ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಗುರು ನಮನ ಕಾರ್ಯಕ್ರಮದಲ್ಲಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ

ಕುಶಾಲನಗರ(ರಘು ಹೆಬ್ಬಾಲೆ): ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಮುಖ್ಯವಾಗಿ ಶೈಕ್ಷಣಿಕವಾಗಿ ಬಿಲ್ಲವ ಸಮುದಾಯ ಸಮಾಜದಲ್ಲಿ ಬಲಿಷ್ಠರಾಗಬೇಕು ಎಂದು ಸೋಲೂರು ಮಠದ ಪೀಠಾಧ್ಯಕ್ಷ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕರೆ ನೀಡಿದ್ದಾರೆ.
ಪಟ್ಟಣದ ಎಪಿಸಿಎಂಎಸ್ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ತಾಲ್ಲೂಕು ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವತಿಯಿಂದ ಏರ್ಪಡಿಸಿದ್ದ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಗುರು ನಮನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬಿಲ್ಲವ ಸಮಾಜ ಬಾಂಧವರು ಸಂಘಟಿತರಾಗುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಧರ್ಮಗುರು ನಾರಾಯಣ ಗುರುಗಳ ವಿಚಾರಧಾರೆಗಳನ್ನು ಜಮಸಾಮಾನ್ಯರಲ್ಲಿ ಮುಟ್ಟಿಸುವ ಕೆಲಸ ಆಗಬೇಕು.ಬಿಲ್ಲವರು ಆರೋಗ್ಯವಂತ ಹಾಗೂ ಸದೃಢ ಸಮಾಜ ಕಟ್ಟಲು ಮುಂದಾಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಈ ನಾಡು ಕಂಡ ಶ್ರೇಷ್ಠ ಸಾಧಕರಲ್ಲಿ ಒಬ್ಬರಾದ ಕೋಟಿ ಚೆನ್ನಯ್ಯ, ನಾರಾಯಣ ಗುರುಗಳಂತಹ ಮಹನೀಯರ ಆದರ್ಶಗಳು ಹಾಗೂ ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಬಿಲ್ಲವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣ ಹಾಗೂ ಜ್ಞಾನ ಬಹಳ ಮುಖ್ಯ. ಸಮಾಜ ಬಾಂಧವರು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕೆಂದು ಹೇಳಿದರು.
ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಬಿಲ್ಲವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಸಂಘಟನೆಯನ್ನು ಬಲಪಡಿಸಲು ಅನುಕೂಲವಾಗುತ್ತಿದೆ.ಸಮಾಜದ ಬಂಧುಗಳು ತಪ್ಪದೇ ಬಿಲ್ಲವ ಸಮಾಜದಲ್ಲಿ ಹೆಸರು ನೊಂದಾಯಿಸುವ ಮೂಲಕ ಸಮಾಜವನ್ನು ಇನ್ನಷ್ಟು ಬಲಗೊಳಿಸಲು ನೆರವಾಗಬೇಕು. ಹಾಗೆಯೇ ಸಮಾಜದ ಪದಾಧಿಕಾರಿಗಳು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬ ಬೇಕು ಎಂದರು.

ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್ ಪೂಜಾರಿ ಮಾತನಾಡಿ, ತಾಲ್ಲೂಕಿನಲ್ಲಿ 300 ಕ್ಕೂ ಅಧಿಕ ಬಿಲ್ಲವ ಕುಟುಂಬಗಳಿದ್ದು ,ಅಲ್ಪ ಸಮಯದಲ್ಲಿ ರಚನೆಯಾದ ಬಿಲ್ಲವ ಸಮಾಜ ಬಹಳ ಸಮರ್ಥವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಬಿಲ್ಲವ ಸಮುದಾಯದ ಹೆಚ್ಚಿನ ಬಂಧುಗಳು ರಾಜಕೀಯ ಮುಂದೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕೋಟಿ ಚೆನ್ನಯ್ಯ ಮತ್ತು ಶ್ರೀ ನಾರಾಯಣ ಗುರುಗಳ ಭಾವಚಿತ್ರಗಳಿಗೆ ಅತಿಥಿಗಳು ಪುಷ್ಪನಮನ ಸಲ್ಲಿಸಿದರು. ಕೊಡಗು ಎಂಎಲ್ ಸಿ ಸುಜಾ ಕುಶಾಲಪ್ಪ ಹಾಗೂ ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷರಾದ ಲಿಂಗಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕರ್ಕೇರಾ, ಉದ್ಯಮಿ ಮಕ್ಕಂದೂರು ರಮೇಶ್, ಸಮಾಜದ ಗೌರವ ಅಧ್ಯಕ್ಷ ಬಿ.ಟಿ.ರಮೇಶ್, ಕಾರ್ಯದರ್ಶಿ ದಿನೇಶ್, ಉಪಾಧ್ಯಕ್ಷೆ ಕುಸುಮಾವತಿ,ಖಜಾಂಚಿ ಆಶಾ ಅಣ್ಣಪ್ಪ, ಸದಸ್ಯರಾದ ಅಶೋಕ್, ಉಮೇಶ್, ಸುನಿಲ್, ಶಶಿಕಲಾ, ಮನೋಜ್, ಸೌಮ್ಯ ಭರತ್, ಶೋಭಾ, ಭವಾನಿ, ಸುಶೀಲಾ, ಶರಣ್, ಅಣ್ಣು ಪೂಜಾರಿ, ಲೀಲಾ ಪಾಲ್ಗೊಂಡಿದ್ದರು. ಚೈತ್ರ ಶಾಲ್ಯಾನ್ ಸ್ವಾಗತಿಸಿದರು. ಸತೀಶ್ ಕುಂದರ್ ನಿರೂಪಿಸಿದರು. ರೇಶ್ಮಾ ಮೋನಪ್ಪ ವಂದಿಸಿದರು.
ಇದೇ ವೇಳೆ ಇಲ್ಲಿನ ಬೈಚನಳ್ಳಿಯ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಗಣಪತಿ ದೇವಸ್ಥಾನದವರೆಗೂ ಮುಖ್ಯ ರಸ್ತೆಗಳಲ್ಲಿ ಸಮಾಜ ಬಾಂಧವರ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಮೆರವಣಿಗೆ ಸಾಗುವ ಮೂಲಕ ಒಗ್ಗಟ್ಟಿನ ಜಾಗೃತಿ ಯಾತ್ರೆ ನಡೆಯಿತು.ಹಾಗೆಯೇ ಸಮಾಜ ಬಾಂಧವರಿಗೆ ಹಮ್ಮಿಕೊಂಡಿದ್ದ ಅಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಮತ್ತು ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.







