LatestPolitical

ಪಟ್ಟದ ಆಟ… ಫಲಿಸುತ್ತಾ ‘ಕೈ’ಕಮಾಂಡ್ ನ ಕಾದು ನೋಡುವ ತಂತ್ರ?

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ನ ಕಾದು ನೋಡುವ ತಂತ್ರ ಮುಂದುವರೆದಿದೆ.. ಹೀಗಾಗಿಯೇ ಸಿಎಂ ಅಧಿಕಾರ ಹಸ್ತಾಂತರದ ವಿಚಾರದಲ್ಲಿನ ಗೊಂದಲವೂ ಮುಂದುವರೆದಿದೆ… ಹೈಕಮಾಂಡ್ ರಾಜಕೀಯವಾಗಿ ರಾಜ್ಯವನ್ನು ಆವರಿಸಿರುವ ಅಧಿಕಾರ ಹಸ್ತಾಂತರದ ವಿಚಾರಕ್ಕೆ ತಾರ್ಕಿಕ ಅಂತ್ಯ ಕಾಣಿಸುತ್ತಾ… ಅಥವಾ ಕಾದುನೋಡುವ ತಂತ್ರಕ್ಕೆ ಜೋತು ಬೀಳುತ್ತಾ? ಎಂಬ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿವೆ… ಸದ್ಯ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಪರಿಣಾಮಗಳು ಮಾತ್ರ ಗಂಭೀರವಾಗಿರುತ್ತವೆ ಎನ್ನುವುದಂತು ಸತ್ಯ…

ಈಗಾಗಲೇ ಕಾಂಗ್ರೆಸ್ ನಲ್ಲಿ  ಅಧಿಕಾರದ ಅರ್ಥಾತ್ ಸಚಿವ ಸ್ಥಾನದ ಹಪಾಹಪಿಯಲ್ಲಿರುವ ಶಾಸಕರ ದೊಡ್ಡಪಟ್ಟಿಯಿದೆ… ಅದರಲ್ಲೂ ಮೊದಲ ಬಾರಿಗೆ ಶಾಸಕರಾಗಿರುವವರೇ ನಮಗೆ ಸಚಿವ ಸ್ಥಾನ ಕೊಡಿ ಎಂದು ಒತ್ತಡ ಹೇರುತ್ತಿದ್ದಾರೆ.. ಒಂದು ವೇಳೆ ಅಧಿಕಾರ ಹಸ್ತಾಂತರವಾದರೆ ಮುಂದೆ ಬರಲಿರುವ ಸಿಎಂ ಸಚಿವ ಸಂಪುಟವನ್ನು ಪುನರಚನೆ ಮಾಡಬೇಕಾಗುತ್ತದೆ… ಈ ವೇಳೆ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನವನ್ನು ನೀಡಬೇಕಾಗುತ್ತದೆ. ನೀಡದೆ ಹೋದರೆ ಅಸಮಾಧಾನದ ಹೊಗೆ ಏಳಲಿದೆ.. ಜತೆಗೆ ಈಗಾಗಲೇ ಅಧಿಕಾರದಲ್ಲಿರುವ ಹಿರಿಯ ನಾಯಕರನ್ನು ಕೈಬಿಡುವಂತೆಯೂ ಇಲ್ಲ.. ಬಿಟ್ಟರೆ  ಮತ್ತೊಂದು ರೀತಿಯ ಗೊಂದಲಗಳು ಶುರುವಾಗಲಿದೆ.

ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಏನೇ ತೀರ್ಮಾನ ಕೈಗೊಂಡರೂ ಅದರಿಂದ ವ್ಯತಿರಿಕ್ತ ಪರಿಣಾಮಗಳೇ ಜಾಸ್ತಿ ಎನ್ನುವುದು ಹೈಕಮಾಂಡ್ ಗೆ ಗೊತ್ತಿಲ್ಲದ ವಿಚಾರವೇನಲ್ಲ.. ಹೀಗಾಗಿಯೇ ಅವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಆದರೆ ಅದು ರಾಜ್ಯದ ಮಟ್ಟಿಗೆ ಬೇರೆಯದ್ದೇ ಆದ ಚರ್ಚೆಗಳಿಗೆ ಕಾರಣವಾಗುತ್ತಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಹಾಗೆನೋಡಿದರೆ, ಸಿಎಂ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಮಹತ್ತರದ ಬದಲಾವಣೆಯಾಗುತ್ತವೆ ಎಂಬ ಮಾತುಗಳು ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿಂದ ಇಲ್ಲಿವರೆಗೆ ಕೇಳಿ ಬರುತ್ತಲೇ ಇದೆ. ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡಲ್ಲಿಂದ ಸಿದ್ದರಾಮಯ್ಯರಿಗೆ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದೇ ತಲೆನೋವಾಗಿ ಪರಿಣಮಿಸಿದೆ. ಆದರೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಕೇಳುತ್ತಿರುವವರು ಎಲ್ಲಿಯೂ ಅಧಿಕಾರ ಹಸ್ತಾಂತರದ ಒಪ್ಪಂದವಾಗಿದೆ ಎನ್ನುವುದನ್ನು ಬಹಿರಂಗವಾಗಿ ಹೇಳುತ್ತಿಲ್ಲ..

ಇಂತಹ ವಿಚಾರ ಬಂದಾಗಲೆಲ್ಲ ಸಹನೆ ಕಳೆದುಕೊಳ್ಳದೆ ಹೈಕಮಾಂಡ್ ಮೇಲೆ ಭಾರ ಹಾಕಿ ಮುನ್ನಡೆಯುವುದನ್ನು ಸಿದ್ದರಾಮಯ್ಯ ಅವರು ಕರಗತ ಮಾಡಿಕೊಂಡಿದ್ದಾರೆ.. ಹೀಗಾಗಿಯೇ ಎಲ್ಲರನ್ನೂ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ನಿಜವಾಗಿಯೂ ಅಧಿಕಾರ ಹಸ್ತಾಂತರದ ಒಪ್ಪಂದ ಆಗಿದೆಯಾ?

ಸಿಎಂ ಆಗಿರುವ ಸಿದ್ದರಾಮಯ್ಯ ಆಗಲೀ,  ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಯಸುವ ಬೆಂಬಲಿಗರಾಗಲೀ, ಹೈಕಮಾಂಡ್ ಆಗಲೀ ಈ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸದೆ  ಅವರ ಪಾಡಿಗೆ ಅವರು ಓಡಾಡಿಕೊಂಡಿದ್ದಾರೆ. ಇದರಿಂದ ಈ ವಿಚಾರಕ್ಕೆ ತಾರ್ಕಿಕ ಅಂತ್ಯ ಸಿಗದೆ ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ವಿಚಾರ ಜೀವಂತವಾಗಿದೆ. ಆಗಾಗ್ಗೆ ಅದಕ್ಕೆ ರೆಕ್ಕೆಪುಕ್ಕ ಹುಟ್ಟಿಕೊಳ್ಳುತ್ತದೆ. ಮತ್ತೆ ಸದ್ದಿಲ್ಲದೆ ತೆರೆಮರೆಗೆ ಸರಿದು ಹೋಗುತ್ತದೆ. ಆದರೆ ಈ ಬಾರಿ ಹಾಗೆ ಆಗಲ್ಲ ಮಹತ್ತರ ಬದಲಾವಣೆ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ..

ಇಷ್ಟೆಲ್ಲ ಗೋಜಲುಗಳಾಗುತ್ತಿದ್ದರೂ ಯಾವುದೇ ಒಪ್ಪಂದ ಆಗಿಲ್ಲ.. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಮುಂದೆಯೂ ಅವರೇ ಮುಂದುವರೆಯುತ್ತಾರೆ ಎಂಬ ಖಡಕ್ ಸಂದೇಶವನ್ನು ಹೈಕಮಾಂಡ್ ಇಲ್ಲಿತನಕ ನೀಡಿಲ್ಲ.. ಹಾಗೆಯೇ  ಒಪ್ಪಂದ ಆಗಿದೆ.. ಆಗಿಲ್ಲ ಎಂಬ ಉತ್ತರ ನೀಡಬೇಕಾದ ಸಿದ್ದರಾಮಯ್ಯರವರಾಗಲೀ, ಡಿ.ಕೆ.ಶಿವಕುಮಾರ್ ಆಗಲೀ ಏನನ್ನೂ ಮಾತಾಡುತ್ತಿಲ್ಲ. ಆದರೆ ಇಂತಹದೊಂದು ಒಪ್ಪಂದ ಆಗಿರಬಹುದು ಎಂಬುದಕ್ಕೆ ಅವರ ನಡೆ-ನುಡಿಗಳು ಮತ್ತು ಅವರ ಬೆಂಬಲಿಗರು ನೀಡುತ್ತಿರುವ ಹೇಳಿಕೆಗಳೇ ಸಾಕ್ಷಿಗಳಾಗುತ್ತಿವೆ.

ಇನ್ನು ಹೈಕಮಾಂಡ್ ಈ ವಿಚಾರದಲ್ಲಿ ಯಾವುದೇ ಖಡಕ್ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಇದೊಂದು ರೀತಿಯಲ್ಲಿ ಜೇನುಗೂಡಿಗೆ ಕಲ್ಲುಹೊಡೆದಂತಹ ಪರಿಸ್ಥಿತಿ…  ಕಾಂಗ್ರೆಸ್ ಬಹುಮತ ಪಡೆದು ಅಧಿಕಾರದಲ್ಲಿದೆ ಎನ್ನುವುದಾದರೆ ಅದಕ್ಕೆ ಕಾರಣಗಳು ಅನೇಕ ಇವೆ.. ಇಲ್ಲಿ ನಾಯಕರ ಶ್ರಮ, ಬಿಜೆಪಿ ವಿರುದ್ಧದ ಅಸಮಾಧಾನ, ಗ್ಯಾರಂಟಿಯ ಆಮಿಷ.. ಹೀಗೆ ಹಲವು ವಿಚಾರಗಳು ಕಾಂಗ್ರೆಸ್ ನ್ನು ಗೆಲ್ಲುವಂತೆ ಮಾಡಿವೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಒಬ್ಬರೇ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ ಸಾಮೂಹಿಕ ನಾಯಕತ್ವದಡಿ ಗೆಲುವು ಬಂದಿದೆ ಎನ್ನುವುದು ಕೆಲವು ಕಾಂಗ್ರೆಸ್ ನಾಯಕರ ವಾದವಾಗಿದೆ.

ಕಳೆದ ಕೆಲವು ಸಮಯದಿಂದ ಡಿ.ಕೆ.ಶಿವಕುಮಾರ್ ಅಧಿಕಾರ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆಗಾಗ್ಗೆ ಹೈಕಮಾಂಡ್ ಗೆ ಎಡತಾಕುತ್ತಿದ್ದಾರೆ. ದೆಹಲಿ ದಂಡಯಾತ್ರೆ ಮುಂದುವರೆಯುತ್ತಲೇ ಇದೆ.. ಇದೆಲ್ಲದರ ನಡುವೆ ಸಿದ್ದರಾಮಯ್ಯರವರು ಸಿಎಂ ಆಗಿ ಏನೇನು ದಾಖಲೆಗಳನ್ನು ಮಾಡಬೇಕಾಗಿತ್ತೋ ಅದೆಲ್ಲವನ್ನು ಮಾಡಿದ್ದಾರೆ… ಇನ್ನು ಅಧಿಕಾರವಧಿ ಇರುವುದು ಎರಡೇ ವರ್ಷ.. ಅದರಲ್ಲೂ ಕೊನೆಯ ವರ್ಷದಲ್ಲಿ ಚುನಾವಣೆ ಬರಲಿರುವುದರಿಂದ ಅದೊಂದು ರೀತಿಯ ಅಗ್ನಿಪರೀಕ್ಷೆಯೇ ..  ಆದ್ದರಿಂದ ಆದಷ್ಟು ಬೇಗ ಸಿಎಂ ಆಗಿ ಬಿಡಬೇಕು ಎನ್ನುವುದು ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸುವವರ ವಾದವಾಗಿದೆ.

ಅತ್ತ ಡಿ.ಕೆ.ಶಿವಕುಮಾರ್ ಅವರು ಸಿಎಂ ಸ್ಥಾನದತ್ತ ದೃಷ್ಟಿ ನೆಟ್ಟಿದ್ದರೆ ಇತ್ತ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಸತೀಶ್ ಜಾರಕಿಹೊಳಿ ಅವರು ಕಣ್ಣಿಟ್ಟಿದ್ದಾರೆ.. ಈಗಾಗಲೇ ಆ ಬಗ್ಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಮಧ್ಯೆ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಅವತ್ತು ನಾನು ಸಿಎಂ ಆಗುತ್ತೇನೇ ಎಂಬ ಮಾತುಗಳನ್ನಾಡುವ ಮೂಲಕ ಸಿಎಂ ಸ್ಥಾನದ ಆಕಾಂಕ್ಷಿ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಸಚಿವ ಸ್ಥಾನಕ್ಕೆ ಎಷ್ಟು ಪೈಪೋಟಿ ಇದೆಯೋ ಅದೇ ರೀತಿ ಸಿಎಂ ಸ್ಥಾನಕ್ಕೂ ಕಾಂಗ್ರೆಸ್ ನಲ್ಲಿ ಒಳಗೊಳಗೆ ಪೈಪೋಟಿ ನಡೆಯುತ್ತಿದೆ..

ರಾಜ್ಯದ ಮಟ್ಟಿಗೆ ಕಾಂಗ್ರೆಸ್ ನ ಇತಿಹಾಸವನ್ನು ಗಮನಿಸಿದರೆ ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಸ್ಥಾನವನ್ನು ಅಲಂಕರಿಸುವುದು ನಡೆದು ಬಂದಿದೆ. ಅದು 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ  ಡಾ.ಜಿ.ಪರಮೇಶ್ವರ್ ಅವರ ಸೋಲಿನ ಕಾರಣದಿಂದಾಗಿ ಸಂಪ್ರದಾಯ ಮುರಿದು ಹೋಗಿ ಸಿದ್ದರಾಮಯ್ಯ ಅವರು ಸಿಎಂ ಆದರು. ಕಳೆದ 2023ರ ಚುನಾವಣೆಯಲ್ಲಿ ಇದೇ ವಿಚಾರ ಮುನ್ನಲೆಗೆ ಬಂದಿತ್ತು. ಗೊಂದಲವಾಗುತ್ತದೆ ಎಂಬ ಕಾರಣಕ್ಕೆ ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋಗುವ ತಂತ್ರ ರೂಪಿಸಲಾಯಿತು.

ಬಹುತೇಕರು ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗುತ್ತಾರೆಂದು ನಂಬಿದ್ದರು. ಆದರೆ ಹಲವು ರೀತಿಯ ಸರ್ಕಸ್ ನಡೆದು ಸಿದ್ದರಾಮಯ್ಯರವರನ್ನು ಸಿಎಂ ಎಂದು ಘೋಷಣೆ ಮಾಡಲಾಯಿತು. ಈ ಸರ್ಕಸ್ ನಡುವೆ ಅಧಿಕಾರದ ಹಸ್ತಾಂತರದ ಒಪ್ಪಂದವೂ ನಡೆದಿದೆ ಎಂಬುದು ಚರ್ಚೆಯಲ್ಲಿರುವ ವಿಚಾರ.. ಒಂದು ವೇಳೆ ಅವತ್ತು  ಒಪ್ಪಂದ ಆಗಿತ್ತು ಎನ್ನುವುದೇ ಆಗಿದ್ದರೆ ಸಿದ್ದರಾಮಯ್ಯ ಅವರು  ಇಷ್ಟರಲ್ಲೇ ಅಧಿಕಾರ ಹಸ್ತಾಂತರ ಮಾಡಬೇಕಾಗಿತ್ತು… ಹೈಕಮಾಂಡ್ ಕೂಡ ಸ್ಪಷ್ಟ ಆದೇಶವನ್ನು ನೀಡಬೇಕಾಗಿತ್ತು..  ಆದರೆ ಇದರೆಡು ಆಗದ ಕಾರಣ ಗೊಂದಲಗಳು ಮುಂದುವರೆದಿವೆ…  ಹೈಕಮಾಂಡ್ ನ  ಕಾದು ನೋಡುವ ತಂತ್ರ ಮುಂದೆ ಯಾವ ಬೆಳವಣಿಗೆಗೆ ಕಾರಣವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

-ಬಿ.ಎಂ.ಲವಕುಮಾರ್

admin
the authoradmin

Leave a Reply

Translate to any language you want