Editor choiceLatest

ವಿದ್ಯಾರ್ಥಿಗಳು ತಮಗೆ ಸಿಕ್ಕ ಸೌಲಭ್ಯ ಬಳಸಿಕೊಂಡು ಸಾಧನೆ ಮಾಡಬೇಕು: ಡಾ ಪಿ ಶಿವರಾಜು ಕಿವಿಮಾತು

ದೀಪಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶಾರದಾ ಪೂಜೆ

ಮೈಸೂರು: ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಉದ್ದೇಶವನ್ನಿಟ್ಟುಕೊಂಡು ಶಿಕ್ಷಣ ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು, ಇರುವ ಮಿತ ಸವಲತ್ತುಗಳನ್ನು ಬಳಸಿಕೊಂಡು ಅಪರಿಮಿತ ಸಾಧನೆ ಮಾಡಬೇಕು ಎಂದು ಮೈಸೂರಿನ ಅಪರ ಜಿಲ್ಲಾಧಿಕಾರಿ ಡಾ ಪಿ ಶಿವರಾಜು ಕೆಎಎಸ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೈಸೂರಿನ ರೂಪಾನಗರದ ದೀಪಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಶಾರದಾ ಪೂಜಾ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಸಮಾರಂಭವನ್ನು ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮೂವತ್ತು ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಓದಲು ಆಗದ ಪರಿಸ್ಥಿತಿಗಳಲ್ಲಿ ಶ್ರದ್ಧೆಯಿಂದ ಕಲಿತವರು ಮುಂದೆ ಬಂದಿದ್ದಾರೆ, ಅದಕ್ಕೆ ನಮ್ಮಂತೆ ಇರುವ ಅನೇಕ ನಿದರ್ಶನಗಳಿವೆ.

ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಅಡ್ಡದಾರಿ ಹಿಡಿಯದೇ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ವಿನಯದಿಂದ ಶ್ರದ್ಧೆಯಿಂದ ಕಲಿಯಬೇಕು ಹಾಗೆಯೇ ಮುಂದೆ ಆದರ್ಶಪ್ರಾಯರಾಗಬೇಕು. ಈಗ ಎಲ್ಲಾ ಕಾರ್ಯವನ್ನು ನಿರ್ವಹಿಸಲು AI ಹಾಗೂ ಕಂಪ್ಯೂಟರ್ ಇದೆ, ಆದರೆ ಅದಕ್ಕಿಂತಲೂ ಹೆಚ್ಚಿನ ವಿಷಯವನ್ನು ವಿದ್ಯಾರ್ಥಿಗಳು ಧನಾತ್ಮಕವಾಗಿ ಯೋಚಿಸಿ ಮುಂದೆ ಗುರುತರ ಸಾಧನೆ ಮಾಡಬೇಕು ಎಂದರು.

ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ  ಡಾ.ಎಂ ರಾಮಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬುದ್ದಿವಂತಿಕೆ ಯಾರ ಆಸ್ತಿಯೂ ಅಲ್ಲ, ಅದನ್ನು ನಾವೇ ಸ್ವತಃ ಗಳಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಸಂಪಾದನೆಗಳಲ್ಲೇ ಅತ್ಯಂತ ಉತ್ತಮ ಸಂಪಾದನೆ ಎಂದರೆ ಅದುವೇ ಜ್ಞಾನ ಸಂಪಾದನೆಯಾಗಿದೆ, ಎಲ್ಲರಿಗೂ ಅದು ಲಭಿಸಲಿ ಎಂದರು. ಪ್ರಸ್ತುತ ಸಂದರ್ಭದಲ್ಲಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ನಾವೇ ಪುಣ್ಯವಂತರು. ಅವುಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಮುಂದಾಗಬೇಕು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಮುಂದಿನ ವ್ಯಾಸಂಗಕ್ಕೆ ಸಿದ್ಧರಾಗಿ ಎಂದು ತಿಳಿಸಿದರು. ಹೆಚ್ಚಿನದಾಗಿ ಆರೋಗ್ಯದ ಕಡೆ ಗಮನ ಹರಿಸಿ ಪರೀಕ್ಷೆ ಭಯವನ್ನು ಬಿಟ್ಟು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಗಳಿಸಬೇಕು ಎಂದು ಕರೆನೀಡಿದರು.

ಇದೇ ವೇಳೆ  ಡಾ ಪಿ ಶಿವರಾಜು ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಅಲ್ಲದೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜ್ಞಾನದ ಹಣತೆಯನ್ನು ಹಸ್ತಾಂತರ ಮಾಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ದೀಪಾ ಸಂಸ್ಥೆಯ ಉಪಾಧ್ಯಕ್ಷರಾದ ಸದಾಶಿವ ಪೂಜಾರಿ, ಕಾರ್ಯದರ್ಶಿ ವಿ ಎನ್ ಸುಂದರ್ ನಿರ್ದೇಶಕರಾದ ಬಾಲಕೃಷ್ಣ ಹಾಗೂ ಶ್ರೀಮತಿ ಡಾ. ನಿವೇದಿತಾ ಸುವರ್ಣ ಉಪಸ್ಥಿತರಿದ್ದರು. ದೀಪಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಣೀತ ಎರ್ಮಾಳ್, ದೀಪಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಿಲ್ಪಾ ಜಗದೀಶ್, ದೀಪಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಬಾಬು ಎ ಕೆ, ದೀಪಾ ಶಾಲೆಯ ಸಹ ಮುಖ್ಯೋಪಾಧ್ಯಾಯಿನಿ ತುಳಸಿ, ಶಿಕ್ಷಣ ಸಂಯೋಜಕರಾದ ಶ್ರೀ ರವಿಶಂಕರ್, ವಾರುಣಿ ಎಚ್ ರಾವ್ ಹಾಗೂ ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

admin
the authoradmin

Leave a Reply

Translate to any language you want