LatestLife style

ಮಧುಮೇಹ ನಿಯಂತ್ರಿಸದಿದ್ದರೆ ಹೃದಯದ ಮೇಲೆ ಪರಿಣಾಮ ಬೀರಬಹುದು… ವೈದ್ಯರು ಹೇಳುವುದೇನು?

ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೆ ಹೋದರೆ ಅದು ಹೃದಯಕ್ಕೂ ಅಪಾಯ ನೀಡಬಹುದು ಎಂಬುದಾಗಿ ವೈದ್ಯರು ಹೇಳುತ್ತಾರೆ.. ಅವರ ಪ್ರಕಾರ ಮಧುಮೇಹಕ್ಕೂ ಹೃದಯದ ಆರೋಗ್ಯಕ್ಕೂ ನಿಕಟ ಸಂಬಂಧವಿದೆಯಂತೆ.. ಆದರೆ ಈ ವಿಚಾರವನ್ನು ಬಹುತೇಕರು ಕಡೆಗಣಿಸುತ್ತಾರೆ. ಹೀಗಾಗಿಯೇ ಅಪಾಯವನ್ನು ಎಳೆದುಕೊಳ್ಳುತ್ತಿದ್ದಾರೆ. ಮಧುಮೇಹವನ್ನು ಕಡೆಗಣಿಸುವುದರಿಂದ  ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರುವ ಸಾಧ್ಯತೆಯಿದ್ದು, ಈ ಬಗ್ಗೆ ಹೆಚ್ಚಿನ ಅರಿವು ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವತ್ತ ಗಮನಹರಿಸುವುದು ಮುಖ್ಯವಾಗಿದೆ.

ವ್ಯಕ್ತಿಗಳ ರಕ್ತದ ಸಕ್ಕರೆಯ ಮಟ್ಟ ಜಾಸ್ತಿ ಆದಾಗ ಅದು ಗ್ಲೂಕೋಸ್‌ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಜೊತೆಗೆ ಹೃದಯದ ಕೆಲಸದ ಮೇಲೆ ಮತ್ತು ಒಟ್ಟಾರೆ ಹೃದಯರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಆದುರಿಂದ ಹೆಚ್ಚಿನ ತೊಂದರೆ ಉಂಟಾಗಬಹುದಾಗಿದೆ ಎನ್ನುತ್ತಾರೆ ತಜ್ಞರು. ಒಂದು ಸಂಶೋಧನೆಯ ಪ್ರಕಾರ ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ಜೀವನದ ಒಂದು ಹಂತದಲ್ಲಿ ಹೃದ್ರೋಗಕ್ಕೆ ತುತ್ತಾಗುವ ಅಪಾಯ ಜಾಸ್ತಿ ಇರುತ್ತದೆ.

ರಕ್ತದ ಸಕ್ಕರೆ ಮಟ್ಟವು ಜಾಸ್ತಿಯಾದಾಗ ರಕ್ತನಾಳಗಳು ಮತ್ತು ಹೃದಯದ ಕಾರ್ಯನಿರ್ವಹಣೆಯಲ್ಲಿ ನೇರ ಭಾಗಿಯಾಗುವ ನರಗಳಿಗೆ ಹಾನಿ ಉಂಟಾಗಬಹುದಾಗಿದೆ. ಹಾಗಾಗಿ ಈ ಕುರಿತು ಎಚ್ಚರ ವಹಿಸಬೇಕಾಗಿದೆ. ಒಂದೊಳ್ಳೆಯ ಸಂಗತಿ ಏನೆಂದರೆ ನೀವು ನಿಮ್ಮ ಮಧುಮೇಹವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಹೃದಯರಕ್ತನಾಳದ ಕಾಯಿಲೆ ಉಂಟಾಗುವ ಅಪಾಯ ಕೂಡ ಕಡಿಮೆ ಇರುತ್ತದೆ.

ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರಿನ ಸಹಕಾರ ನಗರದ ಆಸ್ಟರ್ ಸಿಎಂಐ ಹಾಸ್ಪಿಟಲ್ ನ ಚೀಫ್ ಸಿವಿಟಿಎಸ್ ಸರ್ಜನ್ ಡಾ. ಗಣೇಶಕೃಷ್ಣನ್ ಅಯ್ಯರ್ ಅವರು, “ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವ ಹಲವಾರು ಜನರು ತಮಗೆ ಹೃದಯ ಸಂಬಂಧಿ ಸಮಸ್ಯೆಗಳು ಕಾಡುತ್ತಿರುವುದಾಗಿ ತಿಳಿಸುತ್ತಿದ್ದಾರೆ. ಆತಂಕಕಾರಿ ವಿಚಾರವೇನೆಂದರೆ ಯುವ ಪೀಳಿಗೆಯಲ್ಲೂ ಇಂತಹ ಸಮಸ್ಯೆ ಕಂಡು ಬರುತ್ತಿದೆ.

ಒಂದು ವೇಳೆ ಮಧುಮೇಹವನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದರಿಂದ ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಟ್ರೈಗ್ಲಿಸರೈಡ್‌ ಗಳಂತಹ ಹೃದಯರಕ್ತನಾಳದ ಕಾಯಿಲೆಯನ್ನುಂಟು ಮಾಡುವ ಅಪಾಯಕಾರಿ ಅಂಶಗಳು ಹೆಚ್ಚು ಕಾಡಬಹುದಾಗಿದೆ. ಹಾಗಾಗಿ ಗ್ಲೂಕೋಸ್ ಏರಿಳಿತಗಳನ್ನು ತಪ್ಪಿಸುವ ಕಡೆಗೆ ಜನರು ಹೆಚ್ಚಿನ ಗಮನ ನೀಡುವುದು ಅವಶ್ಯ. ಈ ಹಿನ್ನೆಲೆಯಲ್ಲಿ ಜನರು ಹೃದಯದ ಆರೋಗ್ಯಕ್ಕೆ ಪೂರಕವಾಗಿರುವ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಸಿಜಿಎಂನಂತಹ ಸಾಧನಗಳ ಮೂಲಕ ಗ್ಲೂಕೋಸ್ ಮಟ್ಟದ ಮೇಲೆ ನಿಗಾ ವಹಿಸುವುದು ಒಳ್ಳೆಯದು.

ಅಬೋಟ್ ನ ಡಯಾಬಿಟಿಸ್ ವಿಭಾಗದ ವೈದ್ಯಕೀಯ ವ್ಯವಹಾರಗಳ ನಿರ್ದೇಶಕರಾದ ಡಾ. ಕೆನ್ನೆತ್ ಲೀ ಅವರು, “ಮಧುಮೇಹವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕಾದರೆ ಗ್ಲೂಕೋಸ್ ಮಟ್ಟದ ಮೇಲೆ ನಿಯಮಿತವಾಗಿ ಗಮನ ಇಡುವುದು ಬಹಳ ಮುಖ್ಯ. ಕಂಟಿನ್ಯೂಯಸ್ ಗ್ಲೂಕೋಸ್ ಮಾನಿಟರಿಂಗ್ (ಸಿಜಿಎಂ) ಸಾಧನಗಳನ್ನು ಬಳಸಿಕೊಂಡು ಮಧುಮೇಹ ಇರುವವರು ತಮ್ಮ ಗ್ಲೂಕೋಸ್ ಮಟ್ಟವನ್ನು ಗಮನಿಸುತ್ತಿರಬೇಕು. ಈ ಸಾಧನದಿಂದ ಗ್ಲೂಕೋಸ್ ಮಟ್ಟವನ್ನು ತಿಳಿದುಕೊಳ್ಳಲು ಬೆರಳಿಗೆ ಸೂಜಿಯನ್ನು ಚುಚ್ಚಿಕೊಳ್ಳುವ ಅಗತ್ಯ ಇರುವುದಿಲ್ಲ.

ಈ ಸಾಧನಗಳು ಟೈಮ್ ಇನ್ ರೇಂಜ್ (ಟಿಐಆರ್) ನಂತಹ ಬಹಳ ಮುಖ್ಯವಾದ ಮಾಪನಗಳನ್ನು ಹೊಂದಿವೆ. ಈ ಮಾಪನವು ಒಂದು ದಿನದಲ್ಲಿ ವ್ಯಕ್ತಿಗಳ ಗ್ಲೂಕೋಸ್ ಮಟ್ಟ ನಿರ್ದಿಷ್ಟ ರೇಂಜ್ ನಲ್ಲಿಯೇ ಇದ್ದ ಒಟ್ಟು ಸಮಯವನ್ನು ತಿಳಿಸುತ್ತದೆ. ಒಬ್ಬ ವ್ಯಕ್ತಿಯ ಗ್ಲೂಕೋಸ್ ಮಟ್ಟವು ನಿರ್ದಿಷ್ಟ ರೇಂಜ್ ನಲ್ಲಿಯೇ ಹೆಚ್ಚು ಸಮಯ ಇದ್ದರೆ ಹೃದಯರಕ್ತನಾಳದ ಕಾಯಿಲೆಯ ಸಂಭವ ಕಡಿಮೆಯಾಗುತ್ತದೆ. ಟಿಐಆರ್ ನಲ್ಲಿ ಶೇ.10ರಷ್ಟು ಹೆಚ್ಚಳ ಉಂಟಾದರೆ ವ್ಯಕ್ತಿಯ ಕರೋಟಿಡ್ ಆರ್ಟರಿಗಳು ಅಸಹಜವಾಗಿ ದಪ್ಪವಾಗುವ ಅಪಾಯ ಶೇ.6.4ರಷ್ಟು ಜಾಸ್ತಿ ಆಗುತ್ತದೆ. ಆದ್ದರಿಂದ ಹೃದಯರಕ್ತನಾಳದ ಕಾಯಿಲೆಯಿಂದ ದೂರವುಳಿಯಲು ಹೆಚ್ಚು ಟಿಐಆರ್ ಅನ್ನು ಹೊಂದುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಅದು ಏನೇ ಇರಲಿ ವೈದ್ಯರ ಸಲಹೆಯಂತೆ ವೈದ್ಯೋಪಚಾರ ಮತ್ತು ಆಹಾರ ಸೇವನೆಯಲ್ಲಿ ಶಿಸ್ತು ಹೀಗೆ ಎಲ್ಲವನ್ನು ರೂಢಿಸಿಕೊಂಡು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಹೃದಯದ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.. ಆರೋಗ್ಯವೇ ಭಾಗ್ಯವಾಗಿರುವುದರಿಂದ ಅದನ್ನು ಕಾಪಾಡಿಕೊಳ್ಳುವುದು ನಮ್ಮದೇ ಜವಬ್ದಾರಿ ಎನ್ನುವುದನ್ನು ಮರೆಯ ಬಾರದು.

 

B M Lavakumar

 

admin
the authoradmin

Leave a Reply

Translate to any language you want