ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ… ಹಿರಿಯ ಪತ್ರಕರ್ತ ರವಿ ಕುಮಾರ್ ಟೆಲೆಕ್ಸ್ ಹೇಳಿದ್ದೇನು?

ಕುಶಾಲನಗರ (ರಘುಹೆಬ್ಬಾಲೆ): ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಹಿರಿಯ ಪತ್ರಕರ್ತ ರವಿ ಕುಮಾರ್ ಟೆಲೆಕ್ಸ್ ಅಭಿಮತ ವ್ಯಕ್ತಪಡಿಸಿದರು.
ಸಮೀಪದ ಹುಣಸೆವಾಡಿ ಸರ್ಕಲ್ ನಲ್ಲಿರುವ ಕೂರ್ಗ್ ವಾಟರ್ ಪಾರ್ಕ್ ನಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಅಸ್ತಿತ್ವಕ್ಕೆ ಬಂದಿರುವ ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರ ಉದ್ಯೋಗ, ಜೀವನ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತದೆ. ಇದೀಗ ರಚನಾತ್ಮಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿ ಮಾದರಿಯಾಗುತ್ತಿದೆ. ಇದಕ್ಕೆ ಕೊಡಗು ಸಂಘ ಪ್ರೇರಣಾ ಶಕ್ತಿಯಾಗಿದೆ. ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಉದ್ಘಾಟನೆಯಾಗಿರುವುದು ಹೆಮ್ಮೆಯ ಸಂಗತಿ. ಈ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ವಿಸ್ತರಿಸುವ ಪ್ರಯತ್ನ ಮಾಡಲಾಗುವುದು ಎಂದ ಅವರು, ಕೊಡಗು ಸಾಂಸ್ಕೃತಿಕ ವೈಭವದ ತವರೂರು ಎಂದು ಬಣ್ಣಿಸಿದರು.
ಪತ್ರಕರ್ತರ ಸಾಂಸ್ಕೃತಿಕ ವೇದಿಕೆಯನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ, ಖ್ಯಾತ ಹಾಸ್ಯ ನಟ ತುಕಾಲಿ ಸ್ಟಾರ್ ಎಂದು ಪ್ರಸಿದ್ಧಿ ಪಡೆದ ಸಂತೋಷ್, ನಗು ಮನಸನ್ನು ಪ್ರಫುಲ್ಲಗೊಳಿಸುತ್ತದೆ. ಜೊತೆಗೆ ಯಶಸ್ಸು ನೀಡುತ್ತದೆ. ಬಡವ, ಶ್ರೀಮಂತ ಎಂಬ ಬೇಧ ಭಾವವಿಲ್ಲವಿರುವುದು ನಗುವಿಗೆ ಮಾತ್ರ. ನಗು ಆರೋಗ್ಯವನ್ನು ವೃದ್ಧಿಸುವುದರೊಂದಿಗೆ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ಪ್ರತಿಪಾದಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಮಸಮಾಜ ಪರಿಕಲ್ಪನೆ ಅಡಿಯಲ್ಲಿ ಪತ್ರಕರ್ತರು ಕೆಲಸ ಮಾಡಬೇಕು. ಪತ್ರಕರ್ತರು ಪೂರ್ವಾಗ್ರಹ ಪೀಡಿತರಾಗದೆ ಸಮಾಜದ ಪ್ರತಿಬಿಂಬವಾಗಬೇಕು ಎಂದು ಕರೆ ನೀಡಿದರು.
ರಾಜ್ಯ ಸಮಿತಿ ನಿರ್ದೇಶಕಿ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರು ಪ್ರತಿಭಾವಂತರಾಗಿದ್ದರೂ ವೃತ್ತಿ ಜಂಜಾಟದಿಂದ ಪ್ರತಿಭೆ ಅನಾವರಣ ಸಾಧ್ಯವಾಗುವುದಿಲ್ಲ. ಪತ್ರಕರ್ತರ ಸಾಂಸ್ಕೃತಿಕ ವೇದಿಕೆಯಿಂದ ಬಾಂಧವ್ಯ ವೃದ್ಧಿಯೊಂದಿಗೆ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಸಂಚಾಲಕ ಟಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯದ ಪತ್ರಕರ್ತರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ. ಜೊತೆಗೆ ಚಳಿಗಾಲದ ಕವಿಗೋಷ್ಠಿ ಹಾಗೂ ಪತ್ರಕರ್ತರ ಕುಟುಂಬಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಸದಾ ವೃತ್ತಿ ಜಂಜಾಟದಲ್ಲಿರುವ ಪತ್ರಕರ್ತರ ಪ್ರತಿಭೆ ಅನಾವರಣಕ್ಕೆ ಈ ವೇದಿಕೆ ಸಹಕಾರಿಯಾಗಲಿದೆ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವೃತ್ತಿ ಒತ್ತಡದಲ್ಲಿರುವ ಪತ್ರಕರ್ತರಿಗೆ ಈ ಸಾಂಸ್ಕೃತಿಕ ವೇದಿಕೆ ಸಹಕಾರಿಯಾಗಲಿದೆ. ಪ್ರತಿಭಾವಂತ ಪತ್ರಕರ್ತರು ತಮ್ಮ ಪ್ರತಿಭೆ ಅನಾವರಣಕ್ಕೆ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭ ತುಕಾಲಿ ಸಂತೋಷ್, ರವಿಕುಮಾರ್ ಟೆಲೆಕ್ಸ್, ಹಿರಿಯ ಕಲಾವಿದ ಪರಮೇಶ್ ಸಾಗರ್, ಗಾಯಕ ಸತೀಶ್, ಕೂರ್ಗ್ ವಾಟರ್ ಪಾರ್ಕ್ ಮಾಲೀಕ ಲಕ್ಷ್ಮೀ ನಾರಾಯಣ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯ ಪಳೆಯಂಡ ಪಾರ್ಥ ಚಿಣ್ಣಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ರೆಜಿತ್ ಕುಮಾರ್, ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಸಹ ಸಂಚಾಲಕ ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸದಸ್ಯ ರಘು ಹೆಬ್ಬಾಲೆ ಪ್ರಾರ್ಥಿಸಿ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಸ್ವಾಗತಿಸಿ, ಸದಸ್ಯ ಚನ್ನನಾಯಕ ನಿರೂಪಿಸಿ, ಜಿಲ್ಲಾ ನಿರ್ದೇಶಕ ಜಗದೀಶ್ ಜೋಡುಬೀಟಿ ವಂದಿಸಿದರು.ಮಲ್ಲಿಕಾರ್ಜುನ್ ಹಾಗೂ ಜಯಪ್ರಕಾಶ್ ಅತಿಥಿ ಪರಿಚಯ ಮಾಡಿದರು.
ಹಾಸ್ಯದ ಕಚಗುಳಿಯಿಟ್ಟ ತುಕಾಲಿ ಸಂತೋಷ್ : ಬಿಗ್ ಬಾಸ್ ಸ್ಪರ್ಧಿ, ಹಾಸ್ಯ ನಟ ತುಕಾಲಿ ಸಂತೋಷ್ ಚಲನಚಿತ್ರ ನಟರ ಮಿಮಿಕ್ರಿ ಹಾಗೂ ಹಾಸ್ಯ ಚಟಾಕಿ ಮೂಲಕ ನಗುವಿನ ಹೊನಲು ಹರಿಸಿದರು.ಧಿರೇಂದ್ರ ಗೋಪಾಲ್, ಅಂಬರೀಶ್, ದೇವರಾಜ್, ಮುಸುರಿ ಕೃಷ್ಣಮೂರ್ತಿ, ಯಶ್, ಹುಚ್ಚ ವೆಂಕಟ್ ಸೇರಿದಂತೆ ಇನ್ನಿತರ ನಟರ ಧ್ವನಿಯನ್ನು ಅನುಕರಿಸುವದರೊಂದಿಗೆ ಹಾಸ್ಯದ ಕಚಗುಳಿಯಿಟ್ಟು ರಂಜಿಸಿದರು.

ಪತ್ರಕರ್ತರ ಸಾಂಸ್ಕೃತಿಕ ಕಲರವ : ಕಾರ್ಯಕ್ರಮದಲ್ಲಿ ಅನೇಕ ಪತ್ರಕರ್ತರು ಗಾಯನ, ಮಿಮಿಕ್ರಿ ಹಾಗೂ ಕವನ ವಾಚನ ಮೂಲಕ ಸಾಂಸ್ಕೃತಿಕ ಕಲರವ ಮೂಡಿಸಿದರು. ರೆಜಿತ್ ಕುಮಾರ್, ಮಲ್ಲಿಕಾರ್ಜುನ್, ಕುಡೆಕಲ್ ಗಣೇಶ್, ಶಿವರಾಜ್, ಸತೀಶ್ ಸಿಂಗಿ, ರಫೀಕ್ ಅಹಮ್ಮದ್, ಮುಸ್ತಾಫ, ಅಬ್ದುಲ್ಲಾ, ಪ್ರಭುದೇವ್, ಜಯಪ್ರಕಾಶ್,ರಘುಹೆಬ್ಬಾಲೆ, ಸತೀಶ್ ಸಿಂಗಿ ಅವರಿಂದ ಗಾಯನ, ರೆಜಿತ್, ಚನ್ನನಾಯಕ, ಮಲ್ಲಿಕಾರ್ಜುನ್ ಮಿಮಿಕ್ರಿ ಮಾಡಿ ರಂಜಿಸಿದರು.
ಅಬ್ದುಲ್ಲಾ ಹಾಗೂ ಜಗದೀಶ್ ಜೋಡುಬೀಟಿ ಕವನ ವಾಚಿಸಿ ಮುದ ನೀಡಿದರು.ಇದೇ ಸಂದರ್ಭ ಪತ್ರಕರ್ತರು ಕೂರ್ಗ್ ವಾಟರ್ ಪಾರ್ಕ್ ನಲ್ಲಿ ಸಾಹಸ ಹಾಗೂ ಜಲಕ್ರೀಡೆಯ ಅನುಭವ ಪಡೆದುಕೊಂಡರು.







