LatestMysore

ಸೆ.26ರಂದು ಸರಗೂರಿನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ… ಸದುಪಯೋಗಕ್ಕೆ ಮನವಿ

ಸರಗೂರು(ಆರ್ ಆರ್): ಅನಾರೋಗ್ಯಕ್ಕೊಳಗಾದ ರೋಗಿಗಳಿಗೆ ಒಂದೇ ಸೂರಿನಡಿ ನುರಿತ ತಜ್ಞರಿಂದ ಸೆ.26ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ.ರವೀಂದ್ರಪ್ರಸಾದ್ ಶ್ರಾಫ್ ತಿಳಿಸಿದರು.

ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ  ಶಿಬಿರದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ 4 ವರ್ಷಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿಕೊಂಡು ಬರುತ್ತಿರುವ ಆಸ್ಪತ್ರೆಯು ಪ್ರಸಕ್ತ ಸಾಲಿನಲ್ಲಿಯೂ ವರ್ತಕರ ಮಂಡಳಿ, ಜೈನ್‌ಮಿಲನ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರಾಜಸ್ಥಾನ ಸಂಘ, ಮೆಡಿಕಲ್ ಅಸೋಸಿಯೇಷನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಹಾಗೂ ರೋಟರಿ ಮೈಸೂರು ಮೇಟ್ರೋ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಅಂದು ಬೆಳಗ್ಗೆ 9.30 ರಿಂದ 1.00ರವರೆಗೆ ಆಸ್ಪತ್ರೆಯ ಆವರಣದಲ್ಲಿ ತಪಾಸಣಾ ಶಿಬಿರ ಆಯೋಜಿಸಿದ್ದು, ಸಾರ್ವಜನಿಕರೆಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಆಸ್ಪತ್ರೆಯ ಉಪ ನಿರ್ದೇಶಕ ಡಾ.ಕೆ.ಎನ್.ಶಂಕರ್ ಮಾತನಾಡಿ, ಸಾಮಾನ್ಯ ರೋಗ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ, ಸಾಮಾನ್ಯಶಸ್ತ್ರ ಚಿಕಿತ್ಸೆ, ಕೀಲು ಮತ್ತು ಮೂಳೆ, ಮಕ್ಕಳಾ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ದಂತ ಚಿಕಿತ್ಸೆ, ಕಿವಿ, ಮೂಗು ಮತ್ತು ಗಂಟಲು, ಕ್ಯಾನ್ಸರ್ ಚಿಕಿತ್ಸೆ, ಹೃದಯ ರೋಗ ಚಿಕಿತ್ಸೆ, ನರರೋಗ ಚಿಕಿತ್ಸೆ, ಬಂಜೆತನ ನಿವಾರಣೆ, ಮೂತ್ರಪಿಂಡ ಶಸ್ತ್ರಚಿಕಿತ್ಸೆ, ಚರ್ಮರೋಗ, ಆಯುರ್ವೇದ, ಸ್ಪೆರೋಮೆಟ್ರಿ ತಪಾಸಣೆ, ಪಿಜಿಯೋಥೆರಪಿ, ಶ್ರವಣ ದೋಷ, ಡಯಟಿಷಿಯನ್ ಸಮಸ್ಯೆಗಳಿಗೆ 20ಕ್ಕೂ ನುರಿತ ತಜ್ಞರು ಸೂಕ್ತ ಚಿಕಿತ್ಸೆ ನೀಡಲಿದ್ದಾರೆ ಎಂದು ಹೇಳಿದರು.

ಒಂದೇ ಸೂರಿನಡಿ ಇಷ್ಟೊಂದು ಕಾಯಿಲೆಗಳಿಗೆ ತಪಾಸಣೆ ಸಿಗುವುದು ಬಹಳ ವಿರಳ. ಹೀಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಯಶಸ್ವಿಗೆ ಸಹಕರಿಸಬೇಕು. ಶಿಬಿರದಲ್ಲಿ ನೋಂದಾಣಿಯಾದವರಿಗೆ ಮಾಸ್ಟರ್ ಹೆಲ್ತ್ ಚೆಕ್‌ಅಪ್‌ನಲ್ಲಿ ಅಕ್ಟೋಬರ್ ತಿಂಗಳ ಅಂತ್ಯದವರೆಗೆ ಶೇ.೨೫ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದರು.

ಆಸ್ಪತ್ರೆಯ ವ್ಯವಸ್ಥಾಪಕಿ ಬಿ.ಜಿ.ಸಿಸಂಧ್ಯಾ, ಮಾನವ ಸಂಪನ್ಮೂಲ ಹಿರಿಯ ವ್ಯವಸ್ಥಾಪಕಿ ಸಿ.ಜೆ.ಬೀನಾ, ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸುರೇಶ್‌ಜೈನ್, ಸಮಂತ್, ವರ್ತಕರ ಮಂಡಳಿ ಅಧ್ಯಕ್ಷ ಎಸ್.ಪಿ. ಪ್ರಸಾದ್, ಖಜಾಂಚಿ ಡಕ್ಲರಾಮ್, ಸಿಬ್ಬಂದಿಗಳಾದ ವೆಂಕಟಸ್ವಾಮಿ, ಬಂಗಾರಶೆಟ್ಟಿ, ಗೋಪಾಲಕೃಷ್ಣ, ನಾಗರತ್ನ ಸೇರಿದಂತೆ ಇನ್ನಿತರರು ಹಾಜರಿದ್ದರು.

admin
the authoradmin

Leave a Reply