Editor choiceLatest

ಈಗ ಯಾರು ಬೇಕಾದರೂ ಪತ್ರಕರ್ತರಾಗಬಹುದು… ನಕಲಿ ಪತ್ರಕರ್ತರಿದ್ದಾರೆ ಹುಷಾರ್!

ಸೋಷಿಯಲ್ ಮೀಡಿಯಾ ಮುನ್ನಲೆಗೆ ಬಂದ ನಂತರ ಅದರಲ್ಲೂ ಯೂಟ್ಯೂಬ್ ನಲ್ಲಿ ನ್ಯೂಸ್ ಚಾನಲ್ ಗಳನ್ನು ಸುಲಭವಾಗಿ ಸೃಷ್ಟಿ ಮಾಡಲು ಅವಕಾಶವಿರುವುದರಿಂದ ಬಹುತೇಕರು ಚಾನಲ್ ಗಳನ್ನು ಸೃಷ್ಟಿ ಮಾಡಿಕೊಂಡು ಅದರಲ್ಲಿ ಹಗಲು ರಾತ್ರಿ ಎನ್ನದೆ ಹೊಸ ವಿಚಾರಗಳನ್ನು ಹಾಕುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇನ್ನು ಕೆಲವರು ನ್ಯೂಸ್ ಚಾನಲ್ ಗಳ ಹೆಸರಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಪೀಕುವ ಕೆಲಸಕ್ಕೆ ಮುಂದಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಈಗಾಗಲೇ ಇಂತಹ ಬ್ಲಾಕ್ ಮೇಲ್ ಪತ್ರಕರ್ತರಿಂದ ನೈಜ ಕಾರ್ಯನಿರತ ಪತ್ರಕರ್ತರಿಗೆ ಮುಜುಗರ ತರುವಂತಾಗಿದೆ.

ಒಂದು ಕಾಲದಲ್ಲಿ ಗಲ್ಲಿಗೊಬ್ಬರು ಟ್ಯಾಬ್ಲಾಯ್ಡ್ ಪತ್ರಿಕೆಯನ್ನು ನಡೆಸುತ್ತಿದ್ದರು. ಅವತ್ತು ಜನಪ್ರಿಯವಾಗಿದ್ದ ಟ್ಯಾಬ್ಲಾಯ್ಡ್ ಪತ್ರಿಕೆಗಳ ಟೈಟಲ್ ನ್ನೇ ಹೋಲುವಂತೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಅದರ ಹೆಸರಿನಲ್ಲಿ ರೋಲ್ ಕಾಲ್ ಮಾಡುತ್ತಿದ್ದವರಿಗೇನು ಕೊರತೆಯಿರಲಿಲ್ಲ. ಇಂತಹವರು ಸೃಷ್ಟಿಸಿದ ಅನಾಹುತಗಳಿಗೆ ಲೆಕ್ಕವೇ ಇಲ್ಲ. ಭ್ರಷ್ಟಾಚಾರಿಗಳನ್ನು ಹುಡುಕಿ ಹೆದರಿಸಿ ಅವರಿಂದಲೇ ಹಣ ವಸೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲವರು ಸಿಕ್ಕಿ ಬಿದ್ದು ಬಣ್ಣ ಬಯಲಾದರೆ ಮತ್ತೆ ಕೆಲವರು ಸಿಕ್ಕಿ ಬೀಳದಂತೆ ಜಾಣ್ಮೆಯಿಂದ ತಪ್ಪಿಸಿಕೊಂಡವರು ಇಲ್ಲದಿಲ್ಲ.

ಟ್ಯಾಬ್ಲಾಯ್ಡ್ ಜಮಾನ ಮುಗಿದ ಬಳಿಕ ಯೂಟ್ಯೂಬ್ ನಲ್ಲಿ ಚಾನೆಲ್ ಗಳನ್ನು ಆರಂಭಿಸಿ ಅದರ ಮೂಲಕ ಸ್ಟಿಂಗ್ ಆಪರೇಷನ್ ನೆಪದಲ್ಲಿ ಹಣ ವಸೂಲಿ ದಂಧೆಗಿಳಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರು ನಿಜ ಹೇಳಬೇಕೆಂದರೆ ಪತ್ರಕರ್ತರೇ ಅಲ್ಲ. ಇವರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸದಸ್ಯತ್ವವಾಗಲೀ, ಇನ್ಯಾವುದೇ  ರೀತಿಯ ಮಾನ್ಯತೆಗಳಾಗಲೀ ಇರುವುದಿಲ್ಲ. ಇವರ ಜಾಯಮಾನವೇ ಹೆದರಿಸಿ ಬೆದರಿಸಿ ಡೀಲ್ ಮಾಡುವುದೇ ಆಗಿರುತ್ತದೆ. ಇವರು ಒಂಥರಾ ಸ್ವಘೋಷಿತ ಪತ್ರಕರ್ತರಾಗಿರುತ್ತಾರೆ.

ಇವತ್ತು ಯಾರು ಬೇಕಾದರೂ ಪತ್ರಕರ್ತರಾಗಬಹುದು ಎಂಬ ಸ್ಥಿತಿಗೆ ಬಂದು ನಿಂತಿದೆ. ಹೀಗಾಗಿ ಪತ್ರಕರ್ತರಿಗೆ ಇರಬೇಕಾದ ಯಾವುದೇ ಅಹರ್ತೆಯ ಅಗತ್ಯವಿಲ್ಲ. ತಮ್ಮದೇ ಆದ ಪತ್ರಿಕೆ ಅಥವಾ ಯೂಟ್ಯೂಬ್ ನಲ್ಲಿ ಚಾನಲ್, ವೆಬ್ ಸೈಟ್ ಮಾಡಿಕೊಂಡು ಅದರ ಮೂಲಕವೇ ಅಧಿಕಾರಿಗಳನ್ನು ಬೆದರಿಸಿ, ರಾಜಕಾರಣಿಗಳ ಮುಂದೆ ಕೈಕಟ್ಟಿಕೊಂಡು ನಿಂತೋ ಇನ್ನಿತರ ವಾಮಮಾರ್ಗದಿಂದ ಹಣವನ್ನು ಸಂಪಾದಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಹಲವರು ಸಿಕ್ಕಿ ಹಾಕಿಕೊಂಡು ನಾಯಿಗೆ ಹೊಡೆದಂತೆ ಹೊಡೆಸಿಕೊಂಡರೆ, ಮತ್ತೆ ಕೆಲವರು ಜೈಲಿಗೂ ಹೋಗಿ ಮುದ್ದೆ ಮುರಿದಿದ್ದಾರೆ.

ವಂಚಕರಿಗೆ ದಂಧೆ ಮಾಡಲು ಇದೊಂದು ಸುಲಭದಾರಿಯಾಗಿದೆ. ಹೀಗಾಗಿ ಕೆಲವರು ತಮ್ಮದೇ ಹಾದಿಯ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಶ್ರಮಪಟ್ಟು ದುಡಿಯುವ ಬದಲು ಅಡ್ಡದಾರಿಗಳನ್ನು  ಹಿಡಿಯುತ್ತಿದ್ದಾರೆ.  ಇದು ನ್ಯಾಯ, ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ನೈಜ ಪತ್ರಕರ್ತರಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಇದರಿಂದ ಪತ್ರಕರ್ತರನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುವ ಪರಿಸ್ಥಿತಿ ಬಂದೊದಗಿದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಯಾರನ್ನೂ ಬೇಕಾದರೂ ವಾಚಾಮಗೋಚರವಾಗಿ ಬಯ್ಯುವ, ಕೆಟ್ಟದಾಗಿ ನಿಂದಿಸುವ, ಅಶ್ಲೀಲ ಕಮೆಂಟ್ ಗಳನ್ನು ಮಾಡುವುದು ಸುಲಭವಾಗಿದೆ.

ಇದು ಬಹಳಷ್ಟು ಜನರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಾಗಿದೆ. ಆದರೆ ಇಲ್ಲಿ ಏನನ್ನೂ ಮಾಡಲು ಸಾಧ್ಯವಾಗದ ಕಾರಣದಿಂದಾಗಿ ಮತ್ತು ಇಂತಹ ಕಮಂಗಿಗಳ ಬಗ್ಗೆ ಜನ ಕೂಡ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಬಿಟ್ಟಿದ್ದಾರೆ. ಆದರೂ ಏನಾದರೊಂದು ಮಾರ್ಗಸೂಚಿ, ನಿಯಮಗಳನ್ನು ಕಟ್ಟುನಿಟ್ಟಾಗಿ ತರದೆ ಹೋದರೆ ಮತ್ತು ನಕಲಿ ಮೇಲ್ ಐಡಿ ಕ್ರಿಯೇಟ್ ಮಾಡುವುದು,  ಸೋಷಿಯಲ್ ಮೀಡಿಯಾಗಳಲ್ಲಿ ನಕಲಿ ಐಡಿಗಳನ್ನು ಕ್ರಿಯೇಟ್ ಮಾಡಿ ಸಿಕ್ಕಸಿಕ್ಕವರನ್ನು ಕೆಟ್ಟದಾಗಿ ನಿಂದಿಸುವುದು, ಕಮೆಂಟ್ ಮಾಡುವುದನ್ನೇ ಕಾಯಕ ಮಾಡಿಕೊಂಡು ವಿಕೃತ ಸಂತೋಷ ಪಡುವ ಗಿರಾಕಿಗಳಿಗೆ ಇತಿಶ್ರೀ ಹಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಾಗಿದೆ.

ಈಗಾಗಲೇ ಸೋಷಿಯಲ್ ಮೀಡಿಯಾವನ್ನು ಗಬ್ಬೆಬ್ಬಿಸುವ ಮತ್ತು ಆ ಮೂಲಕವೇ ಬೇರೆಯವರ ಬದುಕಿಗೂ ಕುತ್ತು ತರುವ ಕೆಲಸಗಳು ಭರದಿಂದ ಸಾಗುತ್ತಿವೆ. ಇಲ್ಲಿ ಸುಳ್ಳುಗಳನ್ನು ಸತ್ಯಮಾಡುವ, ತೇಜೋವಧೆ ಮಾಡುವುದು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್, ಫೋನ್ ನಂಬರ್, ಓಟಿಪಿ ಮುಂತಾದವುಗಳ ಆಧಾರದಲ್ಲಿ ಸೋಷಿಯಲ್ ಮೀಡಿಯಾಗಳು ಕೆಲಸ ನಿರ್ವಹಿಸುವಂತಾದರೆ ಒಳಿತಾಗಬಹುದು, ಜತೆಗೆ ಈಗ ಆಗುತ್ತಿರುವ ಅನಾಚಾರಗಳಿಗೂ ಕಡಿವಾಣ ಬೀಳಬಹುದೇನೋ?

ಸುಳ್ಳರು, ಕಳ್ಳರು, ವಂಚಕರು, ಭ್ರಷ್ಟಾಚಾರಿಗಳು ಎಲ್ಲ ರೀತಿಯ ಕ್ಷೇತ್ರವನ್ನೂ ಪ್ರವೇಶಿಸಿರುವುದರಿಂದ ಬಹುತೇಕ ಕ್ಷೇತ್ರಗಳು ಕಲುಷಿತವಾಗಿವೆ. ಇದಕ್ಕೆ ಪತ್ರಿಕೋದ್ಯಮವೂ ಹೊರತಾಗಿಲ್ಲ. ಇಲ್ಲಿ ಅಸಲಿಗಿಂತ ನಕಲಿಯೇ ಹೆಚ್ಚಾಗಿರುವ ಕಾರಣದಿಂದಾಗಿ ಜನರು ಯಾರನ್ನು ನಂಬಬೇಕು ಎಂದು ಗೊಂದಲಕ್ಕೀಡಾಗಿದ್ದಾರೆ. ಭ್ರಷ್ಟಾಚಾರಿಗಳು ಪತ್ರಿಕೋದ್ಯಮವನ್ನು ಬಳಸಿಕೊಂಡು ಬದುಕುವುದನ್ನು ಕಲಿತುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪತ್ರಕರ್ತರು ಎಂದು ಹೇಳಿಕೊಂಡು ಓಡಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸೋಷಿಯಲ್ ಮೀಡಿಯಾವನ್ನೇ ಮೀಡಿಯಾ ಎಂದು ಕೊಂಡು ಅಡ್ಡಾಡುವವರಿಗೆ ಕೊರತೆಯಿಲ್ಲ.

ಮೊದಲೆಲ್ಲ ಪತ್ರಿಕೆಯಲ್ಲಿ ಕೆಲಸ ಮಾಡದೆ, ಜನಪ್ರಿಯ ಪತ್ರಿಕೆಗಳ ಹೆಸರು ಹೇಳಿಕೊಂಡು ಬ್ಲಾಕ್ ಮೇಲ್ ಮಾಡುವ ಪತ್ರಕರ್ತರಿದ್ದರು. ಅಂತಹವರು ಸುಲಭವಾಗಿ ಸಿಕ್ಕಿ ಬೀಳುತ್ತಿದ್ದರು. ಆದರೆ ಈಗ ಅವರದ್ದೇ ಆದ ಸೋಷಿಯಲ್ ಮೀಡಿಯಾದಲ್ಲಿ ಚಾನಲ್ಲೋ, ವೆಬ್ ಸೈಟ್ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಸೊಷಿಯಲ್ ಮೀಡಿಯಾ ಮಾತ್ರವಲ್ಲದೆ, ಹುಣ್ಣಿಮೆಗೋ ಅಮಾವಾಸ್ಯೆಗೂ ಪೇಪರ್ ಪ್ರಿಂಟ್ ಹಾಕಿಕೊಂಡು ಅದನ್ನು ಕಂಕುಳಿನಲ್ಲಿ ಸಿಕ್ಕಿಸಿಕೊಂಡು ಅಧಿಕಾರಿಗಳನ್ನು ಇನ್ನಿತರರನ್ನು ಹುಡುಕಿ ಅವರ ಹೆದರಿಸಿ ಬೆದರಿಸಿ ಹಣಪೀಕುವ ದಂಧೆ ಮಾಡಿಕೊಂಡಿದ್ದಾರೆ.

ಮೀಡಿಯಾ ಹೆಸರಿನಲ್ಲಿ ವಸೂಲಿ ಮಾಡುವ ನಕಲಿ ವಂಚಕರು ಈಗೀಗ ಅಲ್ಲಲ್ಲಿ ಹೆಜ್ಜೆಗೊಬ್ಬರಂತೆ ಸಿಗುತ್ತಿದ್ದಾರೆ. ಕೆಲವರಷ್ಟೇ ಸಿಕ್ಕಿ ಬೀಳುತ್ತಿದ್ದಾರೆ. ಕೆಲವರು ಸಿಕ್ಕಿಬಿದ್ದಾಗ ಪ್ರಭಾವ ಬಳಸಿಯೋ, ಕೈಕಾಲು ಹಿಡಿದು ಬೆಳಕಿಗೆ ಬಾರದಂತೆ ನೋಡಿಕೊಂಡರೆ, ಇನ್ನು ಕೆಲವರು ತದಕಿಸಿಕೊಂಡಿದ್ದಾರೆ. ಮತ್ತೆ ಕೆಲವರು ಜೈಲಿಗೂ ಹೋಗಿ ಬಂದಿದ್ದಾರೆ. ಇಂತಹ ನಕಲಿ ಪತ್ರಕರ್ತರು ಎಲ್ಲೆಡೆಯೂ ಇರಬಹುದು.. ಬ್ಲಾಕ್ ಮೇಲ್ ಮಾಡುವುದು, ಬೆದರಿಸುವುದು ಮಾಡಿದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಅಂತಹವರ ವಿರುದ್ಧ ದೂರು ನೀಡುವುದೊಂದೇ ದಾರಿ…

B M Lavakumar

admin
the authoradmin

Leave a Reply