LatestState

ಅತ್ಯುತ್ತಮ ಸ್ವಚ್ಛತಾ ನಗರ ಗೌರವಕ್ಕೆ ಬಾಜನವಾದ ಮೈಸೂರು… ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಸಾಂಸ್ಕೃತಿಕ ನಗರಿ!

ಇದೀಗ ಮೈಸೂರು ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿದೆ. ಸಂಸ್ಕೃತಿ, ಪರಂಪರೆ, ಪ್ರವಾಸಿ ತಾಣಗಳಿಂದ ಪ್ರವಾಸೋದ್ಯಮದಲ್ಲಿ ಛಾಪು ಮೂಡಿಸಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ  ಅತ್ಯುತ್ತಮ ಸ್ವಚ್ಛತಾ ನಗರ  ಗೌರವ ಸಂದಿದೆ. ಇದು ಮೈಸೂರಿಗರು ಖುಷಿ ಪಡುವ ಸುದ್ಧಿಯಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ನಡೆದಿದ್ದ ಸ್ವಚ್ಛ ಸರ್ವೇಕ್ಷಣ ಅಭಿಯಾನದ ಸ್ವಚ್ಛ ಸೂಪರ್ ಲೀಗ್‌ನಲ್ಲಿ ಈ ಗೌರವ ದೊರೆತಿದೆ.

ಅತ್ಯುತ್ತಮ ಸ್ವಚ್ಛ ನಗರಗಳ ನಿರ್ಮಾಣಕ್ಕಾಗಿ ಈ ಬಾರಿ ಕೇಂದ್ರ ಸರ್ಕಾರದಿಂದ ಸ್ವಚ್ಛ ಭಾರತ ಮಿಷನ್ – ನಗರ ಸ್ವಚ್ಛ ಸರ್ವೇಕ್ಷಣಾ ಚೌಕಟ್ಟಿನ ಅಡಿಯಲ್ಲಿ ಹೊಸದಾಗಿ ಪರಿಚಯಿಸಿರುವ ಸ್ವಚ್ಛ ಸೂಪರ್ ಲೀಗ್‌ನಲ್ಲಿ ಮೈಸೂರು ದೇಶದ ಅತ್ಯುತ್ತಮ ಸ್ವಚ್ಛತಾ ನಗರವಾಗಿ ಹೊರಹೊಮ್ಮಿದೆ. ಇದು ಸ್ವಚ್ಛ ಸರ್ವೇಕ್ಷಣಾ ಶ್ರೇಯಾಂಕದಲ್ಲಿ ವಾರ್ಷಿಕವಾಗಿ ನಿರಂತರ ಸ್ವಚ್ಛತಾ ನಿರ್ವಹಣೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ನಗರಗಳ ಪ್ರತಿಷ್ಠೆಯ ಲೀಗ್ ಆಗಿದೆ.

ಪ್ರತಿ ವರ್ಷ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಘನತ್ಯಾಜ್ಯ ಉತ್ಪಾದನೆ, ತ್ಯಾಜ್ಯ ನಿರ್ವಹಣೆ, ವಿಲೇವಾರಿ, ಮರುಬಳಕೆ, ನೀರು, ನೈರ್ಮಲ್ಯ, ಒಳಚರಂಡಿ, ಪ್ಲಾಸ್ಟಿಕ್ ಮರುಬಳಕೆ, ಕಟ್ಟಡ ತ್ಯಾಜ್ಯ, ಸಿಟಿಜನ್ ಫೀಡ್‌ ಬ್ಯಾಕ್ ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಿ ರಾಂಕಿಂಗ್ ನೀಡಲಾಗುತ್ತಿತ್ತು. ಇದಕ್ಕಾಗಿ 12,500ಅಂಕಗಳನ್ನು ನಿಗದಿಪಡಿಸಲಾಗುತ್ತಿತ್ತು. ಆಯಾ ನಗರಗಳು ಪಡೆದ ಅಂಕಗಳ ಆಧಾರದ ಮೇಲೆ ರಾಂಕಿಂಗ್ ನಿಗದಿಯಾಗುತ್ತಿತ್ತು. ಆದರೆ, ಈ ಬಾರಿ ಹೊಸದಾಗಿ ಸ್ವಚ್ಛ ಸೂಪರ್ ಲೀಗ್ ಜಾರಿಗೆ ತಂದ ಕಾರಣ ಮೈಸೂರು ನಗರಕ್ಕೆ ಯಾವುದೇ ರಾಂಕಿಂಗ್, ಪಾಯಿಂಟ್ಸ್ ನೀಡಲಾಗಿಲ್ಲ. ಬದಲಿಗೆ ನಗರ ಸ್ವಚ್ಛತೆಯಲ್ಲಿ ಕೈಗೊಂಡ ಅತ್ಯುತ್ತಮ ಕಾರ್ಯಗಳನ್ನು ಪರಿಗಣಿಸಿ ಸ್ವಚ್ಛ ಸೂಪರ್ ಲೀಗ್ ನಲ್ಲಿ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ: ಮೈಸೂರಿನ ಧನುಷ್ಕೋಟಿಗೆ ಜೀವಕಳೆ… ಇದು ಎಲ್ಲಿದೆ? ಸೃಷ್ಟಿಯಾಗಿದ್ದು ಹೇಗೆ?

2023ರ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಮೈಸೂರು ನಗರ 27ನೇ ಸ್ಥಾನಕ್ಕೆ ಕುಸಿದಿತ್ತು. ಇದು ಮಹಾನಗರ ಪಾಲಿಕೆ ಜತೆಗೆ ಇಲ್ಲಿನ ಜನರಿಗೂ ಆಘಾತ ಉಂಟು ಮಾಡಿತ್ತು. ಸ್ವಚ್ಛತೆಯಲ್ಲಿ ಪ್ರತಿವರ್ಷ ದೇಶದ ಟಾಪ್ ಟೆನ್ ನಗರಗಳಲ್ಲಿ ಒಂದಾಗುತ್ತಿದ್ದ ಮೈಸೂರು, ತೀವ್ರ ಕುಸಿತ ಕಂಡಿದ್ದು ಕಳವಳಕ್ಕೆ ಕಾರಣವಾಗಿತ್ತು. ಆದರೆ, ಈ ಬಾರಿ ಹೊಸದಾಗಿ ಜಾರಿಗೆ ತಂದ ಸ್ವಚ್ಛ ಸೂಪರ್ ಲೀಗ್‌ ನಲ್ಲಿ ಮೈಸೂರು ದೇಶದ ಅತ್ಯುತ್ತಮ ಸ್ವಚ್ಛತಾ ನಗರವಾಗಿ ಹೊರಹೊಮ್ಮಿದೆ.

ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕರ್ನಾಟಕ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಹಾಗೂ ಮೈಸೂರು ನಗರಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿ ಪ್ರಶಸ್ತಿ ಸ್ವೀಕರಿಸಿದರು. ಈ ಬಾರಿ ತ್ರಿಬಲ್ ಆರ್ (ರಿಡ್ಯೂಸ್, ರಿಯೂಸ್ ಹಾಗೂ ರೀಸೈಕಲ್) ಎಂಬ ಆಶಯದಡಿ ಕೇಂದ್ರ ಸರಕಾರವು ಸ್ವಚ್ಛ ಸರ್ವೇಕ್ಷಣ್ ಅಭಿಯಾನ ನಡೆಸಿತ್ತು. ಒಳಚರಂಡಿ ವ್ಯವಸ್ಥೆ ಹಾಗೂ ನಗರ ಸೌಂದರ್ಯೀಕರಣವನ್ನೂ ಪರಿಗಣನೆಗೆ ತೆಗೆದುಕೊಂಡಿತ್ತು. ಮೈಸೂರು ನಗರ ವೀಕ್ಷಣೆಗೆ ಕೇಂದ್ರದಿಂದ ಮೂರು ತಂಡ ಬಂದಿತ್ತು.

ಇದನ್ನೂ ಓದಿ: ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ…

ಇನ್ನು ಕರ್ನಾಟಕ ಹಿತರಕ್ಷಣಾ ವೇದಿಕೆ  ಹಾಗೂ ಮಯೂರ ಕನ್ನಡ ಯುವಕರ ಬಳಗದ ವತಿಯಿಂದ  ದೇಶದ  ಸ್ವಚ್ಛ ನಗರಗಳ ಪಟ್ಟಿಯಲ್ಲಿ  ಸೂಪರ್ ಸ್ವಚ್ಚ ಲೀಗ್  ನಗರ ಹಿನ್ನೆಲೆಯಲ್ಲಿ ಅರಮನೆಯ ಮುಂಭಾಗ  ಪ್ರವಾಸಿಗರಿಗೆ  ಹಾಗೂ ಸಾರ್ವಜನಿಕರಿಗೆ ಮೈಸೂರು ಪಾಕ್  ವಿತರಿಸಿ ಪೌರಕಾರ್ಮಿಕರಿಗೆ ಜೈಕಾರ ಕೂಗಿ  ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ  ಮಾತನಾಡಿದ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ  ಸ್ವಚ್ಛ ನಗರ ಮೈಸೂರು ಸೂಪರ್ ಸ್ವಚ್ಚ ಲೀಗ್  ನಗರ  ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ, ಇದಕ್ಕೆ ಮೂಲ ಕಾರಣಕರ್ತರಾದ  ಪೌರಕಾರ್ಮಿಕರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ, ಮುಂಬರುವ  ದಿನಗಳಲ್ಲಿ ಮೈಸೂರು ನಗರ  ಪ್ರಥಮ ಸ್ಥಾನ ಬರಲಿ ಎಂದು  ಆಶಿಸುತ್ತೇವೆ, ಪೌರಕಾರ್ಮಿಕರ ಜೊತೆ ನಾವು ಎಂದಿಗೂ ಇರುತ್ತೇವೆ, ಪೌರಕಾರ್ಮಿಕರ ಸಮಸ್ಯೆಗೆ  ರಾಜ್ಯ ಸರ್ಕಾರ ಸ್ಪಂದಿಸುವ ವಿಶ್ವಾಸ ಇದೆ ಎಂದು ಹೇಳಿದರು.

ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…

ಇದೇ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ,  ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್,  ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ  ರಾಘವೇಂದ್ರ,  ಎಸ್ ಎನ್ ರಾಜೇಶ್,  ಹರೀಶ್ ನಾಯ್ಡು,  ಪಾಂಡು,  ಷಣ್ಮುಗ  ಹಾಗೂ  ರಸ್ತೆ ಬದಿ ವ್ಯಾಪಾರಿಗಳು  ಹಾಜರಿದ್ದರು.

admin
the authoradmin

Leave a Reply