ArticlesLatest

ಮಕ್ಕಳನ್ನು ಭವ್ಯ ಭಾರತದ ಪ್ರಜೆಯನ್ನಾಗಿಸುವುದು ಪೋಷಕರ ಹೊಣೆ…

ಸ್ವಾತಂತ್ರ್ಯ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ್ ನೆಹರು ಅವರು ಮಕ್ಕಳಪಾಲಿನ ಚಾಚಾ ನೆಹರು ಆಗಿದ್ದು, ಮಕ್ಕಳ ಮೇಲಿದ್ದ ಅಕ್ಕರೆಗೆ ಅವರ ಜನ್ಮದಿನವಾದ ನವೆಂಬರ್ 14ನ್ನು ಭಾರತದಲ್ಲಿ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಇವತ್ತಿನ ಸವಾಲ್ ಮತ್ತು ಪೈಪೋಟಿಯ ದಿನಗಳಲ್ಲಿ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಂಡು, ಶಿಕ್ಷಣ ನೀಡಿ, ಅವರಿಗೊಂದು ಬದುಕನ್ನು ಕಟ್ಟಿಕೊಟ್ಟು ಭವ್ಯ ಭಾರತದ ಪ್ರಜೆಗಳನ್ನಾಗಿಸುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯವಾಗಿದೆ.

ಮಕ್ಕಳೆಂದರೆ ಅವರು ಬರೀ ಮಕ್ಕಳಷ್ಟೇ ಅಲ್ಲ… ಅವರು ಮನೆಗೆ ಬೆಳಕು, ಭವಿಷ್ಯದಲ್ಲಿ ಸಮಾಜಕ್ಕೊಂದು ಶಕ್ತಿ. ಹೀಗಾಗಿ ದೇಶದ ಭವಿಷ್ಯ ಬರೆಯಬೇಕಾದ ಮಕ್ಕಳ ಕನಸನ್ನು ನನಸು ಮಾಡುವ ಹೊಣೆ  ಮನೆಯಲ್ಲಿ ಪೋಷಕರದ್ದಾದರೆ ಶಾಲೆಯಲ್ಲಿ ಶಿಕ್ಷಕರ ಮೇಲಿರುತ್ತದೆ… ಹೀಗಾಗಿ ಬಾಲ್ಯದಲ್ಲಿ ಶಿಕ್ಷಣದ ಜತೆಗೆ ಅವರಿಗೆ ನಾಳಿನ ಬದುಕಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸಿ ಅವರ ಹಕ್ಕುಗಳಿಗೆ ಚ್ಯುತಿ ಬರದಂತೆ ಬೆಳೆಸುವುದು ಪೋಷಕರ ಪಾಲಿಗೆ ಸವಾಲ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬದಲಾದ ಕಾಲಘಟ್ಟದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಅದೇ ವೇಗಕ್ಕೆ ತಕ್ಕಂತೆ ಮಕ್ಕಳನ್ನು ಬೆಳೆಸಬೇಕಾಗಿರುವುದು ಅನಿವಾರ್ಯವಾಗಿದೆ. ಮುಂದಿನ ದೇಶದ ಮತ್ತು ಮಕ್ಕಳ ಭವಿಷ್ಯವನ್ನು ಅರಿತು ಅದಕ್ಕೆ ತಕ್ಕಂತೆ ಶಿಕ್ಷಣ ಮತ್ತು ಶಿಕ್ಷಣದಾಚೆಗಿನ ಬದುಕಿನ ಮೂಲಗಳನ್ನು ತಿಳಿಸಬೇಕಾಗಿ ಬಂದಿದೆ. ಒಂದು ಕಾಲವಿತ್ತು ಮಕ್ಕಳು ಆಡುತ್ತಾ ಬೆಳೆಯುತ್ತಿದ್ದರು. ಅವತ್ತಿಗೆ ಅದನ್ನು ಹಿರಿಯರು ಹೇಳಿಕೊಟ್ಟಿದ್ದರು. ಏಕೆಂದರೆ ಅವತ್ತಿನ ಮಟ್ಟಿಗೆ  ಬದುಕು ಕೂಡ ಹಾಗೆಯೇ ಇತ್ತು.

ಕೃಷಿಯೇ ಜೀವನಾಧಾರವಾಗಿದ್ದ ಕಾಲದಲ್ಲಿ ದೈಹಿಕ ಶಕ್ತಿಯನ್ನು ಮಗುವಿನಿಂದಲೇ ಗಟ್ಟಿಗೊಳಿಸಬೇಕಿತ್ತು. ಮತ್ತು ಕೃಷಿ ಚಟುವಟಿಕೆಗಳನ್ನು ಮಾಡುವ ಸಂದರ್ಭ ಬೆಳೆಯನ್ನು ನಾಶ ಮಾಡಲು ಬರುವ ವನ್ಯಪ್ರಾಣಿಗಳೊಂದಿಗೆ ಹೋರಾಡಬೇಕಾಗಿತ್ತು. ಹೀಗಾಗಿ ಮಕ್ಕಳಿಗೆ ಬಾಲ್ಯದಲ್ಲಿಯೇ ದೈಹಿಕ ಶಕ್ತಿಯನ್ನು ವೃದ್ಧಿಸುವ, ತಂತ್ರಗಳನ್ನು ಕಲಿಸುವ ಆಟಗಳನ್ನು ಆಡಿಸಲಾಗುತ್ತಿತ್ತು. ಆದರೀಗ ಹಾಗಿಲ್ಲ. ದೈಹಿಕ ಶ್ರಮಕ್ಕಿಂತ ಮಾನಸಿಕ ಒತ್ತಡಗಳು ಜಾಸ್ತಿಯಾಗುತ್ತಿವೆ. ಮಕ್ಕಳ ಆಶೋತ್ತರಕ್ಕಿಂತ ಹೆಚ್ಚಾಗಿ ಪೋಷಕರು ತಮ್ಮ ಬಯಕೆಗಳನ್ನು ಮಕ್ಕಳ ಮೂಲಕ ಈಡೇರಿಸುವ ಪ್ರಯತ್ನಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದೆ.

ಇದೆಲ್ಲದಕ್ಕಿಂತ ಹೆಚ್ಚಾಗಿ ಮೊಬೈಲ್ಲೇ ಬದುಕಾಗಿರುವ  ಈ ಸಮಯದಲ್ಲಿ ಮಗುವಿನಿಂದ ಆರಂಭವಾಗಿ ಎಲ್ಲರನ್ನೂ ಮೊಬೈಲ್ ಅಪೋಶನ ತೆಗೆದುಕೊಳ್ಳುತ್ತಿದೆ. ಮಕ್ಕಳು ಕೂಡ ಮೊಬೈಲ್ ಗೆ ಬಹುಬೇಗ ಆಕರ್ಷಕರಾಗುತ್ತಿದ್ದಾರೆ. ಹೀಗಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಹಾಗೂ ಅವರನ್ನು ಜವಬ್ದಾರಿಯಿಂದ ಬೆಳೆಸುವುದು ಸುಲಭವಾಗಿ ಉಳಿದಿಲ್ಲ. ಅವರಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಪೋಷಿಸಬೇಕಾಗುತ್ತದೆ. ಇವತ್ತಿನ  ದಿನಮಾನದಲ್ಲಿ ಮಕ್ಕಳು ಕೇವಲ ಕುಟುಂಬದ ಸಂತೋಷಕ್ಕಾಗಿ ಇರುವುದಲ್ಲ ಅವರು ಮುಂದಿನ ರಾಷ್ಟದ ಭವಿಷ್ಯವನ್ನು ಕಟ್ಟುವ ಪ್ರಜೆಗಳಾಗಬೇಕು ಎಂಬುದನ್ನು ಮನಗಾಣಬೇಕು.

ಮಕ್ಕಳ ಕಣ್ಣುಗಳಲ್ಲಿ ಹೊಳೆಯುವ ಆಸೆಗಳಿಗೆ, ಹೃದಯದಲ್ಲಿ ಮಡುಗಟ್ಟಿರುವ ಕನಸುಗಳಿಗೆ ನೀರೆರೆದು ಬೆಳೆಸಬೇಕು.. ಅವರು ನಮ್ಮ ಬದುಕಿನ ಬೆಳಕಾಗಿರುವುದರಿಂದ ಅವರನ್ನು ಕೇವಲ ಮಕ್ಕಳಾಗಿ ನೋಡುವುದಕ್ಕಿಂತ ಹೆಚ್ಚಾಗಿ ಅವರನ್ನು ಭವಿಷ್ಯ ಸೃಷ್ಟಿಸುವ  ಸೃಷ್ಟಿಕರ್ತರಾಗಿ ನೋಡಿ ಅವರಿಗೆ ಪ್ರೀತಿಕೊಟ್ಟು, ಮಾರ್ಗದರ್ಶನ ಮಾಡಿ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಬೇಕಾಗುತ್ತದೆ. ಏಕೆಂದರೆ ಪ್ರತಿಯೊಂದು ಮಗುವಿನ ಮನಸ್ಸು ಮೃದುವಾದ ಹೂವಿನಂತಿದ್ದು, ಅದಕ್ಕೆ ಸಕಾಲದಲ್ಲಿ ಸರಿಯಾದ ಆರೈಕೆ ಮಾಡಿದರೆ ಅದು ಅರಳಲು ಸಾಧ್ಯವಾಗುತ್ತದೆ.

ಬಹಳಷ್ಟು ಸಂದರ್ಭಗಳಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ  ಸುತ್ತಲಿನ ವಾತಾವರಣ, ಬೆಳೆಯುವ ಪರಿಸರ ಕೆಲವೊಮ್ಮೆ ದಾರಿತಪ್ಪುವಂತೆ ಮಾಡಿ ಬಿಡಬಹುದು. ಅಂತಹ ಸಂದರ್ಭಗಳಲ್ಲಿ ಅವರಿಗೆ ಸುರಕ್ಷಿತ ಹಾದಿಗೆ ಕರೆದೊಯ್ದು ಒಂದೊಳ್ಳೆಯ  ವಾತಾವರಣವನ್ನು ನಿರ್ಮಿಸಿಕೊಡುವುದು ನಮ್ಮೆಲ್ಲರ  ಕರ್ತವ್ಯವಾಗಿದೆ. ಅವರು ಮಾಡುವ ಸಣ್ಣಪುಟ್ಟ ತಪ್ಪುಗಳನ್ನು ತಾಳ್ಮೆ, ಸಹನೆಯ ಮೂಲಕ ಸರಿಪಡಿಸಿ ಅವರು ಕೇಳುವ ಪ್ರಶ್ನೆಗಳಿಗೆ ಪ್ರೀತಿ, ಗೌರವ ಮತ್ತು ಜಾಣ್ಮೆಯ ಉತ್ತರಗಳನ್ನು ನೀಡಬೇಕು. ಅವರ ಭಾವನೆಗಳನ್ನು ಬೆಂಬಲಿಸಬೇಕು. ಇಂತಹ ನಿಸ್ವಾರ್ಥ ಆರೈಕೆ ಮಕ್ಕಳ ಆತ್ಮವಿಶ್ವಾಸಕ್ಕೆ ನಾಂದಿಯಾಗುತ್ತದೆ.

ಇನ್ನು ಇಂದಿನ ಜಗತ್ತಿನಲ್ಲಿ ಮಕ್ಕಳು ಹಲವು ಸವಾಲ್ ಗಳ ನಡುವೆ ಬೆಳೆಯುತ್ತಿದ್ದಾರೆ. ಅದರಲ್ಲೂ ತಂತ್ರಜ್ಞಾನ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಒತ್ತಡ ಹೆಚ್ಚುತ್ತಿದೆ. ಭಯ, ಆತಂಕಗಳು ಅವರ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ಬೆಂಗಾವಲಾಗಿ ನಿಂತು ಬೇಕು, ಬೇಡಗಳನ್ನು ಅರಿತು ಮಾರ್ಗದರ್ಶನ ನೀಡುವುದು ಪೋಷಕರ ಜವಬ್ದಾರಿಯಾಗಿದೆ. ಜತೆಗೆ ಮೌಲ್ಯಯುತ ಜೀವನ, ಮಾನವೀಯ ಗುಣಗಳನ್ನು ತಿಳಿಸುವುದು, ತಪ್ಪು ಸರಿ ನಡುವಿನ ವ್ಯತ್ಯಾಸವನ್ನು ತಿಳಿಸಿ ಹೇಳುವುದು… ಹಾಗೆಯೇ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ.

ಮಕ್ಕಳನ್ನು ಕೇವಲ ಓದು, ಪರೀಕ್ಷೆಗಳಲ್ಲಿ ಬಂಧಿಸದೆ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡಬೇಕು. ಅವರು ಕಲೆ, ಕ್ರೀಡೆ, ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅವರು ಯಾವುದರಲ್ಲಿ ಪ್ರತಿಭಾವಂತರು ಎನ್ನುವುದನ್ನು ಗುರುತಿಸಿ ಅದರಲ್ಲಿ ಮುಂದುವರೆಯುವಂತೆ ಅವಕಾಶ, ಪ್ರೋತ್ಸಾಹ ನೀಡಬೇಕಾಗುತ್ತದೆ. ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆಯಿದೆ. ಅದನ್ನು ಗುರುತಿಸುವುದು ಬಹುಮುಖ್ಯವಾಗಿದೆ. ಅವರಿಗೆ ಆಹಾರ ನೀಡಿ ಬೆಳೆಸುವುದು, ಶಿಕ್ಷಣ ನೀಡುವುದು ಜವಬ್ದಾರಿಯಲ್ಲ.. ಅದರಾಚೆಗೆ ಅವರು ಬಯಸುವ ಪ್ರೀತಿ, ಬದ್ಧತೆ, ಭದ್ರತೆಯನ್ನು ನೀಡುವುದು ಅಗತ್ಯವಾಗಿದೆ.

 

admin
the authoradmin

Leave a Reply