Mysore

ಸರಗೂರಿನಲ್ಲಿ ನಾಯಕ ಸಮಾಜದಿಂದ ಶ್ರೀ ಚಿಕ್ಕದೇವಮ್ಮನವರ ವಿಶೇಷ ಪೂಜಾ ಮಹೋತ್ಸವ… ಕಾರ್ಯಕ್ರಮಗಳೇನು?

ಸರಗೂರು: ಪಟ್ಟಣದಲ್ಲಿ ನಾಯಕ ಸಮಾಜದ ವತಿಯಿಂದ ಶ್ರೀ ಚಿಕ್ಕದೇವಮ್ಮನವರ 49ನೇ ವರ್ಷದ ಅಂಗವಾಗಿ ಶುಕ್ರವಾರ ವಿಶೇಷ ಪೂಜಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವದ  ಮೆರವಣಿಗೆ ವಿಜೃಂಭಣೆಯಿಂದ ನಡೆಸಲಾಯಿತು.

ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ನಾಯಕ ಸಮಾಜದ ಬೀದಿಗಳನ್ನು ವಿವಿಧ ಬಗೆಯ ತಳಿರು ತೋರಣಗಳಿಂದ ಅಲಂಕರಿಸಿ, ಪ್ರತಿ ಬೀದಿಗಳಲ್ಲಿ ರಂಗೋಲಿ ಬಿಡಿಸಿ ಬಣ್ಣ, ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಚಿಕ್ಕದೇವಮ್ಮನವರ ದೇವಾಲಯದಲ್ಲಿ ಮುಂಜಾನೆಯಿಂದಲೇ ಹೋಮ, ಹವನ ನಡೆಸಿ, ಗಣಪತಿ ಹೋಮ ಪುಣ್ಯಾಹ, ಕಳಸ ಪ್ರತಿಷ್ಠಾಪಿಸಿ, ನವಗ್ರಹದ ಹೋಮ, ದುರ್ಗಹೋಮ ಸೇರಿದಂತೆ ವಿವಿಧ ಹೋಮಗಳು ಹಾಗೂ ವಿವಿಧ ಪೂಜಾ ಕೈಂಕರ್ಯಗಳು ವಿಶೇಷವಾಗಿ ಜರುಗಿದವು.

ಇದಕ್ಕೂ ಮುನ್ನ ಕಪಿಲ ನದಿಗೆ ತೆರಳಿ ಗಂಗೆ ಪೂಜೆ ನಡೆಸಲಾಯಿತು. ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ಪಲ್ಲಕ್ಕಿ ಮೇಲೆ ಅಮ್ಮನವರ ವಿಗ್ರಹ ಕೂರಿಸಿ ಪೂರ್ಣಕುಂಬ ಕಳಸದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಂಗಳವಾದ್ಯ ಮೊಳಗಿದವು. ಸತ್ತಿಗೆ, ಬ್ಯಾಂಡ್‌ಸೆಟ್, ವೀರಗಾಸೆ ಕುಣಿತ ಮೆರವಣಿಗೆಗೆ ಮೆರಗು ನೀಡಿದವು.

ಉತ್ಸವಮೂರ್ತಿ ದೇವಾಲಯಕ್ಕೆ ತಲುಪಿದ ನಂತರ ವಿಶೇಷ ಪೂಜೆ ನಡೆಸಿ, ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು. ಮೆರವಣಿಗೆಯಲ್ಲಿ ಹೆಣ್ಣು ಮಕ್ಕಳು 101 ಪೂರ್ಣ ಕಳಸ ಹೊತ್ತು ಹರಕೆ ತಿರಿಸಿದರು. ಭಕ್ತಾಧಿಗಳು ದಾರಿಯುದ್ದಕ್ಕೂ ಮಜ್ಜಿಗೆ, ಪಾನಕ, ಕೋಸುಂಬರಿ ವಿತರಿಸಿದರು. ಇನ್ನು ಕೆಲವರು ದೇವರಿಗೆ ನಮಸ್ಕರಿಸಿ ತೆಂಗಿನಕಾಯಿ ಒಡೆದರು. ಸರಗೂರಿನ ಈ ಹಬ್ಬಕ್ಕೆ ಹೊರಗಡೆಯಿಂದ ಬಂದಂತಹ ನೆಂಟರಿಷ್ಟರು ಈ ಜನಾಂಗದ ಬಂದುಗಳ ಮನೆಗಳಲ್ಲಿ ಈ ಹಬ್ಬದ ಪ್ರಯುಕ್ತ ಹೊಸ ಬಟ್ಟೆ ಉಟ್ಟು ಸಂಭ್ರಮಿಸಿ, ಇವರು ನೆಂಟರಿಷ್ಟರ ತಮ್ಮ ತಮ್ಮ ಮನೆಗಳಲ್ಲಿ ಹಬ್ಬದ ಸಿಹಿ ಊಟ ಸವಿದು ಸಂಭ್ರಮಿಸಿದರು. ಹಾಗೂ ಅಕ್ಕ, ಪಕ್ಕದ ಗ್ರಾಮಗಳ ಭಕ್ತಾಧಿಗಳು ಚಿಕ್ಕದೇವಮ್ಮನವರ ಉತ್ಸವಮೂರ್ತಿಯನ್ನು ದಾರಿ ಉದ್ದಕ್ಕೂ ಕಣ್ತುಂಬಿಕೊಂಡರು.

ನಾಯಕ ಸಮಾಜದ ಯಜಮಾನರು, ಮುಖಂಡರು, ನಾಯಕ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.ಈ ಸಂಬಂಧ ರಾತ್ರಿ ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಗತ್ತೂರಿನ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ  ಡಾ.ಪಿ.ಜವರನಾಯಕ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.

ಚಿಕ್ಕದೇವಮ್ಮನವರ ಉತ್ಸವವು ಜನವರಿ 27ರ ತನಕ ನಡೆಯಲಿದ್ದು, ಜ.24, ಶನಿವಾರ, ರಾತ್ರಿ 8.30 ಗಂಟೆಗೆ ಧ್ರುವತಾರೆ ಮೆಲೋಡಿಸ್‌ ರವರಿಂದ ರಸಮಂಜರಿ ಕಾರ್ಯಕ್ರಮ, ಜ.25,  ಭಾನುವಾರ ರಾತ್ರಿ 8-30 ಗಂಟೆಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಜ.26ರ ಸೋಮವಾರ ರಾತ್ರಿ 9 – 00 ಗಂಟೆಗೆ ಸರಗೂರಿನ ಪ್ರಮುಖ ಬೀದಿಗಳಲ್ಲಿ ದೀಪಾಲಂಕೃತ, ವಾದ್ಯ, ಕೋಲಾಟ, ಬಾಣ ಬಿರುಸು ಇವುಗಳೊಂದಿಗೆ ಶ್ರೀ ಚಿಕ್ಕದೇವಮ್ಮನವರ ಉತ್ಸವ ನಡೆಯಲಿದೆ.

ಜ.27ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಚಿಕ್ಕದೇವಮ್ಮನವರ ಸಮುದಾಯ ಭವನದಲ್ಲಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.  ಅಲ್ಲದೆ ಅಂದು ಶ್ರೀ ಅಮ್ಮನವರ ದೇವಸ್ಥಾನದ ಮುಂಭಾಗ ಜೋಗಳ ಮತ್ತು ಕಪಿಲಾ ನದಿಯಲ್ಲಿ ತಪ್ಪೋತ್ಸವ ನಡೆಯಲಿದೆ. ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಿಗೂ ಆಗಮಿಸಿ  ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಸರಗೂರಿನ ನಾಯಕ ಸಮಾಜದವರು ಮನವಿ ಮಾಡಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want