ್ಕಾಚಾರ ಮಾಡಿ ಬಹಳಷ್ಟು ರೈತರು ಭತ್ತ ಬೆಳೆಯುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತಿರುವುದನ್ನು ಮನಗಂಡು ಕೆಲವರು ಕಾಫಿ ತೋಟವನ್ನಾಗಿ ಪರಿವರ್ತಿಸಿದರೆ, ಮತ್ತೆ ಕೆಲವರು ಕೃಷಿ ಮಾಡಲಾಗದೆ ಪಾಳು ಬಿಟ್ಟಿದ್ದಾರೆ. ಇನ್ನು ಕೆಲವರು ನಿವೇಶನಗಳನ್ನಾಗಿ ಪರಿವರ್ತಿಸಿದ್ದಾರೆ.
ಈಗ ಮೊದಲಿಗೆ ಹೋಲಿಸಿದರೆ ಗದ್ದೆಗಳ ವ್ಯಾಪ್ತಿ ಕಡಿಮೆಯಾಗಿದೆ. ದನ ಸಾಕೋರು ಇಲ್ಲ ಹೀಗಾಗಿ ಸಗಣಿ ಗೊಬ್ಬರವಿಲ್ಲ. ಯಂತ್ರಗಳ ಮೂಲಕವೇ ಕೆಲಸ ಕಾರ್ಯಗಳು ನಡೆಯುತ್ತವೆ. ಮೊದಲಿನ ಸಂತೋಷವಿಲ್ಲ ಏಕೆಂದರೆ ಮಳೆಯನ್ನು ನಂಬಿ ಭತ್ತ ಬೆಳೆಯುವುದು ಒಂದು ರೀತಿಯ ಹೋರಾಟವಾಗಿದೆ. ಮಳೆ ಸುರಿದರೆ ಪ್ರವಾಹ ಸೃಷ್ಟಿಸಿ ಬೆಳೆಯನ್ನು ನಾಶ ಮಾಡುತ್ತದೆ. ಕೆಲವೊಮ್ಮೆ ಮಳೆ ಸಮರ್ಪಕವಾಗಿ ಸುರಿಯದೆ ನೀರಿಗೆ ಅಭಾವವಾಗಿ ಬೆಳೆಬೆಳೆಯಲಾರದ ಸ್ಥಿತಿಯನ್ನು ಹುಟ್ಟು ಹಾಕುತ್ತದೆ.
ಇದನ್ನೂ ಓದಿ: ಕೊಡಗಿನ ಕಿತ್ತಳೆಯ ವೈಭವ ಮರುಕಳಿಸಲು ಸಾಧ್ಯನಾ?..
ಇವತ್ತಿನ ಮಟ್ಟಿಗೆ ಕೊಡಗಿನಲ್ಲಿ ಭತ್ತವನ್ನು ಬೆಳೆಯುವುದು ಲಾಭದಾಯಕವಾಗಿ ಉಳಿದಿಲ್ಲ. ಹೀಗಾಗಿ ಅದರ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಾ ಹೋಗುತ್ತಿದೆ. ಕೆಲವರಷ್ಟೆ ಅನಿವಾರ್ಯವಾಗಿ ಇವತ್ತಿನ ಪರಿಸ್ಥಿತಿಗೆ ತಕ್ಕಂತೆ ಭತ್ತವನ್ನು ಅಲ್ಲಲ್ಲಿ ಬೆಳೆಯುತ್ತಿದ್ದಾರೆ. ಹಾಗಾಗಿ ಹಿಂದಿನ ವೈಭವಕ್ಕೆ ಪೊರೆ ಬಂದಿದೆ. ಆದರೂ ಇವತ್ತಿಗೂ ಭತ್ತವನ್ನು ಇಲ್ಲಿನ ಜನ ಧಾನ್ಯಲಕ್ಷ್ಮಿಯನ್ನಾಗಿ ಪೂಜಿಸುತ್ತಾ ಬಂದಿದ್ದಾರೆ. ಭತ್ತ ಕೃಷಿ ಆರಂಭವಾಗಿ ನಾಟಿ ಕಾರ್ಯ ಮುಗಿದು ಅದು ಕೊಯ್ಲುಗೆ ಬರುವ ತನಕ ಹಬ್ಬಗಳು ಕೂಡ ಅದರ ಬೆಳವಣಿಗೆಯ ಆಧಾರದಲ್ಲಿ ಇಲ್ಲಿ ನಡೆಯುವುದು ವಿಶೇಷವಾಗಿದೆ.
ಇದನ್ನೂ ಓದಿ: ಕರಿಮೆಣಸು ಬಳ್ಳಿಯನ್ನು ರಕ್ಷಿಸಿ ಫಸಲು ಪಡೆಯುವುದೇ ರೈತರಿಗೆ ಸವಾಲ್…
ನಾಟಿ ಮುಗಿದ ಖುಷಿಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು, ಭತ್ತದ ಬೆಳೆ ಹುಲುಸಾಗಿ ಬೆಳೆದು ಅದು ಹೊಡೆ ಒಡೆಯುವಾಗ ಗದ್ದೆಯಲ್ಲಿ ಭೂತಾಯಿಗೆ ದೋಸೆಯನ್ನಿಟ್ಟು ದೀಪಹಚ್ಚಿ ಪೂಜಿಸುವ (ತೀರ್ಥೋದ್ಭವ) ತುಲಾಸಂಕ್ರಮಣ ಕೊನೆಗೆ ಬೆಳೆ ಕೊಯ್ಲುಗೆ ಬಂದಾಗ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸುವ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಅದು ಏನೇ ಇರಲಿ, ಕೂಲಿ ಕಾರ್ಮಿಕರ ಸಮಸ್ಯೆ, ಪ್ರಕೃತಿ ವಿಕೋಪ, ರೋಗಬಾಧೆ, ಹೀಗೆ ಹತ್ತಾರು ಸಮಸ್ಯೆಗಳಿಂದಾಗಿ ಭತ್ತ ಬೆಳೆದವರಿಗೆ ನಷ್ಟವೇ ಹೆಚ್ಚಾಗುತ್ತಿರುವುದರಿಂದ ಭತ್ತದ ಕೃಷಿ ವ್ಯಾಪ್ತಿ ಕಡಿಮೆಯಾಗುತ್ತಾ ಹೋಗುತ್ತಿದೆ. ಆದರೆ ಅದರ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.
B M Lavakumar