ಮೈಸೂರು ದಸರಾ ಟಿಕೆಟ್, ಗೋಲ್ಡ್ ಕಾರ್ಡ್ ಬಿಡುಗಡೆ… ಇದರ ದರ ಎಷ್ಟು ಗೊತ್ತಾ? ಎಲ್ಲಿ ಸಿಗುತ್ತೆ?

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದಸರಾ ಟಿಕೆಟ್, ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಾಡಹಬ್ಬ ಮೈಸೂರು ದಸರಾ ಪ್ರಮುಖ ಆಕರ್ಷಣೆಯಾದ ಜಂಬೂವಾರಿ, ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ಹಾಗೂ ಗೋಲ್ಡ್ ಕಾರ್ಡುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಟಿಕೆಟ್ ಮತ್ತು ಗೋಲ್ಡ್ ಕಾರ್ಡುಗಳನ್ನು ಮಾರಾಟಕ್ಕೆ ಬಿಡುಗಡೆಗೊಳಿಸಲಾಗಿದೆ.
ಸಾರ್ವಜನಿಕರಿಗೆ ದಸರಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳು ಸೆ.6ರ ಅಪರಾಹ್ನ 3 ಗಂಟೆಯಿಂದ ನಾಡಹಬ್ಬ ಮೈಸೂರು ದಸರಾ ಅಧಿಕೃತ ಜಾಲತಾಣ https://mysoredasara.gov.in ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಸಾರ್ವಜನಿಕರು ಆನ್ ಲೈನ್ ಮೂಲಕ ಖರೀದಿಸಬಹುದಾಗಿರುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ದಸರಾ ಗೋಲ್ಡ್ ಕಾರ್ಡ್ ಪಡೆದುಕೊಂಡವರು ಜಂಬೂ ಸವಾರಿ, ಪಂಜಿನ ಕವಾಯತು, ಅರಮನೆ ಮುಂಭಾಗದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ದಸರಾದ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದ್ದು, 6500 ರೂ ದರ ನಿಗದಿ ಮಾಡಲಾಗಿದೆ. ಜಂಬೂ ಸವಾರಿಗೆ 3500 ರೂ, ಪಂಜಿನ ಕವಾಯಿತಿಗೆ 1500 ರೂ ದರ ನಿಗದಿ ಮಾಡಲಾಗಿದೆ.