ArticlesLatest

ಡಾ. ಬಿ.ಆರ್. ಅಂಬೇಡ್ಕರ್…. ಸಂವಿಧಾನ ಶಿಲ್ಪಿ, ಸಾಮಾಜಿಕ ಸಮಾನತೆಯ, ನ್ಯಾಯದ ಪ್ರತಿರೂಪ!

ಏಪ್ರಿಲ್ 14 ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ… ಆ ಪ್ರಯುಕ್ತ ಲೇಖನ

ಅಂಬೇಡ್ಕರ್ ಹೆಸರೇ ರೋಮಾಂಚನ ಅಷ್ಟೇ ಅಲ್ಲ ಸ್ಪೂರ್ತಿಯೂ ಹೌದು… ಅವರ ಬದುಕಿನ ಕಥೆ ಓದಿದ ಮೇಲೆ ಪ್ರತಿಯೊಬ್ಬರಿಗೂ ಅವರಂತೆ ಸಾಧನೆ ಮಾಡಬೇಕೆಂಬ ಆಲೋಚನೆ ಬಂದೇ ಬರುತ್ತದೆ.. ನಾವೇನಾದರೂ ಸಾಧಿಸಬೇಕೆಂದರೆ ಅದು ಶಿಕ್ಷಣದಿಂದಲೇ ಸಾಧ್ಯ ಎನ್ನುವುದನ್ನು ನಮ್ಮ ದೇಶಕ್ಕೆ ಮಾತ್ರವಲ್ಲ ಜಗತ್ತಿಗೆ ತೋರಿಸಿಕೊಟ್ಟವರು ಅವರು… ಏ.14 ಅವರ ಜನ್ಮದಿನ..  ಅವರ ಬಗ್ಗೆ  ಮೈಸೂರಿನ ಲೇಖಕರಾದ ಮೈ ನಾ ಲೋಕೇಶ್ ಬರೆದಿದ್ದು ಓದಿ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ…

ಡಾ. ಬಿ. ಆರ್ ಅಂಬೇಡ್ಕರ್ ಚಿಂತನೆಗಳು ಎಂದೆಂದಿಗೂ ಪ್ರಸ್ತುತ… ಡಾ. ಬಿ ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳು ಕಾಲಾತೀತವಾಗಿದ್ದು, ಅವರು ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲದೇ, ಸಾಮಾಜಿಕ ಸಮಾನತೆಯ , ನ್ಯಾಯದ ಪ್ರತಿರೂಪವಾಗಿದ್ದರು.

ಅಂಬೇಡ್ಕರ್ ಎಂಬ ದಾರ್ಶನಿಕ ಈ ನೆಲದಲ್ಲಿ ಜನಿಸಿ,  ಅಸ್ಪೃಶ್ಯತೆಯ ಅವಮಾನ, ನೋವು, ಅಪಮಾನಗಳನ್ನು ಎದುರಿಸಿ, ಸಮಾಜದಲ್ಲಿ, ಕವಿದಿರುವ ಅಂಧಕಾರವನ್ನು ತೊಲಗಿಸುವ ಪಣ ತೊಟ್ಟು,  ಶಿಕ್ಷಣವೇ  ಆ ಮಹಾ ಬೆಳಕು ಎಂಬ ಸತ್ಯವನ್ನು ಅರಿತು ವಿದೇಶದಲ್ಲಿ, ಉನ್ನತ ಶಿಕ್ಷಣ ಪಡೆದು ತಾಯ್ನೆಲದ ಶೋಷಿತರ ಪರವಾಗಿ ಪರಿಣಾಮಕಾರಿ ಚಳುವಳಿ ಯೊಂದನ್ನು ಕಟ್ಟದಿದ್ದರೆ, ಈ ದೇಶದ, ದಲಿತರ, ತಳಸಮುದಾಯಗಳ ಪರಿಸ್ಥಿತಿ ಏನಾಗುತ್ತಿತ್ತು ಎಂಬುದು ಊಹಿಸಲೂ ಅಸಾಧ್ಯವಾದ ಸಂಗತಿ.

ಅಂಬೇಡ್ಕರ್, ದಲಿತರಿಗೆ ಮೂಲಭೂತ ಹಕ್ಕುಗಳನ್ನು ನೀಡಿದರು‌. ಮಹಿಳೆಯರು ಮುಖ್ಯವಾಹಿನಿಗೆ ಬರಲು ಕಾನೂನಿನ ಬಲ ತುಂಬಿದರು. ಕಾರ್ಮಿಕರ, ರೈತರ  ಹಿತ ಕಾಪಾಡಲು ಹಲವಾರು ಕಾನೂನುಗಳನ್ನು ಜಾರಿಗೆ ತಂದರು. ಜಾತೀಯತೆ, ಅಸ್ಪೃಶ್ಯತೆ,ಯು ರೋಗದಿಂದ ಬಳಲುತ್ತಿದ್ದ ಸಮಾಜಕ್ಕೆ ಅಂಬೇಡ್ಕರ್ ಎಂಬ ವೈದ್ಯನ ಅವಶ್ಯಕತೆ ಖಂಡಿತಾ ಇತ್ತು.

ಅಂಬೇಡ್ಕರ್ ಅವರು ಭೌತಿಕವಾಗಿ ನಮ್ಮನ್ನಗಲಿ ಆರು ದಶಕಗಳು ಕಳೆದರೂ , ಅವರ ವಿಚಾರಧಾರೆಗಳು   ಸಮಾಜದ ಎಲ್ಲಾ ವರ್ಗಗಳ ಸವಾಲುಗಳಿಗೆ ಪರಿಹಾರ ಒದಗಿಸಬಲ್ಲವು. ಇಂದಿನ ಸಮಾಜದಲ್ಲಿ ಜಾತಿ, ವರ್ಣ, ಧರ್ಮದ ಆಧಾರದ ಮೇಲೆ  ತಿಕ್ಕಾಟಗಳು ನಡೆಯುತ್ತಿರುವ ಸಂದರ್ಭದಲ್ಲಿ, ಅವರ ಚಿಂತನೆಗಳು ಇನ್ನಷ್ಟು ಮಹತ್ವ ಪಡೆದುಕೊಂಡಿವೆ.

ಅಂಬೇಡ್ಕರ್ ಅವರು “ಶಿಕ್ಷಣವೇ ಶಕ್ತಿ”ಎಂದು ನಂಬಿದ್ದರು. ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಡಿರಿ”ಇಂದಿನ ಯುವಜನತೆ ತಮ್ಮ ಹಕ್ಕುಗಳ ಅರಿವು ಹೊಂದಲು, ಸ್ವಾಭಿಮಾನದಿಂದ ಬದುಕಲು ಶಿಕ್ಷಣವೇ ಪ್ರಮುಖ ಸಾಧನವಾಗಿದೆ , ಎಂಬ ಚಿಂತನೆ ಸಾರ್ವಕಾಲಿಕ ಸತ್ಯವಾಗಿದೆ. ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ (Constitution of India) ಪ್ರಜಾಪ್ರಭುತ್ವದ ಆಧಾರವಾಗಿದೆ.

ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೌಲ್ಯಗಳು ಸಂವಿಧಾನದ ಮೂಲಕ ಸಮಾಜದಲ್ಲಿ ಬೇರೂರಬೇಕು ಎಂಬ ಅವರ ಆಶಯ ಸದಾ ಸ್ಮರಣೀಯ.  ಸಂವಿಧಾನದ ಮೌಲ್ಯಗಳನ್ನು ಪಾಲಿಸುವುದು ದೇಶದ ಸ್ಥಿರತೆಗೆ ಅಗತ್ಯವಾಗಿದೆ. ಅವರು ಕೇವಲ ಸಾಮಾಜಿಕ ಸುಧಾರಕರಲ್ಲ, ಆರ್ಥಿಕ ಚಿಂತಕರೂ ಆಗಿದ್ದರು. ಬಡತನ ನಿರ್ಮೂಲನೆ, ಉದ್ಯೋಗ ಸೃಷ್ಟಿ, ಸಮಾನ ಅವಕಾಶಗಳು— ಅವರ ದೂರದರ್ಶಿತ್ವಕ್ಕೆ ಹಿಡಿದ ಕೈ ಕನ್ನಡಿಯಾಗಿದೆ.

ಇಂದಿನ ಆರ್ಥಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಅವರ ಆಲೋಚನೆಗಳು ಮಾರ್ಗದರ್ಶಕವಾಗಿವೆ. ಕಾರ್ಮಿಕರ ಹಕ್ಕು ರಕ್ಷಣೆಗೆ, ದುಡಿಯುವ ಅವಧಿ, ವಿಶೇಷ ಭತ್ಯೆ, ಸುಧಾರಣೆ ಕ್ರಮಗಳು ಮಾದರಿಯಾಗಿದೆ.    ಕೃಷಿಗೆ ಸಹ ಕೈಗಾರಿಕಾ ಕ್ಷೇತ್ರದ ಸೌಲಭ್ಯಗಳ ವಿಸ್ತರಣೆ, ಬಂಡವಾಳ ಹೂಡಿಕೆ, ಸಹಕಾರ ಕೃಷಿ ಮೂಲಕ, ಕೃಷಿ ಕ್ಷೇತ್ರದ ಮೇಲಾಗುತ್ತಿರುವ.  ಒತ್ತಡವನ್ನು ತಪ್ಪಿಸಿ ಉತ್ಪಾದಕತೆಯನ್ನು ಹೆಚ್ಚಿಸಿ, ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ  ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರಿಗೆ ನೆರವಾಗಬಹುದು ಎಂಬ ಅವರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ.

ಮಹಿಳೆಯರ   ಸಬಲೀಕರಣ, ಹಕ್ಕುಗಳ ಪರ ಹೋರಾಡಿದ ಮೊದಲ ನಾಯಕರಲ್ಲಿ ಅಂಬೇಡ್ಕರ್ ಒಬ್ಬರು.    ಅಸ್ಪೃಶ್ಯರ ನಂತರ ಈ ದೇಶದಲ್ಲಿ ಸಾಮಾಜಿಕವಾಗಿ ಅತಿ ಹೆಚ್ಚು ನೋವುಂಡವರು ಮಹಿಳೆಯರು. ಅವರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿದ್ದ ದಿನಗಳಿದ್ದವು. ಅಂಬೇಡ್ಕರ್ ಮಂಡಿಸಿದ ಹಿಂದೂ ಕೋಡ್ ಬಿಲ್ ಐತಿಹಾಸಿಕವಾದುದು.

ಮಹಿಳೆ ಯರ ಶಿಕ್ಷಣದ ಹಕ್ಕು, ಆಸ್ತಿ ಹಕ್ಕು, ಪುನರ್ವಿವಾಹದ ಹಕ್ಕು   ಸಮಾನತೆಯ ಹಕ್ಕು ಗಳನ್ನು ಜಾರಿಗೊಳಿಸಿ, ಮಹಿಳೆ, ಸಮಾಜದಲ್ಲಿ ಪುರುಷರ ಸಮಾನವಾಗಿ ನಿಲ್ಲುವ ಛಾತಿ  ತುಂಬಿದ ಮಹಾಪುರುಷ ಅಂಬೇಡ್ಕರ್.  ಇಂದಿನ ಮಹಿಳಾ ಸಬಲೀಕರಣ ಚಳವಳಿಗೆ ಅವರ ಚಿಂತನೆಗಳು ಬಲವಾದ ನೆಲೆ ನೀಡಿವೆ ಎಂಬುದರಲ್ಲಿ ಸಂಶಯವಿಲ್ಲ.

ಧರ್ಮವು ಮಾನವೀಯತೆಗೆ ವಿರೋಧವಾಗಬಾರದು ಎಂಬ ಅವರ ಆಶಯ, ಪ್ರಸ್ತುತ ಕಾಲಮಾನದಲ್ಲಿ ಆದರ್ಶಪ್ರಾಯವಾಗಿದೆ. ಇಂದಿನ ಯುವಜನತೆಗೆ ಅಂಬೇಡ್ಕರ್ ಚಿಂತನೆಗಳು ಮಾರ್ಗದರ್ಶಕವಾಗಿವೆ: ಆತ್ಮವಿಶ್ವಾಸದಿಂದ ಬದುಕಬೇಕು. ಅಜ್ಞಾನ ಮತ್ತು ಅಸಮಾನತೆಯ ವಿರುದ್ಧ ಹೋರಾಡಬೇಕು ದೇಶದ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು , ಎಂಬ ಅವರ  ಅಪೇಕ್ಷೆ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದೆ. ಡಾ. ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ಇತಿಹಾಸದ ಭಾಗವಲ್ಲ, ಅವು ಇಂದಿನ ಸಮಾಜದ ಅಗತ್ಯವೂ ಆಗಿವೆ.

ಸಮಾನತೆ, ನ್ಯಾಯ, ಶಿಕ್ಷಣ ಮತ್ತು ಮಾನವೀಯತೆ ಎಂಬ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ. ಆದ್ದರಿಂದ, ಅಂಬೇಡ್ಕರ್ ಚಿಂತನೆಗಳನ್ನು ಅರಿತು, ಅನುಸರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮೀಸಲಾತಿ,ಒಳ ಮೀಸಲಾತಿ, ಭಡ್ತಿ ಮೀಸಲಾತಿ, ಬೇಗುದಿ ಯಲ್ಲಿ ಬೇಯುತ್ತಿರುವ ಸಮಾಜಕ್ಕೆ, ಅಂಬೇಡ್ಕರ್ ಚಿಂತನೆಗಳು ಪರಿಹಾರ ಕಂಡುಕೊಳ್ಳಲು ಮಾರ್ಗವಾಗಿದೆ.

ಜಾತಿ, ಜನಾಂಗದ ಜನಸಂಖ್ಯೆ ಅನುಗುಣವಾಗಿ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ನೀಡಬೇಕಾದ್ದು ಸರ್ಕಾರಗಳ ಕರ್ತವ್ಯ’ ಎಂಬುದು ಅಂಬೇಡ್ಕರ್ರವರ ನಿಲುವಾಗಿತ್ತು.  ಅಂಬೇಡ್ಕರ್ ಅವರು ಕೇವಲ ಕಾನೂನು ರೂಪಿಸಲಿಲ್ಲ. ಬದಲಾಗಿ, ಭಾರತವನ್ನು ಸಾಮಾಜಿಕವಾಗಿ, ಹಾಗೂ ಆರ್ಥಿಕವಾಗಿ ಸಮಾನತೆ ಯುಳ್ಳ  ರಾಷ್ಟ್ರ ವನ್ನಾಗಿ ಮಾಡಲು, ದೇಶದ ಎಲ್ಲರನ್ನೂ ಒಳಗೊಳ್ಳುವ ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಲು ಸಂವಿಧಾನವನ್ನು ಸಾಧನವನ್ನಾಗಿ ಬಳಸಿದ ಮಹಾಪುರುಷ ಅಂಬೇಡ್ಕರ್.

ಕೇವಲ ಅವರ ಪ್ರತಿಮೆಗಳ ನಿರ್ಮಾಣದಲ್ಲಷ್ಟೇ ಧನ್ಯತೆ ಕಾಣದೇ, ಅವರ ತತ್ವಾದರ್ಶಗಳನ್ನು ಪಾಲಿಸುವುದೇ ಆ ಮಹಾ ಚೇತನಕ್ಕೆ ನಾವು ಸಲ್ಲಿಸುವ  ನಿಜವಾದ ಗೌರವವಾಗಿದೆ.

admin
the authoradmin

Leave a Reply

Translate to any language you want