ಮೈಸೂರು: ಪ್ರತಿಷ್ಠಿತ ಆರೋಗ್ಯ ಮತ್ತು ಜೀವನಶೈಲಿ ಸಂಸ್ಥೆ ಆಗಿರುವ ಹರ್ಬಲೈಫ್ ಇಂಡಿಯಾ ಸಂಸ್ಥೆಯು ಶಿಶು ಮಂದಿರ ಸಂಸ್ಥೆಯ ಸಹಯೋಗದೊಂದಿಗೆ ತನ್ನ ಮಹತ್ವಾಕಾಂಕ್ಷೆಯ ‘ಇಕೋ ವೀಲ್ಸ್ ಮಹಿಳಾ ಯೋಜನೆ’ಗೆ ಮೈಸೂರಿನಲ್ಲಿ ಚಾಲನೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಮಹಿಳೆಯರು ಚಲಾಯಿಸುವ 75ಕ್ಕೂ ಹೆಚ್ಚು ಎಲೆಕ್ಟ್ರಿಕ್ ಆಟೋಗಳಿಗೆ ಹಸಿರು ನಿಶಾನೆ ತೋರಿಸಲಾಯಿತು. ಈ ಮೂಲಕ ಪರಿಸರ ಸ್ನೇಹಿ ಸಾರಿಗೆ ಕಲ್ಪಿಸುವ ಮತ್ತು ಮಹಿಳೆಯರಿದೆ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವ ಅವಕಾಶ ಕಲ್ಪಿಸಲಾಯಿತು. ವಿಶೇಷವಾಗಿ “ಹರ್ ರೂಟ್, ಅವರ್ ಫ್ಯೂಚರ್” ಅಭಿಯಾನ ಹಾಗೂ ವರ್ಷಪೂರ್ತಿ ನಡೆಯಲಿರುವ “ಹಸಿರು ಮೈಸೂರು, ಸ್ವಚ್ಛ ಮೈಸೂರು” ಅಭಿಯಾನಕ್ಕೂ ಇದೇ ವೇಳೆ ಚಾಲನೆ ನೀಡಲಾಯಿತು.
ಹರ್ಬಲೈಫ್ ಇಂಡಿಯಾದ ಕಾರ್ಯತಂತ್ರ ಮತ್ತು ಅನುಷ್ಠಾನ ವಿಭಾಗದ ಉಪಾಧ್ಯಕ್ಷರಾದ ಉದಯ್ ಪ್ರಕಾಶ್, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ, ಶಿಶು ಮಂದಿರದ ನಿರ್ದೇಶರಾದ, ಆನಂದ್ ಸಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ (ಐ.ಪಿ.ಎಸ್) ಮತ್ತು ಇತರ ಗಣ್ಯರು ಈ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಇ-ಆಟೋಗಳನ್ನು ಒದಗಿಸುವುದಲ್ಲದೆ, ವಾಹನ ಚಾಲನಾ ತರಬೇತಿ, ಪರವಾನಗಿ (ಲೈಸೆನ್ಸ್), ನಿರ್ವಹಣೆ, ಡಿಜಿಟಲ್ ಉಪಕರಣಗಳ ಬಳಕೆ, ಹಣಕಾಸು ಸಾಕ್ಷರತೆ, ಆತ್ಮರಕ್ಷಣೆ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಕಲ್ಪಿಸುವ ಮೂಲಕ ಅವರಿಗೆ ನೆರವು ಒದಗಿಸಲಿರುವುದು ವಿಶೇಷವಾಗಿದೆ.

ಹರ್ಬಲೈಫ್ನ ಕಾರ್ಯತಂತ್ರ ಮತ್ತು ಅನುಷ್ಠಾನ ವಿಭಾಗದ ಉಪಾಧ್ಯಕ್ಷ ಉದಯ್ ಪ್ರಕಾಶ್ ಮಾತನಾಡಿ, ಹರ್ಬಲೈಫ್ನಲ್ಲಿ ನಾವು ‘ಎಕೋ ವೀಲ್ಸ್ ಮಹಿಳಾ ಯೋಜನೆ’ಯಿಂದ ಹೆಮ್ಮೆ ಹೊಂದಿದ್ದೇವೆ, ಇದು ಸುಸ್ಥಿರ ಪ್ರಗತಿ ಮತ್ತು ಸಮಾನ ಬೆಳವಣಿಗೆಯ ಕುರಿತು ನಮಗಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಬೆಂಗಳೂರಿನಲ್ಲಿ ದೊರೆತ ಅಭೂತಪೂರ್ವ ಯಶಸ್ಸಿನ ನಂತರ, ಮೈಸೂರಿಗೆ ಈ ಯೋಜನೆಯನ್ನು ವಿಸ್ತರಿಸುವ ಮೂಲಕ ಮಹಿಳೆಯರಿಗೆ ಅಗತ್ಯ ಕೌಶಲ ಮತ್ತು ಆತ್ಮವಿಶ್ವಾಸವನ್ನು ತುಂಬುವ ಮೂಲಕ ಅವರ ಜೀವನವನ್ನು ಬದಲಾಯಿಸುತ್ತಿದ್ದೇವೆ ಎಂದರು.
ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ (ಐ.ಪಿ.ಎಸ್) ಮಾತನಾಡಿ, ಮೈಸೂರು ನಗರ ಪೊಲೀಸ್ ಆಯುಕ್ತೆಯಾಗಿ ಆರ್ಥಿಕ ಸ್ವಾತಂತ್ರ್ಯವು ಮಹಿಳೆಯರ ಜೀವನವನ್ನು ಹೇಗೆ ಬದಲಾಯಿಸುತ್ತದೆ ಮತ್ತು ನಮ್ಮ ಸಮಾಜವನ್ನು ಹೇಗೆ ಹೆಚ್ಚು ಸುರಕ್ಷಿತ ಹಾಗೂ ಸದೃಢಗೊಳಿಸುತ್ತದೆ ಎಂಬುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಈ ‘ಇಕೋ-ವೀಲ್ಸ್ ಮಹಿಳಾ ಯೋಜನೆ’ಯು ಮಹಿಳೆಯರು ತಮ್ಮ ಭವಿಷ್ಯದ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವಂತೆ ಮಾಡುವಲ್ಲಿ ಮತ್ತು ಹಸಿರು ಹಾಗೂ ಸ್ವಚ್ಛ ನಗರ ಸಂಚಾರಕ್ಕೆ ಕೊಡುಗೆ ನೀಡುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಸಮಾನತೆ, ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಪ್ರಗತಿಯನ್ನು ಬೆಂಬಲಿಸುವ ಇಂತಹ ಯೋಜನೆಗಳಿಗೆ ಮೈಸೂರು ಪೊಲೀಸರು ಸದಾ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ ಎಂದರು.








