ArticlesLatest

ಆಧಾರ್ ಕಾರ್ಡ್ ಅಸ್ತ್ರ: ಫ್ರೀ ಬಸ್ ಒಳಗೊಂದು ಕುರುಕ್ಷೇತ್ರ! ಇದು ನಿತ್ಯದ ದೃಶ್ಯ

ಶಕ್ತಿಯೋಜನೆ ಜಾರಿಗೆ ಬಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬಸ್ ಗಳೆಲ್ಲವೂ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಜತೆಗೆ ಸೀಟಿಗಾಗಿ ಜಟಾಪಟಿಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ… ಪ್ರತಿದಿನವೂ ಬಸ್ ನಲ್ಲಿ ಕಚೇರಿಗೆ ಹೋಗುವವರ ಪಾಡು ಹೇಳತೀರದಾಗಿದೆ… ನಿತ್ಯದ ಪ್ರಯಾಣದಲ್ಲಿ ಕಂಡು ಬರುವ ಹತ್ತು ಹಲವು ದೃಶ್ಯಗಳನ್ನು ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಅವರು ಓದುಗರ ಮುಂದೆ ತೆರೆದಿಟ್ಟಿದ್ದಾರೆ.

ಆ ದೇವರು ನಮ್ಮ ಹಣೆಬರಹ ಬದಲಾಯಿಸುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ಈ ‘ಶಕ್ತಿ ಯೋಜನೆ’ ಬಂದಾಗಿನಿಂದ ನಮ್ಮ ಕೆಎಸ್ಆರ್‌ಟಿಸಿ (KSRTC) ಬಸ್ಸುಗಳು ನಮ್ಮ ಇಡೀ ದಿನಚರಿಯನ್ನೇ ಬದಲಾಯಿಸಿಬಿಟ್ಟಿವೆ!

ದಿನಾ ಬೆಳಿಗ್ಗೆ ಆಫೀಸಿಗೆ ಹೋಗೋದು ಅಂದರೆ ನನ್ನಂತಹ ವರ್ಕಿಂಗ್ ವುಮನ್‌ಗೆ ಬರೀ ಪ್ರಯಾಣ ಅಲ್ಲ, ಅದು ಒಲಿಂಪಿಕ್ಸ್ ತರಹದ ಒಂದು ದೊಡ್ಡ ಜಂಗಿ ಕುಸ್ತಿ ಪಂದ್ಯಾವಳಿ! ಮೊದಲೆಲ್ಲಾ ಬಸ್ಸುಗಳು ಒಂಟಿ ಮರುಭೂಮಿಯಂತೆ ಹಾಯಾಗಿ ಇರುತ್ತಿದ್ದವು; ಈಗ ಬಸ್ ಬರೋದು ನೋಡಿದರೆ ಸಾಕು, ಒಳಗಡೆ ಮುಖ ತೂರಿಸೋಕೂ ಜಾಗ ಇರೋದಿಲ್ಲ. ಇಡೀ ಬಸ್ ಜಗತ್ತನ್ನೇ ನಗಿಸುವ ವಾಹನವಾಗಿ ಬಿಡುತ್ತದೆ. ನನ್ನ ಕೆಲವು ಮಜಾವಾದ  ಬ್ರೇಕಿಂಗ್ ಅನುಭವಗಳು ಇಲ್ಲಿವೆ ಕೇಳಿ…

ಬಸ್ ಇನ್ನು ನೂರು ಮೀಟರ್ ದೂರದಲ್ಲಿರುವಾಗಲೇ ಬಸ್ ಸ್ಟ್ಯಾಂಡಿನಲ್ಲಿದ್ದ ಶಾಂತವ್ವ, ಗಿರಿಜವ್ವ ಎಲ್ಲರ ಮುಖದಲ್ಲೂ ಇದ್ದ ಸಾಫ್ಟ್‌ವೇರ್ ಸೌಮ್ಯತೆ ಮಾಯವಾಗಿಬಿಡುತ್ತದೆ! ಅಲ್ಲಿಯವರೆಗೆ ‘ಅಕ್ಕ-ತಂಗಿ’ ಅಂತ ಹರಟೆ ಹೊಡೆಯುತ್ತಿದ್ದವರ ಮನಸ್ಥಿತಿ ತಕ್ಷಣ ‘ಯುದ್ಧರಂಗದ ಬಾಹುಬಲಿ ಸೈನಿಕರಂತೆ’ ಬದಲಾಗಿ ಬಿಡುತ್ತದೆ.

ಬಸ್ ಬಂದು ನಿಲ್ಲುತ್ತಿದ್ದಂತೆ ಯವ್ವ ಯವ್ವ! ಎಂದು ನೂಕಾಡುತ್ತ ಬಾಗಿಲಿನಿಂದ ಹತ್ತುವುದನ್ನು ಬಿಟ್ಟು, ಕಿಟಕಿಯಿಂದ ತಮ್ ತಮ್ ಬ್ಯಾಗು, ನೀರಿನ ಬಾಟಲಿ, ವಸ್ತ್ರಗಳನ್ನು ಸೀಟಿನ ಮೇಲೆ ಎಸೆದು ಜಾಗ ಹಿಡಿಯುವ ಕಸರತ್ತು ಜಗತ್ತಿನ ಎಂಟನೇ ಅದ್ಭುತ! ನಾನೂ ಒಂದು ಸಲ ಆಫೀಸ್ ಬ್ಯಾಗ್ ಹಿಡಿದು ಸೀಟು ಹಿಡಿಯಲು ಹೋದರೆ, ಒಬ್ಬ ಅಜ್ಜಿ ನನ್ನ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು, “ಲೇ ತಂಗಿ, ಇದು ನಮ್ ದಾವಣಗೆರೆ ದೊಡ್ಡಮ್ಮನ ಸೀಟು, ಜಾಗ ಖಾಲಿ ಮಾಡು!” ಅಂತ ಅಬ್ಬರಿಸಿದಾಗ ನನ್ನ ರಣಚಂಡಿ ಮನಸ್ಥಿತಿ ಸೀದಾ ಫ್ಲಾಪ್ ಆಗಿಹೋಯಿತು!

ಇತ್ತೀಚಿನ ದಿನಗಳಲ್ಲಂತೂ ಹಳ್ಳಿಯ ಹೆಣ್ಣು ಮಕ್ಕಳೆಲ್ಲಾ ಸೇರಿ ಹತ್ತಾರು ಜನರ ಗ್ಯಾಂಗ್ ಮಾಡಿಕೊಂಡು ಬಸ್ ಹತ್ತುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌದತ್ತಿ ಎಲ್ಲೇ ಇರಲಿ—ಇಡೀ ಕೆಎಸ್ಆರ್‌ಟಿಸಿ ಬಸ್ಸನ್ನೇ ತಮ್ಮಪ್ಪನ ಮನೆ ಆಸ್ತಿಯ ತರಹ ಪ್ರೈವೇಟ್ ಆಗಿ ಬುಕ್ ಮಾಡಿಕೊಂಡವರಂತೆ ಆಡುತ್ತಾರೆ! ಒಳಗಡೆ ಹತ್ತಿ ಕುಳಿತ ತಕ್ಷಣ ಇಡೀ ಬಸ್ಸಿನಲ್ಲೇ ತಮ್ಮದೇ ಹವಾ ಎಂಬಂತೆ ಜೋರಾಗಿ ಮಾತನಾಡಲು ಶುರು ಮಾಡುತ್ತಾರೆ.

ಇನ್ನು ಕೆಲವರ ಅತಿರೇಕದ ಸಾಹಸ ಅಂದರೆ, ತಮ್ಮ ಸ್ವಂತ ಊರಿನಲ್ಲಿ ಸಿಗುವ ಎರಡು ರೂಪಾಯಿಯ ಕೊತ್ತಂಬರಿ ಸೊಪ್ಪು ಮತ್ತು ಸಣ್ಣಪುಟ್ಟ ತರಕಾರಿ ತರಲು ಇಡೀ ದಿನ ಫ್ರೀ ಬಸ್ ಹತ್ತಿ ಪಕ್ಕದ ದೊಡ್ಡ ಸಿಟಿಗೆ ಸವಾರಿ ಹೊರಡುತ್ತಾರೆ!

ಇತ್ತೀಚೆಗೆ ಗಂಡಂದಿರಿಗೆ ಹೆಂಡತಿಯರ ಮೇಲೆ ಎಲ್ಲಿಲ್ಲದ ಪ್ರೇಮ ಉಕ್ಕಿ ಹರಿಯುತ್ತಿದೆ! ಬ್ಯಾಂಕಿನ ಸಣ್ಣ ಪಾಸ್‌ಬುಕ್ ಎಂಟ್ರಿ ಇರಲಿ, ಕರೆಂಟ್ ಬಿಲ್ ಕಟ್ಟೋದು ಇರಲಿ ಅಥವಾ ಸಿಟಿಯಲ್ಲಿ ಯಾರದ್ದೋ ಮನೆಗೆ ಮದುವೆ ಪತ್ರಿಕೆ ಕೊಡೋದು ಇರಲಿ—ತಕ್ಷಣ ತಮ್ಮ ಹೆಂಡತಿಯರನ್ನು ಕರೆದು, “ಬಸ್ ಫ್ರೀ ಐತಲ್ಲವ್ವ, ನೀನೇ ಹೋಗಿ ಆ ಕೆಲಸ ಮುಗಿಸಿಕೊಂಡು ಬಾ” ಅಂತ ಬಸ್ಸಿಗೆ ಹತ್ತಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಇತ್ತ ಕೆಲಸಕ್ಕೆ ಹೋಗುವ ಮಹಿಳೆಯರ ಪರಿಸ್ಥಿತಿ ಬಸ್ಸಿನಲ್ಲಿ ಹೇಗಿರುತ್ತೆ ಗೊತ್ತಾ?  ಪಕ್ಕದಲ್ಲಿ ಕುಳಿತವರು “ಯಾವ ಊರವ್ವ ನಿಂದು, ಮದುವೆ ಆಗೇತೇನು, ಸಂಬಳ ಎಷ್ಟು ಬರ್ತೈತಿ?” ಅಂತ ಇಡೀ ವಂಶಾವಳಿಯನ್ನೇ ತನಿಖೆ ಮಾಡುತ್ತಾರೆ. ನಮಗೆ ಆಫೀಸ್ ಕೆಲಸದ ಟೆನ್ಷನ್‌ಗಿಂತ ಬಸ್ಸಿನೊಳಗಿನ ಈ ಲೈವ್ ಇಂಟರ್‌ವ್ಯೂವ್ ತಡೆದುಕೊಳ್ಳುವುದೇ ದೊಡ್ಡ ಕಿರಿಕಿರಿಯಾಗಿಬಿಡುತ್ತದೆ!

ಬಸ್ಸಿನ ಹಿಂಬದಿಯ ಸೀಟಿನಲ್ಲಿ ಕುಳಿತರೆ ಸಾಕು, ಜಗತ್ತಿನ ಎಲ್ಲಾ ಜಾಗತಿಕ ರಾಜಕೀಯ, ಅಡುಗೆಮನೆಯ ರಹಸ್ಯಗಳು ಮೈಕ್ ಸೆಟ್ ಹಾಕಿದಂತೆ ಕೇಳಿಸುತ್ತವೆ. ಪ್ರತಿಯೊಬ್ಬ ಮಹಿಳೆಯೂ ತಮ್ಮ ಮನೆಯ ಕೌಟುಂಬಿಕ ಜಗಳಗಳು, ಸೊಸೆಯ ಅಡುಗೆಯ ಅವಾಂತರಗಳು, ಗಂಡನ ಗೊರಕೆಯ ಕಥೆಗಳನ್ನು ಇಡೀ ಬಸ್ಸಿಗೆ ಕೇಳಿಸುವಂತೆ ಜೋರಾಗಿ ಮಾತನಾಡುತ್ತಾರೆ.

“ನೋಡವ್ವ, ಈ ಸಲ ಸಾಂಬಾರ್ ಪುಡಿಗೆ ಒಣಮೆಣಸಿನಕಾಯಿ ರೇಟ್ ಜಾಸ್ತಿ ಆಗೇತಿ, ಅದಕ್ಕ ನಾನು ಫ್ರೀ ಬಸ್ ಸಿಕ್ಕಾಗಲೆಲ್ಲಾ ಪೇಟೆಗೆ ಹೋಗಿ ಸಸ್ತಾ ಇದ್ದಲ್ಲೆ ತರ್ತೇನ್” ಅಂತ ಇಡೀ ಮೂರು ಗಂಟೆಗಳ ಕಾಲ ನನ್ನ ಕಿವಿಯಲ್ಲೇ ಮಸಾಲೆ ರುಬ್ಬಿಬಿಡುತ್ತಾರೆ! ಪಕ್ಕದಲ್ಲಿ ಯಾರಿದ್ದಾರೆ ಎಂಬ ಪ್ರಜ್ಞೆಯೇ ಇಲ್ಲದೆ ತಡೆರಹಿತವಾಗಿ ಹರಟೆ ಹೊಡೆಯುತ್ತಿದ್ದರೆ, ನನಗೆ ಯಾವುದೇ ಸಿನಿಮಾ ಥಿಯೇಟರ್ ಇಲ್ಲದೆಯೇ ಇಡೀ ದಿನ ಸೀರಿಯಲ್ ನೋಡಿದ ಅನುಭವ ಉಚಿತವಾಗಿ ಸಿಕ್ಕಿಬಿಡುತ್ತದೆ!

ಬಸ್ಸಿನ ಇನ್ನೊಂದು ತುದಿಯಲ್ಲಿ ಕಾಲೇಜು ಹುಡುಗ- ಹುಡುಗಿಯರದ್ದೇ ಒಂದು ಜಗತ್ತು. ಕಾಲೇಜು ಹುಡುಗಿಯರು ಕಿವಿಗೆ ದೊಡ್ಡ ಇಯರ್‌ಫೋನ್ ಸಿಕ್ಕಿಸಿಕೊಂಡು ಜಗತ್ತನ್ನೇ ಮರೆತು ರೀಲ್ಸ್ ನೋಡುತ್ತಾ ತಲೆ ತೂಗುತ್ತಾ ಕುಳಿತಿರುತ್ತಾರೆ. ಇನ್ನು ಪಾಪ, ಬಸ್ಸಿನೊಳಗೆ ಜಾಗ ಸಿಗದೇ ಇರೋ ಪುರುಷ ಪ್ರಯಾಣಿಕರು ಮತ್ತು ಕಾಲೇಜು ಹುಡುಗರು ಬಸ್ಸಿನ ಫುಟ್‌ಬೋರ್ಡ್ ಮೇಲೆ ಒಂಟಿ ಕಾಲಿನಲ್ಲಿ ನಿಂತು, ಗಾಳಿಯಲ್ಲಿ ಸರ್ಕಸ್ ಮಾಡುತ್ತಾ ನೇತಾಡುತ್ತಿರುತ್ತಾರೆ!

ದುಡ್ಡು ಕೊಟ್ಟು ಟಿಕೆಟ್ ತಗೊಂಡ್ರೂ ಅವರಿಗೆ ನಿಲ್ಲೋಕೂ ಜಾಗ ಸಿಗದೇ ಇರೋದು, ಸ್ವಲ್ಪ ಏನಾದರೂ ಹೆಣ್ಣುಮಕ್ಕಳಿಗೆ ಮೈ ತಗುಲಿದರೆ ಸಾಕು, “ಲೇ ತಮ್ಮ, ನೋಡ್ಕೊಂಡು ನಿಲ್ಲೋಕೆ ಬರಂಗಿಲ್ಲೇನು?” ಅಂತ ಇಡೀ ಬಸ್ಸೇ ಅವರ ಮೇಲೆ ಮುಗಿಬೀಳುವ ದೃಶ್ಯ ನೋಡಿದರೆ ಪಾಪ ಅನ್ನಿಸುತ್ತೆ!

ಫ್ರೀ ಬಸ್ ಸಿಕ್ಕಿದ್ದೇ ತಡ, ಜನ ಬರೀ ತಾವಷ್ಟೇ ಹತ್ತುತ್ತಿಲ್ಲ, ಜೊತೆಗೆ ಇಡೀ ಮನೆಯನ್ನೇ ತರುತ್ತಿದ್ದಾರೆ! ಅಂದು ಒಬ್ಬಾಕೆ ಬಸ್ಸಿನೊಳಗೆ ಮೂರು ತರಕಾರಿ ಮೂಟೆಗಳನ್ನು ತಂದು ನನ್ನ ಬ್ರಾಂಡೆಡ್ ಶೂಸ್ ಮೇಲೆಯೇ ಇಟ್ಟಳು. ನಾನು “ಅವ್ವ ಸ್ವಲ್ಪ ಸರಿಸು” ಅಂದಿದ್ದಕ್ಕೆ, “ಏನವ್ವ ನೀನು, ಓದಿದ ಹುಡುಗಿ ತರಹ ಕಾಣ್ತಿ,  ಬಸ್ ಫ್ರೀ ಐತಿ ಅಂತ ಮೂಟೆ ತರಬಾರದೇನು?” ಅಂತ ನನಗೇ ಸಂಸ್ಕೃತಿ ಪಾಠ ಕಲಿಸಿದಳು!

ಇವೆಲ್ಲದರ ಮಧ್ಯೆ ನಮ್ಮ ಬಸ್ ಕಂಡಕ್ಟರ್ ಬಸಣ್ಣನ ಪಾಡು ನೋಡಿದರೆ ಸಾಕ್ಷಾತ್ ಶಿವನೇ ಪ್ರತ್ಯಕ್ಷನಾದಂತೆ ಇರುತ್ತದೆ! ಬಸಣ್ಣ “ಟಿಕೆಟ್ ಟಿಕೆಟ್” ಅಂತ ಬೊಬ್ಬೆ ಹೊಡೆದರೆ, ಒಬ್ಬ ಮುಗ್ಧ ಅಜ್ಜಿ “ಫ್ರೀ ಐತಲ್ಲೋ ತಮ್ಮ, ಮತ್ತೆ ಯಾವ ಟಿಕೆಟ್ ಕೇಳ್ತಿ?” ಅಂತ ಜಗಳಕ್ಕೆ ಬಿದ್ಲು.

ಬಸಣ್ಣ ತಲೆ ಚಚ್ಚಿಕೊಂಡು, “ಅವ್ವ ನಿನ್ ಪುಣ್ಯ, ಆಧಾರ್ ಕಾರ್ಡ್ ತೋರಿಸಿ ಶಕ್ತಿ ಟಿಕೆಟ್ ತಗೋವ್ವ, ಇಲ್ಲದಿದ್ದರೆ ನನ್ನ ಸಂಬಳಕ್ಕೆ ಕತ್ತರಿ ಬೀಳತೈತಿ” ಅಂತ ಬೇಡಿಕೊಳ್ಳುತ್ತಾ, ಫುಟ್‌ಬೋರ್ಡ್ ಮೇಲೆ ನೇತಾಡುವ ಹುಡುಗರನ್ನು ನೋಡಿ, “ಲೇ ತಮ್ಮಂದಿರಾ! ಒಳಗಡೆ ಬಂದು ಸಾಯಿರಿ, ಬಿದ್ದರೆ ನಿಮ್ಮಪ್ಪ ಬಂದು ಕೇಸ್ ಹಾಕ್ತಾನೇನೋ!” ಅಂತ ರೇಗಿ ಕೆಂಡಾಮಂಡಲವಾಗುತ್ತಿರುತ್ತಾನೆ.

ಹೂಂ.. ಅಂತೂ ಇಂತೂ ನನ್ನ ಆಫೀಸ್ ಸ್ಟಾಪ್ ಬಂದಾಗ ಬಸ್ಸಿನಿಂದ ಇಳಿಯುವುದು ಹಿಮಾಲಯ ಪರ್ವತ ಹತ್ತಿದಷ್ಟೇ ಸಾಹಸವಾಗಿರುತ್ತದೆ! ನಾಲ್ಕು ಜನರ ನಡುವೆ ಸಿಲುಕಿ, ನನ್ನ ಸೀರೆಯ ನೆರಿಗೆಗಳೆಲ್ಲಾ ಯದ್ವಾ ತದ್ವಾ ಆಗಿ ಹೊರಗೆ ಬರುವಷ್ಟರಲ್ಲಿ ನನ್ನ ಪರಿಸ್ಥಿತಿ ಅಯೋಮಯ. ಬಸ್ಸಿನಿಂದ ಇಳಿದು ಆಫೀಸ್ ಗ್ಲಾಸ್ ಡೋರ್‌ನಲ್ಲಿ ಮುಖ ನೋಡಿಕೊಂಡರೆ ಕಾಳಿ ತರಹ ಕಾಣಸ್ತಿರತಿನಿ!

ಆದರೂ ಮನಸ್ಸು ಹೇಳುತ್ತದೆ, “ಏನೇ ಇರಲಿ, ನಮ್ಮ ರಾಜ್ಯದ ಹೆಣ್ಣುಮಕ್ಕಳು ಇಷ್ಟು ಖುಷಿಯಾಗಿ, ಫ್ರೀಯಾಗಿ ಇಡೀ ಕರ್ನಾಟಕ ಸುತ್ತುತ್ತಿರುವುದನ್ನು ನೋಡಲು ಈ ಸಣ್ಣ ಪಜೀತಿ ನಮಗೆ ಖಂಡಿತಾ ದೊಡ್ಡ ವಿಷಯ ಅಲ್ಲವೇ ಅಲ್ಲ!”

ಬದುಕಿನ ಜಂಜಾಟಗಳ ಮಧ್ಯೆ ಇಂತಹ ಸಣ್ಣ ಪುಟ್ಟ ತಮಾಷೆಯ ಪ್ರಸಂಗಗಳು ನಮ್ಮನ್ನು ಸದಾ ಜೀವಂತವಾಗಿಡುತ್ತವೆ. ಉತ್ತರ ಕರ್ನಾಟಕದ ಸೊಗಡಿನ ಈ ಫ್ರೀ ಬಸ್ ಜಗತ್ತು ನಮಗೆ ಬರೀ ಪ್ರಯಾಣವನ್ನಷ್ಟೇ ಅಲ್ಲ, ನೂರಾರು ಮಜಾವಾದ ನೆನಪುಗಳನ್ನೂ ಉಡುಗೊರೆಯಾಗಿ ನೀಡಿದೆ. ಕಷ್ಟಗಳ ಸರಮಾಲೆಯ ನಡುವೆಯೂ ಮೊಗದಲ್ಲಿ ನಗು ಮೂಡಿಸುವ ಇಂತಹ ಕ್ಷಣಗಳೇ ನಮ್ಮ ಬದುಕಿನ ನಿಜವಾದ ಸೌಂದರ್ಯ. ನಗುತ್ತಾ ಇರೋಣ, ಎಲ್ಲರನ್ನೂ ನಗಿಸುತ್ತಾ ಸಾಗೋಣ!

ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಅವರು ಜನಮನಕನ್ನಡದಲ್ಲಿ ಬರೆದಿರುವ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ..

admin
the authoradmin

Leave a Reply