‘ಇ-ಸಂಜೀವಿನಿ ಟೆಲಿ ಮೆಡಿಸಿನ್ಸ್’… ರೋಗಿಗಳು ಮನೆಯಲ್ಲಿಯೇ ಕುಳಿತು ವೈದ್ಯರ ಸಲಹೆ ಪಡೆಯಲು ಸಹಕಾರಿ… ಇದರ ಬಳಕೆ ಹೇಗೆ?

ಈಗಾಗಲೇ ‘ಇ-ಸಂಜೀವಿನಿ ಟೆಲಿ ಮೆಡಿಸಿನ್ಸ್‘ ಬಗ್ಗೆ ಗೊತ್ತಿರುತ್ತದೆ. ಆದರೂ ಇದರ ಬಗ್ಗೆ ಒಂದಷ್ಟು ವಿಷಯಗಳನ್ನು ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇವತ್ತಿನ ದಿನಗಳಲ್ಲಿ ಇದರ ಸೌಲಭ್ಯವನ್ನು ಪಡೆದುಕೊಳ್ಳುವ ಮೂಲಕ ರೋಗಿಗಳು ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸುವುದು ಬಹುಮುಖ್ಯವಾಗಿದೆ.
ನಮಗೆಲ್ಲರಿಗೂ ಗೊತ್ತಿರುವ ವಿಚಾರ ಏನೆಂದರೆ ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವನೆ ಅಪಾಯಕಾರಿ ಎಂಬುದು. ಆದರೆ ಹೆಚ್ಚಿನವರು ವೈದ್ಯರ ಸಲಹೆ ಪಡೆಯದೇ ಔಷಧಿಗಳನ್ನು ಪಡೆಯುತ್ತಾರೆ. ಇಂತಹವರು ‘ಇ-ಸಂಜೀವಿನಿ ಟೆಲಿ ಮೆಡಿಸಿನ್ಸ್’ ಸೌಲಭ್ಯ ಬಳಸಿಕೊಳ್ಳುವುದು ಒಳ್ಳೆಯದು. ಜತೆಗೆ ಮಧುಮೇಹದಂತಹ ಕಾಯಿಲೆವುಳ್ಳವರು ಔಷಧಿಗಳ ಸೇವನೆ ಮೂಲಕ ಮನೆಯಲ್ಲಿಯೇ ಕಾಯಿಲೆಯನ್ನು ನಿಯಂತ್ರಿಸುತ್ತಾರೆ. ಹೀಗಿರುವಾಗ ಕೆಲವೊಂದು ಸಲಹೆಗಳು ಬೇಕಾದರೆ ಅವರು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಬಹಳಷ್ಟು ರೋಗಿಗಳಿಗೆ ಕಿ.ಮೀ.ಗಟ್ಟಲೆ ದೂರವಿರುವ ಆಸ್ಪತ್ರೆಗಳಿಗೆ ತೆರಳಿ ವೈದ್ಯರನ್ನು ಭೇಟಿ ಮಾಡಿಬರುವುದು ಕಷ್ಟದ ಕೆಲಸವಾಗಿದೆ. ಇಂತಹ ಸಂದರ್ಭಗಳಲ್ಲಿ ಇದನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇ ಆದರೆ ಮಕ್ಕಳಿಂದ ವೃದ್ಧರ ತನಕ ಮನೆಯಲ್ಲಿ ಕುಳಿತಲ್ಲೇ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಇಷ್ಟಕ್ಕೂ ಇದರ ಸೌಲಭ್ಯ ಪಡೆದುಕೊಳ್ಳುವುದು ಹೇಗೆ? ಯಾರೆಲ್ಲ ಸೌಲಭ್ಯ ಪಡೆಯಬಹುದು? ವೈದ್ಯರ ಸಲಹೆ ಪಡೆದುಕೊಳ್ಳುವುದು ಹೇಗೆ? ಹೀಗೆ ಹಲವಾರು ಪ್ರಶ್ನೆಗಳು ಮೂಡುವುದು ಸಹಜ. ಒಮ್ಮೆ ಈ ಆ್ಯಪ್ ಉಪಯೋಗಿಸಿದ್ದೇ ಆದರೆ ನಂತರ ಅದು ಸುಲಭವಾಗುತ್ತದೆ.
ಈ ಆ್ಯಪ್ ಮೂಲಕ ರೋಗಿಗಳಿಗೆ ಸಲಹೆ ನೀಡುವವರು ಸರ್ಕಾರಿ ತಜ್ಞ ವೈದ್ಯರೇ ಆಗಿರುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ ಸೌಲಭ್ಯ ಪಡೆಯಲು ಇಚ್ಚಿಸುವ ರೋಗಿಗಳ ಬಳಿ ಆಂಡ್ರಾಯ್ಡ್ ಮೊಬೈಲ್ ಮತ್ತು ಇಂಟರ್ ನೆಟ್ ಸಂಪರ್ಕ ಇರಬೇಕಷ್ಟೆ. ಸಾಮಾನ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ ಪ್ರತಿ ಮನೆಗಳಲ್ಲೂ ಆಂಡ್ರಾಯ್ಡ್ ಮೊಬೈಲ್ ಪೋನ್ ಗಳಿರುವುದು ಸರ್ವೇ ಸಾಮಾನ್ಯವಾಗಿರುವುದರಿಂದ ಅದರಲ್ಲಿರುವ ಪ್ಲೇ ಸ್ಟೋರ್ ಗೆ ಹೋದರೆ ಅಲ್ಲಿ ಇ-ಸಂಜೀವಿನಿ ಒಪಿಡಿ ಆ್ಯಪ್ ಇದ್ದು ಅದನ್ನು ಮೊದಲಿಗೆ ತಮ್ಮ ಮೊಬೈಲ್ ಗೆ ಡೌನ್ಲೋಡ್ ಮಾಡಿಕೊಳ್ಳಬೇಕು.
ಇಲ್ಲವೇ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಇದ್ದರೂ ಕೂಡ ಅಲ್ಲಿ ಗೂಗಲ್ ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸುವ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 9ಗಂಟೆವರೆಗೆ ವೈದ್ಯರನ್ನು ಸಂಪರ್ಕಿಸಲು ಅವಕಾಶವಿದೆ. ಇ-ಸಂಜೀವಿನಿ ಒಪಿಡಿ ಆ್ಯಪ್ ತೆರೆದರೆ ಪರದೆಯ ಮೇಲೆ ಬರುವ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟದಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು. ಬಳಿಕ ಟೋಕನ್ ನಂಬರ್ ಲಭ್ಯವಾಗುವುದು. ಈ ನಂಬರ್ ನೀಡಿ ತಜ್ಞ ವೈದ್ಯರನ್ನು ವಿಡಿಯೋ ಕಾಲ್ ಮೂಲಕ ಭೇಟಿಯಾಗಬಹುದಾಗಿದೆ.
ಇನ್ನು ಕಂಪ್ಯೂಟರ್ ಮೂಲಕ ಸಂಪರ್ಕ ಸಾಧಿಸುವವರು ಕಂಪ್ಯೂಟರ್ ಪರದೆ ಮೇಲೆ ಕೇಳುವ ಪ್ರಕ್ರಿಯೆಗಳನ್ನು ಭರ್ತಿ ಮಾಡಬೇಕಾಗುತ್ತದೆ. ಮೊದಲಿಗೆ ರೋಗಿಯ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಅದು ಸುಲಭವಾಗಿದ್ದು, ರೋಗಿಯ ಮೊಬೈಲ್ ನಂಬರ್ ನಮೂದಿಸಿ ಯಾವ ರಾಜ್ಯ ಎಂಬುದನ್ನು ಆಯ್ಕೆ ಮಾಡಿಕೊಂಡರೆ, ಮುಂದಿನ ಪ್ರಕ್ರಿಯೆಗಳಿಗೆ ತೆರಳಲು ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಆ ನಂಬರನ್ನು ಎರಡನೇ ಪ್ರಕ್ರಿಯೆಯಲ್ಲಿ ನಮೂದು ಮಾಡಬೇಕು. ಬಳಿಕ ವೈದ್ಯರ ಸಂಪರ್ಕಕ್ಕೆ ಮೊಬೈಲ್ ಗೆ ಓಟಿಪಿ ಬರಲಿದ್ದು ಅದನ್ನು ನಮೂದಿಸಿದರೆ ವೈದ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಬಹುದಾಗಿದೆ. ಈ ವೇಳೆ ವೆಬ್ ವಿಡಿಯೋ ಮೂಲಕವೂ ಸಂಪರ್ಕಕ್ಕೆ ಬರುವ ವೈದ್ಯರ ಬಳಿ ಕಾಡುತ್ತಿರುವ ಆರೋಗ್ಯದ ಸಮಸ್ಯೆ ಬಗ್ಗೆ ವಿವರಿಸಿದರೆ ಸಮಸ್ಯೆಗೆ ತಕ್ಕಂತೆ ಚಿಕಿತ್ಸೆಯ ಸಲಹೆ ನೀಡಲಿದ್ದಾರೆ.
ಆದರೆ ರೋಗಿಗಳು ಇಷ್ಟೆಲ್ಲ ಪ್ರಕ್ರಿಯೆ ಮುನ್ನ ತಮ್ಮ ರೋಗದ ವಿವರ, ಹಿಂದಿನ ವೈದ್ಯಕೀಯ ಚಿಕಿತ್ಸೆಯ ವಿವರ ಹೀಗೆ ಎಲ್ಲವನ್ನು ಜತೆಯಲ್ಲಿಟ್ಟುಕೊಂಡರೆ ವೈದ್ಯರಿಗೆ ಸಲಹೆ ನೀಡಲು ಅನುಕೂಲವಾಗುತ್ತದೆ. ರೋಗಿಗಳು ಪೂರ್ವ ತಯಾರಿಯೊಂದಿಗೆ ವೈದ್ಯರನ್ನು ಸಂಪರ್ಕ ಮಾಡುವುದು ಬಹು ಮುಖ್ಯವಾಗಿದೆ. ಇನ್ನು ಇಲ್ಲಿ ಎಲ್ಲ ರೀತಿಯ ರೋಗಗಳಿಗೆ ಸಲಹೆ ದೊರೆಯಲಿದ್ದು, ರೋಗಕ್ಕೆ ಸಂಬಂಧಿಸಿದ ತಜ್ಞ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಲು ವ್ಯವಸ್ಥೆಯಿದೆ. ಹೀಗೆ ಸಂಪರ್ಕಕ್ಕೆ ತಜ್ಞ ವೈದ್ಯರು ನೀಡುವ ಔಷಧಿಗಳನ್ನು ಉಚಿತವಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆಯಲು ಅವಕಾಶ ಮಾಡಿಕೊಡಲಾಗಿದೆ
ಆ್ಯಪ್ ಬಗ್ಗೆ ಹೇಳಬೇಕೆಂದರೆ, 2019ರ ಡಿಸೆಂಬರ್ ನಲ್ಲಿ ಆರಂಭವಾದ ಇ-ಸಂಜೀವಿನಿ ಒಪಿಡಿ ಆ್ಯಪ್ https://esanjeevani.mohfw.gov.in/#/ನ ಸೌಲ್ಯಭ್ಯವನ್ನು ಇದುವರೆಗೆ ಕೋಟ್ಯಂತರ ಮಂದಿ ಪಡೆದಿದ್ದಾರೆ. ಜತೆಗೆ ದಿನದಿಂದ ದಿನಕ್ಕೆ ಬಳಕೆಯ ಪ್ರಮಾಣವೂ ಹೆಚ್ಚುತ್ತಿದೆ. ಡಿಜಿಟಲ್ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗಿರುವಾಗ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮತ್ತು ವೈದ್ಯರ ಸಲಹೆಗಳಿಗೆ ಸಮಯ, ಶ್ರಮ ಮತ್ತು ಹಣ ವ್ಯರ್ಥ ಮಾಡುವ ಬದಲು ಇ-ಸಂಜೀವಿನಿ ಒಪಿಡಿ ಆ್ಯಪ್ ಬಳಕೆ ಅನುಕೂಲವಾಗುವುದರಲ್ಲಿ ಎರಡು ಮಾತಿಲ್ಲ