ಮೈಸೂರು: ಅಕಾಡೆಮಿ ಆಫ್ ಫೈನ್ ಆರ್ಟ್ಸ್ (ರಿ.), ಶ್ರೀರಂಗಪಟ್ಟಣ ಹಾಗೂ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್®, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮೈಸೂರಿನ ಬೋಗಾದಿ 2ನೇ ಹಂತದಲ್ಲಿರುವ ಆಯಾಮ ಅಕಾಡೆಮಿ ಕಲಾಕುಟೀರದಲ್ಲಿ ಭಾವಪೂರ್ಣವಾಗಿ ನೆರವೇರಿತು.

ಕಾರ್ಯಕ್ರಮದ ಅಂಗವಾಗಿ “ಸ್ತ್ರೀ ಎಂದರೆ ಅಷ್ಟೇ ಸಾಕೇ” ಎಂಬ ಅರ್ಥಪೂರ್ಣ ಸಂದೇಶವನ್ನು ಒಳಗೊಂಡ ‘ದೀಪಧಾರಿಣಿ’ ಏಕವ್ಯಕ್ತಿ ನಾಟಕವನ್ನು ಶ್ರೀವಿದ್ಯಾ ಕಾಮತ್ ಅವರು ಮನೋಜ್ಞವಾಗಿ ಪ್ರದರ್ಶಿಸಿದರು. ಸುಧಾ ಆಡುಕಳ ಅವರ ರಚನೆಗೆ ಡಾ. ಶ್ರೀಪಾದ ಭಟ್ ಅವರು ನಿರ್ದೇಶನ ನೀಡಿದ ಈ ನಾಟಕವು ಮಹಿಳೆಯರ ಬದುಕಿನ ಹೋರಾಟ, ನೋವು, ತ್ಯಾಗ ಮತ್ತು ಆತ್ಮಬಲವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿತು. ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಹಾಗೂ ರಂಗಕರ್ಮಿ ಡಾ. ದಿನಮಣಿ ಬಿ.ಎಸ್ ಅವರು ಸ್ತ್ರೀ ಸಂವೇದನೆಗಳನ್ನು ಪ್ರತಿಬಿಂಬಿಸುವ ಕವನವನ್ನು ವಾಚಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಚಾಮರಾಜನಗರ ಜಿಲ್ಲೆಯ ಉಪನಿರ್ದೇಶಕಿ ಶ್ರೀಮತಿ ಎಚ್.ಎನ್. ಪುಟ್ಟಗೌರಮ್ಮ ಅವರು, ಇಂದಿನ ಸಮಾಜದಲ್ಲಿ ಪೋಷಕರ ಆಲೋಚನೆ ಮತ್ತು ಮಕ್ಕಳ ಆಸಕ್ತಿಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಮಕ್ಕಳ ಆಸಕ್ತಿಯನ್ನು ಗುರುತಿಸಿ ಸಂಗೀತ, ನೃತ್ಯ, ನಾಟಕ, ಕಾವ್ಯ ಹಾಗೂ ಕ್ರೀಡೆಗಳಂತಹ ಕಲಾ ಕ್ಷೇತ್ರಗಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು. ಈ ಕಲೆಗಳು ಜೀವನದ ಸಂಕಷ್ಟ ಸಮಯದಲ್ಲಿ ನಮ್ಮನ್ನು ಮಾನಸಿಕವಾಗಿ ಬಲಪಡಿಸುವ ಆಶ್ರಯವಾಗುತ್ತವೆ ಎಂದು ಹೇಳಿದರು.

ಹೆಣ್ಣು ಮಕ್ಕಳ ಜೀವನ ಸುಲಭವಾಗಿಲ್ಲ; ಬಾಲ್ಯದಿಂದ ಯೌವನದವರೆಗೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹೆಣ್ಣು ಭ್ರೂಣ ಹತ್ಯೆಯ ಅಂಕಿ-ಅಂಶಗಳು ಕಳವಳಕಾರಿ ಸ್ಥಿತಿಯನ್ನು ತೋರಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಮಗಳು, ತಂಗಿ, ಅಕ್ಕ, ಹೆಂಡತಿ, ತಾಯಿ ಹಾಗೂ ಅಜ್ಜಿ ಹೀಗೆ ಅನೇಕ ಪಾತ್ರಗಳನ್ನು ನಿಭಾಯಿಸುವ ಮಹಿಳೆ ತ್ಯಾಗದ ಮೂರ್ತಿಯೇ ಆಗಿದ್ದಾಳೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಯಾಮ ಅಕಾಡೆಮಿ ನಿರ್ದೇಶಕಿ ಡಾ. ಶಾಂಭವಿ ಸ್ವಾಮಿ ಎಸ್.ವಿ., ಅಧ್ಯಕ್ಷರಾದ ಸ.ವೆ.ರ ಸ್ವಾಮಿ, ಪ್ರೊ. ಕ್ಯಾತನಳ್ಳಿ ರಾಮಣ್ಣ, ನಿರಂತರದ ನಿರ್ದೇಶಕ ಶ್ರೀನಿವಾಸು ಪಾಲಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಚಲನಚಿತ್ರ ನಟ ಬಲರಾಜ್ ವಾಡಿ ಸೇರಿದಂತೆ ನೂರಾರು ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.








