ನಮ್ಮಲ್ಲಿರುವ ಬಯಕೆಯೇ ಬಹಳಷ್ಟು ಸಲ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ.. ಬಯಕೆಯೆಂಬ ಹುಚ್ಚು ಕುದುರೆ ಏರುವ ಮುನ್ನ ಒಂದು ಕ್ಷಣ ಯೋಚಿಸಿ ಮುನ್ನಡೆದರೆ ಮಾತ್ರ ಬದುಕಿನ ಹಾದಿಯಲ್ಲಿ ಎದುರಾಗುವ ಸಂಕಷ್ಟಗಳಿಂದ ಪಾರಾಗಲು ಸಾಧ್ಯವಾಗುತ್ತದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಬಯಕೆಯ ಕುದುರೆ ಏರಿದ ಮೇಲೆ ಅದರ ಲಗಾಮು ಹಿಡಿಯುದನ್ನೇ ಮರೆತು ಬಿಡುತ್ತಾರೆ.. ಹೀಗಾಗಿ ನೆಮ್ಮದಿಯಿಲ್ಲದ ಬದುಕು ಅನಿವಾರ್ಯವಾಗುತ್ತದೆ.
ನಿಜ ಹೇಳಬೇಕೆಂದರೆ ಮನುಷ್ಯ ಪ್ರಾಣಿಯೇ… ಆದರೂ ಇತರೇ ಪ್ರಾಣಿಗಳಿಗೆ ಹೋಲಿಸಿದರೆ ಬುದ್ದಿವಂತ, ಆತ್ಮಸಂಯಮಿ. ಹಾಗಾಗಿ ಪ್ರಾಣಿಗಳಿಂದ ಪ್ರತ್ಯೇಕಿಸಿ ಮನುಷ್ಯನನ್ನು ನೋಡಲಾಗುತ್ತದೆ. ಪ್ರಾಣಿಗಳು ತಮ್ಮನ್ನು ತಾವು ಸಂಯಮಿಸಿಕೊಳ್ಳಲಾರವು ಆದರೆ ಮನುಷ್ಯ ಪ್ರಯತ್ನ ಪಟ್ಟರೆ ಅಥವಾ ಇಚ್ಚಿಸಿದರೆ ಖಂಡಿತಾ ಸಂಯಮಿಯಾಗಬಲ್ಲ..

ಪ್ರಾಣಿಗಳಲ್ಲಿರುವ ಕೆಲವೊಂದು ಗುಣ ಮನುಷ್ಯನಲ್ಲಿಯೂ ಇದೆ.. ಹಾಗಾಗಿಯೇ ಕಾಮ, ವಿಕಾರತೆ, ದ್ವೇಷ, ಲೋಭ, ಲಾಲಸೆ, ಮೃಗೀಯ ಹಸಿವು ಎಲ್ಲವನ್ನೂ ನಾವು ಬೆನ್ನಿಗೆಳೆದುಕೊಂಡೇ ಬಂದಿದ್ದೇವೆ. ಒಂದು ಕ್ಷಣ ನಮ್ಮನ್ನು ನಾವೇ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಬದುಕಿನ ವಿಕಾರತೆಯನ್ನು ಕಾಣಬಹುದು. ಅಷ್ಟೇ ಅಲ್ಲ ಆಧ್ಯಾತ್ಮಿಕತೆಯ ಹಾದಿಯಲ್ಲಿ ನಡೆದರೆ ಅದನ್ನು ಸರಿಪಡಿಸಿಕೊಳ್ಳಲೂ ಬಹುದು.
ಹಾಗೆನೋಡಿದರೆ ನಾವ್ಯಾರು ನಮ್ಮ ಬಯಕೆಗಳನ್ನು ನಿಯಂತ್ರಿಸುವತ್ತ ಯೋಚಿಸುವುದೇ ಇಲ್ಲ. ಬದಲಿಗೆ ದಿನೇ, ದಿನೇ ಅಥವಾ ಕ್ಷಣ ಕ್ಷಣಕ್ಕೂ ಬಯಕೆಯ ಕುದುರೆಯೇರಿ ಸಾಗುತ್ತಲೇ ಇರುತ್ತೇವೆ. ನಿಜ ಹೇಳಬೇಕೆಂದರೆ ಬಯಕೆ ಎನ್ನುವುದು ಅಂತ್ಯವಿಲ್ಲದ್ದು, ಅದರ ದಾಸರಾಗಿ ಮುನ್ನಡೆದರೆ ಅದರಿಂದಾಗುವ ಪರಿಣಾಮ ತೀವ್ರವಾಗಿರುತ್ತದೆ.. ಹಾಗೆಂದು ಬಯಕೆಯನ್ನು ಪೂರ್ಣವಾಗಿ ತ್ಯಜಿಸಿ ಎನ್ನಲಾಗುವುದಿಲ್ಲ.. ಏಕೆಂದರೆ ಬಯಕೆಯಿಲ್ಲದ ಮನುಷ್ಯ ಮನುಷ್ಯನೇ ಅಲ್ಲ… ಆದರೆ ಬಯಕೆಯ ಹಾದಿ ಸನ್ನಡತೆಯಲ್ಲಿದ್ದು, ನಮ್ಮ ಅಂಕೆಯಲ್ಲಿರಬೇಕಷ್ಟೆ..

ಬಹಳಷ್ಟು ಸಲ ಕೈಗೆಟುಕದ ಬಯಕೆಯಿಂದ ಬದುಕನ್ನು ಹಾಳು ಮಾಡಿಕೊಳ್ಳುತ್ತೇವೆ ಈಡೇರದ ಬಯಕೆಯ ಹಿಂದೆ ಬಿದ್ದು ಹತ್ತು ಹಲವು ಸಂಕಷ್ಟಗಳಿಗೆ ಗುರಿಯಾಗಿ ಬಿಡುತ್ತೇವೆ. ಇಲ್ಲಿ ಲಾಟರಿ ಟಿಕೇಟು ಖರೀದಿಸಿ ಶ್ರೀಮಂತರಾಗಬೇಕೆಂದು ಬಯಸುವವರು ಇದ್ದಾರೆ.. ಹಾಗೆಯೇ ಕಷ್ಟಪಟ್ಟು ದುಡಿದು ಕೂಡಿಟ್ಟು ಶ್ರೀಮಂತಿಕೆಯ ಬದುಕನ್ನು ಕಟ್ಟಿಕೊಳ್ಳಬೇಕೆಂದು ಆಲೋಚಿಸುವವರು ಇದ್ದಾರೆ. ಇಬ್ಬರದ್ದೂ ಶ್ರೀಮಂತರಾಗುವ ಬಯಕೆಯೇ.. ಆದರೆ ಅವರು ಸಾಗುವ ಹಾದಿ ಮಾತ್ರ ವಿಭಿನ್ನವಾಗಿದೆ..
ಲಾಟರಿ ಆಸೆಗೆ ಬಿದ್ದವನು ಸುಲಭವಾಗಿ ಶ್ರೀಮಂತನಾಗುವ ಕನಸು ಕಾಣುತ್ತಾನೆ. ಲಾಟರಿ ಹೊಡೆಯದೆ ಇದ್ದಾಗ ಸಾಲ ಮಾಡಿ ಟಿಕೇಟು ಖರೀದಿಸಲು ಮುಂದಾಗುತ್ತಾನೆ. ಇಲ್ಲಿ ಆತನಿಗೆ ಲಾಟರಿ ಬರುತ್ತದೆ ಎಂಬ ನಂಬಿಕೆ ಇಲ್ಲದಿದ್ದರೂ ಅದರ ಮೇಲೆ ಹಣ ಸುರಿಯುತ್ತಾನೆ. ಮತ್ತು ಲಾಟರಿ ಬಾರದೆ ಹೋದಾಗ ನಿರಾಸನಾಗುತ್ತಾನೆ.. ಸಂಕಷ್ಟಕ್ಕೀಡಾಗುತ್ತಾನೆ.. ಆದರೆ ದುಡಿಮೆಯ ಮೂಲಕವೇ ಶ್ರೀಮಂತನಾಗುತ್ತೇನೆಂದು ಹೊರಡುವವನು ನೆಮ್ಮದಿಯಾಗಿಯೇ ಮುನ್ನಡೆಯುತ್ತಿರುತ್ತಾನೆ…
ಒಬ್ಬ ವ್ಯಕ್ತಿ ಬಯಕೆಯ ಹಾದಿಯಲ್ಲಿ ನಡೆಯುವಾಗ ಅದರ ಒಳಿತು ಕೆಡಕುಗಳ ಬಗ್ಗೆಯೂ ಯೋಚಿಸುವುದು ಅತ್ಯಗತ್ಯ. ಬಯಕೆಯ ಹಾದಿ ಸುಗಮವಾದುದಲ್ಲ. ಅಲ್ಲಿ, ಕಷ್ಟ, ನಷ್ಟ, ಅವಮಾನ, ನಿರಾಶೆ ಹೀಗೆ ಎಲ್ಲವೂ ಇದೆ. ಬಯಕೆಯನ್ನು ನಿಯಂತ್ರಿಸಬೇಕೆಂದರೆ ಇಂದ್ರಿಯಗಳನ್ನು ಹತೋಟಿಗಿಳಿಸಬೇಕು ಆಗ ಮಾತ್ರ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

ಮನುಷ್ಯನಲ್ಲಿ ಇಂದ್ರಿಯಗಳು ಅನುಕೂಲವಾದಾಗ ರಾಗವೂ, ಪ್ರತಿಕೂಲವಾದಾಗ ದ್ವೇಷವೂ ಆಗುತ್ತದೆ. ಪುರುಷರನ್ನು ದುಷ್ಟ ಕಾರ್ಯಗಳಲ್ಲಿ ಪ್ರವೃತ್ತರನ್ನಾಗಿ ಮಾಡುವ ಬಯಕೆ(ಕಾಮ)ವೇ ಕ್ರೋಧವಾಗಿದೆ. ಆದ್ದರಿಂದ ಈ ಕಾಮವು ರಜೋಗುಣಗಳಿಂದ ಹುಟ್ಟಿದೆ. ಅಧಿಕವಾದ ವಿಷಯಗಳುಳ್ಳ ಹಾಗೂ ಮಹಾಪಾಪಕ್ಕೆ ಕಾರಣವಾದ ಈ ಬಯಕೆ(ಕಾಮ)ಯನ್ನು ನಿಮ್ಮ ವೈರಿಯಾಗಿ ತಿಳಿಯಿರಿ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ.
ನಾವು ಬಯಕೆಯ ಕುದುರೆಯೇರಿ ಸಾಗುವಾಗ ನಮ್ಮ ಇಂದ್ರಿಯ ಮತ್ತು ಮನಸ್ಸು ಅದರ ಸೆಳೆತಕ್ಕೆ ಸಿಕ್ಕಿ ಅದರೊಂದಿಗೆ ಶಾಮೀಲಾಗಿ ಬಿಡುತ್ತವೆ. ಹೀಗಿರುವಾಗ ಒಳಿತು ಕೆಡಕುಗಳ ಬಗೆಗೆ ಯೋಚಿಸುವ ಕಿಂಚಿತ್ತು ಜ್ಞಾನವೂ ನಮ್ಮಲ್ಲಿ ಇರುವುದಿಲ್ಲ. ಬಯಕೆ ಎನ್ನುವುದು ಚಕ್ಷುರಾದಿ ಇಂದ್ರಿಯಗಳಿಂದ ಜ್ಞಾನವನ್ನು ಮುಚ್ಚಿ ಹಾಕಿ ಮನುಷ್ಯನನ್ನು ಮೋಹದಲ್ಲಿ ಬಂಧಿಸಲು ಸಜ್ಜಾಗಿ ನಿಂತಿರುತ್ತದೆ.
ಆದ್ದರಿಂದ ಪ್ರತಿಯೊಬ್ಬ ಮನುಷ್ಯ ತನ್ನ ಇಂದ್ರಿಯಗಳನ್ನು ಸ್ವಾಧೀನದಲ್ಲಿಟ್ಟುಕೊಂಡು ಸಾಮಾನ್ಯವಲ್ಲದ ವಿಶೇಷ ಜ್ಞಾನದಿಂದ ಬಯಕೆಯನ್ನು ನಾಶಪಡಿಸಬೇಕು. ಬಯಕೆಗೊಂದು ಪರಿದಿ ಎಳೆದು ಅದರೊಳಗೆ ಸುಖ ಕಾಣಬೇಕು. ಹಾಗಿದ್ದರೆ ಮಾತ್ರ ಸ್ವಚ್ಛಂದ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಏನಂತೀರಾ?
B M Lavakumar








