ತೆಂಗು ಮರಕ್ಕೆ ಕಾಡುವ ಕೀಟಗಳಿಂದ ಇಳುವರಿ ಕುಂಠಿತ… ಮರಗಳನ್ನು ಕಾಪಾಡಿಕೊಳ್ಳುವುದೇ ರೈತರಿಗೆ ಸವಾಲ್!

ತೆಂಗಿನಕಾಯಿ, ಕೊಬ್ಬರಿ, ಎಳನೀರು ಹೀಗೆ ಎಲ್ಲವುಗಳ ಬೆಲೆ ಗಗನಕ್ಕೇರುತ್ತಿದ್ದು, ಖರೀದಿ ಮಾಡುವಾಗ ಗ್ರಾಹಕರು ಗೊಣಗುವಂತಾಗಿದೆ. ಆದರೆ ಇದಕ್ಕೆಲ್ಲ ತೆಂಗು ಉತ್ಪಾದನೆಯಲ್ಲಿ ಕುಂಠಿತವಾಗಿರುವುದೇ ಕಾರಣವಾಗಿದೆ. ಅದರಲ್ಲೂ ತೆಂಗು ಬೆಳೆಯುವುದು ಈಗ ಸುಲಭವಾಗಿ ಉಳಿದಿಲ್ಲ. ತೆಂಗು ಬೆಳೆಯುತ್ತಿರುವ ಪ್ರದೇಶಗಳಲ್ಲಿ ತೆಂಗಿಗೆ ಕಪ್ಪುತಲೆ ಹುಳು, ಕೆಂಪುಮೂತಿ ಹುಳ ಹಾಗೂ ಬಿಳಿ ನೊಣದ ಬಾಧೆ ಹೆಚ್ಚುತ್ತಿದ್ದು ಇದರಿಂದ ತೆಂಗುಬೆಳೆಯುತ್ತಿದ್ದ ಬೆಳೆಗಾರರೇ ಸಂಕಷ್ಟಕ್ಕೀಡಾಗುವಂತೆ ಮಾಡಿದೆ.
ಈಗಾಗಲೇ ಹಾಸನ ಜಿಲ್ಲೆಯಲ್ಲಿ 1,18,792 ಹೆಕ್ಟೇರ್ ವಿಸ್ತೀರ್ಣದಲ್ಲಿ ತೆಂಗು ಬೆಳೆಯನ್ನು ಬೆಳೆಯುತ್ತಿದ್ದು, ಅಂದಾಜು ವರದಿಗಳ ಪ್ರಕಾರ 82,000 ಹೆಕ್ಟೇರ್ ವಿಸ್ತೀರ್ಣದಲ್ಲಿ ತೆಂಗು ಬೆಳೆಗೆ ಕಪ್ಪುತಲೆ ಹುಳು ಹಾಗೂ ಬಿಳಿ ನೊಣದ ಹಾವಳಿ ಕಂಡುಬಂದಿದ್ದು, ಇದರಿಂದ ತೆಂಗಿನಲ್ಲಿ ಇಳುವರಿ ಕುಂಠಿತವಾಗಿರುತ್ತದೆ ಎನ್ನಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತೆಂಗು ಬೆಳೆಯಲ್ಲಿ ಕಪ್ಪುತಲೆ ಹುಳು ಹಾಗೂ ಬಿಳಿ ನೊಣದ ಹಾವಳಿ ಬಗ್ಗೆ ಸಮೀಕ್ಷೆ ನಡೆಸಲು ಸರ್ಕಾರದ ಸೂಚನೆಯಂತೆ ತೋಟಗಾರಿಕೆ ಇಲಾಖೆ ವತಿಯಿಂದ ಸಮೀಕ್ಷೆ ಕೈಗೊಳ್ಳಲಾಗುತ್ತಿರುವುದನ್ನು ಕಾಣಬಹುದಾಗಿದೆ.
ಇನ್ನು ತೆಂಗಿನಲ್ಲಿ ಕೀಟ ಬಾಧೆಯು ಹೆಚ್ಚಾಗಿ ಇಳುವರಿ ಕುಂಠಿತವಾಗುತ್ತಿರುವ ಕಾರಣ 2025-26ನೇ ಸಾಲಿನಲ್ಲಿ ಆಯವ್ಯಯ ಘೋಷಣೆಯ ಕಂಡಿಕೆ 55 ರಲ್ಲಿ ತೆಂಗಿನ ಕಪ್ಪುತಲೆ ಹುಳು ಹಾಗೂ ಬಿಳಿ ನೊಣದ ಬಾಧೆಯ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿರುವುದನ್ನು ಕಾಣಬಹುದಾಗಿದೆ.
ಇದರ ಜತೆಗೆ ಕೆಂಪುಮೂತಿ ಹುಳ ಕೂಡ ಇನ್ನಿಲ್ಲದಂತೆ ಕಾಡತೊಡಗಿದೆ. ಇದನ್ನು ಗುರುತಿಸುವುದು ಹೇಗೆ ಎಂದು ನೋಡಿದ್ದೇ ಆದರೆ ತೆಂಗಿನ ಮರಗಳನ್ನು ಸೂಕ್ಷವಾಗಿ ಗಮನಿಸಿದ್ದೇ ಆದರೆ ಗರಿಗಳ ಕೆಳಗಿನ ಭಾಗದಲ್ಲಿ ರಂಧ್ರ ಅಥವಾ ಕೆಲವೊಮ್ಮೆ ಮೇಲ್ಬಾಗದಲ್ಲಿ (ನಮಗೆ ರಂಧ್ರ ಕಾಣಿಸುವುದು ಕಷ್ಟ) ಅಂದರೆ ಗರಿಗಳ ಬುಡಭಾಗದಿಂದ ಕೆಂಪು ಕಪ್ಪು ಮಿಶ್ರಿತ ರಸ ಸೋರುತ್ತಿರುತ್ತದೆ. ರಂಧ್ರಗಳು ಸ್ಪಷ್ಟವಾಗಿದ್ದರೆ, ಅದರಿಂದ ಹೊಟ್ಟು ಉದುರುತ್ತಿರುತ್ತದೆ. ಈ ಹಂತದಲ್ಲೂ ಗಮನಿಸಿ, ನಿರ್ವಹಿಸದೇ ಹೋದರೆ, ಸುಳಿ ಮುರಿದು ಬೀಳುವ ಸಾಧ್ಯತೆಯಿದೆ. ಆಗ ಹುಳುವಿನ ಕಾಟವಿರುವುದು ನಮಗೆ ಖಾತ್ರಿಯಾಗುತ್ತದೆ.
ಸುಳಿ ಮುರಿದು ಬಿದ್ದ ಮರಗಳನ್ನು ತುಂಡಾಗಿ ಕತ್ತರಿಸಿ ಸಂಪೂರ್ಣವಾಗಿ ಸುಟ್ಟುಹಾಕುವುದು ಇಲ್ಲವೆ 5-6 ಅಡಿ ಆಳವಾದ ಗುಂಡಿ ತೆಗೆದು ಅದರಲ್ಲಿ ಈ ತುಂಡುಗಳನ್ನು ಹಾಕಿ ಮೇಲೆ ಕಲ್ಲು ಸುಣ್ಣ, ಬ್ಲೀಚಿಂಗ್ ಪುಡಿ ಹಾಕಿ, ನಂತರ ಮಣ್ಣಿನಿಂದ ಮುಚ್ಚಬೇಕಾಗುತ್ತದೆ ಇಷ್ಟೇ ಅಲ್ಲದೆ ರಸ ಸೋರುತ್ತಿರುವ ಅಥವಾ ಹೊಟ್ಟು ಉದುರುತ್ತಿರುವ ರಂಧ್ರಗಳಿಗೆ, ಒಂದು ತಂತಿ ಅಥವಾ ಕಡ್ಡಿ ಇಲ್ಲವೇ ದೊಡ್ಡದಿದ್ದರೆ ಕೈ ಹಾಕಿ, ಒಳಗಿರುವ ಮರಿಹುಳುಗಳು, ಕೋಶಗಳು, ದುಂಬಿಗಳು ಮತ್ತು ಮೂತಿಹುಳುಗಳನ್ನು ಹೊರಗೆ ತೆಗೆದು ನಾಶಪಡಿಸಿ, ರಂಧ್ರವನ್ನು ಸ್ವಚ್ಚಗೊಳಿಸಬೇಕು. ನಂತರ ಆ ರಂಧ್ರಕ್ಕೆ ಫಿಪ್ರೋನಿಲ್ ಹರಳುಗಳನ್ನು 5 ರಿಂದ 10 ಗ್ರಾಂ, ಅಥವಾ ಆ ರಂಧ್ರದ ವಿಸ್ತೀರ್ಣಕ್ಕನುಗುಣವಾಗಿ 25 ರಿಂದ 30 ಗ್ರಾಂಗಳವರೆಗೆ ಹೆಚ್ಚಿಸಿ, ಹಾಕಬೇಕು.
ಒಂದು ವೇಳೆ ಫಿಪ್ರೋನಿಲ್ ಹರಳುಗಳು ದೊರಕದಿದಲ್ಲಿ, ಇಮಿಡಾಕ್ಲೋಪ್ರಿಡ್ 10 ಮಿಲಿ ಅಥವಾ ಸ್ಪೆನೋಸಾಡ್ 10 ಮಿಲಿ ಔಷಧವನ್ನು ಪ್ರತೀ ಲೀ ನೀರಿಗೆ ಬೆರೆಸಿ, ಆ ದ್ರಾವಣವನ್ನು ನೇರವಾಗಿ ಹೋಗುವುದಿದ್ದರೇ ರಂಧ್ರದ ಒಳಗೆ ಸುರಿಯಬೇಕು. ಇಲ್ಲವಾದಲ್ಲಿ ಒಂದು ಹತ್ತಿ ಅಥವಾ ಹತ್ತಿಯ ಬಟ್ಟೆ ಅಥವಾ ಗ್ಯಾರೇಜ್ ವೇಸ್ಟ್ ಬಟ್ಟೆಯಲ್ಲಿ ಅದ್ದಿ, ಅದನ್ನು ಒಳಗೆ ಸೇರಿಸಬೇಕು. ನಂತರ ಆ ರಂಧ್ರವನ್ನು ಹಸಿ ಸಗಣಿಯಿಂದ ಮುಚ್ಚಬೇಕಾಗುತ್ತದೆ.
ಸಗಣಿಗೆ ಕ್ಲೋರೋಫೈರಿಫಾಸ್ ಮತ್ತು ಸಿಒಸಿ ಬೆರೆಸಿದರೇ ಉತ್ತಮ. ಈ ರಂಧ್ರದಿಂದ ಮತ್ತೆ ರಸ ಸುರಿಯುತ್ತಿದ್ದರೆ, 1-4 ವಾರದ ನಂತರ ಇದೇ ಪ್ರಕ್ರಿಯೆಯನ್ನು ಪುನರಾವರ್ತಿಸಬೇಕು. ರಸ ಸೋರುವುದು ನಿಂತ ಮೇಲೆ ಮತ್ತೊಮ್ಮೆ ರಂಧ್ರವನ್ನು ಸ್ವಚ್ಚ ಮಾಡಿ, ಸಿಮೆಂಟ್ ಕಾಂಕ್ರೀಟ್ನಿಂದ ಮುಚ್ಚಬೇಕಾಗುತ್ತದೆ. ಮುನ್ನೆಚ್ಚರಿಕಾ ಕ್ರಮವಾಗಿ, ಪ್ರತೀ ಲೀಟರ್ ನೀರಿಗೆ 2.5 ಗ್ರಾಂ ಥಯೋಮೆಥಾಕ್ಸಾಮ್ ಅಥವಾ ಎಮಾಮೆಕ್ಟೀನ್ ಬೆಂಜೋಯೇಟ್ ಹರಳುಗಳನ್ನು ಕರಗಿಸಿ, ಸುಳಿಯ ಕೆಳಗಿರುವ ಗರಿಗಳಲ್ಲಿ ಹನಿ ಹನಿಯಾಗಿ ಬೀಳುವಂತೆ, ಒಂದು ಅಥವಾ ಎರಡು ಲೀ ಪ್ಲಾಸ್ಟಿಕ್ ಬಾಟಲಿಗಳಿಗೆ, ಮೇಲೆ ಮತ್ತು ಕೆಳಗೆ ಸಣ್ಣ ಸೂಜಿಮೊನೆಯಷ್ಟು ರಂಧ್ರ ಮಾಡಿ, ಸುಳಿಯ ಪಕ್ಕದ ಗರಿಗಳ ಕಂಕುಳಲ್ಲಿ ಇಡಬೇಕು.
ಕೆಂಪುಮೂತಿ ಹುಳುಗಳ ಮೋಹಕ ಬಲೆಗಳನ್ನು ತೋಟದ ಹೊರಗೆ ನೆರಳಿನಲ್ಲಿ ಕಟ್ಟಬೇಕು. ತೆಂಗಿನ ಮರಗಳಿಗೆ ಉಳುಮೆ ಮಾಡುವ ಸಂದರ್ಭದಲ್ಲಿ ಅಥವಾ ಕಾಯಿ ಎಳನೀರು ಕೀಳುವ ಸಂದರ್ಭದಲ್ಲಿ ಗಾಯವಾಗದಂತೆ ಎಚ್ಚರವಹಿಸುವುದು ಅತ್ಯವಶ್ಯಕ. ಬುಡದಿಂದ ಕನಿಷ್ಠ 2-3 ಅಡಿ ಆಳವಾಗಿ ಉಳುಮೆ, ಅಗೆತಗಳನ್ನು ಮಾಡದೇ ಇರುವುದು ಬಹಳ ಒಳ್ಳೆಯದು.
ಕೀಟಶಾಸ್ತ್ರಜ್ಞರ ಪ್ರಕಾರ ಕೊಟ್ಟಿಗೆ ಗೊಬ್ಬರ-50 ಕೆ.ಜಿ., ಶುದ್ದವಾದ ಬೇವಿನ ಹಿಂಡಿ-5 ಕೆ.ಜಿ., ಯೂರಿಯಾ-1 ಕೆ.ಜಿ., ಸಿಂಗಲ್ ಸೂಪರ್ ಪಾಸ್ಪೇಟ್-2 ಕೆ.ಜಿ., ಪೊಟಾಷ್-2 ಕೆ.ಜಿ., ಜಿಪ್ಸಂ-1 ಕೆ.ಜಿ., ಬೋರಾಕ್ಸ್-50 ಗ್ರಾಂ, ಮೆಗ್ನೀಶಿಯಂ ಸಲ್ಪೇಟ್-500ಗ್ರಾಂ, ಜಿಂಕ್ ಸಲ್ಪೇಟ್-100 ಗ್ರಾಂ ಈ ಎಲ್ಲಾ ಪೋಷಕಾಂಶಗಳನ್ನು ಗಿಡದಿಂದ ಮೂರು ಅಡಿ ಅಂತರದಲ್ಲಿ ಸುತ್ತಲೂ ಪಾತಿ ಮಾಡಿ ಹಾಕಬೇಕು.
ಇದರಿಂದ ತೆಂಗಿನ ಮರಗಳು ಸದೃಢವಾದ ಬೆಳವಣಿಗೆ ಹೊಂದುತ್ತವೆ. ಕೀಟ ರೋಗ ಬಾಧೆ ತಾಳಿಕೊಳ್ಳುವ ಶಕ್ತಿ ಅವುಗಳಿಗೆ ಬರುತ್ತವೆ. ಸಾಮೂಹಿಕವಾಗಿ ಗ್ರಾಮದ ಎಲ್ಲ ತೆಂಗಿನ ಬೆಳೆಗಾರರು ಒಟ್ಟಾಗಿ ಸೇರಿ ಕೆಂಪುಮೂತಿ ಹುಳದ ಬಾಧೆಯನ್ನು ತಡೆಯಲು ಕ್ರಮ ವಹಿಸುವಂತೆ ಸಲಹೆ ನೀಡಿದ್ದಾರೆ.