ಮೈಸೂರು ದಸರಾ ಎಂದಾಕ್ಷಣ ಬಣ್ಣಬಣ್ಣಗಳಿಂದ ಮಿನುಗುವ ದೀಪಾಲಂಕಾರ ಕಣ್ಮುಂದೆ ಹಾದು ಹೋಗುತ್ತದೆ ಆ ಸುಂದರ ಬೆಳಕನ್ನು ನೋಡುತ್ತಾ ಅಡ್ಡಾಡುವುದೇ ಒಂಥರಾ ಮಜಾ.. ಬಹಳಷ್ಟು ಜನ ರಾತ್ರಿಯಾಗುತ್ತಿದ್ದಂತೆಯೇ ವಿದ್ಯುತ್ ಬೆಳಕಿನಲ್ಲಿ ಮಿಂದೇಳಲೆಂದೇ ನಗರದೊಳಕ್ಕೆ ಬರುವುದು ವಿಶೇಷ… ಹೀಗಾಗಿ ದಸರಾದಲ್ಲಿ ವಿದ್ಯುದ್ದೀಪಗಳ ಅಲಂಕಾರಕ್ಕೆ ಆದ್ಯತೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮೈಸೂರು ದಸರಾ ಟಿಕೆಟ್, ಗೋಲ್ಡ್ ಕಾರ್ಡ್ ಬಿಡುಗಡೆ… ಇದರ ದರ ಎಷ್ಟು ಗೊತ್ತಾ? ಎಲ್ಲಿ ಸಿಗುತ್ತೆ?
ಹಾಗಾದರೆ ಈ ಬಾರಿ ದಸರಾ ವಿದ್ಯುದ್ದೀಪಗಳ ಅಲಂಕಾರ ಹೇಗಿರಲಿದೆ? ಅದಕ್ಕಾಗಿ ತಯಾರಿಗಳು ಹೇಗೆ ನಡೆದಿವೆ? ಮುಂತಾದ ಕುತೂಹಲ ಪ್ರತಿಯೊಬ್ಬರಲ್ಲೂ ಇದ್ದು ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ರಸ್ತೆ, ವೃತ್ತಗಳಿಗೆ ದೀಪಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ಇದರ ನಡುವೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಸಾರ್ವಜನಿಕರಲ್ಲಿ ಕೆಲವೊಂದು ಮನವಿಯನ್ನು ಮಾಡಿದೆ. ಅದೇನೆಂದರೆ ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಅಳವಡಿಸಿರುವ ವಿದ್ಯುತ್ ದೀಪಾಲಂಕಾರಗಳನ್ನು ಕಣ್ತುಂಬಿಕೊಳ್ಳುವ ಜತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುವಂತೆ ಹೇಳಿದೆ.
ದಸರಾ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರಿನ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಾಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ನಗರದ ಸೌಂದರ್ಯ ಹೆಚ್ಚಿಸುವ ಹಾಗೂ ದಸರೆಯ ಸಂಭ್ರಮ, ಸಡಗರವನ್ನು ಇಮ್ಮಡಿಗೊಳಿಸುವ ವಿದ್ಯುತ್ ದೀಪಾಲಂಕಾರ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಹೀಗಾಗಿ ದೀಪಾಲಂಕಾರದ ಅಂದ ಕಣ್ತುಂಬಿಕೊಳ್ಳುವ ಸಂದರ್ಭದಲ್ಲಿ ಸುರಕ್ಷತೆಗೂ ಆದ್ಯತೆ ನೀಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಮೈಸೂರು ದಸರಾ ಸುಸೂತ್ರವಾಗಿ ನಡೆಸಲು 19 ಉಪಸಮಿತಿ ರಚನೆ… ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?
ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿರುವ ಸೆಸ್ಕ್ ವತಿಯಿಂದಲೂ ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡು ದಸರಾ ದೀಪಾಲಂಕಾರ ಮಾಡಲಾಗಿದೆ. ಆದರೂ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಸಾರ್ವಜನಿಕರ ಕರ್ತವ್ಯವಾಗಿದೆ. ಇದಕ್ಕಾಗಿ ನಿಗಮದ ವತಿಯಿಂದ ಸಾರ್ವಜನಿಕರ ಸುರಕ್ಷತೆ ಕೆಲವು ಸಲಹೆಗಳನ್ನು ನೀಡಲಾಗಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ದಸರಾ ದೀಪಾಲಂಕಾರದ ಸಂಭ್ರಮವನ್ನು ನಿರಾತಂಕವಾಗಿ ಆನಂದಿಸುವಂತೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಹೇಳಿದ್ದಾರೆ.
ಹಾಗಾದರೆ ಏನದು ಸುರಕ್ಷತಾ ಸಲಹೆ ಎಂಬುದನ್ನು ನೋಡಿದ್ದೇ ಆದರೆ ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳಿ. ದೀಪಾಲಂಕಾರದ ಕಂಬಗಳ ಹತ್ತಿರ ನಿಂತು ಫೋಟೋ, ವಿಡಿಯೋ ಶೂಟ್ ಮಾಡುವುದನ್ನು ತಪ್ಪಿಸಿ. ಮಳೆ ಸಂದರ್ಭದಲ್ಲಿ ವಿದ್ಯುತ್, ದೀಪಾಲಂಕಾರದ ಕಂಬಗಳ ಹತ್ತಿರ ಹೋಗದೆ ಎಚ್ಚರವಹಿಸಿ. ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರಕ್ಕಾಗಿ ಕಂಬಗಳನ್ನು ಅಳವಡಿಸಿದ್ದು, ಕೆಲವು ಕಡೆಗಳಲ್ಲಿ ದೀಪಾಲಂಕಾರದ ಪ್ರತಿಕೃತಿಗಳನ್ನು ಇರಿಸಲಾಗಿದೆ. ಆದ್ದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಇವುಗಳನ್ನು ಗಮನಿಸಿ ಸುರಕ್ಷಿತವಾಗಿ ಸಂಚರಿಸಿ. ವಿದ್ಯುತ್ ಸಂಬಂಧಿತ ದೂರು, ದೀಪಾಲಂಕಾರದಿಂದ ತೊಂದರೆ ಆದಲ್ಲಿ 24*7 ಸಹಾಯವಾಣಿ 1912 ಸಂಪರ್ಕಿಸುವಂತೆ ಸೂಚಿಸಿದ್ದಾರೆ.