ಕಾರ್ತಿಕದಲ್ಲಿ ನಡೆಯುವ ದಡಿಘಟ್ಟಗ್ರಾಮದ ಸಿಡಿಲು ಕಲ್ಲು ಜಾತ್ರೆ.. ಇದು ನಡೆಯುವುದೆಲ್ಲಿ? ಏನಿದರ ವಿಶೇಷತೆ?

ದೀಪಾವಳಿ ಕಳೆದ ನಂತರ ಕಾರ್ತಿಕ ಮಾಸದಲ್ಲಿ ಜಾತ್ರೆ, ಹಬ್ಬಗಳಿಗೇನು ಕೊರತೆಯಿಲ್ಲ. ಒಂದೊಂದು ಊರಿನಲ್ಲಿ ಒಂದೊಂದು ಹಬ್ಬದ ಆಚರಣೆ ನಡೆಯುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲೊಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ದಡಿಘಟ್ಟದ ಗ್ರಾಮದಲ್ಲಿ ನಡೆಯುವ ಗ್ರಾಮದೇವತೆಯಾದ ಶ್ರೀ ಲಕ್ಷ್ಮೀದೇವಿ ಅಮ್ಮನವರ ಸಿಡಿಲು ಕಲ್ಲು ಜಾತ್ರೆ. ಈ ಜಾತ್ರೆ ಬೆಟ್ಟಗುಡ್ಡಗಳ ಹಸಿರು ನಿಸರ್ಗದಲ್ಲಿ ನಡೆಯುವುದರಿಂದ ವಿಭಿನ್ನ ಮತ್ತು ವಿಶಿಷ್ಟವಾಗಿ ಕಾಣಿಸುತ್ತದೆ.
ನಮ್ಮ ಹಿರಿಯರು ಪ್ರಕೃತಿ ನಡುವೆ ಬದುಕಿದವರು.. ಪ್ರಕೃತಿಯಲ್ಲಿಯೇ ಬದುಕು ಕಟ್ಟಿಕೊಂಡು ಪ್ರಕೃತಿಯನ್ನೇ ದೇವರು ಎಂದು ಪೂಜಿಸಿಕೊಂಡು ಬಂದವರು. ಪ್ರಕೃತಿ ನಡುವೆ ಮಿಳಿತಗೊಂಡು ಹಬ್ಬ ಜಾತ್ರೆಗಳನ್ನು ಮಾಡಿ ಸಂಭ್ರಮಿಸಿದವರು ಅಷ್ಟೇ ಅಲ್ಲದೆ ಮುಂದಿನ ತಲೆಮಾರಿಗೂ ಅದನ್ನು ಮುಂದುವರೆಸಿಕೊಂಡು ಹೋಗುವಂತೆ ಮಾರ್ಗದರ್ಶನ ನೀಡಿದವರು.. ಹೀಗಾಗಿಯೇ ಬಹುತೇಕ ಆಚರಣೆಗಳು ಮುಂದುವರೆಯುತ್ತವೆ. ಅದರಲ್ಲೊಂದು ಸಿಡಿಕಲ್ಲು ಜಾತ್ರೆ ಎನ್ನುವುದು ಹೆಮ್ಮೆ ಪಡುವ ವಿಚಾರವಾಗಿದೆ.

ನಮ್ಮೆಲ್ಲ ಜಂಜಾಟ, ತುಮುಲಗಳನ್ನು ಬದಿಗೊತ್ತಿ ನೆಮ್ಮದಿಯನ್ನು ನೀಡುವ ಮತ್ತು ಮನಸ್ಸನ್ನು ಹಗುರವಾಗಿಸುವ ಶಕ್ತಿಯಿರುವುದು ಪ್ರಕೃತಿಗೆ ಮಾತ್ರ.. ಹೀಗಾಗಿಯೆ ಬೆಟ್ಟಗುಡ್ಡಗಳ ಬಂಡೆಕಲ್ಲು, ಮರಗಿಡಗಳೊಂದಿಗೆ ಬೆರೆತು ನಿಸರ್ಗದ ಮಡಿಲಲ್ಲಿ ಒಂದಷ್ಟು ಸಮಯವನ್ನು ಕಳೆದು ಮನಶಾಂತಿ ಪಡೆಯುವಂತಾಗಲೀ ಮತ್ತು ತಾವು ನಂಬಿದ ಪ್ರಕೃತಿಯನ್ನು ಆರಾಧಿಸಿ ಅದರೊಡನೆ ಜೀವನ ಸಾಗಿಸಲಿ ಎಂಬ ಕಾರಣಕ್ಕಾಗಿಯೇ ಸಿಡಿಕಲ್ಲು ಜಾತ್ರೆಯನ್ನು ಪೂರ್ವಜರು ನಡೆಸಿರಬಹುದೇನೋ? ಅದು ಏನೇ ಇರಲಿ ಇವತ್ತಿನ ಒತ್ತಡದ ಬದುಕಿನಲ್ಲಿ ಸಿಡಿಕಲ್ಲು ಜಾತ್ರೆ ಮಾನಸಿಕ ನೆಮ್ಮದಿ ನೀಡುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ ತಾಯಿಗೆ ನಮೋ ಎನ್ನೋಣ
ಇನ್ನು ಸಿಡಿಕಲ್ಲು ಜಾತ್ರೆ ಬಗ್ಗೆ ಹೇಳಬೇಕೆಂದರೆ ಈ ಜಾತ್ರೆ ದಡಿಘಟ್ಟದ ಗ್ರಾಮದ ಗ್ರಾಮದೇವತೆಯಾದ ಶ್ರೀ ಲಕ್ಷ್ಮೀದೇವಿ ಅಮ್ಮನವರ ಜಾತ್ರೆಯಾಗಿದೆ. ಈ ಸ್ಥಳವನ್ನು ಪವಿತ್ರವೆಂದೇ ಜನ ನಂಬುತ್ತಾರೆ. ಇಲ್ಲಿಗೆ ಪೌರಾಣಿಕ ನಂಟಿದ್ದು ಈ ತಾಣಕ್ಕೂ ದ್ವಾಪರಯುಗದ ಪಾಂಡವರಿಗೂ ಸಂಬಂಧವಿದೆ ಎಂದು ಹಿರಿಯರು ಹೇಳುತ್ತಾರೆ. ಜನವಲಯದಲ್ಲಿ ಪ್ರಚಲಿತದಲ್ಲಿರುವ ಕಥೆಯನ್ನು ಆದರಿಸಿ ಹೇಳುವುದಾದರೆ.. ಪಗಡೆಯಲ್ಲಿ ಕೌರವರ ಮುಂದೆ ಸೋತ ಪಾಂಡವರು 14 ವರ್ಷಗಳ ವನವಾಸ ಅನುಭವಿಸಿ ವೇಷ ಬದಲಿಸಿಕೊಂಡು ಒಂದು ವರ್ಷದ ಅಜ್ಞಾನವಾಸದಲ್ಲಿದ್ದಾಗ ಅಲೆದಾಡುತ್ತಾ ಇವತ್ತಿನ ಸಿಡಿಲು ಕಲ್ಲು ಜಾತ್ರೆ ನಡೆಯುವ ಸ್ಥಳದ ಬೆಟ್ಟಕ್ಕೆ ಬಂದಿದ್ದರಂತೆ. ಈ ವೇಳೆ ಬೆಟ್ಟದ ಮೇಲೆ ಸಿಡಿದು ನಿಂತಿದ್ದ ಎರಡು ಬೃಹತ್ ಬಂಡೆಗಳು ಉರುಳಿ ಹೋಗದಂತೆ ತಡೆಯುವ ಸಲುವಾಗಿ ಒಂದು ಸಣ್ಣ ಕಲ್ಲನ್ನು ಒತ್ತು ಕೊಟ್ಟು ನಿಲ್ಲಿಸಿದ್ದರಂತೆ
ಇದನ್ನೂ ಓದಿ:ಚಾಮರಾಜನಗರದ ಕರಿವರದರಾಜ ಸ್ವಾಮಿಬೆಟ್ಟಕ್ಕೆ ಬನ್ನಿ… ಇಲ್ಲಿ ಮನಶಾಂತಿ ಖಚಿತ!
ಇವತ್ತಿಗೂ ಈ ಎರಡು ಬೃಹತ್ ಬಂಡೆಗಳು ಉರುಳಿ ಹೋಗುತ್ತವೆಯೇನೋ ಎಂಬಂತೆ ನಿಂತಿರುವುದು ಅಚ್ಚರಿ ಮೂಡಿಸುತ್ತದೆ. ಇದೇ ಸ್ಥಳದಲ್ಲಿ ಪಾಂಡವರು ಸಮಯ ಕಳೆಯಲು ಆಟವಾಡುತ್ತಿದ್ದರಂತೆ ಹೀಗೆ ಕೆಲವು ಸಮಯವನ್ನು ಕಳೆಯುವಾಗ ಬೃಹತ್ ಬಂಡೆಗಲ್ಲುಗಳು ಉರುಳಿ ಹೋಗದಂತೆ ತಾವು ಆಡುತ್ತಿದ್ದ ಅಣ್ಣೇ ಕಲ್ಲಿನಿಂದ ತಡೆ ಹಾಕಿದ್ದರು ಎಂಬ ದಂತಕಥೆಯೂ ಈ ಬೆಟ್ಟದ ಕುರಿತಂತೆ ಕೇಳಿ ಬರುತ್ತದೆ. ಇನ್ನು ಇಲ್ಲಿ ಪ್ರತಿ ವರ್ಷ ದೀಪಾವಳಿ ಹಬ್ಬವು ಮುಗಿದ ನಂತರ ಕಾರ್ತಿಕ ಮಾಸದ ಮೊದಲೇ ವಾರದಲ್ಲಿ ಗ್ರಾಮದೇವತೆಯಾದ ಶ್ರೀ ಲಕ್ಷ್ಮೀದೇವಿ ಅಮ್ಮನವರ ಜಾತ್ರೆ ನಡೆಯುತ್ತದೆ. ಇದು ಸಿಡಿಲು ಕಲ್ಲು ಜಾತ್ರೆ ಎಂದೇ ಪ್ರಸಿದ್ಧಿಯಾಗಿದೆ.

ಗ್ರಾಮೀಣ ಸೊಗಡಿನ ಈ ಜಾತ್ರೆ ಹಸಿರ ನಿಸರ್ಗದ ಸುಂದರ ವಾತಾವರಣದಲ್ಲಿ ನಡೆಯುತ್ತದೆ. ಊರಿನವರು ಮತ್ತು ಸುತ್ತಮುತ್ತಲಿನವರು ಈ ವೇಳೆ ನೆರೆದು ಜಾತ್ರೆಗೆ ಕಳೆಕಟ್ಟುತ್ತಾರೆ. ಈ ಜಾತ್ರೆ ಹೇಗೆ ನಡೆಯುತ್ತದೆ ಎಂಬುದನ್ನು ನೋಡಿದ್ದೇ ಆದರೆ ಜಾತ್ರೆಗೂ ಮುನ್ನ ದಿನ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿಯು ದಡಿಘಟ್ಟದಿಂದ ಚಲ್ಯ, ಕುಂಬೇನಹಳ್ಳಿ ಗ್ರಾಮಗಳಿಗೆ ತೆರಳಿ ಪೂಜಾಕೈಂಕರ್ಯಗಳನ್ನು ನೆರವೇರಿಸಿಕೊಂಡು ಆ ನಂತರ ಸಿಡಿಲು ಕಲ್ಲು ಜಾತ್ರೆ ನಡೆಯುವ ಸ್ಥಳಕ್ಕೆ ಆಗಮಿಸುತ್ತದೆ.
ಇದನ್ನೂ ಓದಿ: ನಿಸರ್ಗದ ಸೂಜಿಗ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ…
ಈ ಸಂದರ್ಭ ಮಧ್ಯಾಹ್ನದಿಂದ ಸಂಜೆವರೆಗೂ ಭಕ್ತಾಧಿಗಳಿಗೆ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಗೆ ಬೆಟ್ಟದಹಳ್ಳಿ ಗ್ರಾಮದ ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಗೂ ಪೂಜೆ ಸಲ್ಲಿಸಲಾಗುತ್ತದೆ. ಆ ನಂತರ ಶ್ರೀ ಲಕ್ಷ್ಮೀದೇವಿ ಮತ್ತು ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಯವರ ಪೂಜಾ ಕುಣಿತ ಹಾಗೂ ಶ್ರೀ ಲಕ್ಷ್ಮೀದೇವಿ ಅಮ್ಮನವರ ಪಲ್ಲಕ್ಕಿ ಉತ್ಸವವು ಹೆಣ್ಣು ಮಕ್ಕಳ ಉಯ್ಯಾಲೆ ಉತ್ಸವವೂ ಇದರ ಜತೆಗೆ ನಡೆಯುತ್ತದೆ.
ಜಾತ್ರೆಗೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹಣ್ಣು ಕಾಯಿ ಸಮರ್ಪಿಸಿ ತಮ್ಮ ಭಕ್ತಿ ಭಾವ ಮೆರೆಯುತ್ತಾರೆ. ಇದೇ ವೇಳೆ ಹಾಲು ಮತ ಸಮುದಾಯದವರು ಶ್ರೀ ಲಕ್ಷ್ಮೀದೇವಿಗೆ ಕುರಿಗಳ ಪ್ರದರ್ಶನ ಮಾಡಿ ತಮ್ಮ ಭಕ್ತಿಯನ್ನು ಸಲ್ಲಿಸುತ್ತಾರೆ. ಇದೇ ವೇಳೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಜೊತೆಗೆ ಬೆಟ್ಟದಹಳ್ಳಿ ಚಿಕ್ಕಯ್ಯ, ದೊಡ್ಡಯ್ಯ, ಮೈಲಾರಲಿಂಗೇಶ್ವರ ಸ್ವಾಮೀಯವರ ಪೂಜಾ ಕುಣಿತವು ಗಮನಸೆಳೆಯುತ್ತದೆ. ಜಾತ್ರೆಗೆ ಬಂದವರು ಬೆಟ್ಟವನ್ನೇರಿ ಬೃಹತ್ ಬಂಡೆಗಳ ನಡುವಿನ ಗಿಡ ಮರಗಳ ಕೆಳಗೆ ಕುಳಿತು ತಮ್ಮವರೊಂದಿಗೆ ಬೆರೆತು ಖುಷಿಪಡುತ್ತಾರೆ.

ಜಾತ್ರೆ ಸಂಬಂಧ ವ್ಯಾಪಾರಿಗಳು ಕಡ್ಲೆಪುರಿ, ಖರ್ಜೂರ, ಸಿಹಿ ತಿಂಡಿಗಳು, ಆಟಿಕೆಗಳು, ಬಳೆ, ದಾರಗಳ ಅಂಗಡಿಗಳನ್ನು ಹಾಕುತ್ತಾರೆ. ಜಾತ್ರೆಯಲ್ಲಿ ಅಡ್ಡಾಡಿ, ದೇವರನ್ನು ಪ್ರಾರ್ಥಿಸಿ, ಊರಿನವರು, ಸಂಬಂಧಿಕರು ಹೀಗೆ ಎಲ್ಲರೊಂದಿಗೆ ಬೆರೆತು ಜನ ಸಂಭ್ರಮಿಸುತ್ತಾರೆ. ತಾಯಿ ಶ್ರೀ ಲಕ್ಷ್ಮೀದೇವಿ ಅಮ್ಮನಿಗೆ ಕೈಮುಗಿದು ಒಳಿತು ಮಾಡೆಂದು ಪ್ರಾರ್ಥಿಸುತ್ತಾರೆ. ಆ ನಂತರ ತಮ್ಮ ಮನೆಯ ಹಾದಿ ಹಿಡಿಯುತ್ತಾರೆ. ಅಲ್ಲಿಗೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಸಿಡಿಲು ಕಲ್ಲು ಜಾತ್ರೆ ಮುಗಿದು ಹೋಗುತ್ತದೆ. ಜನ ಜಾತ್ರೆಯ ಗುಂಗಿನಲ್ಲಿ ಮುಂದಿನ ವರ್ಷಕ್ಕಾಗಿ ಕಾಯುತ್ತಾರೆ.
ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…
ಜಾತ್ರೆಯನ್ನು ಹೊರತುಪಡಿಸಿದರೆ ಸಿಡಿಲುಕಲ್ಲು ಬೆಟ್ಟವು ಸುಂದರ ರಮಣೀಯ ಪ್ರದೇಶವಾಗಿದೆ. ಕಲ್ಲುಗಳ ನಡುವಿನ ಹಸಿರು ಗಮನಸೆಳೆಯುತ್ತದೆ. ಬೆಟ್ಟವನ್ನು ಸುಲಭವಾಗಿ ಹತ್ತಬಹುದಾಗಿದ್ದು, ಇಲ್ಲಿಂದ ನಿಂತು ಒಮ್ಮೆ ಕಣ್ಣು ಹಾಯಿಸಿದರೆ ಇಲ್ಲಿಂದ ಕಂಡು ಬರುವ ದೃಶ್ಯ ಮನಮೋಹಕವಾಗಿರುತ್ತದೆ. ಈಗಾಗಲೇ ಮುಂಗಾರು ಹಿಂಗಾರು ಮಳೆ ಸುರಿದು ಇಡೀ ನಿಸರ್ಗ ಹಸಿರಿನಿಂದ ಕಂಗೊಳಿಸುತ್ತಿದೆ. ಹೀಗಾಗಿ ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ನಿಸರ್ಗದ ನೋಟ ರಸದೂಟವಾಗುವುದರಲ್ಲಿ ಎರಡು ಮಾತಿಲ್ಲ.
B M Lavakumar







