LatestPolitical

ಬಿಹಾರದ ಸೋಲಿಗೆ ಬೆಚ್ಚಿಬಿದ್ದ ಕಾಂಗ್ರೆಸ್ ನಾಯಕರು… ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ…

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಮೂಲಕ ಚುನಾವಣೆ ಎದುರಿಸಿದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿರುವುದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಶೋಕದ ಮಡುವಿಗೆ ತಳ್ಳಿದೆ. ದೇಶದಲ್ಲಿ ಎನ್ ಡಿಎ ವಿರೋಧಿ ಅಲೆಯಿದ್ದು, ತಾವು ಗೆದ್ದು ಬೀಗ ಬಹುದು ಎಂದುಕೊಂಡಿದ್ದ ಕಾಂಗ್ರೆಸ್ ಗೆ ಇಲ್ಲಿ ಬಹುದೊಡ್ಡ ಸೋಲಾಗಿದೆ. ಇದರ ಪರಿಣಾಮ ಬಿಹಾರದಲ್ಲಿ ಮಾತ್ರ ಆಗದೆ ಕರ್ನಾಟದ ಮೇಲೆಯೂ ಆಗುವ  ಲಕ್ಷಣಗಳು ಕಾಣುತ್ತಿವೆ. ಬಿಹಾರದ ಸೋಲಿಗೆ ರಾಜ್ಯ ‘ಕೈ’ ನಾಯಕರು ಮಾಡಿಕೊಂಡ ಎಡವಟ್ಟುಗಳು ಕೂಡ ಕಾರಣ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ..

ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರವಲ್ಲ ಸ್ವತಃ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಅಭ್ಯರ್ಥಿ ನಾನೇ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇಂತಹ ಪ್ರಧಾನಿ ಅಭ್ಯರ್ಥಿ ಇಡೀ ರಾಜ್ಯದಲ್ಲಿ ಅಡ್ಡಾಡಿ ಚುನಾವಣಾ ಪ್ರಚಾರ ಮಾಡಿದ ಬಳಿಕವೂ ಒಂದು ರಾಜ್ಯದಲ್ಲಿ ಎರಡು ಅಂಕಿಯ ಸಾಧನೆ ಮಾಡಿಲ್ಲ ಎನ್ನುವುದಾದರೆ ಆತ ಒಬ್ಬ ನಾಯಕನಾಗಿ ಮುಂದುವರೆಯಲು ಹೇಗೆ ಸಾಧ್ಯ? ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ ಎನ್ನುವುದಾದರೆ ಅದಕ್ಕೆ ಕಾರಣ ರಾಹುಲ್ ಗಾಂಧಿಯಲ್ಲ… ರಾಜ್ಯದಲ್ಲಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಹಿರಿಯ ನಾಯಕರೇ ಕಾರಣ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಈಗಾಗಲೇ ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಸುದ್ದಿಯಲ್ಲಿದ್ದು, ಬಿಹಾರದ ಚುನಾವಣೆ ಕೆಲವು ನಾಯಕರಿಗೆ ಲಾಭವಾದರೆ ಮತ್ತೆ ಕೆಲವರಿಗೆ ನಷ್ಟವಾಗುವ ಲಕ್ಷಣಗಳು ಕಾಣಿಸುತ್ತಿವೆ. ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್ ಅಭೂತಪೂರ್ವ ಸಾಧನೆ ಮಾಡುತ್ತದೆ. ಆ ನಂತರ ರಾಜ್ಯದಲ್ಲಿ ಹೈಕಮಾಂಡ್ ಹೊಸ ಬೆಳವಣಿಗೆಗೆ ನಾಂದಿ ಹಾಡಬಹುದೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸುವವರು ನಂಬಿದ್ದರು. ಮತ್ತೊಂದು ಕಡೆ ನವೆಂಬರ್ ಕ್ರಾಂತಿ ಆಗದಂತೆ ಅಧಿಕಾರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೆಂಬಲಿಸುವವರು ಒತ್ತಾಯಿಸಿದ್ದರು.

ಹೀಗಾಗಿ ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದರೆ ರಾಜ್ಯದಲ್ಲಿ ತಮ್ಮದೇ ಆದ ಲೆಕ್ಕಾಚಾರವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದರು. ಆದರೆ ಬಿಹಾರದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ಕೆಟ್ಟ ಸಾಧನೆ ಮಾಡಿದೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದಷ್ಟು ಸ್ಥಾನಗಳನ್ನು ಕಳೆದುಕೊಂಡು ಕಾಂಗ್ರೆಸ್  ಮತ್ತಷ್ಟು ಸ್ಥಾನಗಳನ್ನು ಗೆದ್ದುಕೊಂಡು ತೊಂಬತ್ತೊಂಬತ್ತರ  ಗಡಿಗೆ ಬಂದಾಗ ಕಾಂಗ್ರೆಸ್ ನಾಯಕರು ತಾವೇನೋ ಸಾಧನೆ ಮಾಡಿದ್ದೇವೆ ಎಂಬಂತೆ ಬೀಗಿದ್ದರು.

ದೇಶದಲ್ಲಿ ಮೋದಿ ಹವಾ ಮುಗಿಯಿತು ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿದ್ದರು. ಆದರೆ ಎರಡು ಬಾರಿ ಅಭೂತಪೂರ್ವ ಸಾಧನೆ ಮೂಲಕ ದೇಶದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ನಾಯಕರಿಗೆ ಮೂರನೇ ಬಾರಿಗೂ ಅದೇ ಆಗುತ್ತದೆ ಎಂದು ನಂಬಿದ್ದರು. ಅದೊಂದು ರೀತಿಯ ಅಹಂ ಮತ್ತು ತಪ್ಪು ನಿರ್ಧಾರಗಳು ಬಿಜೆಪಿಯ ಸೊಕ್ಕನ್ನು ಮುರಿದು ಹಾಕಿತ್ತು. ಬಹುಮತದ ಮೂಲಕ ಸರ್ಕಾರ ರಚಿಸುವ ಕನಸಿಗೆ ತಣ್ಣೀರು ಎರಚಿ ಎನ್ ಡಿಎ ಸಹವರ್ತಿಗಳ ಕಿಮ್ಮತ್ತು ಏನು ಎಂಬುದನ್ನು ಕಾಲವೇ ಅರ್ಥ ಮಾಡಿಕೊಟ್ಟಿತ್ತು. ಆದರೆ ಆ ಘಟನೆಗಳು ಅವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತ್ತು.

ಕಾಂಗ್ರೆಸ್ ಸೇರಿದಂತೆ ಇಂಡಿ ಕೂಟದ ಪಕ್ಷಗಳು ತಮ್ಮ ಅಲ್ಪ ಸಾಧನೆಯನ್ನು ಎಲ್ಲೆಡೆ ಹೇಳುತ್ತಾ, ಎನ್ ಡಿಎ  ವಿರುದ್ಧ ಆರೋಪ ಮತ್ತು ಗೇಲಿ ಮಾಡುತ್ತಾ ದಿನ ಕಳೆದುದನ್ನು ಬಿಟ್ಟರೆ ಅವರು ತಮ್ಮ ಇಂಡಿ ಒಕ್ಕೂಟವನ್ನು ಬಲಪಡಿಸುವ, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಲೇ ಇಲ್ಲ. ಅದರಾಚೆಗೆ ಮುಂದೆ ಬಂದಂತಹ ಮಹಾರಾಷ್ಟ್ರ, ದೆಹಲಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುವ ಪ್ರಯತ್ನವನ್ನು ಮಾಡಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಹಣಿಯಬೇಕಾಗಿತ್ತು. ಅದನ್ನು ಒಂದಷ್ಟು ಮಾಡಿದೆವು ಆ ಮೂಲಕ ಕಳೆದು ಹೋಗಿದ್ದ ವಿರೋಧಪಕ್ಷದ ಸ್ಥಾನವನ್ನು ಮರುಸ್ಥಾಪನೆ ಮಾಡಿದನ್ನು ಬಿಟ್ಟರೆ ಮೋದಿ ವಿರುದ್ಧ ಹೇಳಿಕೆ ನೀಡುವುದಕ್ಕಷ್ಟೆ ಸೀಮಿತರಾಗಿ ಬಿಟ್ಟರು.

ರಾಹುಲ್ ಗಾಂಧಿ ಸುತ್ತಲಿನ ನಾಯಕರು ಕೇವಲ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಹಾಕಿ ರಾಹುಲ್ ಗಾಂಧಿಯನ್ನು ಸಂತೃಪ್ತರಾಗಿಸುವ ಕೆಲಸವನ್ನು ಮಾಡಿದ್ದು ಬಿಟ್ಟರೆ ಕಾರ್ಯಕರ್ತರಲ್ಲಿ ಧೈರ್ಯ ತುಂಬಿ ಪಕ್ಷವನ್ನು ಸಂಘಟಿಸುವ ಕೆಲಸವನ್ನು ಮಾಡಲೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳುವ ಭರದಲ್ಲಿ ನಾನೊಬ್ಬ ದೇಶದ ಪ್ರಜೆ ಎಂಬುದನ್ನು ಮರೆತು ರಾಹುಲ್ ಗಾಂಧಿ ಸೇರಿದಂತೆ ಕೆಲವು ನಾಯಕರು ಮಾತನಾಡಿದರು. ಅದರಾಚೆಗೆ ಅಲ್ಲಲ್ಲಿ ಸಣ್ಣಪುಟ್ಟ ಗಿಮಿಕ್ ಗಳನ್ನು ಮಾಡಿದ್ದರಾದರೂ ಅದ್ಯಾವುದೂ ಪರಿಣಾಮ ಬೀರಲಿಲ್ಲ.

ರಾಹುಲ್ ಗಾಂಧಿಯವರು ರೈಲ್ವೆ ಸ್ಟೇಷನ್ ನಲ್ಲಿ ಕೂಲಿಗಳ ಹೊರೆಯನ್ನು ತಾವೇ ಹೊತ್ತು ಸಾಗುವುದು, ಗದ್ದೆಯಲ್ಲಿ ನಾಟಿ ಮಾಡುವುದು, ಮೀನಿಗೆ ಬಲೆ ಹಾಕುವುದು ಇದೆಲ್ಲವೂ ಕೇವಲ ಸುದ್ದಿಯಾಗಿ ವೈರಲ್ ಆಯಿತೇ ವಿನಃ ಮತವಾಗಿ ಮಾರ್ಪಾಡು ಆಗಲೇ ಇಲ್ಲ. ಇನ್ನು ಚುನಾವಣೆ ವೇಳೆ   ಪ್ರಚಾರ ಸಭೆ, ಯಾತ್ರೆಗಳನ್ನು ಕೇವಲ ಸೆಲಬ್ರಿಟಿಗಳಂತೆ ನಡೆಸಿದರೇ ವಿನಃ ಒಬ್ಬ ನಾಯಕನಂತೆ ನಡೆಸಲೇ ಇಲ್ಲ. ರಾಹುಲ್ ಗಾಂಧಿಯವರ  ಈ ನಡವಳಿಕೆಯಿಂದಾಗಿ ಲೋಕಸಭಾ ಚುನಾವಣೆ ನಡೆದ ಬಳಿಕ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ನಡೆದ ಮಹಾರಾಷ್ಟ್ರ, ದೆಹಲಿ ಮತ್ತು ಬಿಹಾರ ಚುನಾವಣೆಗಳನ್ನು ಗಮನಿಸಿದರೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಯಾವುದೇ ಸಾಧನೆ ಮಾಡದ ನೆಲಕಚ್ಚಿದೆ. ಅದರಲ್ಲೂ ಮೂರು ರಾಜ್ಯಗಳಲ್ಲಿ ಮೂಲೆಗುಂಪಾಗಿದೆ.

ಈ ರಾಜ್ಯಗಳಲ್ಲಿ ಮುಂದೆ ಮೇಲೆದ್ದು ಬರಬೇಕೆಂದರೆ ತಳಮಟ್ಟದಿಂದಲೇ ಪಕ್ಷವನ್ನು ಸಂಘಟಿಸುವುದು ಅನಿವಾರ್ಯವಾಗಿದೆ. ಈಗಾಗಲೇ ಬಹುತೇಕ ರಾಜ್ಯಗಳನ್ನು ಬಿಜೆಪಿ ಆವರಿಸಿಕೊಂಡಾಗಿದೆ. ಅದು ಅಲ್ಲಿನ ಸ್ಥಳೀಯ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡು ನಿಧಾನವಾಗಿ ಅಸ್ಥಿತ್ವ ಕಾಣುತ್ತಿದೆ. ಮಹಾರಾಷ್ಟ್ರ, ದೆಹಲಿ ಮತ್ತು ಬಿಹಾರದ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡ ಪಕ್ಷಗಳೆಲ್ಲವೂ ನೆಲಕಚ್ಚಿದ್ದು, ಪ್ರಾದೇಶಿಕ ಪಕ್ಷಗಳನ್ನು ಅಪೋಶನ ಪಡೆದ ಆರೋಪ ಕಾಂಗ್ರೆಸ್ ಮೇಲಿದೆ. ಬಿಹಾರದ ಆರ್ ಜೆಡಿ ಪಕ್ಷದ ಸ್ಥಿತಿ ಏನಾಗಿದೆ ಎಂಬುದು ಈ ಬಾರಿಯ ಚುನಾವಣೆ ತೋರಿಸಿ ಕೊಟ್ಟಿದೆ. ಆದ್ದರಿಂದ ಮುಂದೆ ಬರಲಿರುವ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜತೆಗೆ ಮೈತ್ರಿ ಮುಂದುವರೆಸಲು ಒಪ್ಪಿಕೊಳ್ಳುತ್ತವೆಯಾ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು. ಸಧ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಅಲ್ಲಿನ ಆಡಳಿತರೂಢ ಡಿಎಂಕೆ ಒಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿವೆ. ಒಂದೊಳ್ಳೆಯ ಬಾಂಧವ್ಯ ಎರಡು ಪಕ್ಷದ ನಡುವೆ ಇದೆ. ಆದರೆ ಬಿಹಾರ ಚುನಾವಣೆ ಬಳಿಕ ಇದೇ ಸ್ನೇಹ  ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮುಂದುವರೆಯುತ್ತಾ ಎಂಬುದು ಕೂಡ ಕುತೂಹಲ ಕೆರಳಿಸಿದೆ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಬಿಹಾರದಲ್ಲಿ ತಾನು ಮುಗ್ಗರಿಸಿದ್ದಲ್ಲದೆ, ಆರ್ ಜೆಡಿ ಪಕ್ಷವನ್ನು ಮುಳುಗಿಸಿದೆ ಎಂಬುದು ಜನವಲಯದಲ್ಲಿ ಕೇಳಿ ಬರುತ್ತಿರುವ ಆರೋಪವಾಗಿದೆ.

ಹಾಗೆನೋಡಿದರೆ ಚುನಾವಣೆಗಳಲ್ಲಿ ಸೋಲು ಆಗುವುದು ಕಾಂಗ್ರೆಸ್ ಗೆ ಕಳೆದ ಒಂದೂವರೆ ದಶಕಗಳಿಂದ ಹೊಸತೇನಲ್ಲ. ಹೀಗಾಗಿ ರಾಹುಲ್ ಗಾಂಧಿ ಈ ವಿಚಾರದಲ್ಲಿ ವಿಚಲಿತರಾದಂತೆ ಕಾಣುತ್ತಿಲ್ಲ. ಸೋಲನ್ನು ಗಂಭೀರವಾಗಿ ಪರಿಗಣಿಸಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಿರುವಂತೆಯೂ ಕಾಣಿಸುತ್ತಿಲ್ಲ. ಕೇವಲ ಆರೋಪ ಮಾಡಿಕೊಂಡು ತಿರುಗುವುದಷ್ಟೇ ಅವರಲ್ಲಿ ಕಾಣಿಸುತ್ತಿದೆ. ಆದರೀಗ ಬಿಹಾರ ಚುನಾವಣೆ ನಂತರ ಕರ್ನಾಟಕದಲ್ಲಿ ಆಗಲಿರುವ ಬೆಳವಣಿಗೆಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಎಲ್ಲರಲ್ಲಿರುವ ಕುತೂಹಲವಾಗಿದೆ.

ರಾಜ್ಯದಲ್ಲಿ ಸಿಎಂ ಅಧಿಕಾರದ ಹಸ್ತಾಂತರ ವಿಚಾರ ಸುದ್ದಿಯಲ್ಲಿದೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬೆಂಬಲಿಗರು ಈ ವಿಚಾರದಲ್ಲಿ ಆಗಾಗ್ಗೆ ತಮ್ಮ ಹೇಳಿಕೆಗಳನ್ನು ನೀಡುವುದು ಮಾಮೂಲಿಯಾಗಿದೆ. ಬಿಹಾರ ಚುನಾವಣೆ ಸೋಲಿನ ನಂತರ ಅಧಿಕಾರ ಹಸ್ತಾಂತರ ವಿಚಾರಕ್ಕೆ ರಾಹುಲ್ ಗಾಂಧಿ ಮುಂದಾಗುವುದಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರೇ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎನ್ನುವುದು ಕೆಲವರ ವರಸೆಯಾದರೆ, ಮತ್ತೆ ಕೆಲವರು ಅಧಿಕಾರ ಹಸ್ತಾಂತರ ಮಾಡದೆ ಹೋದರೆ ಭಿನ್ನಮತ ಸ್ಪೋಟಗೊಂಡು ಅಧಿಕಾರದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ರಾಜ್ಯಕ್ಕೆ ನವೆಂಬರ್ ತಿಂಗಳಾಂತ್ಯಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಅವರು ಒಂದು ಸೂಕ್ತ ನಿರ್ಧಾರಕ್ಕೆ ಬರಬಹುದು ಎಂದು ಹೇಳುತ್ತಿದ್ದಾರೆ.

ಒಟ್ಟಾರೆ ಬಿಹಾರದ ಚುನಾವಣೆ ಕಾಂಗ್ರೆಸ್ ಮೇಲೆ ಪರಿಣಾಮ ಬೀರಿದ್ದಂತು ನಿಜ. ಅದರ ಮುಂದಿನ ಗಂಭೀರತೆ ಹೇಗಿರುತ್ತದೆ ಎಂಬುದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಬಿಹಾರದ ತಮ್ಮ ಸೋಲನ್ನು ಮತಗಳ್ಳತನದ ಆರೋಪ ಮಾಡಿ ನುಣುಚಿಕೊಳ್ಳುವುದರಿಂದ ಪ್ರಯೋಜನವೇನು ಇಲ್ಲ. ಸೋಲನ್ನು ಒಪ್ಪಿಕೊಂಡು ಮುಂದಿನ ಚುನಾವಣೆಗೆ ಹೇಗೆ ತಯಾರಾಗಬೇಕು ಎಂಬುದರತ್ತ ನಾಯಕರು ಚಿತ್ತ ಹರಿಸಬೇಕಾಗಿದೆ… ಅದನ್ನು ಮಾಡದೆ ಹೋದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ.

-ಬಿ.ಎಂ.ಲವಕುಮಾರ್

admin
the authoradmin

Leave a Reply