Mysore

ಪ್ರಕೃತಿಯ ನೆಲೆವೀಡಾದ ದೊಡ್ಡಹೆಜ್ಜೂರಲ್ಲಿ ಜರುಗುವ ವಿಭಿನ್ನ, ವಿಶಿಷ್ಟ  ಆಂಜನೇಯಸ್ವಾಮಿ ರಥೋತ್ಸವಕ್ಕೆ ಬನ್ನಿ…

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ದೊಡ್ಡಹೆಜ್ಜೂರು ಗ್ರಾಮದಲ್ಲಿನ ಆಂಜನೇಯಸ್ವಾಮಿ ರಥೋತ್ಸವಕ್ಕೆ ಗ್ರಾಮಸ್ಥರು ಭರದ ಸಿದ್ಧತೆಯಲ್ಲಿ ತೊಡಗಿದ್ದು,  ಆಂಜನೇಯಸ್ವಾಮಿ ಈ ಭಾಗದ ಜನರ ಆರಾಧ್ಯ ದೈವನಾಗಿದ್ದು, ಈತನಿಗೆ ಆದಿವಾಸಿ ಗಿರಿಜನರೇ ಪ್ರಮುಖ ಭಕ್ತರಾಗಿದ್ದಾರೆ.  ಜತೆಗೆ ತನ್ನದೇ ವಿಶೇಷತೆ ಹೊಂದಿರುವ ಈ ಕ್ಷೇತ್ರದ ಮಹಿಮೆ ಅಪಾರವಾಗಿದ್ದು, ಇಲ್ಲಿ ನಡೆಯುವ ರಥೋತ್ಸವಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

ರಥೋತ್ಸವದ ಪ್ರಯುಕ್ತ ಜ. 15ರರಂದು ಸಂಜೆ ಆರಂಭವಾಗುವ ಪೂಜಾ ವಿಧಿ ವಿಧಾನಗಳು 18ರಂದು ಕೊನೆಗೊಳ್ಳುತ್ತವೆ. ದೊಡ್ಡಹೆಜ್ಜೂರು ಕೆರೆ ಅಂಗಳಕ್ಕೆ ಹೊಂದಿಕೊಂಡಿರುವ ದೇವಸ್ಥಾನ ಪ್ರಕೃತಿ ಪ್ರಿಯರ ಮೆಚ್ಚಿನ ತಾಣವಾಗಿದೆ. ಪರಿಶುದ್ಧ ಗಾಳಿ ಮತ್ತು ಹಸಿರು ಸಿರಿಯಿಂದ ಕಂಗೊಳಿಸುವ ಈ ಪ್ರದೇಶದಲ್ಲಿ ದಶಕಗಳ ಹಿಂದೆ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಪ್ರಾಂಗಣದಲ್ಲಿ ಬೀಟೆ ಮರದಿಂದ ನಿರ್ಮಿಸಿದ ಒತ್ತುಗಂಬಗಳು ಆಕರ್ಷನೀಯವಾಗಿವೆ. ದೇವಸ್ಥಾನದೊಳಗೆ ೬ ಅಡಿ  ಎತ್ತರದ ಆಂಜನೇಯಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

ಆಂಜನೇಯಸ್ವಾಮಿ ಎಂದೊಡನೆ ಬ್ರಹ್ಮಚಾರಿ ಎಂದೇ ಗುರುತಿಸಲಾಗುವುದು. ಆದರೆ ದೊಡ್ಡಹೆಜ್ಜೂರು ಗ್ರಾಮದ ಆಂಜನೇಯ ವಿಭಿನ್ನ. ಹೊಸದಾಗಿ ವಿವಾಹವಾದ ದಂಪತಿ ಜಾತ್ರೆಯಲ್ಲಿ ಭಾಗವಹಿಸಿ ರಥೋತ್ಸವದಂದು ರಥಕ್ಕೆ ಬಾಳೆಹಣ್ಣು ಜವನ ಎಸೆಯುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ. ಗಿರಿಜನರ ಆಚಾರ ವಿಚಾರ ಇದಕ್ಕಿಂತ ತುಸು ಭಿನ್ನವಾಗಿದೆ. ಗಿರಿಜನರ ಸಂಪ್ರದಾಯದಂತೆ ಕಂಕಣ ಕೂಡಿ ಬಂದ ನಂತರ ಮದುವೆಗೆ ಮುನ್ನ ಹುಡುಗಿಯೊಂದಿಗೆ ಹುಡುಗ ಒಂದು ರಾತ್ರಿ ಕಾಡಿನೊಳಗೆ ವಾಸ ಮಾಡಿ ಬಂದರೆ ಮದುವೆಯ ಒಪ್ಪಂದವಾದಂತೆ. ಜಾತ್ರೆಯಲ್ಲಿ ಹುಡುಗನ ಮನೆಯವರು ಹುಡುಗಿಗೆ ಹೂ ಮುಡಿಸಿದರೆ ಮದುವೆ ದೃಢಪಟ್ಟಂತೆ ಎನ್ನುತ್ತಾರೆ ಸ್ಥಳಿಯರು

ಜಾತ್ರೆಗಾಗಿ ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳನ್ನು ಅಲಂಕರಿಸಲಾಗಿದೆ. ಬಳೆ ಬಿಚ್ಚೊಲೆ, ಸಿಹಿ ತಿಂಡಿ ತಿನಿಸುಗಳ ಮಾರಾಟ ಮಳಿಗೆಗಳು ತಲೆ ಎತ್ತುತ್ತಿವೆ. ಜಾತ್ರೆಯ ಸಿದ್ಧತೆ ಭರದಿಂದ ಸಾಗಿದೆ. ಕಾರ್ಯಕ್ರಮದ ವಿವರಗಳನ್ನು ನೋಡಿದ್ದೇ ಆದರೆ,  ಜ. 15ರಂದು ಸಂಜೆ 4.30ಕ್ಕೆ ಕಳಸ ಪೂಜೆ, ರಾತ್ರಿ 8ಗಂಟೆಗೆ ಗರುಡ ಪೂಜೆ. 16ರಂದು ಮಧ್ಯಾಹ್ನ 12.30ರಿಂದ 1.30ರವರಗೆ ರಥೋತ್ಸವ, 17ರಂದು ಪಂಜಿನ ಮೆರವಣಿಗೆ ಹಾಗೂ  ಸಂಜೆ 7.30ಕ್ಕೆ ಪಾರುಪಟೆ ಉತ್ಸವಗಳು ನಡೆಯಲಿವೆ. ಅಲ್ಲದೇ ಅಂದು ಸಂಜೆ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ಹಮ್ಮಿಕೊಳ್ಳಲಾಗಿದೆ.

ಇನ್ನು ರಥೋತ್ಸವದ ಕುರಿತಂತೆ ದೊಡ್ಡ ಹೆಜ್ಜೊರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಾ.ರಾ. ಮಹೇಶ್ ಮಾಹಿತಿ ನೀಡಿ, ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯನ್ನು  ಇಂದಿನ ಯುವಕರೊಂದಿಗೆ ಮುಂದುವರೆಸಿಕೊಂಡು ಹೋಗಲಾಗುತ್ತಿದ್ದು, ಎಲ್ಲಾ ಸಮಾಜದ ಹಾಗೂ ಈ ವ್ಯಾಪ್ತಿಯ ಜನರ ಸಹಕಾರದೊಂದಿಗೆ, ದೇವರ ಕೃಪೆಯೊಂದಿಗೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವುದಾಗಿ ಹೇಳುತ್ತಾರೆ.

ಅದು ಏನೇ ಇರಲಿ ಪ್ರಕೃತಿ ನಡುವೆ ನಿರ್ಮಾಣಗೊಂಡು ತನ್ನ ನಂಬಿದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿಕೊಂಡು ಬರುತ್ತಿರುವ ದೊಡ್ಡಹೆಜ್ಜೂರು ಗ್ರಾಮದಲ್ಲಿನ ಆಂಜನೇಯಸ್ವಾಮಿಯ  ರಥೋತ್ಸವ ಜ.16ರಂದು ನಡೆಯುತ್ತಿದ್ದು ನೀವು ತಪ್ಪದೆ ಬನ್ನಿ…

admin
the authoradmin

1 ಟಿಪ್ಪಣಿ

  • ಒಂದು ರಾತ್ರಿ ಗಿರಿಜನರು ಕಾಡಿನಲ್ಲಿ ವಾಸಿಸಿ ಮದುವೆ ಆಗುವ ಮಾಹಿತಿ ತಮಗೆ ಎಲ್ಲಿ ಸಿಕ್ಕಿತೋ ಗೊತ್ತಿಲ್ಲ ಮೊದಲು ತಿಳಿದುಕೊಂಡು ಬರೆಯಿರಿ ಆಯ್ತಾ ಎಲ್ಲರಿಗೂ ಶ್ರೇಷ್ಠತೆ ಚಾರಿತ್ರ್ಯವಿರುತ್ತದೆ. ಮನಸಿಗೆ ಬಂದಂತೆ ಬರೆಯಬೇಡಿ. ಖುದ್ದು ಬಂದು ತಿಳಿದು ಬರೆಯಿರಿ.

ನಿಮ್ಮದೊಂದು ಉತ್ತರ

Translate to any language you want