ವಿಜ್ಞಾನ ಲೋಕದ ಮಹಾ ಬೆಳಕು ಸರ್ ಸಿ ವಿ ರಾಮನ್… ಇವರ ಬದುಕು ಮತ್ತು ಸಾಧನೆ ಇಲ್ಲಿದೆ…
ಫೆಬ್ರವರಿ 28, ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದಕ್ಕೆ ಕಾರಣಕರ್ತರಾದವರು ಭೌತ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದು ಭಾರತದ ಕೀರ್ತಿಯನ್ನು ಪ್ರಪಂಚದ ಉದ್ದಗಲಕ್ಕೂ ಬೆಳಗಿದ ಪ್ರಚಂಡ ಪ್ರತಿಭೆಯ ಸರ್ ಸಿ.ವಿ. ರಾಮನ್… ಹೀಗಾಗಿ ಅವರ ಬದುಕು ಮತ್ತು ಸಾಧನೆ ಕುರಿತಂತೆ ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಅವರು ಇಲ್ಲಿ ಬರೆದಿದ್ದಾರೆ.
ಸಿ ವಿ ರಾಮನ್ ಅವರು ಅಗಾಧ ಪ್ರತಿಭೆಯ, ಅದ್ಭುತ ಆಲೋಚನಾ ಶಕ್ತಿಯ, ಅನನ್ಯ ಪ್ರಯೋಗಶೀಲತೆಯ, ಅಪ್ರತಿಮ ಸಾಧನೆಯ, ಅಪೂರ್ವ ವ್ಯಕ್ತಿತ್ವದ ವಿಜ್ಞಾನ ಲೋಕದ ಮಹಾಬೆಳಕವರು. 1928ನೇ ಇಸವಿಯು ಭಾರತವು ವಿಜ್ಞಾನ ಇತಿಹಾಸದ ಹೆದ್ದಾರಿಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ವಿಶಿಷ್ಟ ವರ್ಷ. ಒಂದು ರೀತಿ ವಿಜ್ಞಾನ ಪ್ರಪಂಚದಲ್ಲಿ ಭಾರತಕ್ಕೆ ಸುವರ್ಣೋದಯವಾದ ವರ್ಷವದು.

ಆ ವರ್ಷ ಫೆಬ್ರವರಿ 28ರಂದು ಕನ್ನಡ ನಾಡಿನ ಬೆಂಗಳೂರಿನ ಪ್ರತಿಷ್ಟಿತ ಸೆಂಟ್ರಲ್ ಕಾಲೇಜಿನ ಭೌತಶಾಸ್ತ್ರ ಸಂಘದವರು ಸಿ.ವಿ. ರಾಮನ್ ಅವರನ್ನು ಉಪನ್ಯಾಸ ನೀಡಲು ಕರೆಸಿದ್ದರು. ಆ ಸಂದರ್ಭದಲ್ಲಿ ರಾಮನ್ನರು ಸೆಂಟ್ರಲ್ ಕಾಲೇಜಿನಲ್ಲಿ ಬೆಳಕನ್ನು ಕುರಿತು ತಮ್ಮದೇ ಆದ ಆವಿಷ್ಕಾರದ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದರು.
ಇದೇ ವಿಷಯ ಮುಂದೆ ಬೆಳಕಿನ ಬಗೆಗಿನ ಮಹತ್ವಪೂರ್ಣ ಸಂಶೋಧನೆಯಾಗಿ “ರಾಮನ್ ಪರಿಣಾಮ” ಎಂದು ಹೆಸರಾಗಿ ಅವರಿಗೆ ನೊಬೆಲ್ ಪುರಸ್ಕಾರ ತಂದುಕೊಟ್ಟದ್ದು ಈಗ ವಿಜ್ಞಾನ ಜಗತ್ತಿನ ಇತಿಹಾಸ. ಹಾಗೆಯೇ ಫೆಬ್ರವರಿ 28ರ ದಿನಕ್ಕೆ ವಿಶೇಷ ಮಹತ್ವ ನೀಡಿ ಪ್ರತಿವರ್ಷ ಅಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಮನ್ ಪರಿಣಾಮದ ಬೆಳಕಿನ ಸಂಶೋಧನೆ ನಡೆದದ್ದು ಮತ್ತು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಎರಡೂ ಒಂದೇ ದಿನ ಆಗಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 28ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಗೊಂದು ವಿಶಿಷ್ಟ ಮಹತ್ವವಿದೆ.

ಬೆಳಕಿನ ಆವಿಷ್ಕಾರದ ಹಾದಿಯಲ್ಲಿ ವಿಜ್ಞಾನ ವಿಶ್ವಕ್ಕೆ ಹೊಸಬೆಳಕು ನೀಡಿದ ಚಂದ್ರಶೇಖರ ವೆಂಕಟರಾಮನ್ ಜನಿಸಿದ್ದು 1888ರ ನವೆಂಬರ್ 7ರಂದು. ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಚಿನಾಪಳ್ಳಿ ಪಟ್ಟಣದ ಸಮೀಪದ ಅಯ್ಯನಪಟ್ಟಿ ಗ್ರಾಮ ಅವರ ಹುಟ್ಟೂರು. ತಂದೆ ಚಂದ್ರಶೇಖರ ಅಯ್ಯರ್, ವೃತ್ತಿಯಲ್ಲಿ ಭೌತಶಾಸ್ತ್ರ ಅಧ್ಯಾಪಕರು. ತಾಯಿ ಪಾರ್ವತಿ ಅಮ್ಮಾಳ್, ವಿದ್ಯಾವಂತ ಸುಸಂಸ್ಕೃತ ಕುಟುಂಬವಾದ್ದರಿಂದ ಬಾಲ್ಯದಲ್ಲೇ ರಾಮನ್ನರಿಗೆ ಒಳ್ಳೆ ಪರಿಸರ, ಪ್ರೋತ್ಸಾಹದ ವಾತಾವರಣವಿತ್ತು.
ಇದನ್ನೂ ಓದಿ: ಮಹಾಶಿವರಾತ್ರಿ… ಪುರಾಣ ಕಥೆಗಳು ತೆರೆದಿಡುವ ಸಂಗತಿಗಳೇನು?
ಹಾಗಾಗಿ ಚಿಕ್ಕಂದಿನಿಂದಲೇ ಪ್ರಚಂಡ ಪ್ರತಿಭೆಯಾಗಿ ಅರಳಿದ ರಾಮನ್ ತಮ್ಮ 11ನೇ ವಯಸ್ಸಿನಲ್ಲೇ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕಿನೊಂದಿಗೆ ಉತ್ತೀರ್ಣರಾಗಿದ್ದರು. ನಂತರ ಎರಡು ವರ್ಷಗಳಲ್ಲಿ ಯೂನಿವರ್ಸಿಟಿಯ ಇಂಟರ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ತಮ್ಮ 13ನೇ ವಯಸ್ಸಿಗೇ ಬಿ.ಎ. ವಿದ್ಯಾಭ್ಯಾಸಕ್ಕಾಗಿ ಮದರಾಸಿನ ಪ್ರತಿಷ್ಟಿತ ಪ್ರೆಸಿಡೆನ್ಸಿ ಕಾಲೇಜಿಗೆ ದಾಖಲಾಗಿದ್ದರು. ಆ ಕಾಲೇಜಿನಲ್ಲೇ ಅತ್ಯಂತ ಕಿರಿಯ ವಯಸ್ಸಿನ ವಿದ್ಯಾರ್ಥಿಯಾಗಿದ್ದ ಅವರು 1904ರಲ್ಲಿ ಇಂಗ್ಲಿಷ್‌ನೊಂದಿಗೆ ಭೌತಶಾಸ್ತ್ರ ಅಧ್ಯಯನ ಮಾಡಿ ಚಿನ್ನದ ಪದಕದೊಂದಿಗೆ ಬಿ.ಎ. ಪದವಿಗಳಿಸಿದರು.
ಈ ನಡುವೆ ಅವರು ವಿದ್ಯಾರ್ಥಿ ದಿಶೆಯಲ್ಲೇ ಸಂಶೋಧನಾತ್ಮಕ ಲೇಖನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1906 ನವೆಂಬರ್‌ನಲ್ಲಿ ಲಂಡನ್ನಿನ ಹೆಸರಾಂತ “ philosophical magazine ” ಪತ್ರಿಕೆಯಲ್ಲಿ ಪ್ರಥಮ ವೈಜ್ಞಾನಿಕ ಪ್ರಬಂಧ ಬರೆದು ವಿಜ್ಞಾನ ಪ್ರಪಂಚದ ಗಮನ ಸೆಳೆದ ಹೆಗ್ಗಳಿಕೆ ಅವರದು.

1907 ಜನವರಿಯಲ್ಲಿ ಪದಕ ಮತ್ತು ಬಹುಮಾನದೊಡನೆ ಭೌತಶಾಸ್ತ್ರದಲ್ಲಿ ಪ್ರಥಮ ದರ್ಜೆಯಲ್ಲಿ ಎಂ.ಎ. ಪದವಿ ಪಡೆದ ರಾಮನ್ನರು ಅದೇ ವರ್ಷ ಐ.ಎಫ್.ಎಸ್. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ಆಗ ಅವರ ವಯಸ್ಸು ಕೇವಲ ಹತ್ತೊಂಬತ್ತು ಮಾತ್ರ. ಆ ವರ್ಷವೇ ಅವರು ತಮ್ಮ ಬಾಳ ಸಂಗಾತಿಯಾಗಿ ಲೋಕ ಸುಂದರಿ ಎಂಬಾಕೆಯನ್ನು ವಿವಾಹವಾದರು. ಅದೇ ಸಮಯಕ್ಕೆ ಅವರಿಗೆ ಕೊಲ್ಕತ್ತಾದ ಅಕೌಂಟೆಂಟ್ ಜನರಲ್ ಕಛೇರಿಯಲ್ಲಿ ಸಹಾಯಕ ಜನರಲ್ ಅಕೌಂಟೆಟ್ ಆಗಿ ಸರ್ಕಾರಿ ಹುದ್ದೆಯೂ ದೊರೆತಿತ್ತು.
ಸರ್ಕಾರಿ ಕೆಲಸದಲ್ಲಿದ್ದರೂ ಕುತೂಹಲ ಪ್ರವೃತ್ತಿಯ ರಾಮನ್ ಭೌತಶಾಸ್ತ್ರವನ್ನು ಬಿಡಲಾರದೆ ಹೋದರು. ಹಾಗಾಗಿ ಮಹೇಂದ್ರಲಾಲ್ ಸರಕಾರ್ ಎಂಬ ವೈದ್ಯರು ಸ್ಥಾಪಿಸಿದ್ದ ಕೊಲ್ಕತ್ತಾದ “ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್” ಎಂಬ ಸಂಸ್ಥೆಗೆ ಅವರು ಸದಸ್ಯರಾಗಿ ಸೇರಿ ನಂತರ ಅಲ್ಲಿ ಕಾರ್ಯದರ್ಶಿಯೂ ಆದರು. ಸರ್ಕಾರಿ ಕೆಲಸದ ಜೊತೆ ಜೊತೆಯಲ್ಲೇ ಬಿಡುವಿನ ವೇಳೆಯಲ್ಲೆಲ್ಲಾ ಸಂಶೋಧನೆಯಲ್ಲಿ ಸಂಪೂರ್ಣ ನಿರತರಾದರು. ವಿದ್ಯಾರ್ಥಿಗಳಿಗೆ ವಿಜ್ಞಾನದ ವಿಷಯಗಳನ್ನು ಬೋಧಿಸುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು 1917ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಪ್ರಾಧ್ಯಾಪಕರಾದರು. ತಮ್ಮ ಮೇಧಾವಿತನದಿಂದ ವಿಶ್ವವಿದ್ಯಾಲಯದ ಘನತೆಯನ್ನು ಹೆಚ್ಚಿಸಿದರು.

ಭೌತಶಾಸ್ತ್ರ ಬೋಧನೆಯ ಜೊತೆ ಜೊತೆಗೆ ಅದರ ಆಳಕ್ಕಿಳಿದು ಸಂಶೋಧನೆಯಲ್ಲಿ ತಲ್ಲೀನರಾಗಿದ್ದ ರಾಮನ್ನರು ಪಿಟೀಲು, ಮೃದಂಗ, ತಬಲ ಮುಂತಾದ ಸಂಗೀತ ವಾದ್ಯಗಳಿಂದ ಉಂಟಾಗುವ ಶಬ್ಧ ಸ್ಪಂದನಗಳ ಬಗ್ಗೆ ವಿವರಾತ್ಮಕ ಲೇಖನಗಳನ್ನು ಬರೆದರು. ದೂರದ ಲಂಡನ್ನಿಗೂ ಹೋಗಿ ಅಲ್ಲಿನ ಪ್ರಸಿದ್ದ ಫಿಸಿಕಲ್ ಸೊಸೈಟಿಯಲ್ಲಿ ಭಾಷಣ ಮಾಡಿ ಜಗತ್ತಿನ ಗಮನ ಸೆಳೆದರು. ಅಲ್ಲಿಂದ ವಾಪಸ್ ಭಾರತಕ್ಕೆ ಬಂದ ಅವರು ಸಂಶೋಧನಾ ಲೇಖನಗಳನ್ನು ಬರೆದು ಲಂಡನ್ನಿನ ರಾಯಲ್ ಸೊಸೈಟಿಗೆ ಕಳುಹಿಸಿದಾಗ ಅವುಗಳನ್ನು ಅಧ್ಯಯನ ಮಾಡಿದ ವಿದೇಶಿ ವಿಜ್ಞಾನಿಗಳು ರಾಮನ್ನರ ಬುದ್ಧಿವಂತಿಕೆಗೆ ಭಲೆ ಭಲೆ ಎಂದು ಮೆಚ್ಚಿಕೊಂಡರು. ವಾಯುಮಂಡಲದಲ್ಲಿ
ದ್ರವರೂಪದ ವಸ್ತುಗಳಲ್ಲಿ ಬೆಳಕು ಚದುರುವುದರ ಬಗ್ಗೆ, ಸಾಗರದ ನೀರಿನಲ್ಲಿ ತೋರುವ ವರ್ಣವೈವಿಧ್ಯವನ್ನು ಕುರಿತಂತೆ “ molecular diffraction of light ಎಂಬ ಪ್ರಬಂಧ ಬರೆದರು. ಇದನ್ನು ಕೊಲ್ಕತ್ತಾ ವಿ.ವಿಯೇ ವಿಶೇಷ ಆಸಕ್ತಿಯಿಂದ ಪ್ರಕಟಿಸಿತು.
ರಾಮನ್ನರ ವಿಜ್ಞಾನದ ಪ್ರಭೆ ಪ್ರಪಂಚದಾದ್ಯಂತ ಪಸರಿಸುತ್ತಿದ್ದಂತೆಯೇ 1921ರಲ್ಲಿ ಇಂಗ್ಲೆಂಡಿನಲ್ಲಿ ಬೇಸಿಗೆಯ ವಿಜ್ಞಾನ ಮೇಳದಲ್ಲಿ ಭಾಗವಹಿಸಲು ಅವರಿಗೆ ವಿಶೇಷ ಆಹ್ವಾನ. ಇದು ರಾಮನ್ನರಿಗೆ ಮತ್ತು ಅವರು ಪ್ರತಿನಿಧಿಸುತ್ತಿದ್ದ ಭಾರತಕ್ಕೆ ಪ್ರಾಮುಖ್ಯತೆಯ ಗೌರವವಾಗಿತ್ತು. ಹಡಗಿನಲ್ಲಿ ಪ್ರಯಾಣ ಬೆಳೆಸಿದ ಅವರು ಸಮುದ್ರದ ನೀರನ್ನೇ ಕುತೂಹಲದಿಂದ ನೋಡುತ್ತಾ ಸಮುದ್ರದ ನೀರು ನೀಲಿಯಾಗಿರುವುದೇಕೆ? ಎಂಬ ಪ್ರಶ್ನೆಯನ್ನು ತಲೆಯಲ್ಲಿ ತುಂಬಿಕೊಂಡರು.

ಇಂಗ್ಲೆಂಡಿನ ವಿಜ್ಞಾನಮೇಳದಲ್ಲಿ ಭಾಗವಹಿಸಿ ಮತ್ತೆ ಭಾರತಕ್ಕೆ ಹಡಗಿನಲ್ಲಿ ಹಿಂದುರಿಗಿದ ಅವರು ಸೂರ್ಯನ ಬಿಸಿಲಿನಲ್ಲಿ ಸಮುದ್ರ ನೀಲಿ ಬಣ್ಣ ತಾಳುತ್ತಿರುವುದನ್ನು ಸೂಕ್ಷ್ಮ ವಾಗಿ ಗಮನಿಸಿದರು. “ಸೂರ್ಯನ ರಶ್ಮಿಯ ಬೆಳಕು ಈ ನೀರಿನಲ್ಲಿ ಹರಡಿ ಹೋಗಿರುವುದೇ ಸಮುದ್ರದ ನೀರು ನೀಲಿಯಾಗಿರುವುದಕ್ಕೆ ಕಾರಣ” ಎಂಬ ಸತ್ಯವನ್ನು ಕಂಡುಕೊಂಡರು. ಈ ವಿಷಯವನ್ನು ಅಳವಾಗಿ ಚಿಂತಿಸಿ “THE COLOUR OF THE SEA” ಎಂಬ ಪ್ರಬಂಧವನ್ನು ಹಡಗಿನಲ್ಲಿ ಪ್ರಯಾಣಿಸುತ್ತಲೇ ಬರೆದರು. ನಂತರ ಅದನ್ನು “ orature ” ಪತ್ರಿಕೆಗೆ ಕಳುಹಿಸಿದರು.
ಇದನ್ನೂ ಓದಿ: ಹೆಗ್ಗಡದೇವನಕೋಟೆ…. ಇದು ಬರೀ ಗಂಧದಗುಡಿಯಲ್ಲ…ಚಿನ್ನದಗುಡಿ.. ನೀವೊಮ್ಮೆ ಬನ್ನಿ…
ಇದು ರಾಮನ್ ಪರಿಣಾಮದ ಬೆಳಕಿನ ಸಂಶೋಧನೆಗೆ ನಾಂದಿಯಾಯಿತು. 1922ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯರಾದ ರಾಮನ್ನರು 1924ರಲ್ಲಿ ಕೆನಡಾ, ಅಮೆರಿಕ ಮುಂತಾದ ದೇಶಗಳ ಪ್ರವಾಸ ಕೈಗೊಂಡರು. ಕ್ಯಾಲಿಫೋರ್ನಿಯಾದ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅವರಿಗೆ ಸಂದರ್ಶಕ ಪ್ರಾಧ್ಯಾಪಕ ಹುದ್ದೆ ನೀಡಿತ್ತು. ಅವರ ಪ್ರತಿಭೆಯ ಪ್ರಖರ ಹೆಚ್ಚಾದಂತೆಲ್ಲಾ ಪ್ರಪಂಚದ ಪ್ರಸಿದ್ದ ವಿಜ್ಞಾನಿಗಳೆಲ್ಲಾ ರಾಮನ್ನರ ಒಡನಾಟಕ್ಕೆ ಹಾತೊರೆಯುತ್ತಿದ್ದರು. ಹಾಗಾಗಿ ದೇಶ ವಿದೇಶಗಳ ವಿಜ್ಞಾನಿಗಳೊಂದಿಗೆ ವಿಚಾರ ವಿನಿಮಯ, ಚರ್ಚೆ ಮುಂತಾಗಿ ಅವರು ತಮ್ಮನ್ನು ಸಂಪೂರ್ಣ ವಿಜ್ಞಾನಕ್ಕೆ ತೆರೆದುಕೊಂಡಿದ್ದರು.
ರಾಮನ್ನರು ಸಂಶೋಧನೆ ಮಾಡಲು ಹೆಚ್ಚಾಗಿ ಆಧುನಿಕ ಉಪಕರಣಗಳನ್ನು ಆಶ್ರಯಿಸಿದವರೇ ಅಲ್ಲ. ಬದಲಾಗಿ ತಮ್ಮ ಬುದ್ಧಿಶಕ್ತಿಯನ್ನು ನಂಬಿದವರು. ಅವರು ತಮ್ಮ ಸಂಶೋಧನೆಗೆ ಬಳಸಿದ ಉಪಕರಣಗಳ ಬೆಲೆ ಕೇವಲ 200ರೂಪಾಯಿಗಳೆಂದರೆ ನಂಬುವುದೇ ಕಷ್ಟ. ಆದರೆ ಇದು ಬೆಳಕಿನಷ್ಟೇ ಸತ್ಯ. ಬೆಳಕಿನಲ್ಲಾಗುವ ಬದಲಾವಣೆಗಳನ್ನು ಗಮನಿಸಲು ನಾಲ್ಕು ಚದರ ಮತ್ತು ಎಂಟು ಅಡಿ ಎತ್ತರದ ಮರದ ಪೆಟ್ಟಿಗೆಯನ್ನು ಮಾಡಿಸಿಕೊಂಡಿದ್ದರು.

ಅದರಲ್ಲಿಯೇ ಕುಳಿತು ಪ್ರಯೋಗ ನಡೆಸುತ್ತಿದ್ದರು. ಅಲ್ಲಿದ್ದದ್ದು ಪ್ರಖರವಾದ ಬೆಳಕು ನೀಡುವ MERCURY ARC LAMP ಮತ್ತು ಬೆಂಜಿನ್ ತುಂಬಿದ ಗಾಜಿನ ಪಾತ್ರೆ ಹಾಗೂ ಜೇಬಿನಲ್ಲಿ ಇಟ್ಟುಕೊಳ್ಳಬಹುದಾದಷ್ಟು ಪುಟ್ಟದಾದ ರೋಹಿತದರ್ಶಕ (POCKET SPECTROSCOPE). ಒಟ್ಟಾರೆ ಇವುಗಳೆಲ್ಲದರ ಬೆಲೆ 200 ರೂಪಾಯಿಗಳನ್ನು ದಾಟಿರಲಿಲ್ಲವೆಂದರೆ ಆಶ್ಚರ್ಯವೇ ಸರಿ.
ಹೀಗೆ ಸರಳ ಉಪಕರಣಗಳಿಂದಲೇ ಅತ್ಯದ್ಭುತ ಸಂಶೋಧನೆ ನಡೆಸಿ ತಮ್ಮ ರಾಮನ್ ಪರಿಣಾಮಕ್ಕೆ 1930ರಲ್ಲಿ ಅವರ ನೊಬೆಲ್ ಪ್ರಶಸ್ತಿಗಳಿಸಿದರು. ಈ ಸಂಶೋಧನೆ ವಿಶ್ವಮನ್ನಣೆ ಪಡೆಯಿತಲ್ಲದೆ ಭಾರತದ ಕೀರ್ತಿಗೊಂದು ಹೊನ್ನಗರಿ ಮೂಡಿಸಿತು. `
`ಪ್ರಾಯೋಗಿಕ ಭೌತಶಾಸ್ತ್ರದಲ್ಲಿ ರಾಮನ್ ಪರಿಣಾಮವು 1920ರ ದಶಕದ ಮೂರು ಅಥವಾ ನಾಲ್ಕು ವಿಶೇಷ ಸಂಶೋಧನೆಗಳಲ್ಲಿ ಒಂದಾಗಿದೆ. ಮತ್ತು ವಸ್ತುಗಳ ರಚನೆಯನ್ನು ತಿಳಿಯಲು ಮಹತ್ವದ್ದಾಗಿದೆ” ಎಂದು ಅಂದಿನ ರಾಯಲ್ ಸೊಸೈಟಿಯ ಅಧ್ಯಕ್ಷರೂ ಆಗಿದ್ದ ಖ್ಯಾತ ವಿಜ್ಞಾನಿ ರುದರ್‌ಫೋರ್ಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ರಾಮನ್ನರ ಸಂಶೋಧನೆ ನೋಡಿ ಪ್ರಸಿದ್ದ ವಿಜ್ಞಾನಿ ಐನ್‌ಸ್ಟೈನ್ ಸಹ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ವಿಜ್ಞಾನವೇ ದೇವರು, ವಿಜ್ಞಾನವೇ ಧರ್ಮ, ವಿಜ್ಞಾನವೇ ತಮ್ಮ ಸರ್ವಸ್ವವೆಂದು ತಿಳಿದಿದ್ದ ರಾಮನ್ 1931ರಲ್ಲಿ ಬೆಂಗಳೂರಿನಲ್ಲಿರುವ ಟಾಟಾ ವಿಜ್ಞಾನ ಸಂಸ್ಥೆಯ ಪ್ರಪ್ರಥಮ ಭಾರತೀಯ ಅಧ್ಯಕ್ಷರಾಗಿ ನೇಮಕವಾಗಿದ್ದರು. ಅಲ್ಲಿ ನೂರಾರು ಭಾರತೀಯ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶಕರಾಗಿದ್ದುಕೊಂಡು ಅಲ್ಲಿನ ವಿಜ್ಞಾನದ ಬೆಳವಣಿಗೆಗೆ ಬೆನ್ನೆಲುಬಾಗಿದ್ದರು. ಕೆಲಕಾಲ ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಅವರು 1934ಏಪ್ರಿಲ್ ನಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸನ್ನು ಬೆಂಗಳೂರಿನಲ್ಲೇ ಸ್ಥಾಪಿಸಿ ತಮ್ಮ ವಿಜ್ಞಾನ ಕೈಂಕರ್ಯದಿಂದ ವಿಜ್ಞಾನದ ಅಭಿವೃದ್ದಿಯಲ್ಲೇ ಅನಂದ ಕಾಣುವ ಅನುಪಮ ವಿಜ್ಞಾನಿ ಎನಿಸಿದರು.
ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಪಟ್ಟ ಅಲಂಕರಿಸಿದ ಜಯಮಾಲಾ
1926ರಲ್ಲಿ ಇಂಡಿಯನ್ ಜರ್ನಲ್ ಆಫ್ ಫಿಸಿಕ್ಸ್ ಎಂಬ ಪತ್ರಿಕೆಯನ್ನೂ ಅರಂಭಿಸಿದ್ದರು. ರಾಮನ್‌ರಂಥ ವಿಜ್ಞಾನಿಯನ್ನು ಪಡೆದ ನಾವೇ ಧನ್ಯರೆಂದು ಸಂತಸಪಟ್ಟ ಆಗಿನ ಮೈಸೂರು ಸರ್ಕಾರ ಅವರ ಸಂಶೋಧನೆಗೆ ಅನುಕೂಲವಾಗಲೆಂದು 24 ಎಕರೆ ಭೂಮಿಯನ್ನು ಬೆಂಗಳೂರಿನಲ್ಲಿ ನೀಡಿತು. ಅದು ಸಾರ್ಥಕವಾಗಬೇಕೆಂಬ ಸದುದ್ದೇಶದಿಂದ ಅವರು 1841ರಲ್ಲಿ ತಾವು ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದ ನಂತರ ತಮ್ಮ ಸ್ವಂತ ಸಂಶೋಧನಾಲಯವಾಗಿ 1948ರಲ್ಲಿ “ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್” ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು.

ತಮಗೆ ಬಂದ ನೊಬೆಲ್ ಬಹುಮಾನದ ಹಣವನ್ನೆಲ್ಲಾ ಈ ಸಂಸ್ಥೆಗೇ ವಿನಿಯೋಗಿಸಿ ಭವಿಷ್ಯದ ಯುವ ವಿಜ್ಞಾನಿಗಳ ಸಂಶೋಧನೆಗೆ ಅನುಕೂಲ ಮಾಡಿಕೊಟ್ಟರು. ಇಲ್ಲಿ ಸುಂದರವಾದ ಒಂದು ವಿಜ್ಞಾನ ವಸ್ತು ಸಂಗ್ರಹಾಲಯವನ್ನು ಅವರು ನಿರ್ಮಿಸಿದರು.
ವಿಜ್ಞಾನ ಜಗತ್ತಿನ ದೈತ್ಯ ಪ್ರತಿಭೆಯಾಗಿ ಅಪಾರ ಸಾಧನೆಗೈದ ರಾಮನ್ ಅವರಿಗೆ 1924ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಫೆಲೋ, 1925ರಲ್ಲಿ ರಷ್ಯನ್ ಅಕಾಡೆಮಿ ಆಫ್ ಸೈನ್ಸ್‌ನ ಗೌರವ, 1928ರಲ್ಲಿ ರೋಮನ್ ವಿಜ್ಞಾನ ಸಂಘದಿಂದ ಮೆಟ್ಯೂಸಿ ಪದಕ, 1929ರಲ್ಲಿ ಬ್ರಿಟಿಷ್ ಪ್ರಭುತ್ವದಿಂದ ನೈಟ್ ಪದವಿಯೊಡನೆ ಸರ್ ಬಿರುದು, 1930ರಲ್ಲಿ ನೊಬೆಲ್ ಪ್ರಶಸ್ತಿ ಮತ್ತು ಅದೇ ವರ್ಷ ಲಂಡನ್ನಿನ ರಾಯಲ್ ಸೊಸೈಟಿಯಿಂದ ಹ್ಯೂಸ್ ಪ್ರಶಸ್ತಿ, 1954ರಲ್ಲಿ ಭಾರತರತ್ನ ಪ್ರಶಸ್ತಿ, ದೇಶ-ವಿದೇಶಗಳ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗಳ ಸುರಿಮಳೆ ಸೇರಿದಂತೆ ಅಸಂಖ್ಯಾತ ಗೌರವಗಳು, ಪ್ರಶಸ್ತಿ-ಪುರಸ್ಕಾರಗಳು ಸಂದಿವೆ.
ತಮ್ಮ ಇಡೀ ಜೀವನವನ್ನು ಸಂಪೂರ್ಣವಾಗಿ ವಿಜ್ಞಾನಕ್ಕೆ ಸಮರ್ಪಿಸಿಕೊಂಡಿದ್ದ ಸರ್.ಸಿ.ವಿ. ರಾಮನ್ ಅವರು 1970 ನವೆಂಬರ್ 21ರಂದು ನಿಧನರಾದರೂ ಅವರು ಎಂದೆಂದಿಗೂ ಅಜರಾಮರರು.

ಸಂಕಷ್ಟದಲ್ಲಿರುವ ಹಿರಿಯ ಸಾಹಿತಿ ಬನ್ನೂರು ಕೆ ರಾಜುರವರಿಗೆ ಸರ್ಕಾರ, ಸಂಘ, ಸಂಸ್ಥೆ ಸ್ಪಂದಿಸಬೇಕಿದೆ..







