ಇಡ್ಲಿಯನ್ನು ವಿವಿಧ ರೀತಿಯಲ್ಲಿ ಮಾಡುತ್ತಾರೆ. ಇಡ್ಲಿ ಒಂದೇ ಆಗಿದ್ದರೂ ಅದನ್ನು ಮಾಡುವ ವಿಧಾನದಿಂದ ಅದರ ರುಚಿಯನ್ನು ಬೇರೆ ಬೇರೆ ರೀತಿಯಾಗಿ ಸವಿಯಲು ಸಾಧ್ಯವಾಗಿದೆ. ಅಕ್ಕಿ, ರವೆ, ಹಲಸಿನ ಹಣ್ಣಿನ ಇಡ್ಲಿ ಹೀಗೆ ವಿವಿಧ ಬಗೆಯ ಇಡ್ಲಿಯನ್ನು ಮಾಡಲಾಗುತ್ತದೆ. ಇವುಗಳನ್ನು ಹೇಗೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.
1-ಹುಳಿಮೊಸರಿನ ರವೆ ಇಡ್ಲಿ
ಬೇಕಾಗುವ ಪದಾರ್ಥಗಳು: ಉಪ್ಪಿಟ್ಟು ರವೆ- ಒಂದು ಕಪ್, ಹುಳಿ ಮೊಸರು- ಒಂದು ಕಪ್, ಹಸಿಮೆಣಸಿನಕಾಯಿ- ಎರಡು, ಸಾಸಿವೆ- ಸ್ವಲ್ಪ, ಎಣ್ಣೆ- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಈರುಳಿ- ಒಂದು, ಕ್ಯಾರೆಟ್- 1, ಅಡುಗೆ ಸೋಡಾ- ಚಿಟಿಕೆಯಷ್ಟು.
ಮಾಡುವ ವಿಧಾನ: ಮೊದಲಿಗೆ ಎಲ್ಲ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಈರುಳ್ಳಿ ಮತ್ತು ಕ್ಯಾರೆಟ್ನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಇನ್ನೊಂದೆಡೆ ಹುಳಿಮೊಸರನ್ನು ತೆಗೆದಿಟ್ಟುಕೊಳ್ಳಬೇಕು. ಇಷ್ಟು ಆದ ಬಳಿಕ ಒಲೆ ಮೇಲೆ ಪಾತ್ರೆಯಿಟ್ಟು ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಕಾಯುತ್ತಿದ್ದಂತೆಯೇ ಸಾಸಿವೆ ಹಾಕಬೇಕು ಅದು ಸಿಡಿದ ಬಳಿಕ ಹಚ್ಚಿಟ್ಟ ಹಸಿ ಮೆಣಸಿನಕಾಯಿ ಹಾಕಿ ಬಾಡಿಸಿ ನಂತರ ಅದಕ್ಕೆ ರವೆ ಹಾಕಿ ಚೆನ್ನಾಗಿ ಹುರಿಯಬೇಕು.
ಇದನ್ನೂ ಓದಿ: ಆಲೂ ಕಟ್ಲೆಟ್, ಆಲೂಚಾಟ್, ಆಲೂಪಲಾವ್ ಮಾಡುವುದು ಹೇಗೆ?
ಇದಾದ ಬಳಿಕ ಕೆಳಗಿಳಿಸಿ ಅದಕ್ಕೆ ಹುಳಿಮೊಸರು, ಉಪ್ಪು, ಸೋಡಾ, ಈರುಳ್ಳಿ, ಕ್ಯಾರೆಟ್ ತುರಿಗಳನ್ನು ಅದಕ್ಕೆ ಸುಮಾರು ಅರ್ಧ ಗಂಟೆಗಳ ಕಾಲ ನೆನೆಸಿಡಬೇಕು. ಆ ನಂತರ ಇಡ್ಲಿ ಪಾತ್ರೆಯಲ್ಲಿ ಹಾಕಿ ಬೇಯಿಸಬೇಕು.( ಬೇಕಾದರೆ ಇಡ್ಡಿ ಬೇಯಿಸುವಾಗಲೇ ಗೋಡಂಬಿ, ಕೊತ್ತಂಬರಿ, ಟೊಮ್ಯಾಟೋವನ್ನು ಕತ್ತರಿಸಿ ಅದರ ಮೇಲಿಡಲೂ ಬಹುದು.) ಅಲ್ಲಿಗೆ ಹುಳಿಮೊಸರು ರೆಡಿಯಾದಂತೆ.
2-ಮೈಸೂರು ತಟ್ಟೆ ಇಡ್ಲಿ
ಮಾಮೂಲಿ ಇಡ್ಲಿ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಮೈಸೂರು ತಟ್ಟೆ ಇಡ್ಲಿಗೆ ಒಂದಷ್ಟು ವಿಶೇಷತೆಯಿದೆ. ಇದನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಬೇಕಾಗುವ ಪದಾರ್ಥಗಳು: ಅಕ್ಕಿರವೆ- ಒಂದು ಪಾವು, ಉದ್ದಿನ ಬೇಳೆ- ಒಂದು ಪಾವು, ಮೊಸರು- ಒಂದು ಪಾವು, ಕೊಬ್ಬರಿ- ಮುಕ್ಕಾಲು ಪಾವು, ಕಡ್ಲೆ ಬೇಳೆ- ಒಂದು ಟೇಬಲ್ ಚಮಚೆ, ಹಸಿಮೆಣಸಿಕಾಯಿಪೇಸ್ಟ್- ಒಂದು ಟೇಬಲ್ ಚಮಚೆ, ಕೊತ್ತಂಬರಿ, ಕರಿಬೇವು ಸೊಪ್ಪು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಅಡುಗೆ ಸೋಡಾ- ಎರಡು ಚಿಟಿಕೆಯಷ್ಟು, ಎಣ್ಣೆ- ನಾಲ್ಕು ಟೇಬಲ್ ಚಮಚೆ.
ಮಾಡುವ ವಿಧಾನ: ಮೊದಲಿಗೆ ಅಕ್ಕಿರವೆಯನ್ನು ಮೊಸರಿನೊಂದಿಗೆ ರಾತ್ರಿಯೇ ನೆನೆಸಿಡಬೇಕು. ಮತ್ತೊಂದೆಡೆ ಉದ್ದಿನ ಬೇಳೆ, ಕಡ್ಲೆಬೇಳೆಯನ್ನು ನೆನೆಸಿಟ್ಟುಕೊಳ್ಳಬೇಕು. ಬೆಳಿಗ್ಗೆ ಎಲ್ಲವನ್ನು ಸೇರಿಸಿ ರುಬ್ಬಬೇಕು ನಂತರ ಕರಿಬೇವು ಸೊಪ್ಪು ಹಾಕಿ ಒಗ್ಗರಣೆ ಮಾಡಿ ಸೇರಿಸಿ ಸೋಡಾವನ್ನು ಬೆರೆಸಿ ಚೆನ್ನಾಗಿ ತಿರುಗಿಸಿ ಬಳಿಕ ತಟ್ಟೆಯಲ್ಲಿ ಹಾಕಿ ಬೇಯಿಸಿ ತೆಗೆದರೆ ತಟ್ಟೆ ಇಡ್ಲಿ ರೆಡಿ.
3-ಹಲಸಿನ ಹಣ್ಣಿನ ಇಡ್ಲಿ
ಸಾಮಾನ್ಯವಾಗಿ ಹಲಸಿನ ಹಣ್ಣಿನಿಂದ ಹಲವಾರು ಪದಾರ್ಥಗಳನ್ನು ತಯಾರಿಸುತ್ತಾರೆ. ಅದರಲ್ಲಿ ಇಡ್ಲಿ ಕೂಡ ಒಂದಾಗಿದೆ. ಇದನ್ನು ತಯಾರು ಮಾಡುವುದು ಬಲು ಸುಲಭವಾಗಿದೆ. ಹೀಗಾಗಿಯೇ ಹಲಸಿನ ಹಣ್ಣಿನ ಇಡ್ಲಿ ಬಹಳಷ್ಟು ಮಂದಿಗೆ ಇಷ್ಟದ ತಿಂಡಿಯೂ ಹೌದು. ಈ ಹಲಸಿನ ಹಣ್ಣಿನ ಇಡ್ಲಿಯನ್ನು ಹೇಗೆ ಮಾಡುತ್ತಾರೆ ಮತ್ತು ತಯಾರಿಸಲು ಏನೆಲ್ಲ ಸಾಮಾಗ್ರಿಗಳು ಬೇಕು ಎಂಬುದರ ವಿವರ ಇಲ್ಲಿದೆ.
ಬೇಕಾಗುವ ಪದಾರ್ಥಗಳು: ಹಲಸಿನಹಣ್ಣು – ಎರಡು ಬಟ್ಟಲು, ಅಕ್ಕಿ- ಒಂದು ಪಾವು, ಬೆಲ್ಲ- ಸಿಹಿಗೆ ತಕ್ಕಂತೆ ಹಾಕಿಕೊಳ್ಳಬೇಕು, ಏಲಕ್ಕಿ- ಸ್ವಲ್ಪ, ಕಾಯಿತುರಿ- ಅರ್ಧ ಬಟ್ಟಲು, ಉಪ್ಪು- ಚಿಟಿಕೆಯಷ್ಟು.
ಇದನ್ನೂ ಓದಿ: ಆಲೂಪರೋಟ, ಆಲೂ ಬಟಾಣಿ ಗಸಿ, ಆಲೂ ಸಮೋಸ, ಆಲೂ ಕುರ್ಮಾ ಮಾಡೋದು ಹೇಗೆ?
ಮಾಡುವ ವಿಧಾನ: ಮೊದಲಿಗೆ ಅಕ್ಕಿಯನ್ನು ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಬೇಕು. ಇನ್ನೊಂದೆಡೆ ಹಲಸಿನ ಹಣ್ಣಿನ ತೋಳೆಯನ್ನು ತೆಗೆದುಕೊಂಡು ಅದನ್ನು ಸಣ್ಣ ಚೂರಗಳನ್ನಾಗಿ ಮಾಡಿಟ್ಟುಕೊಳ್ಳಬೇಕು. ಆ ನಂತರ ಅಕ್ಕಿ ಮತ್ತು ಹಲಸಿನಹಣ್ಣು ಅದರೊಂದಿಗೆ ಏಲಕ್ಕಿ ಪುಡಿ, ಬೆಲ್ಲವನ್ನು ಸೇರಿಸಿ ನೀರು ಹಾಕದ ರುಬ್ಬಬೇಕು. ಬಳಿಕ ತೆಗೆದು ಅದಕ್ಕೆ ಕಾಯಿತುರಿಯನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. ಆ ನಂತರ ಅದನ್ನು ಇಡ್ಲಿ ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಬೇಕು. ಬೆಂದ ಬಳಿಕ ಅದಕ್ಕೆ ತುಪ್ಪ ಹಾಕಿಕೊಂಡು ಸೇವಿಸಿದರೆ ಸಖತ್ ಮಜಾವಾಗಿರುತ್ತದೆ.
4-ಉದ್ದಿನ ಇಡ್ಲಿ/ಸಾಂಬಾರ್
ಉದ್ದಿನ ವಡೆ ಎಲ್ಲರಿಗೂ ಗೊತ್ತಿದೆ. ಆದರೆ ಉದ್ದಿನ ಇಡ್ಲಿ ಯಾವುದಪ್ಪಾ ಎಂದು ಯೋಚಿಸುತ್ತಿದ್ದೀರಾ? ಇದರ ಬಗ್ಗೆ ಕುತೂಹಲವಿದ್ದರೆ ಮನೆಯಲ್ಲೇ ಮಾಡಿ ಸವಿಯ ಬಹುದಾಗಿದೆ.
ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- ಒಂದೂವರೆ ಪಾವು, ಅಕ್ಕಿ ತರಿ- ಎರಡು ಪಾವು, ಉಪ್ಪು- ರುಚಿಗೆ ತಕ್ಕಷ್ಟು.
ಇದನ್ನೂ ಓದಿ: ಪಾಲಕ್ ನಿಂದ ಏನೆಲ್ಲ ಮಾಡಬಹುದು ಗೊತ್ತಾ? ಈಗಲೇ ನೀವೇ ಮನೆಯಲ್ಲಿ ತಯಾರಿಸಿ
ಮಾಡುವ ವಿಧಾನ: ಬೆಳಗ್ಗಿನ ಉಪಹಾರಕ್ಕೆ ಇಡ್ಲಿ ಮಾಡುವುದಾದರೆ ಹಿಂದಿನ ದಿನವೇ ಉದ್ದಿನ ಬೇಳೆಯನ್ನು ಸುಮಾರು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಹಾಕಿ ಬಳಿಕ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಬೇಕು. ಇದಕ್ಕೂ ಮೊದಲು ಇನ್ನೊಂದೆಡೆ ಅಕ್ಕಿತರಿಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಬಿಸಿ ನೀರು ಹಾಕಬೇಕು. ಅಲ್ಲದೆ ಅದರ ಮೇಲೆ ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ ಮಿಶ್ರಮಾಡಿಕೊಳ್ಳಬೇಕು. ಆ ನಂತರ ಅದನ್ನು ಸುಮಾರು ಒಂದು ಗಂಟೆಗಳ ಕಾಲ ಮುಚ್ಚಿಡಬೇಕು. ಆ ನಂತರ ಅಕ್ಕಿ ತರಿಗೆ ರುಬ್ಬಿದ ಉದ್ದಿನಬೇಳೆಯನ್ನು ಹಾಕಿ ಚೆನ್ನಾಗಿ ಕಲೆಸಿಡಬೇಕು.
ಬೆಳಿಗ್ಗೆ ಇಡ್ಲಿ ಪಾತ್ರೆಗೆ ಸ್ವಲ್ಪ ಎಣ್ಣೆ ಸವರಿ (ಒಂದುವೇಳೆ ಸಂಪಣ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಹಾಕಿ ಹದ ಮಾಡಿಕೊಳ್ಳಬೇಕು) ಸಂಪಣವನ್ನು ಹಾಕಿ ಬೇಯಿಸಿದರೆ ಉದ್ದಿನ ಇಡ್ಲಿ ಸಿದ್ದವಾಗುತ್ತದೆ.
ಇನ್ನು ಉದ್ದಿನ ಇಡ್ಲಿಗೆ ಸಾಂಬಾರ್ ಮಾಡಲು, ತೊಗರಿಬೇಳೆ- ಅರ್ಧ ಪಾವು, ಸಣ್ಣಗೆ ಹಚ್ಚಿದ ಈರುಳ್ಳಿ- ಕಾಲು ಕೆಜಿ, ರಸಂ ಪುಡಿ- ಮೂರು ಚಮಚ, ಹುರಿಗಡಲೆ- ಒಂದು ಹಿಡಿ, ಕೊತ್ತಂಬರಿ ಬೀಜ- ಅರ್ಧ ಹಿಡಿ, ತೆಂಗಿನ ಕಾಯಿ- ಅರ್ಧ ಭಾಗ, ಬ್ಯಾಡಗಿ ಮೆಣಸು- ಎರಡು, ಟೋಮ್ಯಾಟೋ- ಎರಡು ಇವುಗಳನ್ನು ತೆಗೆದಿಟ್ಟುಕೊಳ್ಳಬೇಕು.
ಇದನ್ನೂ ಓದಿ: ನಿತ್ಯದ ಸೇವನೆಗೆ ಅನುಕೂಲವಾಗುವಂತೆ ಅಕ್ಕಿಯಿಂದ ಏನೆಲ್ಲ ತಿಂಡಿ ತಯಾರಿಸಬಹುದು…?
ಮಾಡುವ ವಿಧಾನ: ಮೊದಲಿಗೆ ತೊಗರಿ ಬೇಳೆಯನ್ನು ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು. ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಈರುಳ್ಳಿ, ಟೋಮ್ಯಾಟೋ ಹಾಕಿ ಬಾಡಿಸಿ ಅದನ್ನು ಬೆಂದ ಬೇಳೆಗೆ ಹಾಕಬೇಕು. ಮತ್ತೊಂದೆಡೆ ರಸಂಪುಡಿ, ಹುರಿಗಡಲೆ, ತೆಂಗಿನಕಾಯಿ, ಕೊತ್ತಂಬರಿ ಬೀಜ, ಮೆಣಸು ಮೊದಲಾದ ಪದಾರ್ಥಗಳನ್ನೆಲ್ಲ ಹಾಕಿ ಚೆನ್ನಾಗಿ ರುಬ್ಬಬೇಕು. ಅದನ್ನು ಬೆಂದ ಬೇಳೆಗೆ ಹಾಕಬೇಕು ಈ ಸಂದರ್ಭ ರುಚಿನೋಡಿಕೊಂಡು ಉಪ್ಪು, ಹುಣಸೆಹಣ್ಣಿನ ಹುಳಿಯನ್ನು ಹಾಕಿ ಕುದಿಸಿ ಇಳಿಸಿದರೆ ಸಾಂಬಾರ್ ರೆಡಿಯಾದಂತೆ.
ಇದನ್ನೂ ಓದಿ: ಕೊಡಗಿನ ಮಳೆಗಾಲದ ಬಹು ಬೇಡಿಕೆಯ ತರಕಾರಿ ಬಿದಿರು ಕಣಿಲೆ…