LatestMysore

ಕಾಡಿನಿಂದ ದಾರಿತಪ್ಪಿ ಬಂದ ಜಿಂಕೆಯ ಮೇಲೆ ದಾಳಿ ಮಾಡಿ ಕೊಂದ ಬೀದಿನಾಯಿಗಳು..

ಮೈಸೂರು:ತನ್ನ ಹಿಂಡಿನಿಂದ ಪ್ರತ್ಯೇಕಗೊಂಡು ದಾರಿತಪ್ಪಿ ಕಾಡಿನಿಂದ ನಾಡಿಗೆ ಬಂದ ಗಂಡು ಜಿಂಕೆಯೊಂದು ಬೀದಿ ನಾಯಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ. ದಾಳಿಯ ವೇಳೆ ಸ್ಥಳೀಯರು ರಕ್ಷಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

ಮೈಸೂರು ನಗರ ಹೊರವಲಯದ ಲಾಲ್ ಬಹದ್ದೂರ್ ಶಾಸ್ತ್ರಿನಗರ ಬಡಾವಣೆಯಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ಮೈಸೂರು ತಾಲ್ಲೂಕಿನ ಯಾಂದಹಳ್ಳಿ ಕಡೆಯಿಂದ ಮಧ್ಯಾಹ್ನ ಲಾಲ್ ಬಹದ್ದೂರ್ ಶಾಸ್ತ್ರಿನಗರ ಬಡಾವಣೆ ಕಡೆಗೆ ಬಂದ ಜಿಂಕೆಯನ್ನು ಅಟ್ಟಾಡಿಸಿದ ಬೀದಿ ನಾಯಿಗಳ ಹಿಂಡು ಕೆಳಕ್ಕೆ ಕೆಡವಿಕೊಂಡು ದಾಳಿ ಮಾಡಿವೆ. ಪರಿಣಾಮ, ನಾಯಿಗಳ ಹಿಡಿತದಿಂದ ತಪ್ಪಿಸಿಕೊಳ್ಳಲಾಗದ ಜಿಂಕೆ ಕಿರುಚಿಕೊಂಡಿದ್ದು, ಈ ವೇಳೆ ಕೆಲ ಸಾರ್ವಜನಿಕರು ನಾಯಿಗಳಿಂದ ಜಿಂಕೆ ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಅಷ್ಟರ ವೇಳೆಗಾಗಲೇ ಜಿಂಕೆ ಸಾವನ್ನಪ್ಪಿದೆ.

ಈ ಕುರಿತು ಮಾಹಿತಿ ತಿಳಿದ ಆಲನಹಳ್ಳಿ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ನಂತರ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಮಹಜರು ಮಾಡಿ ಜಿಂಕೆಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಅಂತ್ಯಕ್ರಿಯೆ ನೆರವೇರಿಸಿದರು. ಬೇಸಿಗೆಯ ದಿನಗಳಲ್ಲಿ ನೀರು ಮತ್ತು ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿನತ್ತ ಬರುವ ಸಾಧ್ಯತೆಗಳು ಹೆಚ್ಚಿರುವ ಕಾರಣ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯವಾಗಿದೆ.

admin
the authoradmin

Leave a Reply

Translate to any language you want