ArticlesLatest

ಚಿಕ್ಕರಸಿನಕೆರೆಯ ಕಾಲಭೈರವೇಶ್ವರನ ಮಹಿಮೆ ಗೊತ್ತಾ? ವ್ಯಾಜ್ಯ ಇತ್ಯರ್ಥಗೊಳಿಸುವ ಬಸಪ್ಪ!

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿ ಕ್ಷೇತ್ರವು  ತನ್ನದೇ ಪವಾಡಗಳಿಂದ ಮನೆ ಮಾತಾಗಿದ್ದು, ಕಷ್ಟವೆಂದು ಬಂದ ಭಕ್ತರನ್ನು ಇಲ್ಲಿನ ಕಾಲಭೈರವೇಶ್ವರ ಸ್ವಾಮಿ ಕಾಪಾಡಿ ಹರಸುತ್ತಾ ಬಂದಿದ್ದಾನೆ. ಇಂತಹ ಕ್ಷೇತ್ರದಲ್ಲೀಗ ಜಾತ್ರೆಯ ಸಂಭ್ರಮವಾಗಿದೆ.

ಈ ಕ್ಷೇತ್ರಕ್ಕೆ ಪ್ರತಿದಿನವೂ ಭಕ್ತರು ಬರುತ್ತಿದ್ದು ಇಲ್ಲಿನ ಬಸಪ್ಪನ ಆಶೀರ್ವಾದ ಪಡೆದು ಹಿಂತಿರುಗುತ್ತಾರೆ. ಹೀಗಾಗಿ ದಕ್ಷಿಣದ ಕಾಶಿಯಾಗಿ ಗಮನಸೆಳೆಯುತ್ತಿರುವ ಕ್ಷೇತ್ರವು ಭಕ್ತರ ಕಷ್ಟವನ್ನು ನೀಗಿಸುವ ಭವ್ಯತಾಣವಾಗಿ ಗಮನಸೆಳೆಯುತ್ತಿದೆ.. ಸದ್ಯ ಏಪ್ರಿಲ್ 6ರಿಂದ  ಆರಂಭವಾಗಿ ಏ.12ರವರೆಗೆ ಜಾತ್ರೆ ನಡೆಯಲಿದ್ದು ಪ್ರತಿದಿನವೂ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.

ಏ.7ರಂದು ಮಧ್ಯಾಹ್ನ 3 ಗಂಟೆಗೆ  ಕಾಲಭೈರವೇಶ್ವರಸ್ವಾಮಿ ಮಹಾ ರಥೋತ್ಸವ ಹಾಗೂ ದೇವತೆಗಳ ಉತ್ಸವ ನಡೆಯಲಿದ್ದು, ಅನ್ನಸಂತರ್ಪಣೆಯ ಉಸ್ತುವಾರಿಯನ್ನು ಅರೆಕಲ್ಲುದೊಡ್ಡಿ, ಬನ್ನಹಳ್ಳಿ, ಹೊನ್ನಾಯಕನಹಳ್ಳಿ ಹಾಗೂ ಕಾಂಡಂಕನಹಳ್ಳಿ ಕುಲಬಾಂಧವರು ನಿರ್ವಹಿಸಲ್ಲಿದ್ದಾರೆ. ಏ.8ರಂದು ಬುಧವಾರ ಸಂಜೆ 5 ಗಂಟೆಗೆ ಓಕಳ ಸೇವೆ ಉತ್ಸವ ನಡೆಯಲಿದೆ. ಆ ನಂತರ ವಿವಿಧ ಕಾರ್ಯಕ್ರಮಗಳಿದ್ದು, ಏ.12 ರಂದು ಜಾತ್ರಾಮಹೋತ್ಸವಕ್ಕೆ ತೆರೆ ಬೀಳಲಿದೆ.

ಇನ್ನು ಇಲ್ಲಿನ ವಿಶೇಷವೇನೆಂದರೆ ಇಲ್ಲಿರುವ ಬಸವನೇ ಕಾಲಭೈರವೇಶ್ವರನ ಪ್ರತಿರೂಪವೆಂದು ಭಕ್ತರು ನಂಬುತ್ತಾರೆ. ಹೀಗಾಗಿ ತಮ್ಮ ಸಮಸ್ಯೆ, ವ್ಯಾಜ್ಯಗಳನ್ನು ಹೊತ್ತು ಬಂದು ಬಸವನ ಮುಂದೆ ಇತ್ಯರ್ಥ ಮಾಡಿಕೊಂಡು ಹೋಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಇನ್ನು ಇಲ್ಲಿನ ದೇಗುಲದ ಬಗ್ಗೆ ಹೇಳುವ ಮುನ್ನ ಸ್ಥಳದ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು ಮಂಡ್ಯ ಜಿಲ್ಲೆಯಲ್ಲಿ ಚಿಕ್ಕಅರಸಿನಕೆರೆ ಮತ್ತು ದೊಡ್ಡಅರಸಿನಕೆರೆ ಎಂಬ ಗ್ರಾಮಗಳು ಪ್ರಸಿದ್ದಿಯಾಗಿವೆ. ಈ ಎರಡು ಗ್ರಾಮಗಳಿಗೆ ಹೇಗೆ ಈ ಹೆಸರು ಬಂತು ಎಂಬುದನ್ನು ನೋಡುತ್ತಾ ಹೋದರೆ ಹಿಂದಿನ  ಕಾಲದಲ್ಲಿ  ಚಿಕ್ಕಅರಸಿ ಮತ್ತು ದೊಡ್ಡಅರಸಿ ಎಂಬ ಇಬ್ಬರು ಸಹೋದರಿಯರು ಇದ್ದರಂತೆ ಇವರಿಬ್ಬರು ಬರವನ್ನು ನೀಗಿಸುವ ಸಲುವಾಗಿ ಎರಡು ಕೆರೆಗಳನ್ನು ಪ್ರತ್ಯೇಕವಾಗಿ ನಿರ್ಮಿಸಿದರಂತೆ.

ಕಾಲಕ್ರಮೇಣ ಚಿಕ್ಕಅರಸಿನಕೆರೆ ಬಳಿ ನಿರ್ಮಾಣವಾದ ಗ್ರಾಮವು ಚಿಕ್ಕಅರಸಿನಕೆರೆ ಎಂದೂ ದೊಡ್ಡಅರಸಿನಕೆರೆ ಬಳಿ ತಲೆ ಎತ್ತಿದ ಊರು ದೊಡ್ಡಅರಸಿನಕೆರೆಯಾಗಿ ಕರೆಯಲ್ಪಟ್ಟಿತ್ತು. ಈ ಎರಡು ಗ್ರಾಮಗಳು ಇವತ್ತಿಗೂ ತನ್ನದೇ ಆದ ಮಹತ್ವ ಹೊಂದಿ ಗಮನಸೆಳೆಯುತ್ತಿದೆ.

ಇದೆಲ್ಲದರ ನಡುವೆ ಶತಮಾನಗಳ ಹಿಂದೆ  ಚಿಕ್ಕರಸಿನಕೆರೆಯಲ್ಲಿ ಪವಾಡವೊಂದು ನಡೆಯುತ್ತಿದೆ. ಇಲ್ಲೊಂದು ಹುತ್ತ ಬೆಳೆಯಲಾರಂಭಿಸುತ್ತದೆ. ಜನ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮಾಮೂಲಿ ಹುತ್ತವೆಂಬಂತೆ ತಮ್ಮ ಪಾಡಿಗೆ ತಾವು ಇರುತ್ತಾರೆ. ಹೀಗಿರುವಾಗಲೇ.. ಸಮೀಪದ ಊರು ದೊಡ್ಡರಸಿನಕೆರೆಯಲ್ಲಿ ವಾಸವಾಗಿದ್ದ ಬ್ರಾಹ್ಮಣ ಕುಟುಂಬವೊಂದು ಹಸುವನ್ನು ಸಾಕಿರುತ್ತಾರೆ. ಆ ಹಸುವಿನ ಹಾಲು ಕರೆಯಲು ಹೋದಾಗಲೆಲ್ಲ ಹಾಲಿನ ಬದಲಿಗೆ ರಕ್ತ ಬರುತ್ತದೆ. ಇವರಿಗೆ ಅಚ್ಚರಿಯಾಗುತ್ತದೆ. ಹಸುವನ್ನು ಅದರ ಪಾಡಿಗೆ ಮೇಯಲು ಬಿಟ್ಟರೂ ಅದರ ಕೆಚ್ಚಲಲ್ಲಿ ಹಾಲಿಲ್ಲದೆ ರಕ್ತ ಬರುತ್ತದೆ ಏಕೆ ಹೀಗಾಗುತ್ತದೆ ಎಂದು ಅದನ್ನು ಹಿಂಬಾಲಿಸಿ ನೋಡುವ ಪ್ರಯತ್ನ ಮಾಡುತ್ತಾರೆ.

ಆಗಲೇ ಅವರಿಗೊಂದು ಪವಾಡ ಕಾಣಿಸುತ್ತದೆ. ಅದೇನೆಂದರೆ ಕೊಟ್ಟಿಗೆಯಿಂದ ಬಿಟ್ಟ ತಕ್ಷಣವೇ ಹಸು ನೇರವಾಗಿ ಚಿಕ್ಕರಸಿನಕೆರೆ ಬಳಿಗೆ ಬಂದು ಹುತ್ತದ ಬಳಿ ಹಾಲನ್ನು ಸುರಿಸುವುದು ಕಂಡು ಬರುತ್ತಿದೆ. ಇಲ್ಲಿ ಏನೋ ವಿಶೇಷವಿದೆ ಎಂದರಿತ ಗ್ರಾಮಸ್ಥರು ಹುತ್ತವನ್ನು ಅಗೆದು ನೋಡುವ ಪ್ರಯತ್ನ ಮಾಡುತ್ತಾರೆ. ಹೀಗೆ ಅಗೆದಾಗ ಭೂಮಿಯೊಳಗೆ ಹುದುಗಿದ್ದ ಶ್ರೀಕಾಲಭೈರವೇಶ್ವರ ಬಸವನ ವಿಗ್ರಹವು ಕಾಣಿಸುತ್ತದೆ. ಆ  ನಂತರ ಗ್ರಾಮಸ್ಥರು ಆ ವಿಗ್ರಹವನ್ನು ಅಲ್ಲಿಯೇ ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಿಸಿ ಪೂಜೆ ಆರಂಭಿಸುತ್ತಾರೆ.

ಅಂದಿನಿಂದಲೇ ದೇವರ ಹೆಸರಿನಲ್ಲಿ ಬಸವನ ಬಿಡುತ್ತಾರೆ. ಈ ದೇವಾಲಯಕ್ಕೆ ಸೇರಿದ ಬಸವನ ಜಾತ್ರಾಮಹೋತ್ಸವವು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಈ ದೇವರಿಗೆ ಕಟ್ಟೆ ಬೋರದೇವರೆಂಬ ಮತ್ತೊಂದು ಹೆಸರಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರಸಿದ್ದಿ ಹೊಂದಿದೆ.

ಕಾಲಭೈರವೇಶ್ವರನ ಬಸಪ್ಪ ಆಗಾಗ್ಗೆ ಪವಾಡ ಮಾಡುತ್ತಿದ್ದು,  ಕಳ್ಳರು ಹಾಗೂ ಮೋಸಗಾರರಿಗೆ ಸಿಂಹಸ್ವಪ್ನವಾಗಿ ಕಾಡುತ್ತಾನೆ. ಗ್ರಾಮಗಳಲ್ಲಿ ದೇವಸ್ಥಾನದ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಸುತ್ತ-ಮುತ್ತಲ ಗ್ರಾಮಗಳ ಹಾಗೂ ಜಿಲ್ಲೆಗಳ ಜನರಲ್ಲಿ ಭಕ್ತಿಭಾವದ ಪೂಜೆಗೊಳಗಾಗುತ್ತಿದ್ದಾನೆ. ಇಲ್ಲಿಗೆ ಬಂದು ಬಸವನ ದರ್ಶನ ಮಾಡಿ ಆಶೀರ್ವಾದ ಪಡೆದರೆ ಇಷ್ಟಾರ್ಥ ಸಿದ್ದಿಸುತ್ತದೆ ಎಂಬ ನಂಬಿಕೆಯಿದೆ.

ಇವತ್ತಿಗೂ ಸುತ್ತಮುತ್ತಲ ಗ್ರಾಮಗಳ ಜನತೆ ಸೇರಿದಂತೆ ನಮ್ಮ ರಾಜ್ಯವಲ್ಲದೇ ಬೇರೆ ರಾಜ್ಯಗಳ ಜನಸಾಮಾನ್ಯರು ಕೂಡ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಜೊತೆಗೆ ಕಾಲ ಭೈರವನ ಪ್ರತಿರೂಪದಂತಿರುವ ಬಸವನಲ್ಲಿ ಹರಕೆ ಮಾಡಿಕೊಳ್ಳುತ್ತಾರೆ ಅವುಗಳು ನೆರವೇರಿದ ನಂತರ ಬಸವಪ್ಪನನ್ನು ಗ್ರಾಮಕ್ಕೆ ಕರೆಯಿಸಿ ಮೆರವಣಿಗೆ ನಡೆಸಿ ಪೂಜೆ ಸಲ್ಲಿಸುವುದನ್ನು ಕಾಣಬಹುದಾಗಿದೆ.

ಈ, ಕ್ಷೇತ್ರವು ಬಹಳ ಹಿಂದಿನಿಂದಲೂ ಅಭಿವೃದ್ದಿಯತ್ತ ಸಾಗುತ್ತಿತ್ತಾದರೂ ಚುಂಚನಗಿರಿ ಕ್ಷೇತ್ರಕ್ಕೆ ಒಳಪಟ್ಟ ನಂತರ ಉತ್ತಮ ಅಭಿವೃದ್ದಿಯಾಗಿ ಸಹಸ್ರಾರು ಭಕ್ತಾಧಿಗಳನ್ನು ಹೊಂದಿರುವುದನ್ನು ನಾವು ಕಾಣಬಹುದಾಗಿದೆ. ಬಸಪ್ಪನ(ಪಾದ ಮುಟ್ಟಿ) ಅನುಗ್ರಹ ಪಡೆಯುತ್ತಾರೆ. ಈ ಕ್ಷೇತ್ರದ ಬಸವಪ್ಪ ಲೋಕ ಕಲ್ಯಾಣದ ಧ್ಯೇಯವನ್ನು ಹೊಂದಿರುವುದು ವಿಶೇಷವಾಗಿದೆ.

ಇವತ್ತಿಗೂ ಸುತ್ತಮುತ್ತಲ ಗ್ರಾಮಗಳ ಜನತೆ ಸೇರಿದಂತೆ ನಮ್ಮ ರಾಜ್ಯವಲ್ಲದೇ ಬೇರೆ ರಾಜ್ಯಗಳ ಜನಸಾಮಾನ್ಯರು ಕೂಡ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಜೊತೆಗೆ ಕಾಲ ಭೈರವನ ಪ್ರತಿರೂಪದಂತಿರುವ ಬಸವನಲ್ಲಿ ಹರಕೆ ಮಾಡಿಕೊಳ್ಳುತ್ತಾರೆ ಅವುಗಳು ನೆರವೇರಿದ ನಂತರ ಬಸವಪ್ಪನನ್ನು ಗ್ರಾಮಕ್ಕೆ ಕರೆಯಿಸಿ ಮೆರವಣಿಗೆ ನಡೆಸಿ ಪೂಜೆ ಸಲ್ಲಿಸುತ್ತಾರೆ.  ಶ್ರೀ ಕಾಲಭೈರವೇಶ್ವರಸ್ವಾಮಿ ಬಸವಪ್ಪ ನಂಬಿದವರನ್ನು ಕೈಬಿಡಲ್ಲ ಎಂಬ ನಂಬಿಕೆಯು ಭಕ್ತರಲ್ಲಿದೆ. ಈ ಕ್ಷೇತ್ರದಲ್ಲಿ ನಿತ್ಯವೂ ಅನ್ನದಾಸೋಹ ಜರುಗುತ್ತದೆ. ಜನಸಾಮಾನ್ಯರು ತಾವು ಬೆಳೆದ ದವಸ ಧಾನ್ಯಗಳನ್ನು ತಂದು ದಾಸೋಹಕ್ಕೆ ನೀಡುತ್ತಾರೆ. ಇನ್ನು ಕೆಲವರು ತಮ್ಮ ಕೈಲಾದ ಹಣಕಾಸಿನ ನೆರವು ನೀಡುತ್ತಿರುವುದರಿಂದ ದಾಸೋಹ ಮುನ್ನಡೆಯುತ್ತಿದೆ.

ಇದುವರೆಗೆ ಚಿಕ್ಕರಸಿನಕೆರೆಯ ಕಾಲಭೈರವೇಶ್ವರನ ಸನ್ನಿಧಿಗೆ ಬಾರದೆ ಇದ್ದಲ್ಲಿ ಒಮ್ಮೆ ಬನ್ನಿ ಇಲ್ಲಿನ ಬಸಪ್ಪನ ಕೃಪೆಗೆ ಪಾತ್ರರಾಗಿ…

B M Lavakumar

admin
the authoradmin

Leave a Reply

Translate to any language you want