FoodLatest

ಎಗ್ ಫ್ರೈಡ್ ರೈಸ್, ಮಸಾಲೆ ಎಗ್ ಫ್ರೈ, ಆಲೂ ಎಗ್ ಫ್ರೈ, ಮೊಟ್ಟೆ ಬಜ್ಜಿ.. ಇದೆಲ್ಲವನ್ನು ಮಾಡುವುದು ಹೇಗೆ ಗೊತ್ತಾ?

ಮನೆಯಲ್ಲಿ ಮೊಟ್ಟೆಯಿದ್ದರೆ ಅದರಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಿ ಸೇವಿಸಬಹುದು. ಅದರಲ್ಲಿಯೂ ಎಗ್ ಫ್ರೈಡ್ ರೈಸ್, ಮಸಾಲೆ ಎಗ್ ಫ್ರೈ,  ಆಲೂ ಎಗ್ ಫ್ರೈ, ಬಿಸಿಬಿಸಿ ಮೊಟ್ಟೆ ಬಜ್ಜಿ ಮೊದಲಾದವುಗಳನ್ನು  ಮನೆಯಲ್ಲಿಯೇ ಮಾಡಿ ಸೇವಿಸಬಹುದಾಗಿದೆ. ಇದನ್ನೆಲ್ಲ ತಯಾರಿಸುವುದು ಹೇಗೆ  ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಎಗ್ ಫ್ರೈಡ್ ರೈಸ್

ಬೇಕಾಗುವ ಪದಾರ್ಥಗಳು: ಜೀರಾ ರೈಸ್- 250 ಗ್ರಾಂ, ಮೊಟ್ಟೆ-3, ತುಪ್ಪ- 2ಚಮಚ, ಈರುಳ್ಳಿ-1, ಹಸಿಮೆಣಸಿನ ಕಾಯಿ- 3, ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಅಜಿನೊಮೊಟೊ- ಚಿಟಿಕೆಯಷ್ಟು.

ಮಾಡುವ ವಿಧಾನ: ಮೊದಲಿಗೆ ಜೀರಾ ರೈಸ್ ನಿಂದ ಅನ್ನವನ್ನು ಮಾಡಿಟ್ಟುಕೊಳ್ಳಿ, ಮತ್ತೊಂದೆಡೆ ಈರುಳ್ಳಿ, ಮೆಣಸಿನ ಕಾಯಿಯನ್ನು ಹಚ್ಚಿಟ್ಟುಕೊಳ್ಳಿ, ಇನ್ನೊಂದೆಡೆ ಮೊಟ್ಟೆಯನ್ನು ಒಡೆದು ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ಕಲಕಿಸಿಟ್ಟುಕೊಳ್ಳಿ. ಒಂದು ಪಾತ್ರೆಯನ್ನು ಒಲೆಯಲ್ಲಿಟ್ಟು ಅದಕ್ಕೆ ತುಪ್ಪ ಹಾಕಿ ಅದು ಕಾಯುತ್ತಿದ್ದಂತೆಯೇ ಹಚ್ಚಿಟ್ಟ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.

ಇದನ್ನೂ ಓದಿ: ನಿತ್ಯದ ಸೇವನೆಗೆ ಅನುಕೂಲವಾಗುವಂತೆ ಅಕ್ಕಿಯಿಂದ ಏನೆಲ್ಲ ತಿಂಡಿ ತಯಾರಿಸಬಹುದು…?

ಅದಕ್ಕೆ ಹಚ್ಚಿಟ್ಟ ಮೆಣಸಿನ ಕಾಯಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಎರಡು ನಿಮಿಷಗಳ ಕಾಲ ತಿರುಗಿಸಿ ಬಳಿಕ ಮೊಟ್ಟೆಯನ್ನು ಹಾಕಿ ಚೆನ್ನಾಗಿ ತಿರುಗಿಸಿ ಅದು ಸಣ್ಣ ಸಣ್ಣ ಚೂರುಗಳಾಗಿ ಬೇಯುತ್ತದೆ ಅದಕ್ಕೆ ಅಜಿನೊಮೆಟೋ ಸೇರಿಸಿ ನಂತರ ಅದಕ್ಕೆ ಅನ್ನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಎಗ್ ಫ್ರೈಡ್ ರೈಸ್ ರೆಡಿಯಾದಂತೆಯೇ…..

ಮಸಾಲೆ ಎಗ್ ಫ್ರೈ

ಬೇಕಾಗುವ ಪದಾರ್ಥಗಳು: ಬೇಯಿಸಿದ ಮೊಟ್ಟೆ- ಆರು, ಮೆಣಸಿನಪುಡಿ- ಒಂದು ಚಮಚ,  ಜೀರಿಗೆಪುಡಿ- ಅರ್ಧಚಮಚ, ಅರಶಿನಪುಡಿ-ಅರ್ಧ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಸ್ವಲ್ಪ, ಕೊತ್ತಂಬರಿ ಸೊಪ್ಪು- ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಮೊಟ್ಟೆಯನ್ನು ಬೇಯಿಸಿಕೊಳ್ಳಬೇಕು. ಬಳಿಕ ಅದರ ಸಿಪ್ಪೆಯನ್ನು ಸುಲಿದು ಮೊಟ್ಟೆಯನ್ನು ಉದ್ದದ ಭಾಗದಿಂದ ಅಡ್ಡಲಾಗಿ ತುಂಡು ಮಾಡಿಕೊಳ್ಳಬೇಕು. ಇನ್ನೊಂದೆಡೆ ಪಾತ್ರೆಯಲ್ಲಿ ಮೆಣಸಿನಪುಡಿ, ಜೀರಿಗೆ ಪುಡಿ, ಅರಶಿನ, ಉಪ್ಪು ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಕಿ ಪೇಸ್ಟ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಮನೆಯಲ್ಲಿ ಮೊಟ್ಟೆಯಿದ್ದರೆ ಏನೆಲ್ಲ ವಿಶೇಷ ತಿನಿಸುಗಳು ಮಾಡಬಹುದು..? ನೀವೊಮ್ಮೆ ಮಾಡಿ ರುಚಿ ಶುಚಿಯ ತಿನಿಸು..

ಬಳಿಕ ತಯಾರಿಸಿಕೊಂಡ ಮಸಾಲೆಯ ಪೇಸ್ಟ್‌ನ್ನು ಮೊಟ್ಟೆಯ ಕತ್ತರಿಸಿದ ಭಾಗಕ್ಕೆ ಸವರಿ ಕಾವಲಿಯಲ್ಲಿ ಎಣ್ಣೆ ಸವರಿ ಮಸಾಲೆ ಹಚ್ಚಿದ ಮೊಟ್ಟೆಯ ಭಾಗವನ್ನು ಕಾವಲಿ ಮೇಲಿಟ್ಟು ನಿಧಾನ ಉರಿಯಲ್ಲಿ ಕಾಯಿಸಬೇಕು. ಕಂದು ಬಣ್ಣ ಬಂದ ಬಳಿಕ ಇಳಿಸಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಬೇಕು. (ರುಚಿಗೆ ಬೇಕಾದರೆ ಅದರ ಮೇಲೆ ನಿಂಬೆ ರಸ ಹಾಕಿಕೊಳ್ಳಬಹುದು.) ಇದನ್ನು ಊಟದೊಂದಿಗೆ ಬಳಸಿದರೆ ಚೆನ್ನಾಗಿರುತ್ತದೆ.

ಆಲೂ ಎಗ್ ಫ್ರೈ

ಬೇಕಾಗುವ ಪದಾರ್ಥಗಳು: ಆಲೂಗೆಡ್ಡೆ- 250ಗ್ರಾಂ, ಮೊಟ್ಟೆ-2, ಉಪ್ಪು- ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಪುದಿನಾ- ಸ್ವಲ್ಪ, ಹಸಿ ಮೆಣಸಿನಕಾಯಿ- 2, ಗರಂಮಸಾಲೆ- 1ಚಮಚ, ಎಣ್ಣೆ- 2ಚಮಚ.

ತಯಾರಿಸುವ ವಿಧಾನ: ಮೊದಲಿಗೆ ಸ್ವಲ್ಪ ಉಪ್ಪು ಬೆರೆಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಆಲೂಗೆಡ್ಡೆಯನ್ನು ಬೇಯಿಸಬೇಕು. ನಂತರ ಅದರ ಸಿಪ್ಪೆ ತೆಗೆದು ಚಿಕ್ಕದಾಗಿ ಚೂರು ಮಾಡಿಕೊಳ್ಳಬೇಕು. ಇನ್ನೊಂದೆಡೆ ಮೆಣಸಿನ ಕಾಯಿ, ಕೊತ್ತಂಬರಿ ಪುದಿನಾ ಸೊಪ್ಪನ್ನು ಹಚ್ಚಿಟ್ಟುಕೊಳ್ಳಬೇಕು.

ಒಂದು ಅಗಲವಾದ ಪಾತ್ರೆಯಲ್ಲಿ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾಯುತ್ತಿದ್ದಂತೆಯೇ ಆಲೂಗೆಡ್ಡೆಯನ್ನು ಅದರೊಂದಿಗೆ ಮೆಣಸಿನ ಕಾಯಿ, ಪುದಿನಾ, ಕೊತ್ತಂಬರಿ ಸೊಪ್ಪನ್ನು ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಬಳಿಕ ಹಸಿ ಮೊಟ್ಟೆಯನ್ನು ಅದಕ್ಕೆ ಹಾಕಿ ಮತ್ತೊಮ್ಮೆ ಕಲೆಸಬೇಕು. ಆ ನಂತರ ಗರಂ ಮಸಾಲೆ ಉದುರಿಸಿ ತಿರುವಿದರೆ ಆಲೂ ಎಗ್ ಫ್ರೈ ರೆಡಿಯಾದಂತೆಯೇ..

ಬಿಸಿಬಿಸಿ ಮೊಟ್ಟೆ ಬಜ್ಜಿ

ಬೇಕಾಗುವ ಪದಾರ್ಥಗಳು: ಮೊಟ್ಟೆ- ಮೂರು, ಕಡಲೆಹಿಟ್ಟು- ಒಂದು ಬಟ್ಟಲು, ಉಪ್ಪು- ರುಚಿಗೆ ತಕ್ಕಷ್ಟು, ಅಡುಗೆ ಸೋಡಾ- ಚಿಟಿಕೆಯಷ್ಟು, ಕಾರದ ಪುಡಿ- ಅರ್ಧಚಮಚ, ಜೀರಿಗೆಪುಡಿ- ಒಂದು ಚಮಚ, ಇಂಗು- ಅರ್ಧ ಚಮಚ, ಗರಂಮಸಾಲೆ- ಒಂದು ಚಮಚ.

ಮಾಡುವುದು ಹೇಗೆ: ಮೊದಲಿಗೆ ಮೊಟ್ಟೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬಳಿಕ ತಣ್ಣಗಾದ ನಂತರ ಸಿಪ್ಪೆ ತೆಗೆದು ಎರಡು ಭಾಗವನ್ನಾಗಿ ಮಾಡಿಟ್ಟಕೊಳ್ಳಬೇಕು. ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು ಹಾಕಿ ಅದಕ್ಕೆ ಉಪ್ಪು, ಸೋಡಾ, ಕಾರದಪುಡಿ, ಜೀರಿಗೆ, ಇಂಗು ಸೇರಿದಂತೆ ಎಲ್ಲ ಮಸಾಲೆಗಳನ್ನು ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಬೇಕು. ಅಗತ್ಯತೆ ನೋಡಿಕೊಂಡು ನೀರು ಹಾಕಿ ಬಜ್ಜಿ ಹಿಟ್ಟಿನಷ್ಟು ತೆಳು ಮಾಡಿಕೊಳ್ಳಬೇಕು. ಆ ನಂತರ ಒಲೆಯಲ್ಲಿ ಬಾಣಲೆ ಇರಿಸಿ ಎಣ್ಣೆ ಹಾಕಿ ಅದು ಕಾದ ಬಳಿಕ ಮೊಟ್ಟೆಯನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದರೆ ತಿನ್ನಲು ಮೊಟ್ಟೆ ಬಜ್ಜಿ ರೆಡಿ.

ಇದನ್ನೂ ಓದಿ: ಪಾಲಕ್ ನಿಂದ ಏನೆಲ್ಲ ಮಾಡಬಹುದು ಗೊತ್ತಾ? ಈಗಲೇ ನೀವೇ ಮನೆಯಲ್ಲಿ ತಯಾರಿಸಿ, ಸೇವಿಸಿ, ಆನಂದಿಸಿ

 

 

 

 

 

admin
the authoradmin

Leave a Reply