ಜು.22, ವಿಶ್ವ ಮೆದುಳು ಆರೋಗ್ಯ ದಿನವಾಗಿದ್ದು, ನಾವೆಲ್ಲರೂ ನಮ್ಮ ಮೆದುಳಿನ ಆರೋಗ್ಯದ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಬೇಕಾಗಿದೆ. ದೇಹವನ್ನು ನಿಯಂತ್ರಣ ಮಾಡುವ ಮೆದುಳನ್ನು ನಾವು ಜತನದಿಂದ ಕಾಪಾಡಿಕೊಳ್ಳಬೇಕಾಗಿದೆ. ಆದಷ್ಟು ನಾವು ಮೆದುಳಿಗೆ ಒತ್ತಡ ನೀಡದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಇವತ್ತಿನ ಲೈಫ್ ಸ್ಟೈಲ್ ನಲ್ಲಿ ನಮ್ಮ ಹೆಚ್ಚಿನ ಕೆಲಸಗಳು ದೇಹಕ್ಕಿಂತ ಮೆದುಳಿನ ಮೇಲೆ ಒತ್ತಡ ಹಾಕುತ್ತಿವೆ. ಹೀಗಾಗಿ ಎಲ್ಲ ವಯಮಾನದವರು ಮೆದುಳಿನ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬರುತ್ತಿದೆ.
ಇದನ್ನೂ ಓದಿ: ಮರ್ಕಟದಂತಹ ಮನಸ್ಸನ್ನು ಏಕಾಗ್ರತೆಯ ಗೂಟಕ್ಕೆ ಕಟ್ಟಿ ಹಾಕುವುದು ಹೇಗೆ..?
ನಮ್ಮ ದೇಹದ ಪ್ರತಿ ಅಂಗವೂ ಮುಖ್ಯವೇ…. ಹೀಗಿರುವಾಗ ಇಡೀ ದೇಹವನ್ನು ನಿಯಂತ್ರಿಸುವ ನಮ್ಮ ಆಲೋಚನೆಗಳಿಗೆ ಸಾಥ್ ನೀಡುವ, ನಮ್ಮಲ್ಲಿ ಹೊಸ ಐಡಿಯಾಗಳನ್ನು ಹುಟ್ಟು ಹಾಕಿ ಒಂದೊಳ್ಳೆಯ ದಾರಿಯಲ್ಲಿ ಕರೆದೊಯ್ಯುವ ಮೆದುಳಿನ ಆರೋಗ್ಯವನ್ನು ನಾವು ನೋಡಿಕೊಳ್ಳಬೇಕಾಗಿದೆ. ಮನುಷ್ಯ ತನ್ನ ಮೆದುಳಿನ ಆರೋಗ್ಯವನ್ನು ಏಕೆ ಕಾಪಾಡಿಕೊಳ್ಳಬೇಕು? ಹೇಗೆ ಕಾಪಾಡಿಕೊಳ್ಳಬೇಕು? ಮೆದುಳಿನ ಆರೋಗ್ಯದತ್ತ ನಿರ್ಲಕ್ಷ್ಯ ವಹಿಸಿದರೆ ಅದು ದೇಹ ಮತ್ತು ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ.
ಮೆದುಳು ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ದೈಹಿಕ ಚಲನೆಗಳಿಂದ ಹಿಡಿದು ಆಲೋಚನೆಗಳು, ಭಾವನೆಗಳು ಮತ್ತು ಸ್ಮರಣೆಯವರೆಗೆ ಎಲ್ಲವನ್ನೂ ನಿಯಂತ್ರಿಸುತ್ತದೆ. ಹೀಗಾಗಿಯೇ ಆರೋಗ್ಯ ಮತ್ತು ದೈನಂದಿನ ಕಾರ್ಯಚಟುವಟಿಕೆಗೆ ಇದರ ಆರೈಕೆ ಅತ್ಯಗತ್ಯ ಎಂಬುದಾಗಿ ಅಭಿಪ್ರಾಯಪಡುವ ತಜ್ಞರು ಅದರ ಕಾರ್ಯ ಚಟುವಟಿಕೆಯ ಬಗ್ಗೆಯೂ ತಿಳಿಸಿದ್ದು, ಮೆದುಳು ಉಸಿರಾಟ, ಹೃದಯಬಡಿತ, ಜೀರ್ಣಕ್ರಿಯೆ ಮತ್ತು ಸಮನ್ವಯವನ್ನು ನಿಯಂತ್ರಿಸಿ,. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ; ನಾವೆಲ್ಲರೂ ದೇಹದ ಆರೋಗ್ಯ ಮಾತ್ರವಲ್ಲ.. ಮನಸ್ಸಿನ ಆರೋಗ್ಯಕ್ಕೂ ಒತ್ತು ನೀಡಬೇಕು
ಇನ್ನು ಆರೋಗ್ಯಕರ ಮೆದುಳು ಏಕಾಗ್ರತೆ, ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಲ್ಲಿ, ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ಮಾಹಿತಿಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿದೆ. ಜತೆಗೆ ಭಾವನೆಗಳು ಮತ್ತು ಮಾನಸಿಕ ಯೋಗಕ್ಷೇಮವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮೆದುಳಿನ ಆರೋಗ್ಯವು ಮನಸ್ಥಿತಿ, ಒತ್ತಡದ ಮಟ್ಟಗಳು ಮತ್ತು ಭಾವನಾತ್ಮಕ ಸ್ಥಿರತೆಗೆ ನಿಕಟ ಸಂಬಂಧ ಹೊಂದಿದೆ. ನಡೆಯುವುದು ಮತ್ತು ಮಾತನಾಡುವುದರಿಂದ ಹಿಡಿದು ಕೆಲಸ ಮತ್ತು ಸಾಮಾಜಿಕತೆಯವರೆಗೆ ಜನರು ಮಾಡುವ ಬಹುತೇಕ ಎಲ್ಲದರಲ್ಲೂ ಮೆದುಳಿನ ಕಾರ್ಯ ಇದ್ದೇ ಇರುತ್ತದೆ.
ಮೆದುಳಿನ ಅಸ್ವಸ್ಥತೆಗಳು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇದರಿಂದ ದೇಹಕ್ಕೆ ಅಪಾಯ ಎದುರಾಗುವುದರೊಂದಿಗೆ ಪಾರ್ಶ್ವವಾಯು, ಆಲ್ಜೈಮರ್ ಸ್ ಅಥವಾ ಪಾರ್ಕಿನ್ಸನ್ ಕಾಯಿಲೆಗೆ ಒಳಗಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮೆದುಳಿಗೂ ಪಾರ್ಶ್ವವಾಯು ಕಾಯಿಲೆಗೂ ಎತ್ತಣದ ಸಂಬಂಧ ಎನ್ನುವುದನ್ನು ನೋಡಿದ್ದೇ ಆದರೆ, ಮೆದುಳಿಗೆ ರಕ್ತದ ಹರಿವು ಅಡ್ಡಿಪಡಿಸುವುದರಿಂದ ಪಾರ್ಶ್ವವಾಯು ಬಾಧಿಸುತ್ತದೆ. ಇದರ ಆರಂಭಿಕ ಚಿಹ್ನೆಗಳು ಹೇಗಿರುತ್ತವೆ ಎಂದರೆ ದೇಹದ ಒಂದು ಬದಿಯಲ್ಲಿ ಹಠಾತ್ ದೌರ್ಬಲ್ಯ, ಮಂದಮಾತು, ತಲೆತಿರುಗುವಿಕೆ ಮತ್ತು ದೃಷ್ಟಿ ಬದಲಾವಣೆಗಳು ಕಾಣಿಸುತ್ತವೆ.
ಇದನ್ನೂ ಓದಿ; ಸದ್ಗುಣ ಬೆಳೆಯಬೇಕಾದರೆ ನಾವು ಯಾವ ಆಹಾರ ಸೇವಿಸಬೇಕು?
ಮೆದುಳಿನ ಆರೋಗ್ಯ ಕೈಕೊಟ್ಟಾಗ ಅಪಸ್ಮಾರ ಕಾಡಬಹುದು. ಪುನರಾವರ್ತಿತ ರೋಗಗ್ರಸ್ತವಾಗುವಿಕೆಗಳಿಂದ ಗುರುತಿಸಲಾದ ನರವೈಜ್ಞಾನಿಕ ಸ್ಥಿತಿ ಇದಾಗಿದ್ದು, ಅಸಾಮಾನ್ಯ ಸಂವೇದನೆಗಳು, ಗೊಂದಲದ ಸಂಕ್ಷಿಪ್ತ ಕ್ಷಣಗಳು, ಸೆಳೆತದಂತಹ ಗುಣಲಕ್ಷಣಗಳು ಇದರದ್ದಾಗಿದೆ. ಇಷ್ಟೇ ಅಲ್ಲದೆ, ಬುದ್ಧಿಮಾಂದ್ಯತೆಗೆ ಕಾರಣವಾಗುವ ಪ್ರಗತಿಶೀಲ, ಮಿದುಳಿನ ಕ್ಷೀಣಗೊಳ್ಳುವ ರೋಗವಾದ ಆಲ್ಜೈಮರ್‍ಸ್ ಕಾಯಿಲೆಗೊಳಗಾಗುವ ಸಾಧ್ಯತೆ ಇರುತ್ತದೆ. ಹೇಗಿರುತ್ತವೆ ತೀರಾ ಇತ್ತೀಚಿನ ಘಟನೆಗಳನ್ನು ಮರೆತುಬಿಡುವುದು, ಪದಗಳನ್ನು ಹುಡುಕುವಲ್ಲಿ ತೊಂದರೆ ಪಡುವುದು, ಮನಸ್ಥಿತಿ ಅಥವಾ ವ್ಯಕ್ತಿತ್ವದಲ್ಲಿನ ಬದಲಾವಣೆಗಳು ಈ ಕಾಯಿಲೆಯ ಆರಂಭಿಕ ಚಿಹ್ನೆಗಳಾಗಿರುತ್ತವೆ.
ಇನ್ನೊಂದು ಕಾಯಿಲೆ ಪಾರ್ಕಿನ್ಸನ್ ಆಗಿದ್ದು ಚಲನೆ ಮತ್ತು ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಇದರ ಆರಂಭಿಕ ಚಿಹ್ನೆಗಳು ಯಾವುವು ಎಂದರೆ, ಕಂಪನಗಳು, ನಿಧಾನವಾದ ಚಲನೆಗಳು, ಬಿಗಿತ, ಕೈಬರಹ ಅಥವಾ ಮಾತಿನಲ್ಲಿನ ಬದಲಾವಣೆಗಳು ಮತ್ತು ತೊಂದರೆಗೊಳಗಾದ ನಿದ್ರೆಯ ಚಕ್ರವಾಗಿದೆ. ಇಷ್ಟೇ ಅಲ್ಲದೆ ಮಲ್ಟಿಪಲ್ ಸ್ಕ್ಲೆರೋಸಿಸ್(ಎಂಎಸ್) ಕಾಡಲಿದ್ದು, ಇದು ನರಗಳ ಹೊದಿಕೆಗಳಿಗೆ ಹಾನಿಯುಂಟು ಮಾಡುವ ಆಟೋ ಇಮ್ಯೂನ್ ಸ್ಥಿತಿಯಾಗಿದೆ. ಇದರ ಆರಂಭಿಕ ಚಿಹ್ನೆಗಳು ಹೇಗಿರುತ್ತವೆ ಎಂದರೆ ಮರಗಟ್ಟುವಿಕೆ, ದೃಷ್ಟಿ ಸಮಸ್ಯೆಗಳು, ಆಯಾಸ ಮತ್ತು ಸಮನ್ವಯದ ತೊಂದರೆ, ಮೆದುಳಿನ ಗಡ್ಡೆಗಳು, ಮೆದುಳಿನಲ್ಲಿ ಅಥವಾ ಅದರ ಸುತ್ತಮುತ್ತ ಅಸಹಜ ಬೆಳವಣಿಗೆಗಳು ಕಾಣಿಸುವುದರೊಂದಿಗೆ ರೋಗ ಉಲ್ಭಣಗೊಳ್ಳುತ್ತವೆ.
ಇದನ್ನೂ ಓದಿ; ಒತ್ತಡದ ಬದುಕಿನಲ್ಲಿ ಮರೀಚಿಕೆಯಾಗುತ್ತಿರುವ ಮಾನಸಿಕ ನೆಮ್ಮದಿ…
ಇಷ್ಟೆಲ್ಲ ರೋಗಗಳು ನಮ್ಮನ್ನು ಕಾಡಬಾರದೆಂದರೆ ನಾವು ಮೊದಲಿಗೆ ಮೆದುಳಿನ ಆರೋಗ್ಯಕ್ಕೆ ಒತ್ತು ನೀಡುವುದನ್ನು ಕಲಿಯಬೇಕಿದೆ. ಹಾಗಾದರೆ ಮೆದುಳನ್ನು ಆರೋಗ್ಯವಾಗಿಡುವುದು ಹೇಗೆ? ಎಂಬ ಪ್ರಶ್ನೆಯೂ ನಮ್ಮ ಸುತ್ತ ಗಿರಕಿಹೊಡೆಯದಿರದು. ಇದರ ಬಗ್ಗೆ ತಜ್ಞರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಅದನ್ನು ಪಾಲಿಸಿದ್ದೇ ಆದರೆ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಹಾಗಾದರೆ ಅದೇನು ಸಲಹೆ ಎಂದು ನೋಡಿದ್ದೇ ಆದರೆ ಎಲ್ಲವೂ ನಮ್ಮ ಲೈಫ್ ಸ್ಟೈಲ್ ಗೆ ಸಂಬಂಧಿಸಿದ್ದಾಗಿದೆ.
ಮೆದುಳಿನ ಆರೋಗ್ಯವನ್ನು ನೋಡಿಕೊಳ್ಳಲು ತೀವ್ರವಾದ ಬದಲಾವಣೆಗಳ ಅಗತ್ಯವಿಲ್ಲ ಎನ್ನುವ ತಜ್ಞರು ಸರಳ ದೈನಂದಿನ ಅಭ್ಯಾಸಗಳು ಸಹ ದೊಡ್ಡ ಬದಲಾವಣೆಯನ್ನು ತರಬಹುದು ಎಂದಿದ್ದಾರೆ. ಆರೋಗ್ಯಕರ ಜೀವನಶೈಲಿಯ ಆಯ್ಕೆಗಳ ಬಗ್ಗೆ ತಿಳಿಸಿದ್ದು, ಅದರಂತೆ ಸ್ಮರಣೆ, ಗಮನ, ಮನಸ್ಥಿತಿ ಮತ್ತು ದೀರ್ಘಾವಧಿಯ ಮೆದುಳಿನ ಕಾರ್ಯವನ್ನು ಬೆಂಬಲಿಸುತ್ತದೆ. ಸಮತೋಲಿತ ಆಹಾರವನ್ನು ಸೇವಿಸಿ. ನಿಯಮಿತ ದೈಹಿಕ ಚಟುವಟಿಕೆಗಳನ್ನು ಪಡೆಯಿರಿ. ನಿದ್ರೆಗೆ ಆಧ್ಯತೆ ನೀಡಿ. ಮಾನಸಿಕವಾಗಿ ಸಕ್ರಿಯರಾಗಿರಲು ಓದುವುದು. ಒತ್ತಡವನ್ನು ನಿಯಂತ್ರಿಸುವುದು. ಧೂಮಪಾನವನ್ನು ತಪ್ಪಿಸಿ ಮತ್ತು ಮದ್ಯವನ್ನು ಮಿತಗೊಳಿಸಿ. ನಿಯಮಿತ ಆರೋಗ್ಯ ತಪಾಸಣೆಯನ್ನು ನಿಗದಿಪಡಿಸಿಕೊಂಡರೆ ಮೆದುಳು ಆರೋಗ್ಯವಾಗಿರುತ್ತದೆ ಎಂದಿದ್ದಾರೆ.
B M Lavakumar