ಕೆಲವು ಕಾಯಿಲೆಗಳು ಹಿಂದಿನ ಕಾಲದಲ್ಲಿ ವೃದ್ಧಾಪ್ಯದಲ್ಲಿ ಕಾಡುತ್ತಿದ್ದವು. ಆದರೀಗ ಚಿಕ್ಕವಯಸ್ಸಿನಲ್ಲಿಯೇ ಕಾಡಲಾರಂಭಿಸಿದೆ. ಅದರಲ್ಲೂ ಹೃದಯಾಘಾತವಂತು ಯಾರನ್ನೂ ಬಿಡುತ್ತಿಲ್ಲ ಎಂಬ ಸ್ಥಿತಿಗೆ ಬಂದು ನಿಂತಿದೆ. ವಿದ್ಯಾರ್ಥಿಗಳೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ. ಬದಲಾದ ಕಾಲಘಟ್ಟದಲ್ಲಿ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆ ಯಾವಾಗ ಯಾರನ್ನು ಬಲಿ ಪಡೆದು ಬಿಡುತ್ತದೆಯೋ ಎಂಬುದನ್ನು ಹೇಳಲಾಗದ ಸ್ಥಿತಿಗೆ ತಂದು ನಿಲ್ಲಿಸಿದೆ.
ಬದಲಾದ ಜೀವನ ಶೈಲಿ, ಒತ್ತಡ, ವ್ಯಾಯಾಮ ಕೊರತೆ, ವಾಯು ಮಾಲಿನ್ಯ ಇತರೆ ಕಾರಣಗಳಿಂದ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ದೇಶದಲ್ಲಿ ಸಂಭವಿಸುವ ಸಾವಿನಲ್ಲಿ ಶೇ.50ರಷ್ಟು ಮಂದಿ ಸಾಂಕ್ರಾಮಿಕವಲ್ಲದ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಪ್ರಮುಖವಾಗಿ ಸಾಂಕ್ರಾಮಿಕವಲ್ಲದ ಹೃದಯಘಾತ ಮತ್ತು ಹೃದಯ ಸಂಬಂಧಿ ಸಮಸ್ಯೆ, ಮಧುಮೇಹ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ರೋಗಕ್ಕೆ ಹೆಚ್ಚಿನವರು ಬಲಿಯಾಗುತ್ತಿದ್ದಾರೆ.
ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾವೇನು ಮಾಡಬೇಕು? ಯಾವ ಆಹಾರ ಸೇವಿಸಬೇಕು?
ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಪ್ರಮಾಣ ಹೆಚ್ಚಾಗುತ್ತಿದ್ದು, ಇವೆರಡು ಒಂದು ನಾಣ್ಯದ ಎರಡು ಮುಖ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಮಧುಮೇಹದಿಂದ ಬಳಲುತ್ತಿರುವವರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಶೇ.5ರಷ್ಟು ಹೆಚ್ಚು ಇರುತ್ತದೆ ಎನ್ನಲಾಗಿದೆ. ಶೇ.25ರಷ್ಟು ಸಾವುಗಳು ಹೃದಯ ಸಂಬಂಧಿ ಸಮಸ್ಯೆಗಳಿಂದ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಸುಮಾರು 30-40ರ ವಯೋಮಾನದವರಲ್ಲಿ ಇದು ಕಂಡು ಬರುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಅದರಲ್ಲೂ ಗ್ರಾಮೀಣ ಭಾಗಕ್ಕಿಂತ ಹೆಚ್ಚು ನಗರ ಪ್ರದೇಶಗಳಲ್ಲಿ ಹೃದಯಾಘಾತ ಪ್ರಕರಣಗಳು ಕಂಡು ಬರುತ್ತಿವೆ.
ಹೃದಯಾಘಾತ ಪ್ರಮಾಣವನ್ನು ಗಮನಿಸಿದ್ದೇ ಆದರೆ ಗ್ರಾಮೀಣ ಪ್ರದೇಶದಲ್ಲಿ ಹೃದಯಾಘಾತದ ಪ್ರಮಾಣ ಶೇ.6ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ.8ರಿಂದ ಶೇ.10ರಷ್ಟು ಹೆಚ್ಚಳವಾಗುತ್ತಿದೆ. ಹಿಂದೆ ಹೆಂಗಸರಲ್ಲಿ 50 ವರ್ಷದ ನಂತರದಲ್ಲಿ ಹೃದಯಾಘಾತವಾಗುವ ಪ್ರಕರಣಗಳು ಕಂಡು ಬರುತ್ತಿದ್ದವು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಸಂಸಾರ, ವೃತ್ತಿ, ಮಕ್ಕಳನ್ನು ನೋಡಿಕೊಳ್ಳುವ ಒತ್ತಡ, ಹಾರ್ಮೋನ್ ಅಸಮತೋಲನದಿಂದ ಒತ್ತಡ ಹೆಚ್ಚುತ್ತಿದ್ದು ಇದರಿಂದ 40ರ ಪ್ರಾಯದಲ್ಲಿಯೇ ಹೃದಯಾಘಾತಕ್ಕೆ ಒಳಗಾಗುವಂತೆ ಮಾಡುತ್ತಿದೆ.
ಇವತ್ತಿಗೂ ಹೆಚ್ಚಿನ ಜನರಿಗೆ ಹೃದಯಘಾತದ ಲಕ್ಷಣವೇ ಗೊತ್ತಾಗುತ್ತಿಲ್ಲ. ಕೆಲವರು ಎದೆನೋವು ಕಾಣಿಸಿಕೊಂಡಾಗ ಬಹುಶಃ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಮಾತ್ರೆ ತೆಗೆದುಕೊಳ್ಳುವ ಮೂಲಕ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ಹೃದಯಾಘಾತದ ಲಕ್ಷಣಗಳನ್ನು ಪ್ರತಿಯೊಬ್ಬರು ಅರಿಯುವುದು ಒಳ್ಳೆಯದು. ಹೃದಯಾಘಾತವಾದಾಗ ಸಾಮಾನ್ಯವಾಗಿ ಎದೆಯ ಎಡಭಾಗ, ಮಧ್ಯಭಾಗದಲ್ಲಿ ನೋವು, ಉರಿ ಕಾಣಿಸಿಕೊಳುತ್ತದೆ. ಶೇ.30ರಿಂದ 40ರಷ್ಟು ಮಂದಿಗೆ ಹೃದಯಘಾತವಾದಾಗ ಎದೆಭಾಗದಲ್ಲಿ ನೋವು ಕಾಣಿಸಿಕೊಳುವುದಿಲ್ಲ.
ಇದನ್ನೂ ಓದಿ: ನೀವು ತಡವಾಗಿ ವಿವಾಹವಾಗಿದ್ದೀರಾ…? ಆದಷ್ಟು ಬೇಗ ಮಗು ಪಡೆಯುವ ಬಗ್ಗೆ ಆಲೋಚಿಸಿ…
ಬದಲಿಗೆ ಗಂಟಲು, ದವಡೆ ನೋವು ಕಾಣಿಸಿಕೊಳ್ಳಬಹುದು, ಬೆನ್ನಿನ ಮೇಲ್ಭಾಗ, ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡು ವಾಂತಿಯಾಗಬಹುದು, ಅತಿಯಾಗಿ ಬೆವರು ಬರಬಹುದು. ಇಂತಹ ಲಕ್ಷಣಗಳು ಕಾಣಿಸಿದಾಗ ತಕ್ಷಣ ರೋಗಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಇದಕ್ಕೆ ಎರಡು ರೀತಿಯ ಚಿಕಿತ್ಸೆ ಇದೆ. ರಕ್ತನಾಳದಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ಮೆಡಿಸಿನ್ ನೀಡಬೇಕು. ನಂತರ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಹೃದಯಾಘಾತವಾದ ನಂತರದ ಚಿಕಿತ್ಸೆ ಇದ್ದೇ ಇದೆ. ಆದರೆ ಅದಕ್ಕೂ ಮುನ್ನ ನಾವು ಒಂದಷ್ಟು ಆರೋಗ್ಯಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಸಾಮಾನ್ಯವಾಗಿ 40ವರ್ಷ ಮೀರಿದ ಬಳಿಕ ಗಂಡಸರು 45ವರ್ಷ ಮೀರಿದ ಬಳಿಕ ಮಹಿಳೆಯರು ನಿಯಮಿತವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ ಪರೀಕ್ಷೆ, ಥ್ರೆಡ್‌ಮಿಲ್ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ, ಪ್ರತಿ ಬಾರಿ ಸಾಮಾನ್ಯ ಸ್ಥಿತಿಯಲ್ಲಿದ್ದರೆ 2ವರ್ಷಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬಹುದು. ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ, ಶರೀರದ ತೂಕ ಮತ್ತು ಸೊಂಟದ ಸುತ್ತಳತೆ, ಅತಿಯಾಸೆ ಈ ಐದು ಅಂಶಗಳನ್ನು ಕಡಿಮೆಯಿಟ್ಟುಕೊಂಡರೆ ಒಳಿತು. ಜತೆಗೆ ವ್ಯಾಯಾಮ, ದೇಹದಂಡನೆ ಮುಖ್ಯ ಎನ್ನುತ್ತಾರೆ ಹೃದ್ರೋಗಗಳ ತಜ್ಞರು. ಅದು ಏನೇ ಇರಲಿ ನಮ್ಮ ಹೃದಯದ ಆರೋಗ್ಯದ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಅಷ್ಟೇ ಅಲ್ಲದೆ ಹೃದಯದ ಆರೋಗ್ಯವನ್ನು ಕಾಪಾಡುವ ಕ್ರಮಗಳನ್ನು ತಪ್ಪದೆ ಅನುಸರಿಸಬೇಕು.
B M Lavakumar