LatestMysore

ಚಿರತೆ ದಾಳಿಗೆ ಆಸ್ಪತ್ರೆ ಸೇರಿದ ಕಾರ್ಮಿಕ… ಸ್ಪಂದಿಸದ ಇಲಾಖೆ… ಗೋಳು ಕೇಳೋರಿಲ್ಲ..!

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿರುವ ಘಟನೆ ತಾಲೂಕಿನ ಹನಗೋಡು ಹೋಬಳಿಯ ಕಣಗಾಲು ಗ್ರಾಮದ ಬಳಿಯ ಕಂಪಲಾಪುರ ರಸ್ತೆಯಲ್ಲಿ  ನಡೆದಿದ್ದು, ಗಾಯಾಳು ಕಾರ್ಮಿಕ ತಾಲೂಕಿನ ಕಣಗಾಲು ಗ್ರಾಮದ ಲೇ.ಮಹದೇವನಾಯಕರ ಪುತ್ರ ಮಾದೇಶ್‌ನಾಯಕನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳು ಮಾದೇಶ್‌ನಾಯ್ಕ ಎಂದಿನಂತೆ ಜಮೀನುಗಳಲ್ಲಿರುವ ಬೂರುಗದ ಮರಗಳಲ್ಲಿ ಮೊಗ್ಗು ಸಂಗ್ರಹಿಸಲು ತೆರಳಿದ್ದ ವೇಳೆ ಹಿಂದಿನಿಂದ ಬಂದ ಚಿರತೆ ದಾಳಿ ನಡೆಸಿ ಕುತ್ತಿಗೆಯನ್ನು ಹಿಡಿದಿದೆ. ಈ ವೇಳೆ ಕಿರುಚಿಕೊಂಡಿದ್ದಾರೆ. ಮಾದೇಶ್ ನಾಯ್ಕನ ಕೂಗಾಟ ಕೇಳಿದ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಕೂಗಾಟ ನಡೆಸಿದ್ದರಿಂದ ಹೆದರಿದ ಚಿರತೆ ಮಾದೇಶನಾಯ್ಕನನ್ನು ಬಿಟ್ಟು ಪರಾರಿಯಾಗಿದ್ದರಿಂದ ಅವರ ಜೀವ ಉಳಿದಿದೆ.

ತಕ್ಷಣವೇ ಗಾಯಾಳುವನ್ನು ಹತ್ತಿರದ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಸಂಜೆ ವೇಳೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿರಿಯಾಪಟ್ಟಣ ಪ್ರಾದೇಶಿಕ ಅರಣ್ಯ ವಿಭಾಗದ ಡಿ.ಆರ್.ಎಫ್.ಓ.ಪಾರ್ವತಿ ಪಿರಿಯಾಪಟ್ಟಣ ಆಸ್ಪತ್ರೆಗೆ ಭೇಟಿ ನೀಡಿದ್ದರು.  ಗಾಯಾಳುವಿನ ವೆಚ್ಚವನ್ನು ಇಲಾಖೆಯಿಂದಲೇ ಭರಿಸಲಾಗುವುದೆಂದು ಡಿಸಿಎಫ್ ಕಿರುಬನಾಥನ್ ತಿಳಿಸಿದ್ದಾರೆ.

ಚಿಕಿತ್ಸೆಗೆ ಸ್ಪಂದಿಸದ ಇಲಾಖೆ: ಆದರೆ ಗಾಯಾಳವನ್ನು  ಕೆ.ಆರ್.ಆಸ್ಪತ್ರೆಗೆ ಕಳುಹಿಸಿ ಕೈತೊಳೆದುಕೊಂಡಿರುವ ಅರಣ್ಯ ಸಿಬ್ಬಂದಿ ಜೊತೆಗೂ ಹೋಗಿಲ್ಲ.  ದಾಖಲಾಗಿರುವ ಗಾಯಾಳು ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡಿದ್ದಾರೆ. ಅರಣ್ಯ ಇಲಾಖೆ ಹಣಕಾಸಿನ ನೆರವನ್ನೂ ನೀಡಿಲ್ಲವೆಂದು ಗಾಯಾಳು ಸಹೋದರ ತ್ಯಾಗರಾಜ್‌ ನೋವು ತೋಡಿಕೊಂಡರು.

ಈ ಬಗ್ಗೆ ಆರ್.ಎಫ್.ಓ.ಪದ್ಮಶ್ರೀಯವರನ್ನು ಪ್ರಶ್ನಿಸಿದಾಗ ತಾವು ಹುಣಸೂರಿನಲ್ಲಿದ್ದು, ಸಿಬ್ಬಂದಿಯನ್ನು ಕಳುಹಿಸಿರುವೆ. ಗಾಯಾಳು ಸಹೋದರನ ಖಾತೆಗೆ ಹಣ ಹಾಕುವುದಾಗಿ ತಿಳಿಸಿದ್ದಾರೆ. ವನ್ಯಪ್ರಾಣಿಗಳ ದಾಳಿಗೊಳಗಾದ ಗಾಯಾಳುಗಳಿಗೆ ಅಪಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಒಡಂಬಡಿಕೆ ಇದ್ದರೂ ಜೊತೆಯಲ್ಲಿ ಇಲಾಖೆಯವರು ಹೋಗದ್ದರಿಂದ ದಿಕ್ಕು ತೋಚದ ಬಡ ಕುಟುಂಬ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು. ಅಲ್ಲಿನ ವೆಚ್ಚವನ್ನೂ ಭರಿಸಲಾಗದ ಕುಟುಂಬ ಕಂಗಾಲಾಗಿದ್ದಾರೆ.

admin
the authoradmin

Leave a Reply

Translate to any language you want