ಸರಗೂರು: ನೀರು ಕುಡಿಯುವ ವೇಳೆ ಕಾಲು ಜಾರಿ ನಾಲೆಗೆ ಬಿದ್ದ ಹಸುವನ್ನು ರಕ್ಷಿಸಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸರಗೂರು ತಾಲೂಕಿನ ಚಾಮೇಗೌಡರ ಹುಂಡಿ ಗ್ರಾಮದಲ್ಲಿ ನಡೆದಿದೆ.
ಚಾಮೇಗೌಡರ ಹುಂಡಿ ಗ್ರಾಮದ ನಿವಾಸಿ ಮಹಾವೀರ ಎಂಬುವರ ಪುತ್ರ ದರ್ಶನ್ (19) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿ. ಈತ ಎಂದಿನಂತೆ ಹಸುವನ್ನು ಹಗ್ಗ ಸಮೇತ ಹಿಡಿದುಕೊಂಡು ಗ್ರಾಮದ ಸಮೀಪವಿರುವ ಕಪಿಲಾ ಬಲದಂಡೆ ನಾಲೆ ಬಳಿ ನೀರು ಕುಡಿಸಲೆಂದು ಹೋಗಿದ್ದನು.

ಹಸು ನಾಲೆಗೆ ಇಳಿದು ನೀರು ಕುಡಿಯಲು ಮುಂದಾದ ವೇಳೆ ಕಾಲು ಜಾರಿ ನೇರವಾಗಿ ನಾಲೆಯೊಳಕ್ಕೆ ಬಿದ್ದಿದೆ. ಈ ಸಂದರ್ಭ ಅದನ್ನು ರಕ್ಷಿಸುವ ಸಲುವಾಗಿ ಹಗ್ಗವನ್ನು ಎಳೆದಿದ್ದಲ್ಲದೆ ಅದನ್ನು ಕಾಪಾಡಲು ಮುಂದಾಗಿದ್ದಾನೆ. ಆದರೆ ಅದು ಸಾಧ್ಯವಾಗದೆ ದರ್ಶನ್ ನಾಲೆ ನೀರಿಗೆ ಬಿದ್ದಿದ್ದು, ನೀರಿನಿಂದ ಮೇಲೆಳಲು ಸಾಧ್ಯವಾಗದೆ ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.








