ಮರೆಯಾಗುತ್ತಿರುವ ಮಲೆನಾಡಿನ ಕಾಡು ಹಣ್ಣು ಕರ್ಮಂಜಿ.. ಇದರ ರುಚಿ ಸವಿದವರಿಗಷ್ಟೇ ಗೊತ್ತು.. ಉಳಿಸಿ ಬೆಳೆಸೋಣ..!

ಮೊದಲೆಲ್ಲ ಕೊಡಗಿನ ಕಾಡುಗಳಲ್ಲಿ ಮಳೆಗಾಲ ಬಂತೆಂದರೆ ಹಲವು ರೀತಿಯ ಕಾಡು ಹಣ್ಣುಗಳು ಸವಿಯಲು ಸಿಗುತ್ತಿದ್ದವು. ಅವುಗಳನ್ನು ಹುಡುಕಿಕೊಂಡು ಹೋಗಿ ಕಿತ್ತು ತಂದು ತಿನ್ನುವುದು ಒಂಥರಾ ಮಜಾ ಕೊಡುತ್ತಿತ್ತು. ಸುರಿಯುವ ಮಳೆಯಲ್ಲಿಯೇ ಕಾಡಿನೊಳಗೆ ನುಗ್ಗಿ ಹಣ್ಣುಗಳನ್ನು ಹುಡುಕುವುದು ಮತ್ತು ಅವುಗಳು ಸಿಕ್ಕಾಗ ಗಿಡ, ಬಳ್ಳಿ, ಮರಗಳಿಂದ ಕೀಳುವುದು ಸುಲಭವೇನು ಆಗಿರಲಿಲ್ಲ. ಬಹುತೇಕ ಕಾಡುಹಣ್ಣುಗಳ ಗಿಡ, ಬಳ್ಳಿಗಳು ಮುಳ್ಳಿನಿಂದ ಆವೃತವಾಗಿರುತ್ತಿದ್ದವು. ಹೀಗಾಗಿ ಜಾಗ್ರತೆಯಿಂದ ಹಣ್ಣುಗಳನ್ನು ಕೀಳಬೇಕಾಗುತ್ತಿತ್ತು. ಇಂತಹ ರುಚಿಯಾದ ಹಣ್ಣುಗಳಲ್ಲಿ ಎಲ್ಲರಿಗೂ ಇಷ್ಟವಾಗುತ್ತಿದ್ದ ಹಣ್ಣಿದ್ದರೆ ಅದು ಕರ್ಮಂಜಿ ಹಣ್ಣು..
ಬಹುಶಃ ಮಲೆನಾಡಿಗರಿಗೆ ಇದರ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಇದನ್ನು ತಿಂದವರಿಗೆ ಇದರ ರುಚಿಯ ಬಗ್ಗೆಯೂ ತಿಳಿದಿರುತ್ತದೆ. ಈ ಹಣ್ಣು ವಿಭಿನ್ನ ಸ್ವಾದಿಷ್ಟವನ್ನು ಹೊಂದಿದ್ದು, ರುಚಿ, ಸುವಾಸನೆ ಎಲ್ಲವೂ ವಿಶಿಷ್ಟ, ವಿಭಿನ್ನವಾಗಿರುತ್ತದೆ. ಕಾಡುಗಳು ಹೇರಳವಾಗಿದ್ದ ಕಾಲದಲ್ಲಿ ಇದು ಎಲ್ಲೆಂದರಲ್ಲಿ ಹುಟ್ಟಿ ಬಳ್ಳಿಯಾಗಿ ಗಿಡ ಮರಗಳನ್ನು ಆಶ್ರಯಿಸಿ ಬೆಳೆಯುತ್ತಿತ್ತು. ಮುಳ್ಳಿನಿಂದ ಕೂಡಿದ ಬಳ್ಳಿಯಾಗಿದ್ದರಿಂದ ಹಣ್ಣನ್ನು ಕೀಳುವುದು ಸುಲಭದ ಕೆಲಸವಾಗಿರಲಿಲ್ಲ. ಜತೆಗೆ ಮೇಣವೂ ಇರುತ್ತಿದ್ದರಿಂದ ಕಷ್ಟಪಡಬೇಕಾಗುತ್ತಿತ್ತು.
ಆದರೂ ಕಾಡು ಮೇಡು ಅಲೆದು ಹಣ್ಣನ್ನು ಹುಡುಕಿ ಕಿತ್ತು ತರುತ್ತಿದ್ದರು. ಇದರ ಹಣ್ಣುಗಳು ವಿಭಿನ್ನ ರುಚಿ ಹೊಂದಿದ್ದರೆ, ಬಲಿತ ಕಾಯಿಗಳನ್ನು ಕಿತ್ತು ತಂದು ಚೆನ್ನಾಗಿ ಒರೆಸಿ ಬಳಿಕ ಅದನ್ನು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಉಪ್ಪಿನಕಾಯಿ ಹಾಕುತ್ತಿದ್ದರು. ಈ ಹಣ್ಣಿನ ಬಗ್ಗೆ ನೋಡಿದ್ದೇ ಆದರೆ ಇದು ಬಳ್ಳಿಯಾಗಿ ಬೆಳೆಯುವ ಸಸ್ಯ. ಈ ಬಳ್ಳಿಯು ಗಿಡ ಅಥವಾ ಮರದ ಆಸರೆ ಪಡೆದು ಬೆಳೆಯುತ್ತದೆ. ಬಳ್ಳಿಯು ಗಟ್ಟಿಯಾದ ಕಾಂಡದಂತೆ ಇದ್ದು, ಇದರಲ್ಲಿ ಉದ್ದವಾದ ಮುಳ್ಳುಗಳಿರುತ್ತವೆ. ಇವು ಸುಮಾರು ಎರಡರಿಂದ ಮೂರು ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ಗೋಲಿಯಾಕಾರದ ಹಣ್ಣುಗಳನ್ನು ಬಿಡುತ್ತದೆ.
ಕಡು ಹಸಿರಿನ ಕಾಯಿ ಬೆಳೆದು ಹಣ್ಣಾಗುತ್ತಿದ್ದಂತೆಯೇ ನೇರಳೆ ಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕಾಯಿ ಹುಳಿಯಾಗಿದ್ದರೆ, ಹಣ್ಣಾಗುತ್ತಿದ್ದಂತೆಯೇ ಸ್ವಲ್ಪ ಹುಳಿ ಮಿಶ್ರಿತ ಸಿಹಿ ರುಚಿ ಬರುತ್ತದೆ. ಇದರಲ್ಲಿನ ರಸವನ್ನು ಹೊಂದಿದ ಕೆಂಪು ಬಣ್ಣದ ತಿರುಳು ರುಚಿಯಾಗಿರುತ್ತದೆ. ಹಣ್ಣಿನೊಳಗೆ ಮೆತ್ತಗಿನ ಬೀಜಗಳಿದ್ದು ಅವುಗಳನ್ನು ಅಗೆದು ತಿನ್ನಬಹುದು ಅಥವಾ ಉಗಿಯಬಹುದು. ಹಣ್ಣುಗಳು ಬಳ್ಳಿಯಲ್ಲಿ ಗೊಂಚಲು, ಗೊಂಚಲಾಗಿರುತ್ತವೆ. ಇವು ಮಳೆಗಾಲದಲ್ಲಿ ಅಂದರೆ ಜುಲೈ ಅಥವಾ ಆಗಸ್ಟ್ ನಲ್ಲಿ ಹಣ್ಣಾಗುತ್ತವೆ. ಆದರೆ ಹೂವನ್ನು ಮಾತ್ರ ಫೆಬ್ರವರಿ, ಮಾರ್ಚ್ ನಲ್ಲಿಯೇ ಬಿಡುತ್ತವೆ. ಬಿಳಿ ಬಣ್ಣದ ಇದರ ಹೂ ಮೇಲ್ನೋಟಕ್ಕೆ ಮಲ್ಲಿಗೆಯನ್ನು ಹೋಲುತ್ತದೆ. ಹೂ ಬಿಟ್ಟ ನಂತರ ಮಿಡಿಗಚ್ಚಿ ಬೆಳೆಯಲು ಆರಂಭಿಸಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕಾಯಿ ಬಲಿತು ಹಣ್ಣಾಗುತ್ತದೆ. ಹಣ್ಣು, ಕಾಯಿ, ಬಳ್ಳಿ, ಎಲೆ ಹೀಗೆ ಎಲ್ಲದರಲ್ಲೂ ಹಲಸಿನ ಕಾಯಿಯಲ್ಲಿ ಇರುವಂತೆ ಬಿಳಿ ಬಣ್ಣದ ಮೇಣವಿರುತ್ತದೆ.
ಈ ಹಣ್ಣಿನಲ್ಲಿ ಆರೋಗ್ಯಕ್ಕೆ ಪೋಷಕ ಶಕ್ತಿಯನ್ನು ನೀಡಬಹುದಾದ ಕಬ್ಬಿಣ ಮತ್ತು ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ರಕ್ತ ಹೀನತೆಗೆ ರಾಮಬಾಣವಾಗಿದ್ದು, ವಸಡಿನ ಸಮಸ್ಯೆಗೂ ಪರಿಹಾರ ನೀಡುತ್ತದೆಯಂತೆ. ಕರ್ಮಂಜಿ ಹಣ್ಣಿನ ಗಿಡವು ಅಪೋಸೈನೇಸಿಯೇ ಕುಟುಂಬಕ್ಕೆ ಸೇರಿದ್ದು, ಇದರ ಸಸ್ಯಶಾಸ್ತ್ರೀಯ ಹೆಸರು ಕಾರಿಸ್ಸಾ ಕರಂಡಸ್. ಇದರಲ್ಲಿ ಸುಧಾರಿತ ತಳಿಗಳನ್ನು ಈಗಾಗಲೇ ಕಂಡು ಹಿಡಿಯಲಾಗಿದ್ದು, ಅವುಗಳನ್ನು ಬೇರೆಡೆಗಳನ್ನು ನೆಟ್ಟು ಬೆಳೆಸಿ ಹಣ್ಣುಗಳನ್ನು ಪಡೆಯಲಾಗುತ್ತಿದೆ.
ನಮ್ಮ ಹಿತ್ತಲಲ್ಲೇ ತನ್ನ ಪಾಡಿಗೆ ತಾನು ಎಂಬಂತೆ ಬೆಳೆದು ಹಣ್ಣುಗಳನ್ನು ನೀಡುವ ತಲತಲಾಂತರ ಸಸ್ಯವಾಗಿರುವ ಕರ್ಮಂಜಿಗೆ ನಾವು ನಮ್ಮ ತೋಟದ ಬದಿಯಲ್ಲಿ, ಮನೆಯ ಹಿತ್ತಲಲ್ಲಿ ಒಂದಿಷ್ಟು ಜಾಗ ನೀಡಿ ಬೆಳೆಯಲು ಅವಕಾಶ ಮಾಡಿಕೊಡಬೇಕಾಗಿದೆ. ಇಲ್ಲದೆ ಹೋದರೆ ಮುಂದಿನ ತಲೆಮಾರಿಗೆ ಈ ಹಣ್ಣುಗಳು ಇಲ್ಲದೆ ಆಗಬಹುದೇನೋ? ಈಗಾಗಲೇ ಮಲೆನಾಡಿನ ಹಲವು ಹಣ್ಣುಗಳು ಸದ್ದಿಲ್ಲದೆ ನಾಶವಾಗಿವೆ. ಹೀಗಾಗಿ ಈ ಹಣ್ಣುಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ.
B.M.Lavakumar