LatestPolitical

ಸಿಎಂ ಆಗುವ ಡಿ.ಕೆ.ಶಿವಕುಮಾರ್ ಕನಸು ಇವತ್ತಿನದಲ್ಲ… ನವೆಂಬರ್ ವೇಳೆಗೆ ಸಿಗುತ್ತಾ ಕುರ್ಚಿ?

2018ರಿಂದಲೂ ಸಿಎಂ ಆಗುವ ಕನಸು ಹೊತ್ತುಕೊಂಡೇ ರಾಜಕೀಯ ಮಾಡಿಕೊಂಡು ಬಂದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅದ್ಯಾಕೋ ಗೊತ್ತಿಲ್ಲ ಸಿಎಂ ಆಗುವ ಭಾಗ್ಯ ತಪ್ಪುತ್ತಲೇ ಇದೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಕ್ಕೆ ಅಧಿಕಾರ ಹಂಚಿಕೆಯಾಗಿ ಸಿಎಂ ಆಗುತ್ತಾರೆ ಎಂದು ಅವರ ಬೆಂಬಲಿಗರು ಖುಷಿಪಡುತ್ತಿರುವ ಹೊತ್ತಿನಲ್ಲಿ ದೆಹಲಿಯಲ್ಲಿ ನಿಂತು ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವುದು ಸ್ವತಃ ಡಿ.ಕೆ.ಶಿವಕುಮಾರ್ ಸೇರಿದಂತೆ ಅವರ ಬೆಂಬಲಿಗರ ತಲೆಕೆಡಿಸುವಂತೆ ಮಾಡಿದೆ…

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಿರುವುದನ್ನು ನೋಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಭ್ರಮಿಸಿದ್ದರು. ಅಷ್ಟೇ ಅಲ್ಲದೆ, ಈ ಬಾರಿ ನಾನೇ ಮುಖ್ಯಮಂತ್ರಿ ಎಂಬ ವಿಶ್ವಾಸದಲ್ಲಿದ್ದರು. ಅಂತಹದೊಂದು ವಿಶ್ವಾಸ ಬರಲು ಕಾರಣವೂ ಇತ್ತು.

2013ರಲ್ಲಿ ಚುನಾವಣೆ ನಡೆದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಮಾಧ್ಯಮಗಳ ಮುಂದೆ ಇದೇ ನನ್ನ ಕೊನೆಯ ಚುನಾವಣೆ ಎಂದಿದ್ದರು. ಆ ನಂತರ ಯಶಸ್ವಿಯಾಗಿ ಐದು ವರ್ಷಗಳನ್ನು ಪೂರೈಸಿದ್ದರು. ಅದಾದ ನಂತರ 2018ರ ಚುನಾವಣೆ ವೇಳೆಗೆ ಕಾಂಗ್ರೆಸ್ ಕರ್ನಾಟಕದಲ್ಲಿ ಮಕಾಡೆ ಮಲಗಿತ್ತು. ಆದರೆ ಬಿಜೆಪಿ ಅತಿ ಹೆಚ್ಚಿನ ಸ್ಥಾನ ಪಡೆದರೂ ಸರ್ಕಾರ ರಚನೆ ಮಾಡುವಷ್ಟು ಬಹುಮತ ಪಡೆದಿರಲಿಲ್ಲ.

ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ ಅಧಿಕಾರ ಇವತ್ತು ಇದ್ದು ನಾಳೆ ಹೋಗಬಹುದು… ದೇಶವಷ್ಟೇ ಮುಖ್ಯ

ಇದೇ ಸಂದರ್ಭ ಏನೇ ಆದರೂ ಬಿಜೆಪಿಗೆ ಅಧಿಕಾರಕ್ಕೆ ಬರಲು ಬಿಡಲೇ ಬಾರದು ಎಂಬ ಹಠಕ್ಕೆ ಬಿದ್ದ ಕಾಂಗ್ರೆಸ್ ನಾಯಕರು ಅರ್ಥಾತ್ ಹೈಕಮಾಂಡ್ ಪ್ರಬಲ ವಿರೋಧಿಗಳಾಗಿದ್ದ ಜೆಡಿಎಸ್ ನಾಯಕರ ಮನೆ ಬಾಗಿಲು ತಟ್ಟಿ ಜೆಡಿಎಸ್ ಜತೆಗೆ ಸರ್ಕಾರ ರಚಿಸಿತ್ತು. ಅವತ್ತು ಆಡಳಿತದಿಂದ ದೂರವಾಗಿ ಕೇವಲ ಶಾಸಕರಾಗಿ ಸಿದ್ದರಾಮಯ್ಯ ಉಳಿದು ಹೋದರು. ಶತ್ರುಗಳ ಶತ್ರು ಮಿತ್ರರು ಎಂಬಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸೇರಿಕೊಂಡು ಕೂಡಾವಳಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದರು.

ಆ ನಂತರ ಏನೇನು ಆಯಿತು ಎಂಬುದು ರಾಜ್ಯದ ಜನತೆಗೆ ಗೊತ್ತೇ ಇದೆ. ಎರಡು ವರ್ಷ ಪೂರೈಸುವ ಹೊತ್ತಿಗೆ ಅತೃಪ್ತ ಶಾಸಕರು ಬಿಜೆಪಿ ಕಡೆಗೆ ವಾಲಿದ್ದರಿಂದ ಸರ್ಕಾರ ಬಿದ್ದು ಹೋಯಿತು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಈ ಹೊತ್ತಿಗೆ ಕಾಂಗ್ರೆಸ್ ಪಕ್ಷದ ಕಥೆಯೂ ಮನೆಯೊಂದು ಮೂರು ಬಾಗಿಲು ಎಂಬ ಪರಿಸ್ಥಿತಿಗೆ ತಲುಪಿತ್ತು. ಹೀಗಾಗಿ ಮತ್ತೆ ಕಾಂಗ್ರೆಸ್ ನ್ನು ಕಟ್ಟಿ ಅಧಿಕಾರಕ್ಕೆ ಪಣ ತೊಟ್ಟು ನಿಂತವರು ಇದೇ ಡಿ.ಕೆ.ಶಿವಕುಮಾರ್…

ಇದನ್ನೂ ಓದಿ:ರಾಜಕೀಯದ ಅಗ್ನಿಪರೀಕ್ಷೆಯಲ್ಲಿ ಸಿಎಂ ಸಿದ್ದರಾಮಯ್ಯ… ಮುಂದೇನು?

ಮೇಕೆದಾಟು ಅಣೆಕಟ್ಟೆ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ಆರಂಭಿಸಿದ್ದರು. ಅದು ಯಾವುದೇ ಹೋರಾಟದಿಂದ ಆಗುವಂತಹದಲ್ಲ ಎಂಬುದು ಕಾಂಗ್ರೆಸ್ ಗೆ ಗೊತ್ತಿತ್ತು. ಆದರೆ ಅವತ್ತಿನ ಹೋರಾಟಕ್ಕೊಂದು ವೇದಿಕೆ ಬೇಕಾಗಿತ್ತು. ಅಷ್ಟೇ ಅಲ್ಲದೆ ಪಕ್ಷದಲ್ಲಿ ಮೌನಕ್ಕೆ ಜಾರಿ ಹೋಗಿದ್ದ, ತಮ್ಮ ಪಾಡಿಗೆ ತಾವಿದ್ದ ನಾಯಕರನ್ನು ಒಂದೆಡೆ ಸೇರಿಸುವ ಅಗತ್ಯತೆಯಿತ್ತು. ಅದೆಲ್ಲದಕ್ಕೆ ಮೇಕೆದಾಟು ಪಾದಯಾತ್ರೆ ಸಾಕ್ಷಿಯಾಯಿತು.

ಈ ಬಾರಿ ಅಧಿಕಾರಕ್ಕೆ ಬಂದರೆ ನಾನೇ ಸಿಎಂ ಆಗುತ್ತೇನೆ ಎಂಬ ವಿಶ್ವಾಸ ಅವತ್ತು ಡಿ.ಕೆ.ಶಿವಕುಮಾರ್ ಅವರಲ್ಲಿ ಬಲವಾಗಿತ್ತು. ಹೀಗಾಗಿಯೇ ಒಕ್ಕಲಿಗರು, ಲಿಂಗಾಯಿತರು, ಹಿಂದುಳಿದ, ಅಲ್ಪಸಂಖ್ಯಾತರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡಿದರು. ಅವತ್ತಿನ ಬಿಜೆಪಿ  ಸರ್ಕಾರ ಪರಮ ಭ್ರಷ್ಟ ಸರ್ಕಾರವೆಂದು ಬಿಂಬಿಸುವಲ್ಲಿಯೂ ಯಶಸ್ವಿಯಾದರು. ಇದೆಲ್ಲದರ ಪರಿಣಾಮ ರಾಜ್ಯದಲ್ಲಿ 2023ರ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಪರ ಗಾಳಿ ಜೋರಾಗಿ ಬೀಸಲಾರಂಭಿಸಿತು.

ರಾಜ್ಯ  ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜನರಲ್ಲಿ ಮನೆ ಮಾಡಿತ್ತಾದರೂ ಅದೆಲ್ಲವನ್ನು ಬದಿಗೆ ತಳ್ಳಿ ನಮ್ಮಲ್ಲಿ ಡಿಕೆಶಿ, ಸಿದ್ದರಾಮಯ್ಯ ಎನ್ನುವ ಯಾವುದೇ ಪ್ರತ್ಯೇಕ ಬಣವಿಲ್ಲ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದರು. ಅದರಲ್ಲಿ ಸಕ್ಸಸ್ ಆಗಿದ್ದರು. ಇನ್ನೊಂದೆಡೆ ದೇವೇಗೌಡರ ಕುಟುಂಬದತ್ತ ಒಲವು ಹೊಂದಿದ್ದ ಒಕ್ಕಲಿಗರನ್ನು ತಮ್ಮ ಕಡೆಗೆ ಸೆಳೆಯುವಲ್ಲಿಯೂ ಯಶಸ್ವಿಯಾದರು.

ಇದನ್ನೂ ಓದಿ:ಬಿಹಾರದಲ್ಲಿ ವಿಧಾನಸಭಾ ಚುನಾವಣೆಯಾದರೆ ರಾಜ್ಯದ ಸಿಎಂ-ಡಿಸಿಎಂಗೆ ಟೆನ್ಷನ್ ಏಕೆ?

ಇದೆಲ್ಲದರ ನಡುವೆ 2022ರಲ್ಲಿಯೇ ಮುಂದಿನ ವಿಧಾನಸಭಾ ಚುನಾವಣೆ 2023ರಲ್ಲಿ ಬಹುಮತ ಪಡೆದರೆ ನಾನೇ ಸಿಎಂ ಎಂಬ ಹೇಳಿಕೆಯನ್ನು ಅದಾಗಲೇ ಡಿ.ಕೆ.ಶಿವಕುಮಾರ್ ತೇಲಿ ಬಿಟ್ಟಾಗಿತ್ತು. ಎಸ್.ಎಂ.ಕೃಷ್ಣ ಬಳಿಕ ಮುಖ್ಯಮಂತ್ರಿಯಾಗಲು ನನಗೆ ಅವಕಾಶ ಮಾಡಿಕೊಡಿ ಎಂದು ಒಕ್ಕಲಿಗರ ಮುಂದೆ ಮನವಿ ಮಾಡಿಕೊಂಡಿದ್ದರು. ಒಕ್ಕಲಿಗರು ನಮ್ಮ ಸಮುದಾಯದ ನಾಯಕ ಮುಖ್ಯಮಂತ್ರಿಯಾಗಲಿ ಎಂಬ ಉದ್ದೇಶದಿಂದ ಬೆಂಬಲಿಸಿದ್ದರು.

ಹಾಗೆನೋಡಿದರೆ 2023ರ ಚುನಾವಣೆಗೆ ಮುನ್ನವೇ ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಅವರಿಗೂ ಸಿಎಂ ಸ್ಥಾನ ಅಂಥ ಬಂದರೆ ತಮಗೆ ಸಿದ್ದರಾಮಯ್ಯ ಅವರು ಬಲವಾದ ಪ್ರತಿಸ್ಪರ್ಧಿಯಾಗುತ್ತಾರೆ ಎಂಬುದು ಚೆನ್ನಾಗಿಯೇ ಗೊತ್ತಿತ್ತು. ಆದರೂ ಸಿದ್ದರಾಮಯ್ಯ ಅವರ ಹಿಂದಿನ ಹೇಳಿಕೆ ಡಿಕೆಶಿ ಅವರ ಸಿಎಂ ಕನಸಿಗೆ ಇಂಬು ನೀಡಿತ್ತು ಎಂದರೆ ತಪ್ಪಾಗಲಾರದು.

ಇಷ್ಟಕ್ಕೂ ಸಿದ್ದರಾಮಯ್ಯ ಅವರ ಆ  ಹೇಳಿಕೆ ಏನು ಎಂಬುದರ ಬಗ್ಗೆ ಮೆಲುಕು ಹಾಕಿದರೆ 2013ಕ್ಕೆ ಹೋಗಬೇಕಾಗುತ್ತದೆ. ಅವತ್ತು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯರವರು ಇದೇ ನನ್ನ ಕೊನೆಯ ಚುನಾವಣೆ ಎಂದಿದ್ದರು. ಅದಾದ ಬಳಿಕ 2018ರಲ್ಲಿ ಚುನಾವಣೆ ನಡೆದಾಗ ತಾವು ಹಿಂದೆ ಹೇಳಿದ್ದ ಮಾತನ್ನು ಮರೆತು ಬಿಟ್ಟರಲ್ಲದೆ, ತಮ್ಮದೇ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದರೊಂದಿಗೆ ಮತ್ತೊಮ್ಮೆ ಸಿಎಂ ಆಗುವ ಕನಸು ಹೊತ್ತಿದ್ದರು.

ಆ ವೇಳೆಗೆ ಸಿದ್ದರಾಮಯ್ಯ ಅವರಿಗೆ ಪ್ರತಿಸ್ಪರ್ಧಿಯಾಗಿ ಅವತ್ತು ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಹುಟ್ಟಿಕೊಂಡಿದ್ದರು. ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂಬುದನ್ನು ಸಮಯ ಸಿಕ್ಕಾಗ ಹೇಳುವ ಪ್ರಯತ್ನ ಮಾಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ 2018ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಮದ್ದೂರಿನಲ್ಲಿ ಅವತ್ತಿನ ಕಾಂಗ್ರೆಸ್ ಅಭ್ಯರ್ಥಿ ಮಧುಮಾದೇಗೌಡರ ಪರ ನಡೆದ ರೋಡ್ ಶೋ ವೇಳೆ ಜೆಡಿಎಸ್ ನ ಭದ್ರಕೋಟೆಯಲ್ಲಿ ನಿಂತು ತಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂದು ಘೋಷಿಸಿದ್ದರು.

ಅವತ್ತು ಡಿಕೆಶಿ ಅವರ ಮಾತು ಹೇಗಿತ್ತೆಂದರೆ? ಕುಮಾರಣ್ಣ ಮುಖ್ಯಮಂತ್ರಿ ಆಗ್ತಾರೆ ಓಟ್ ಹಾಕಿ ಅಂತಾರೆ. ಹಾಗಾದ್ರೆ ನಾನೇನಿಲ್ವಾ? ನನಗೇನು ಸಿಎಂ ಆಗೋ ಸಾಮರ್ಥ್ಯವಿಲ್ಲವೇ? ಎಂದು ಸುದ್ದಿಗಾರರನ್ನು ಪ್ರಶ್ನಿಸುವ ಮೂಲಕ ತಮ್ಮ ಒಳಗಿನ ಬಯಕೆಯನ್ನು ಹೊರಹಾಕುವುದರೊಂದಿಗೆ ಕಾಂಗ್ರೆಸ್ ನಾಯಕರಿಗೆ ತನ್ನ ಬಯಕೆ ಏನು ಎಂಬುದನ್ನು ಹೇಳುವ ಕೆಲಸ ಮಾಡಿದ್ದರು.

ಇದನ್ನೂ ಓದಿ:ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರಾ?

ಇದಾದ ನಂತರದ ಐದು ವರ್ಷದಲ್ಲಿ ರಾಜಕೀಯವಾಗಿ ರಾಜ್ಯದಲ್ಲಿ ಮತ್ತು ಕಾಂಗ್ರೆಸ್ ನಲ್ಲಿ ಏನೇನು ಬೆಳವಣಿಗೆ ಆಯಿತು  ಎಂಬುದನ್ನು ರಾಜ್ಯದ ಜನತೆ ನೋಡಿದ್ದಾರೆ. ಕಳೆದ 2018ರ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್ ನ ಸಾರಥ‍್ಯ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಮುಂದಿನ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸಿ ತಾವು ಮುಖ್ಯಮಂತ್ರಿಯಾಗಬೇಕೆಂಬ ಹಠಕ್ಕೆ ಬಿದ್ದರಲ್ಲದೆ ಅದರಲ್ಲಿಯೂ ಯಶಸ್ವಿಯೂ ಆದರು.

2023ರಲ್ಲಿ ಕಾಂಗ್ರೆಸ್ ಬಹುಮತ ಪಡೆದ ನಂತರ ಸರ್ಕಾರ ರಚನೆ ಮಾಡುವಾಗ ಸಿಎಂ ಯಾರಾಗಬೇಕು ಎಂಬ ವಿಚಾರ ಬಂದಾಗ  ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆದಿತ್ತು. ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಲು ತಯಾರಿರಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಕೂಡ ತನಗೆ ಸಿಎಂ ಸ್ಥಾನ ಬೇಕೆಂದು ಹಠಕ್ಕೆ ಬಿದ್ದಿದ್ದರು.

ಹೈಕಮಾಂಡ್ ಇಬ್ಬರು ನಾಯಕರಲ್ಲಿ ಒಮ್ಮತ ಮೂಡುವಂತೆ ಮಾಡಿ ಸಿದ್ದರಾಮಯ್ಯ ಅವರಿಗೆ ಸಿಎಂ, ಡಿ.ಕೆ.ಶಿವಕುಮಾರ್ ಅವರಿಗೆ ಡಿಸಿಎಂ ಸ್ಥಾನವನ್ನು ದಯಪಾಲಿಸಿತ್ತು. ಆದರೆ ಇವತ್ತಿಗೂ ರಾಜಕೀಯ ಪಡಸಾಲೆ ಮತ್ತು ಜನವಲಯದಲ್ಲಿ ಎರಡೂವರೆ ವರ್ಷಗಳ ಅಧಿಕಾರದ ಹಂಚಿಕೆಯ ಒಪ್ಪಂದ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದೆ. ಸದ್ಯಕ್ಕೆ ಡಿ.ಕೆ.ಶಿವಕುಮಾರ್ ಅವರ ಸಿಎಂ ಆಗುವ ಕನಸು ನನಸಾಗುವಂತೆ ಗೋಚರಿಸುತ್ತಿಲ್ಲ.. ಆದರೂ ನವೆಂಬರ್ ತನಕ ಕಾದು ನೋಡೋಣ ಎನ್ನುವ ಕುತೂಹಲ ಅವರ ಬೆಂಬಲಿಗರಲ್ಲಿದೆ…

 

B M Lavakumar

admin
the authoradmin

Leave a Reply